ADVERTISEMENT

ಚಂಡಮಾರುತ ಹಾವಳಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2012, 19:30 IST
Last Updated 1 ಜನವರಿ 2012, 19:30 IST

ಅತಿವೃಷ್ಟಿ, ಚಂಡಮಾರುತ, ಸುನಾಮಿಯಂತಹ ಪ್ರಕೃತಿ ವಿಕೋಪಗಳು ನಮ್ಮ ದೇಶಕ್ಕೆ ಹೊಸದಲ್ಲ. ಥೇನ್ ಚಂಡಮಾರುತಕ್ಕೆ ತಮಿಳುನಾಡು, ಪುದುಚೇರಿ ಹಾಗೂ ಕೇರಳ ರಾಜ್ಯಗಳ ಒಟ್ಟು ನಲವತ್ತಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.

ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿದೆ. ನೂರಾರು ಮನೆಗಳು ಕುಸಿದಿವೆ. ಬಿರುಗಾಳಿ, ಮಳೆಗೆ ವಿದ್ಯುತ್, ನೀರು, ದೂರ ಸಂಪರ್ಕ ವ್ಯವಸ್ಥೆ ಹಾಳಾಗಿದೆ.
 
ಶ್ರೀಕಾಕುಳಂ, ವಿಶಾಖಪಟ್ಟಣ, ಪಶ್ಚಿಮ ಗೋದಾವರಿ, ಪ್ರಕಾಶಂ, ಗುಂಟೂರು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದು ಸಾವಿರಾರು ರೈತರ ವರ್ಷದ ದುಡಿಮೆ ನೀರು ಪಾಲಾಗಿದೆ. ಈ ಪ್ರದೇಶಗಳೆಲ್ಲ ನೈಸರ್ಗಿಕ ವಿಕೋಪದ ಹಾವಳಿಗೆ ಹಿಂದೆ ತುತ್ತಾಗಿರುವಂಥವು. ಆದರೆ ಇವನ್ನು ಎದುರಿಸುವ ವಿಷಯದಲ್ಲಿ ಸರ್ಕಾರಗಳಿಗೆ ಸ್ಪಷ್ಟತೆ ಇಲ್ಲ.
 
ಥೇನ್ ಚಂಡಮಾರುತದ ಬಗ್ಗೆ ಸಾಕಷ್ಟು ಮೊದಲೇ ಸುಳಿವು ಸಿಕ್ಕಿದ್ದರೂ ಸ್ಥಳೀಯ ಆಡಳಿತ ಮತ್ತು ಕಡಲತೀರದ ಜನರು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಪ್ರಕೃತಿ ವಿಕೋಪಗಳನ್ನು ಎದುರಿಸಲು ಸರ್ಕಾರಗಳು ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡುತ್ತಿವೆ.
 
ಆದರೆ ಹಿಂದಿನ ಅನುಭವಗಳಿಂದ ಪಾಠ ಕಲಿತಿಲ್ಲ. ಕಡಲ ತೀರದ ಜನರನ್ನು ಸ್ಥಳಾಂತರಿಸಿದ್ದರೆ ಪ್ರಾಣ ಹಾನಿ ತಪ್ಪಿಸಬಹುದಿತ್ತು. ಜನರಂತೆ ಸರ್ಕಾರಗಳೂ ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವುದು ಖಂಡನೀಯ.

ಥೇನ್ ದಾಳಿಗೆ ಸಿಕ್ಕಿ ಸತ್ತವರ ಕುಟುಂಬಗಳಿಗೆ ರಾಜ್ಯ ಸರ್ಕಾರಗಳು ಈಗಾಗಲೇ ಪರಿಹಾರ ಘೋಷಿಸಿವೆ. ಮನೆ, ಮಠ ಕಳೆದುಕೊಂಡವರು ಹಾಗೂ ಬೆಳೆ ಹಾನಿಗೆ ತುತ್ತಾದ ರೈತರು ಪರಿಹಾರಕ್ಕಾಗಿ ಸರ್ಕಾರದ ಕಡೆಗೆ ನೋಡುತ್ತಿದ್ದಾರೆ. ಅದು ಸಹಜ.
 
ನಷ್ಟದ ಪ್ರಮಾಣ ಹೆಚ್ಚಾಗಿರುವುದರಿಂದ ಎಲ್ಲರಿಗೂ ಪರಿಹಾರ ಕೊಡಲು ರಾಜ್ಯ ಸರ್ಕಾರಗಳಿಂದ ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡದಿದ್ದರೆ ಪರಿಹಾರ, ಪುನರ್ವಸತಿ ಎರಡೂ ಸಾಧ್ಯವಿಲ್ಲ.
 
ಪ್ರತಿ ವರ್ಷ ಚಂಡಮಾರುತದ ದಾಳಿಗೆ ತುತ್ತಾಗುವ ಪ್ರದೇಶಗಳ ಜನರಿಗೆ ಸೂಕ್ತ ರಕ್ಷಣೆ ಒದಗಿಸುವ ಬಗ್ಗೆ  ಕೇಂದ್ರ ಹಾಗೂ ಸರ್ಕಾರಗಳು ಶಾಶ್ವತ ಯೋಜನೆ ರೂಪಿಸಬೇಕು. 2004 ಡಿಸೆಂಬರ್‌ನಲ್ಲಿ ಸುನಾಮಿಯಿಂದ 2.3 ಲಕ್ಷ ಜನರು ಬಲಿಯಾದರು.
 
ಅವರಿಗೆ ಪುನರ್ವಸತಿ ಕಲ್ಪಿಸಲು ಕೋಟ್ಯಂತರ ರೂಪಾಯಿ ಖರ್ಚಾಯಿತು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಎಚ್ಚರಿಕೆ ಅವಶ್ಯಕವಾಗಿತ್ತು. ಪ್ರಕೃತಿ ವಿಕೋಪಗಳ ಸಂತ್ರಸ್ತರಾಗುವವರಿಗೆ ಸರ್ಕಾರಗಳೇ ದಿಕ್ಕು.
 
ಪ್ರತಿ ವರ್ಷ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುವ ಬದಲು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಪ್ರಕೃತಿ ವಿಕೋಪಗಳ ಸಂಭಾವ್ಯತೆಯನ್ನು ಮೊದಲೇ ಗ್ರಹಿಸಿ ಜನರು ಹಾಗೂ ಆಸ್ತಿಪಾಸ್ತಿ ರಕ್ಷಣೆಗೆ ಸರ್ಕಾರ ಪರ್ಯಾಯ ವ್ಯವಸ್ಥೆ ರೂಪಿಸಬೇಕು.
 
ಥೇನ್ ಚಂಡಮಾರುತದಿಂದ ಹಾನಿಗೆ ಒಳಗಾದ ಪ್ರದೇಶಗಳ ಜನರ ಆರೋಗ್ಯದ ಬಗ್ಗೆ ಸರ್ಕಾರಗಳು ಕಾಳಜಿ ವಹಿಸಬೇಕು. ಇಲ್ಲವಾದರೆ ಸಾಂಕ್ರಾಮಿಕ ರೋಗಗಳಿಂದ ಇನ್ನಷ್ಟು ಜನರು ಸಾಯುವ ಸಾಧ್ಯತೆ ಇದೆ. ಸರ್ಕಾರ ಸ್ವಯಂ ಸೇವಾ ಸಂಘಟನೆಗಳನ್ನೂ ಬಳಸಿಕೊಂಡು ಸಂತ್ರಸ್ತರ ನೆರವಿಗೆ ಧಾವಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.