ADVERTISEMENT

ಒಬಾಮ ಅಧಿಕಪ್ರಸಂಗತನ

​ಪ್ರಜಾವಾಣಿ ವಾರ್ತೆ
Published 16 ಜುಲೈ 2012, 19:30 IST
Last Updated 16 ಜುಲೈ 2012, 19:30 IST

ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ತಮ್ಮ ದೇಶದ ಉದ್ಯಮಿಗಳ ಪರ ವಕಾಲತ್ತು ವಹಿಸುವ ಅವಸರದಲ್ಲಿ ಅಂತರರಾಷ್ಟ್ರೀಯ ಸಂಬಂಧಕ್ಕೆ ಇರಬೇಕಾದ ಲಕ್ಷ್ಮಣರೇಖೆಯನ್ನು ಉಲ್ಲಂಘಿಸಿದ್ದಾರೆ. `ಭಾರತದ ಆರ್ಥಿಕ ಕ್ಷೇತ್ರದಲ್ಲಿನ  ನಿರ್ಬಂಧಗಳಿಂದಾಗಿ ಉದ್ಯಮಿಗಳು ಬಂಡವಾಳ ಹೂಡುವ ವಾತಾವರಣ ಇಲ್ಲ.

ಇದಕ್ಕಾಗಿ ಇನ್ನಷ್ಟು ಬಿಗಿಯಾದ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರಲು ಪ್ರಧಾನಿ ಮನಮೋಹನ್‌ಸಿಂಗ್ ಮುಂದಾಗಬೇಕು~ ಎಂಬ ಸಲಹೆಯನ್ನು ಒಬಾಮ ನೀಡಿದ್ದಾರೆ. ಮುಖ್ಯವಾಗಿ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ನೀಡದಿರುವ ಭಾರತದ ನಿಲುವು ಅವರ ಟೀಕೆಗೆ ಗುರಿಯಾಗಿದೆ.

ಒಂದು ದೇಶ ಯಾವ ಬಗೆಯ ಆರ್ಥಿಕ ನೀತಿಯನ್ನು ಹೊಂದಿರಬೇಕು ಎನ್ನುವುದು ಅಲ್ಲಿ ಚುನಾಯಿತ ಸರ್ಕಾರಕ್ಕೆ ಬಿಟ್ಟ ವಿಚಾರ. ಅದರಲ್ಲಿ ಮತ್ತೊಂದು ದೇಶ ಮೂಗು ತೂರಿಸಬಾರದು. ಬಿಟ್ಟಿ ಸಲಹೆಗಳನ್ನು ನೀಡುವ ಅಗತ್ಯವೂ ಇಲ್ಲ. ಸ್ವಯಂಘೋಷಿತ `ದೊಡ್ಡಣ್ಣ~ನ ಪಟ್ಟದಲ್ಲಿ ಕೂತಿರುವ ಅಮೆರಿಕ ಭಾರತ ಸರ್ವಸ್ವತಂತ್ರ ಸಾರ್ವಭೌಮ ದೇಶ ಎನ್ನುವುದನ್ನು  ಮರೆತಂತಿದೆ.
 
ಅಮೆರಿಕದ ಅಧ್ಯಕ್ಷರ ಮಾತುಗಳು `ತನ್ನ ಊಟದ ಬಟ್ಟಲಿನಲ್ಲಿ ಆನೆ ಸತ್ತುಬಿದ್ದಿರುವಾಗ ಎದುರಿನವನ ಬಟ್ಟಲಿನಲ್ಲಿ ಸತ್ತನೊಣವನ್ನು ಎತ್ತಿಕೊಂಡು ಆಡಿದಂತಾಗಿದೆ~. ಅಮೆರಿಕದ ಆರ್ಥಿಕತೆ ಎಷ್ಟೊಂದು ಕುಲಗೆಟ್ಟುಹೋಗಿದೆ ಎಂದರೆ ಅಲ್ಲಿನ ಪ್ರತಿ 50 ಮಂದಿಯಲ್ಲಿ ಒಬ್ಬ ಹೊಟ್ಟೆಗಿಲ್ಲದೆ ಸರ್ಕಾರ ಫುಡ್‌ಸ್ಟಾಂಪ್~ (ಪಡಿತರ ಚೀಟಿ)ಗಳ ಮೂಲಕ ನೀಡುವ ಆಹಾರಸಾಮಗ್ರಿಗಳ ಮೂಲಕ ಜೀವನ ಸಾಗಿಸುತ್ತಿದ್ದಾನೆ.

ಕಳೆದ 3-4 ವರ್ಷಗಳಿಂದ ವಿಶ್ವದ ಆರ್ಥಿಕ ಕ್ಷೇತ್ರದಲ್ಲಿ ಕಾಣಿಸಿಕೊಂಡಿರುವ ತಲ್ಲಣಗಳಿಗೆ ಮುಖ್ಯವಾಗಿ ಅಮೆರಿಕ ಅನುಭವಿಸುತ್ತಿರುವ ಆರ್ಥಿಕ ಹಿಂಜರಿತ ಕಾರಣ ಎನ್ನುವುದು ಸ್ಪಷ್ಟ. ವಿಶ್ವ ಆರ್ಥಿಕ ಕ್ಷೇತ್ರದ ರಚನೆಯೇ ಹಾಗಿದೆ. ಅಮೆರಿಕದಂತಹ ದೇಶದ ಆರ್ಥಿಕತೆ ಕುಸಿತಕ್ಕೆ ಒಳಗಾದಾಗ ಸಹಜವಾಗಿಯೇ ಅದರ ದುಷ್ಪರಿಣಾಮಗಳನ್ನು ಬೇರೆ ದೇಶಗಳೂ ಅನುಭವಿಸಬೇಕಾಗುತ್ತದೆ.

ಈ ಕಾರಣದಿಂದಾಗಿಯೇ ಅಮೆರಿಕದ ದೈತ್ಯ ಕಂಪೆನಿಗಳು ದಿವಾಳಿಯಾಗತೊಡಗಿದಾಗ ಭಾರತದ ಷೇರುಮಾರುಕಟ್ಟೆಯಲ್ಲಿಯೂ ಷೇರುಗಳ ಬೆಲೆ ಕುಸಿದುಹೋಗಿದ್ದು. ಅಲ್ಲಿನ ಕಂಪೆನಿಗಳು ಇಲ್ಲಿ ಹೂಡಿದ್ದ ಬಂಡವಾಳವನ್ನು ವಾಪಸು ಪಡೆದದ್ದು ಕೂಡಾ ಭಾರತದ ಆರ್ಥಿಕ ಕ್ಷೇತ್ರ ಅಸ್ತವ್ಯಸ್ತಗೊಳ್ಳಲು ಕಾರಣ ಎನ್ನುವುದನ್ನು ಒಬಾಮ ನೆನಪಲ್ಲಿಟ್ಟುಕೊಳ್ಳಬೇಕು.
 
ಪುನರಾಯ್ಕೆಗಾಗಿ ಚುನಾವಣೆ ಎದುರಿಸಬೇಕಾಗಿರುವ ಬರಾಕ್ ಒಬಾಮ ಅವರಿಗೆ ಇಂತಹ ಮಾತುಗಳನ್ನು ಆಡಲೇಬೇಕಾದ ರಾಜಕೀಯ ಅನಿವಾರ್ಯತೆಗಳಿರಬಹುದು, ಸ್ವದೇಶಿ ಉದ್ಯಮಗಳ ಒತ್ತಡವೂ ಇರಬಹುದು. ಇದೇ ಅಧ್ಯಕ್ಷರು ಎರಡು ವರ್ಷಗಳ ಹಿಂದೆ ಭಾರತದಂತಹ ದೇಶಗಳಲ್ಲಿ ಉದ್ಯೋಗ ಸೃಷ್ಟಿಸುತ್ತಿರುವ ಅಮೆರಿಕದ ಕಂಪೆನಿಗಳಿಗೆ ತೆರಿಗೆ ಉತ್ತೇಜನ ನೀಡುವುದನ್ನು ಕೈಬಿಡುವ ಬೆದರಿಕೆ ಹಾಕಿದ್ದರು.

ಅಮೆರಿಕದ ಅನೇಕ ಕಂಪೆನಿಗಳು ಕೆಲಸವನ್ನು ಭಾರತದಲ್ಲಿ ಹೊರಗುತ್ತಿಗೆ ನೀಡುತ್ತಿರುವುದರ ಮೇಲೆ ಅವರ ಕೆಂಗಣ್ಣು ಬಿದ್ದಿತ್ತು.  ಯುಪಿಎ ಸರ್ಕಾರದ ಆರ್ಥಿಕ ನೀತಿಯ ವಿಷಯದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳೇನೇ ಇದ್ದರೂ ಎಲ್ಲ ರಾಜಕೀಯ ಪಕ್ಷಗಳು ಒಂದು ದನಿಯಲ್ಲಿ ಒಬಾಮ ಅವರ ಅಧಿಕಪ್ರಸಂಗತನದ ಹೇಳಿಕೆಯನ್ನು ಖಂಡಿಸಿದ್ದು ಸ್ವಾಗತಾರ್ಹ ಬೆಳವಣಿಗೆ. ಸಾಮ್ರಾಜ್ಯಷಾಹಿ ದರ್ಪದ ಇಂತಹ ಒತ್ತಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.