ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಕೊಲಿಜಿಯಂ ಮಧ್ಯೆ ಮುಸುಕಿನ ಗುದ್ದಾಟ ಮುಂದುವರಿದಿದೆ. ಅದು ಸುಲಭದಲ್ಲಿ ನಿಲ್ಲುವ ಲಕ್ಷಣಗಳೂ ಕಾಣುತ್ತಿಲ್ಲ. ಹೊಸ ನ್ಯಾಯಮೂರ್ತಿಗಳ ಹೆಸರುಗಳನ್ನು ಸೂಚಿಸಿ ಕೊಲಿಜಿಯಂನಿಂದ ಬಂದ ಶಿಫಾರಸುಗಳನ್ನು ಒಪ್ಪಿಕೊಳ್ಳಲು ಸರ್ಕಾರ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ.
ಹೀಗಾಗಿ 75ಕ್ಕೂ ಹೆಚ್ಚು ಹೆಸರುಗಳು ನನೆಗುದಿಗೆ ಬಿದ್ದಿವೆ. ಕೆಲ ಹೆಸರುಗಳನ್ನು ಸುಮಾರು 8 ತಿಂಗಳ ಹಿಂದೆಯೇ ಸರ್ಕಾರಕ್ಕೆ ಕಳಿಸಲಾಗಿದೆ. ವಿವಿಧ ಹೈಕೋರ್ಟ್‌ಗಳಲ್ಲಿ ಖಾಲಿ ಇರುವ 478 ನ್ಯಾಯಮೂರ್ತಿಗಳ ಹುದ್ದೆಗಳನ್ನು ತುಂಬುವ ಪ್ರಯತ್ನಕ್ಕೆ ಇದು ಹಿನ್ನಡೆ. ಇದರಿಂದ ಸಹಜವಾಗಿಯೇ ಪ್ರಕರಣಗಳ ಇತ್ಯರ್ಥ ವಿಳಂಬವಾಗುತ್ತಿದೆ, ಬಾಕಿ ಪ್ರಕರಣಗಳ ಸಂಖ್ಯೆ ದಿನೇದಿನೇ ಬೆಳೆಯುತ್ತಲೇ ಇದೆ. ಸರ್ಕಾರವೇ ರಾಜ್ಯಸಭೆಗೆ ನೀಡಿದ ಮಾಹಿತಿಯ ಪ್ರಕಾರ 39 ಲಕ್ಷ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಇದನ್ನು ಕಡಿಮೆ ಮಾಡುವ ಪ್ರಯತ್ನ ಎರಡೂ ಕಡೆಯಿಂದ ನಡೆಯಬೇಕು.
ಅದನ್ನು ಬಿಟ್ಟು ಈ ರೀತಿ ಸಂಘರ್ಷಕ್ಕೆ ಇಳಿಯುವುದರಿಂದ ಅಂತಿಮವಾಗಿ ತೊಂದರೆಯಾಗುವುದು ನ್ಯಾಯ ಕೇಳಿ ಕೋರ್ಟ್ ಬಾಗಿಲನ್ನು ತಟ್ಟುವ ಪ್ರಜೆಗಳಿಗೆ. ಶೀಘ್ರ ನ್ಯಾಯ ಪಡೆಯುವ ಜನರ ಹಕ್ಕನ್ನೇ ಈ ‘ವಿಳಂಬ ವ್ಯಾಧಿ’ ಕಸಿದುಕೊಳ್ಳುತ್ತದೆ. ನ್ಯಾಯಾಂಗದ ಮೇಲೆ ಜನ ಇಟ್ಟುಕೊಂಡಿರುವ ಅಲ್ಪಸ್ವಲ್ಪ ವಿಶ್ವಾಸಕ್ಕೂ ಧಕ್ಕೆ ಬಂದರೆ ಅದು ಇಡೀ ಸಮಾಜ ಮತ್ತು ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದು ಒಳ್ಳೆಯ ಲಕ್ಷಣವಂತೂ ಅಲ್ಲ.
ಕೊಲಿಜಿಯಂನ ಶಿಫಾರಸುಗಳ ಬಗ್ಗೆ ಸರ್ಕಾರ ಅಪನಂಬಿಕೆ ತಳೆಯುವುದು ದೇಶಕ್ಕೆ ಒಳ್ಳೆಯದಲ್ಲ ಎಂದು ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ಶುಕ್ರವಾರ ಪ್ರಕರಣವೊಂದರ ವಿಚಾರಣೆಯ ವೇಳೆ ತೀವ್ರ ಅಸಮಾಧಾನದಿಂದಲೇ ಹೇಳಿದೆ. ಇದೇ ಸ್ಥಿತಿ ಮುಂದುವರಿದರೆ ಇದಕ್ಕೆ ಕಾರಣರಾದವರ ಮೇಲೆ ಹೊಣೆಗಾರಿಕೆ ಹೊರಿಸುವುದಕ್ಕೂ ಹಿಂಜರಿಯುವುದಿಲ್ಲ ಎಂಬ ಎಚ್ಚರಿಕೆ ನೀಡಿದೆ.
ಆದರೆ ಇದರಿಂದ ಸಮಸ್ಯೆ ಬಗೆಹರಿದೀತು, ಸರ್ಕಾರ ಸ್ಪಂದಿಸೀತು ಎಂದು ನಿರೀಕ್ಷಿಸುವಂತಿಲ್ಲ. ಏಕೆಂದರೆ ಕೊಲಿಜಿಯಂ ಬಗ್ಗೆಯೇ ಸರ್ಕಾರಕ್ಕೆ, ಶಾಸಕಾಂಗಕ್ಕೆ ಆಕ್ಷೇಪವಿದೆ. ಸಂವಿಧಾನ ಜಾರಿಗೆ ಬಂದು ಅನೇಕ ದಶಕಗಳವರೆಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಆಯಾ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಜತೆ ಸಮಾಲೋಚನೆ ನಡೆಸಿ ನ್ಯಾಯಮೂರ್ತಿಗಳ ನೇಮಕಕ್ಕೆ ಹೆಸರುಗಳನ್ನು ಶಿಫಾರಸು ಮಾಡುತ್ತಿದ್ದವು.
ಅದೇ ಪ್ರಕಾರ ನೇಮಕಾತಿಯೂ ನಡೆಯುತ್ತಿತ್ತು. ನಂತರ ಇದನ್ನು ಪಕ್ಕಕ್ಕಿಟ್ಟು ಸುಪ್ರೀಂ ಕೋರ್ಟ್ ತಾನೇ ಸ್ವತಃ ಒಂದು ವ್ಯವಸ್ಥೆ ರೂಪಿಸಿತು. ಅದೇ ಕೊಲಿಜಿಯಂ. ಮುಂದೆ, ಸಂಸತ್ತು ಕೊಲಿಜಿಯಂ ಸ್ಥಾನದಲ್ಲಿ ನ್ಯಾಯಾಂಗ ನೇಮಕಾತಿ ಆಯೋಗ ಕಾನೂನು ರೂಪಿಸಿತು. ಅದನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿರುವುದರಿಂದ ಈಗಿರುವುದು ಕೊಲಿಜಿಯಂ ವ್ಯವಸ್ಥೆ ಮಾತ್ರ. ಇದೇ ವಿವಾದದ ಮೂಲ.
ಸಂವಿಧಾನದ ಪ್ರಕಾರ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ನ್ಯಾಯಮೂರ್ತಿಗಳ ನೇಮಕ ಆದೇಶ ಹೊರಡಿಸುವ ಅಧಿಕಾರ ಇರುವುದು ರಾಷ್ಟ್ರಪತಿಗೆ ಮಾತ್ರ. ಅವರಿಗೆ ಕೇಂದ್ರ ಕಾನೂನು ಖಾತೆ ಅಗತ್ಯ ಮಾಹಿತಿ ರವಾನಿಸಬೇಕು. ಅದಿಲ್ಲದೆ ರಾಷ್ಟ್ರಪತಿ ಕೂಡ ಅಸಹಾಯಕರು. ಹೀಗಾಗಿಯೇ ಕೊಲಿಜಿಯಂ ಕಳಿಸಿದ ಹೆಸರುಗಳು ಕೇಂದ್ರ ಸರ್ಕಾರದ ಹಂತ ದಾಟಿ ಮುಂದೆ ಹೋಗಿಲ್ಲ. ಸಮಸ್ಯೆ ಇರುವುದೇ ಇಲ್ಲಿ.
ನಮ್ಮ ನ್ಯಾಯಾಂಗ ತುಂಬ ಸ್ವತಂತ್ರವಾಗಿದೆ. ಶ್ರೀಸಾಮಾನ್ಯರ ಪಾಲಿಗೆ ಅದು ಅವರ ಹಕ್ಕು ಕಾಪಾಡುವ ಮತ್ತು ಅನ್ಯಾಯದಿಂದ ಅವರನ್ನು ರಕ್ಷಿಸುವ ಅತ್ಯಂತ ಪರಿಣಾಮಕಾರಿ ಅಸ್ತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಹೀಗಿರುವಾಗ ಅದಕ್ಕೆ ಮುಕ್ತವಾಗಿ ಕಾರ್ಯ ನಿರ್ವಹಿಸಲು ಅನುಕೂಲ ಮಾಡಿಕೊಡುವುದು ಸರ್ಕಾರದ ಹೊಣೆ. ಆದರೆ ಇತ್ತೀಚಿನ ವರ್ಷಗಳಲ್ಲಿ ನ್ಯಾಯಾಂಗವು ಕಾರ್ಯಾಂಗ ಮತ್ತು ಶಾಸಕಾಂಗದ ಅಧಿಕಾರ ವ್ಯಾಪ್ತಿಯನ್ನು ಅತಿಕ್ರಮಿಸುತ್ತಿದೆ ಎಂಬ ದನಿ ಜೋರಾಗಿಯೇ ಕೇಳಿ ಬರುತ್ತಿದೆ.
ಬಾಕಿ ಪ್ರಕರಣಗಳ ಸಂಖ್ಯೆ ಹೆಚ್ಚುವುದಕ್ಕೆ ಇರುವ ಕಾರಣಗಳನ್ನು ಉಲ್ಲೇಖಿಸುವಾಗ ಇದನ್ನೂ ಬೆರಳು ಮಾಡಿ ತೋರಿಸಲಾಗುತ್ತಿದೆ. ಲೋಧಾ ಸಮಿತಿ ಶಿಫಾರಸು ಜಾರಿ ಕುರಿತು ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಅವರೇ ಇತ್ತೀಚೆಗೆ ಹಿಗ್ಗಾಮುಗ್ಗಾ ಟೀಕಿಸಿದ್ದಾರೆ. ಶಾಸಕಾಂಗದ ಕೆಲಸದಲ್ಲಿ ಮೂಗು ತೂರಿಸಿ ತಾನೇ ಕಾನೂನು ಮಾಡಲು ಹೊರಟಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರ ಈ ಕೋಪದ ಹಿಂದೆ, ಸಂವಿಧಾನದ ಮೂರೂ ಅಂಗಗಳ ಕರ್ತವ್ಯವನ್ನು ನೆನಪಿಸುವ ಕಳಕಳಿ ಇದೆ. ಅದನ್ನೂ ಕೋರ್ಟ್ ಪರಿಗಣನೆಗೆ ತೆಗೆದುಕೊಳ್ಳಬೇಕು. ಜನಕ್ಕೆ ಬೇಕಿರುವುದು ತ್ವರಿತ ನ್ಯಾಯದಾನ. ಈ ವಿಚಾರದಲ್ಲಿ ಕೋರ್ಟ್ ಮತ್ತು ಸರ್ಕಾರದ ನಡುವಿನ ಭಿನ್ನಾಭಿಪ್ರಾಯ ಅಡ್ಡಗೋಡೆ ಆಗಬಾರದು. ಕಗ್ಗಂಟು ನಿವಾರಣೆ ಹೊಣೆ ಎರಡೂ ಕಡೆಯವರ ಮೇಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.