ADVERTISEMENT

ನೈರ್ಮಲ್ಯ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2011, 19:30 IST
Last Updated 6 ಏಪ್ರಿಲ್ 2011, 19:30 IST

ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ವಿಶೇಷವಾಗಿ ಭಾರತದಲ್ಲಿನ ನಗರ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಅವಶ್ಯಕವಾಗಿ ಬೇಕಾಗಿರುವ ಶುದ್ಧ ಕುಡಿಯುವ ನೀರು ಪೂರೈಕೆ ಮತ್ತು ಇತರೆ ನೈರ್ಮಲ್ಯ ಸೌಲಭ್ಯದ ಕೊರತೆ ಕಾಡುತ್ತಿದೆ.  ‘ಸಾರ್ಕ್’ ರಾಷ್ಟ್ರಗಳಲ್ಲಿ ಸುಮಾರು 700 ದಶಲಕ್ಷ ಜನರು ಈ ಮೂಲಸೌಕರ್ಯದ ಕೊರತೆ ಎದುರಿಸುತ್ತಿದ್ದಾರೆ. ಈ ಸಮಸ್ಯೆಯನ್ನು 2015ರ ಹೊತ್ತಿಗೆ ಬಗೆಹರಿಸಬೇಕೆನ್ನುವ ‘ಸಾರ್ಕ್’ ರಾಷ್ಟ್ರಗಳ ಗುರಿ ಇನ್ನೂ ಮರೀಚಿಕೆ ಆಗಿದೆ. ಶುದ್ಧ ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲೀಕರಣ ವ್ಯವಸ್ಥೆ ಕುರಿತಂತೆ ಕೊಲಂಬೋದಲ್ಲಿ ನಡೆದ ‘ಸಾರ್ಕ್’ ರಾಷ್ಟ್ರಗಳ ಸಭೆಯು ದಕ್ಷಿಣ ಏಷ್ಯಾದಲ್ಲಿನ ನೈರ್ಮಲೀಕರಣ ದುರವಸ್ಥೆಯ ಬಗೆಗೆ ಕಳವಳ ವ್ಯಕ್ತಪಡಿಸಿದೆ.

ಎಲ್ಲರಿಗೂ ಆರೋಗ್ಯ, ಶುದ್ಧ ಕುಡಿಯುವ ನೀರು ಮತ್ತು ನೈರ್ಮಲೀಕರಣ ಸೌಲಭ್ಯ ಒದಗಿಸಬೇಕೆನ್ನುವುದು ವಿಶ್ವ ಆರೋಗ್ಯ ಸಂಸ್ಥೆಯ ಗುರಿ. ಇದು ಯಾವುದೇ ನಾಗರಿಕ ಸರ್ಕಾರದ ಆದ್ಯ ಕರ್ತವ್ಯ. ಇಡೀ ವಿಶ್ವದಲ್ಲಿಯೇ 2.6 ಶತಕೋಟಿ ಜನರು ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯದ ಕೊರತೆಯನ್ನು ಎದುರಿಸುತ್ತಿರುವುದಾಗಿ ವಿಶ್ವಸಂಸ್ಥೆಯ ವರದಿಯೊಂದು ಹೇಳುತ್ತದೆ. ದುರದೃಷ್ಟಕರ ಸಂಗತಿ ಎಂದರೆ ಶೇ 72ರಷ್ಟು ಜನರು ಎದುರಿಸುತ್ತಿರುವ ಈ ಸಮಸ್ಯೆ ಏಷ್ಯಾ ರಾಷ್ಟ್ರಗಳಲ್ಲಿಯೇ ಇದೆ. ಈ ಸಮಸ್ಯೆ ಬಗೆಹರಿಯಲು ಮುಖ್ಯವಾಗಿ ಕುಡಿಯುವ ನೀರು ಪೂರೈಕೆಯ ಪರಿಸ್ಥಿತಿ ಉತ್ತಮಗೊಳ್ಳಬೇಕು. ಏಷ್ಯಾ ರಾಷ್ಟ್ರಗಳಲ್ಲಿ ಬಡತನ ಮತ್ತು ಅನಕ್ಷರತೆ ಹೆಚ್ಚಿರುವ ಕಾರಣ ಇಲ್ಲಿನ ಸರ್ಕಾರಗಳು ಈ ಸಮಸ್ಯೆಗೆ ಹೆಚ್ಚಿನ ಗಮನ ನೀಡಿದಂತಿಲ್ಲ. ಹಾಗಾಗಿ ಭಾರತದ ನೈರ್ಮಲೀಕರಣ ಸಮಸ್ಯೆಯು ಶೇ 72ರಷ್ಟು ಇದೆ ಎನ್ನುವ ಮಾಹಿತಿ ಇದೆ.

ನಮ್ಮ ಬಹುತೇಕ ಹಳ್ಳಿಗಳಲ್ಲಿ ಜನರಿಗೆ ಶುದ್ಧವಾದ ಕುಡಿಯುವ ನೀರಿನ ಸೌಲಭ್ಯವಿಲ್ಲ. ಅನೇಕ ಹಳ್ಳಿಗಳಲ್ಲಿ ಜನರು ನೀರಿಗಾಗಿ ಮೈಲಿಗಟ್ಟಲೇ ಹೋಗಿ ಕೆರೆಕಟ್ಟೆಗಳಿಂದ ನೀರು ತರುವ ಸ್ಥಿತಿ ಇದೆ. ಜೊತೆಗೆ ಮನೆಗಳಲ್ಲಿ ಶೌಚಾಲಯ ಸೌಲಭ್ಯಗಳಿಲ್ಲದ ಕಾರಣ ಮನೆಮಂದಿಯೆಲ್ಲ ಬಯಲು ಪ್ರದೇಶಗಳನ್ನೇ ಅವಲಂಬಿಸಿರುವ ಪರಿಸ್ಥಿತಿ ಮುಂದುವರಿದಿದೆ. ಈ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸಿದರೂ, ಮುಖ್ಯವಾಗಿ ಅವರಿಗೆ ಬೇಕಾಗಿರುವುದು ನೀರಿನ ಸೌಲಭ್ಯ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲೀಕರಣ ಕಾರ್ಯಕ್ರಮಗಳಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಜೆಟ್ಟಿನಲ್ಲಿ ಕೋಟಿಗಟ್ಟಲೇ ಹಣ ಒದಗಿಸಿದರೂ, ಪುರಸಭೆಗಳು ಮತ್ತು ಪಂಚಾಯತ್ ಆಡಳಿತ ವ್ಯವಸ್ಥೆ ಈ ಸಮಸ್ಯೆ ಪರಿಹರಿಸಲು ವಿಫಲಗೊಂಡಿವೆ.

ಇದು ಕೇವಲ ಗ್ರಾಮೀಣ ಸಮಸ್ಯೆ ಮಾತ್ರವಲ್ಲ, ನಗರಗಳಲ್ಲಿನ ಸಮಸ್ಯೆಯೂ ಇದೇ  ಆಗಿದೆ. ಏಷ್ಯನ್ ಅಭಿವೃದ್ಧಿ ಬ್ಯಾಂಕ್, ಬೆಂಗಳೂರು ಸೇರಿದಂತೆ ದೇಶದ 20 ಪ್ರಮುಖ ನಗರಗಳಲ್ಲಿನ ನೀರು ಪೂರೈಕೆ ಪರಿಸ್ಥಿತಿಯ ಬಗೆಗೆ ನಡೆಸಿರುವ ಸಮೀಕ್ಷೆಯೊಂದರ ಪ್ರಕಾರ ದಿನಕ್ಕೆ ಸರಾಸರಿ 4 ಗಂಟೆ ಕಾಲ ನೀರು ಪೂರೈಸಿದರೆ ಹೆಚ್ಚು. ಚಂಡೀಗಡ ನಗರದಲ್ಲಿ ಮಾತ್ರ ದಿನಕ್ಕೆ 12 ಗಂಟೆ ನೀರಿನ ಸರಬರಾಜು ಸೌಲಭ್ಯ ಇದೆ. ಉಳಿದ ನಗರಗಳ ಪರಿಸ್ಥಿತಿಯು ಉತ್ತಮವಾಗಿಲ್ಲದಿರುವುದು ದುರದೃಷ್ಟಕರ ಸಂಗತಿ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.