ADVERTISEMENT

ಪೊಲೀಸ್ ದೌರ್ಜನ್ಯ

​ಪ್ರಜಾವಾಣಿ ವಾರ್ತೆ
Published 15 ಜುಲೈ 2013, 19:59 IST
Last Updated 15 ಜುಲೈ 2013, 19:59 IST

ಸೀರೆ ಕಳವು ಪ್ರಕರಣವೊಂದು ದುರಂತ ತಿರುವು ಪಡೆದಿರುವುದು ವಿಷಾದನೀಯ. ಸುಲಭವಾಗಿ ಬಗೆಹರಿಸಬಹುದಾದ ಸಣ್ಣ ಪ್ರಕರಣವನ್ನು ಪೊಲೀಸರು ಹೇಗೆಲ್ಲ ಗೋಜಲುಗೊಳಿಸಬಲ್ಲರು ಎಂಬುದಕ್ಕೆ ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಈ ವೃತ್ತಾಂತವೇ ನಿದರ್ಶನ.

ಪೊಲೀಸರ ಅದಕ್ಷತೆ ಮತ್ತು ಸೌಜನ್ಯರಹಿತ ವರ್ತನೆಗೂ ಇದು ಕನ್ನಡಿ ಹಿಡಿಯುತ್ತದೆ. ವೈದ್ಯರೊಬ್ಬರ ಮನೆಯಲ್ಲಿ ಕಳೆದ ತಿಂಗಳು ರೇಷ್ಮೆ ಸೀರೆಗಳು ಕಳವಾಗಿದ್ದವು. ಆಗ ಮನೆಗೆಲಸದ ಮಹಿಳೆ ಲಕ್ಷ್ಮಿದೇವಿ ವಿರುದ್ಧ ಠಾಣೆಯಲ್ಲಿ ದೂರು ನೀಡಲಾಗುತ್ತದೆ. ಆದರೆ ಪ್ರಕರಣ ದಾಖಲಿಸದ ಪೊಲೀಸರು ಲಕ್ಷ್ಮಿದೇವಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ, ಸೀರೆ ಕದ್ದಿರುವುದನ್ನು ಆಕೆ ಒಪ್ಪಿಕೊಳ್ಳುತ್ತಾರೆ.

ಸೀರೆ ಜಪ್ತಿ ಮಾಡಲು ಕರೆದೊಯ್ಯುವಾಗ ಆಕೆ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಾರೆ. ಮಗಳು ಮನೆಗೆ ವಾಪಸ್ ಬರದಿದ್ದಾಗ ಆತಂಕಕ್ಕೆ ಒಳಗಾಗುವ ಪೋಷಕರು ವಿಚಾರಿಸಲು ಠಾಣೆಗೆ ಹೋದರೆ ಪೊಲೀಸರು ಅವರನ್ನೂ ವಶಕ್ಕೆ ತೆಗೆದುಕೊಂಡು, ಮನಸೋ ಇಚ್ಛೆ ದಂಡಿಸುತ್ತಾರೆ. ಠಾಣೆಯಿಂದ ಹೊರಬಂದ ಅವರು, ಪೊಲೀಸ್ ಕಮಿಷನರ್‌ಗೆ ದೂರು ನೀಡುತ್ತಾರೆ. ಕಮಿಷನರ್ ತನಿಖೆಗೆ ಆದೇಶಿಸುತ್ತಾರೆ. ಇದರ ನಡುವೆ ಶನಿವಾರ ಆಂಧ್ರದಲ್ಲಿ ಲಕ್ಷ್ಮಿದೇವಿಯನ್ನು ಪತ್ತೆಹಚ್ಚಿ ಬೆಂಗಳೂರಿಗೆ ಕರೆತರುವ ಪೊಲೀಸರು ಪುನಃ ವಿಚಾರಣೆಗೆ ಒಳಪಡಿಸುತ್ತಾರೆ. ನಂತರ ಸಂಬಂಧಿಕರೊಬ್ಬರ ಮನೆಯಲ್ಲಿ ಬಿಡುತ್ತಾರೆ. ಮಾನಕ್ಕೆ ಅಂಜಿಯೋ, ಮುಂದಿನ ಪರಿಣಾಮಗಳಿಗೆ ಹೆದರಿಯೋ ಲಕ್ಷ್ಮಿದೇವಿ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಇತ್ತ ಅವರ ಪೋಷಕರ ಮೇಲೆ ದೌರ್ಜನ್ಯ ಎಸಗಿರುವುದು ತನಿಖೆಯಿಂದ ದೃಢಪಟ್ಟ ಕಾರಣ ಠಾಣೆಯ ಇನ್‌ಸ್ಪೆಕ್ಟರ್ ಬಿ.ಪಿ.ಪ್ರಸಾದ್ ಮತ್ತು ಸಬ್ ಇನ್‌ಸ್ಪೆಕ್ಟರ್ ಸುದರ್ಶನ್ ಸಿಂಗ್ ಅವರನ್ನು  ಕಮಿಷನರ್ ಅಮಾನತುಗೊಳಿಸಿದ್ದಾರೆ. ಕ್ಷುಲ್ಲಕ ಪ್ರಕರಣ ಇಷ್ಟೆಲ್ಲ ತಿರುವುಗಳನ್ನು ಪಡೆಯಲು ಪೊಲೀಸರ ಹೊಣೆಗೇಡಿ ನಡತೆಯೇ ಕಾರಣ. ಕನಿಷ್ಠಮಟ್ಟದ ವೃತ್ತಿಪರತೆ ತೋರಿದ್ದರೂ ಈ ಎಲ್ಲ ಗೋಜಲುಗಳನ್ನು ತಪ್ಪಿಸಬಹುದಿತ್ತು.

ಬ್ರಿಟಿಷರ ಕಾಲದ ಪೊಲೀಸ್ ಕಾಯ್ದೆ ಜಾರಿಯಲ್ಲಿದೆ ಎಂದಾಕ್ಷಣ ಧೋರಣೆಯೂ ಅದೇ ಆಗಿರಬೇಕು ಎಂದೇನಿಲ್ಲ. ಕೆಲವು ಅಧಿಕಾರಿಗಳ ಅತಿರೇಕದ ವರ್ತನೆಯಿಂದ ಇಡೀ ಇಲಾಖೆಗೆ ಕೆಟ್ಟ ಹೆಸರು. ಠಾಣೆಗೆ ಹೋಗಲು ಜನ ಹಿಂಜರಿಯಲು ಇದೇ ಕಾರಣ. ಇಲಾಖೆಯಲ್ಲಿ ಕೆಲಸ ಮಾಡಲು ದೈಹಿಕ ಸಾಮರ್ಥ್ಯ ಎಷ್ಟು ಅಗತ್ಯವೋ ಸ್ಪಂದನಶೀಲ ಗುಣವೂ ಅಷ್ಟೇ ಅಪೇಕ್ಷಿತ. ಯಾವ ಘಟನೆಗೆ ಯಾವ ರೀತಿ ಪ್ರತಿಕ್ರಿಯಿಸಬೇಕು, ಜನಸಾಮಾನ್ಯರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದರ ಕುರಿತು ಸಿಬ್ಬಂದಿಗೆ ಆಗಿಂದಾಗ್ಗೆ ತರಬೇತಿ ನೀಡುವುದರ ಅಗತ್ಯವನ್ನು ಇಂತಹ ಘಟನೆಗಳು ನೆನಪಿಸುತ್ತವೆ.

ಈ ಪ್ರಕರಣದಲ್ಲಿ ನಿಯಮ ಪಾಲನೆ ಆಗಿಲ್ಲ. ಜತೆಗೆ ಮಾನವ ಹಕ್ಕುಗಳ ಉಲ್ಲಂಘನೆಯೂ ಆಗಿದೆ. ಪ್ರಸಾದ್ ಬೆಂಗಳೂರಿನ ಆರ್.ಟಿ.ನಗರ ಠಾಣೆಯಲ್ಲಿ ಇನ್‌ಸ್ಪೆಕ್ಟರ್ ಆಗಿದ್ದಾಗ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಅಮಾನತುಗೊಂಡಿದ್ದರು. ಅದರ ತನಿಖೆ ಪೂರ್ಣಗೊಳ್ಳುವ ಮೊದಲೇ ಮತ್ತೊಮ್ಮೆ ಅಮಾನತುಗೊಂಡಿದ್ದಾರೆ. ಇಂತಹ ಪ್ರಕರಣಗಳು ಪೊಲೀಸ್ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಮತ್ತಷ್ಟು ಕುಂದಿಸುತ್ತವೆ. ಇದಕ್ಕೆ ಕಡಿವಾಣ ಹಾಕಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.