ಭಾರತೀಯ ರಿಸರ್ವ್ ಬ್ಯಾಂಕ್, ತನ್ನ ವಾರ್ಷಿಕ ಉದರಿ ನೀತಿಯ ಮಧ್ಯಂತರ ತ್ರೈಮಾಸಿಕ ಪರಾಮರ್ಶೆಯಲ್ಲಿ, ಅಲ್ಪಾವಧಿ ಬಡ್ಡಿ ದರಗಳೂ ಸೇರಿದಂತೆ ನಗದು ಮೀಸಲು ಅನುಪಾತದಲ್ಲಿ ಯಾವುದೇ ಬದಲಾವಣೆ ಮಾಡದಿರುವುದು ನಿರೀಕ್ಷಿತವೇ ಆಗಿದೆ. ದೇಶದ ಅರ್ಥ ವ್ಯವಸ್ಥೆಯ ದುರ್ಬಲ ಪರಿಸ್ಥಿತಿ ಮುಂದುವರೆದಿರುವುದು, ಗರಿಷ್ಠ ಮಟ್ಟದಲ್ಲಿ ಇರುವ ಚಾಲ್ತಿ ಖಾತೆ ಕೊರತೆ, ಸಗಟು ಹಣದುಬ್ಬರ ಕಡಿಮೆಯಾಗಿದ್ದರೂ, ಚಿಲ್ಲರೆ ಹಣದುಬ್ಬರ ಅಪಾಯಕಾರಿ (ಶೇ 10) ಮಟ್ಟದಲ್ಲಿ ಇರುವುದು ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ತೀವ್ರವಾಗಿ ಕುಸಿದಿರುವುದು ಕೇಂದ್ರೀಯ ಬ್ಯಾಂಕ್‌ನ ಕೈ ಕಟ್ಟಿ ಹಾಕಿವೆ.
ಈ ಎಲ್ಲ ವಿದ್ಯಮಾನಗಳು ಅದರ ಲೆಕ್ಕಾಚಾರ ತಲೆಕೆಳಗು ಮಾಡಿರುವುದು ಇದರಿಂದ ಸ್ಪಷ್ಟಗೊಳ್ಳುತ್ತದೆ. ಬ್ಯಾಂಕ್‌ಗಳ ಬಳಿ ಸಾಕಷ್ಟು ಪ್ರಮಾಣದ ನಗದು ಇರುವಾಗ, ಆರ್‌ಬಿಐ ನಡೆ ಸರಿಯಾಗಿದೆ. ಇಂತಹ ಕಠಿಣ ನಿಲುವು, ವಿದೇಶಿ ಸಾಂಸ್ಥಿಕ ಸಂಸ್ಥೆಗಳು ದೇಶಿ ಸಾಲಪತ್ರಗಳಲ್ಲಿಯೇ ಹಣ ತೊಡಗಿಸಲು ಪ್ರೇರಣೆ ನೀಡಿ ದೇಶದಿಂದ ಹೊರ ಹೋಗುತ್ತಿರುವ ಹಣದ ಹರಿವಿಗೆ ಮತ್ತು ರೂಪಾಯಿ ಮೌಲ್ಯ ಕುಸಿತಕ್ಕೆ ಕಡಿವಾಣ ಹಾಕಲು ನೆರವಾಗಲಿದೆ. ದೇಶೀಯ ಮತ್ತು ಜಾಗತಿಕ ಅರ್ಥ ವ್ಯವಸ್ಥೆ ಈಗಲೂ ಅಸ್ಥಿರ ಸ್ಥಿತಿಯಲ್ಲಿಯೇ ಇರುವುದರಿಂದ ಆರ್‌ಬಿಐ ತನ್ನ ಕಠಿಣ ನಿಲುವಿಗೆ ಅಂಟಿಕೊಂಡಿರುವುದು ಅನಿವಾರ್ಯವೂ ಆಗಿದೆ.
ಆರ್ಥಿಕ ಪರಿಸ್ಥಿತಿ ಕುಂಠಿತಗೊಂಡಿರುವಾಗ, ಬಡ್ಡಿ ದರ ಕಡಿತದಂತಹ ಉತ್ತೇಜನಕಾರಿ ಕ್ರಮಗಳು ಅಪೇಕ್ಷಣೀಯ. ಆದರೆ, ಕಠಿಣ ಹಣಕಾಸು ನೀತಿ ಸಡಿಲಗೊಳಿಸಿ ಬಡ್ಡಿ ದರ ಕಡಿತ ಮಾಡದಿರುವುದರಲ್ಲಿಯೇ ವಿವೇಕ ಅಡಗಿದೆ ಎನ್ನುವ ನಿಲುವಿಗೆ ಆರ್‌ಬಿಐ ಗಟ್ಟಿಯಾಗಿ ಅಂಟಿಕೊಂಡಿರುವುದು ಈಗ ಮತ್ತೊಮ್ಮೆ ಸಾಬೀತಾಗಿದೆ. ಆರ್‌ಬಿಐ, ತನ್ನ ನೀತಿ ನಿರೂಪಣಾ ದರಗಳಿಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಂಡಿರುವುದಕ್ಕೆ ಉದ್ಯಮ ವಲಯದಲ್ಲಿ ಸಹಜವಾಗಿಯೇ ಅಸಮಾಧಾನ ವ್ಯಕ್ತವಾಗಿದೆ.
ಕೈಗಾರಿಕಾ ರಂಗಕ್ಕೆ ತುರ್ತಾಗಿ ಹಣಕಾಸಿನ ಬೆಂಬಲ ಬೇಕಾಗಿರುವಾಗ ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಸಿಗದಿರುವುದೇ ಇದಕ್ಕೆ ಕಾರಣ. ದುಬಾರಿ ಬಡ್ಡಿ ದರವು, ಆಹಾರಧಾನ್ಯಗಳ ಪೂರೈಕೆ ಸಮಸ್ಯೆ ಬಗೆಹರಿಸಿ ಗರಿಷ್ಠ ಪ್ರಮಾಣದ ಬೆಲೆ ಏರಿಕೆಗೆ ಕಡಿವಾಣ ಹಾಕಲು ಸಾಧ್ಯವಿಲ್ಲ ಎನ್ನುವುದು ನಿಜವೂ ಹೌದು. ಮುಂಬರುವ ದಿನಗಳಲ್ಲಿ ಬೆಲೆ ಏರಿಕೆ ಪರಿಸ್ಥಿತಿ ತಗ್ಗುವ ಸಾಧ್ಯತೆಗಳಿವೆ. ಮುಂಗಾರು ಮಳೆ ಉತ್ತಮ ಆರಂಭ ಕಂಡಿರುವುದೂ ಆಶಾದಾಯಕ ಬೆಳವಣಿಗೆಯಾಗಿದೆ.
ಉತ್ತಮ ಫಸಲಿನ ಫಲವಾಗಿ ಆಹಾರ ಧಾನ್ಯಗಳ ಬೆಲೆಗಳ ಮೇಲಿನ ಒತ್ತಡ ಕಡಿಮೆಯಾಗುವ ನಿರೀಕ್ಷೆ ಇದೆ. ರೂಪಾಯಿ ವಿನಿಮಯ ದರ ಸ್ಥಿರಗೊಂಡರೆ, ಚಿಲ್ಲರೆ ಹಣದುಬ್ಬರ ಸಾಧಾರಣ ಮಟ್ಟದಲ್ಲಿ ಇದ್ದರೆ, ಆರ್‌ಬಿಐಗೆ ಬಡ್ಡಿ ದರ ಕಡಿತ ಮಾಡುವುದು ಅನಿವಾರ್ಯವಾಗಲಿದೆ. ಒಂದು ವೇಳೆ ಚಾಲ್ತಿ ಖಾತೆ ಕೊರತೆ ತುಂಬಲು ಹಣ ಹೊಂದಿಸಲು ಸಾಧ್ಯವಾಗದಿದ್ದರೆ ಬಡ್ಡಿ ದರ ಕಡಿತ ಇನ್ನಷ್ಟು ಮುಂದೆ ಹೋಗಲಿದೆ. ಆರ್‌ಬಿಐ ನಡೆಯಿಂದ ಕೈಗಾರಿಕೆ, ಉದ್ಯಮ ವಲಯ ಮತ್ತು ಜನಸಾಮಾನ್ಯರು ಪೂರ್ಣ ನಿರಾಶೆ ಪಡಬೇಕಾಗಿಲ್ಲ. ಪ್ರಸಕ್ತ ಹಣಕಾಸು ವರ್ಷದ ಉಳಿದ ಅವಧಿಯಲ್ಲಿ ಬಡ್ಡಿ ದರ ಕಡಿತಕ್ಕೆ ಸಾಕಷ್ಟು ಅವಕಾಶಗಳು ಇದ್ದೇ ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.