ADVERTISEMENT

ಬತ್ತಿಹೋದ ಕೆರೆಗಳ ಡಿನೋಟಿಫೈ ಯತ್ನ: ಅಸಮರ್ಥನೀಯ ನಡೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 19:30 IST
Last Updated 16 ಜುಲೈ 2017, 19:30 IST
ಬತ್ತಿಹೋದ ಕೆರೆಗಳ ಡಿನೋಟಿಫೈ  ಯತ್ನ: ಅಸಮರ್ಥನೀಯ ನಡೆ
ಬತ್ತಿಹೋದ ಕೆರೆಗಳ ಡಿನೋಟಿಫೈ ಯತ್ನ: ಅಸಮರ್ಥನೀಯ ನಡೆ   

ರಾಜ್ಯದಲ್ಲಿ ಬತ್ತಿಹೋದ ಕೆರೆ, ಕಟ್ಟೆ, ಹಳ್ಳಗಳನ್ನು ಡಿನೋಟಿಫೈ ಮಾಡಲು ಕಂದಾಯ ಇಲಾಖೆ ಪ್ರಸ್ತಾವವೊಂದನ್ನು ಸಿದ್ಧಪಡಿಸಿದೆ. ಇದಕ್ಕಾಗಿ ‘ಕರ್ನಾಟಕ ಭೂ ಕಂದಾಯ ಕಾಯ್ದೆ–1964’ರ ಕಲಂ 68ಕ್ಕೆ ತಿದ್ದುಪಡಿ ತರುವ ತಯಾರಿಯನ್ನು  ನಡೆಸಿದೆ. ಇದು ತಲೆನೋವು ಬಂದಿದೆ ಎಂದು ತಲೆಯನ್ನೇ ಕತ್ತರಿಸಿಕೊಳ್ಳುವ ಮೂರ್ಖತನದ ನಿರ್ಧಾರ. ಇದರ ಹಿಂದೆ ಲಾಭಕೋರ ಮನಸ್ಸು ಕೆಲಸ ಮಾಡಿದೆ ಎನ್ನುವುದು ಮೇಲ್ನೋಟಕ್ಕೇ ಕಾಣಿಸುತ್ತದೆ.

ಕೆರೆ, ಕಟ್ಟೆ, ಹಳ್ಳಗಳು ಬತ್ತಿಹೋಗಿದ್ದರೆ ಅದಕ್ಕೆ ಕಾರಣ ಏನು, ಅವುಗಳನ್ನು ಪುನರುಜ್ಜೀವಗೊಳಿಸುವುದು ಹೇಗೆ ಎಂದು ಆಲೋಚಿಸುವುದನ್ನು ಬಿಟ್ಟು ಡಿನೋಟಿಫೈ ಮಾಡಲು ಹೊರಟಿರುವುದರ ಹಿಂದೆ ಭಾರೀ ಸಂಚು ಇದೆ. ಒತ್ತುವರಿದಾರರಿಗೆ ನೆರವು ಮಾಡಿಕೊಡುವ ಉದ್ದೇಶ ಇದೆ.

ನೀರಿಲ್ಲದೇ ಬತ್ತಿಹೋಗಿರುವ, ತನ್ನ ಮೂಲ ಸ್ವರೂಪ, ಗುಣಲಕ್ಷಣಗಳನ್ನು ಕಳೆದುಕೊಂಡಿರುವ ಕೆರೆ, ಕಟ್ಟೆ, ಹಳ್ಳಗಳ ಮೇಲೆ ಸರ್ಕಾರಕ್ಕೆ ಇದ್ದ ಹಕ್ಕನ್ನು ರದ್ದುಪಡಿಸುವ ಸಂಬಂಧ  ಅಭಿಪ್ರಾಯ ನೀಡುವಂತೆ ಹಣಕಾಸು, ನಗರಾಭಿವೃದ್ಧಿ, ಸಣ್ಣ ನೀರಾವರಿ, ಅರಣ್ಯ ಮತ್ತು ಪರಿಸರ, ಕಾನೂನು ಮತ್ತು ಸಂಸದೀಯ, ಪಂಚಾಯತ್‌ರಾಜ್‌ ಇಲಾಖೆಗಳಿಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಪತ್ರವನ್ನೂ ಬರೆದಿದ್ದಾರೆ.

ADVERTISEMENT

ಹಣಕಾಸು ಇಲಾಖೆ ಮತ್ತು ಕಾನೂನು ಇಲಾಖೆಗಳು ಡಿನೋಟಿಫೈಗೆ ಪೂರಕವಾಗಿ  ಸ್ಪಂದಿಸಿವೆ. ಆದರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ವಿರೋಧ ವ್ಯಕ್ತಪಡಿಸಿದೆ.

‘ರಾಜ್ಯದಲ್ಲಿ ತೀವ್ರ ಬರಗಾಲ ಇದ್ದು ಕೆರೆಕಟ್ಟೆಗಳನ್ನು ಡಿನೋಟಿಫೈ ಮಾಡಿದರೆ ಅಕ್ರಮ ಬಡಾವಣೆಗಳು ಹೆಚ್ಚಾಗುತ್ತವೆ. ಅಲ್ಲದೆ ಜಲಮೂಲಗಳು ನಾಶವಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಭೀಕರ ಸ್ಥಿತಿ ಎದುರಿಸಬೇಕಾಗುತ್ತದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಸಚಿವ ಎಚ್.ಕೆ.ಪಾಟೀಲ ಅವರು ವ್ಯಕ್ತಪಡಿಸಿರುವ ಆತಂಕ  ಸಮಂಜಸವಾಗಿದೆ.

ಕೆರೆಗಳ ಪುನರುಜ್ಜೀವಕ್ಕೆ ಇದೇ ಸರ್ಕಾರ ಕೆರೆ ಅಭಿವೃದ್ಧಿ ಪ್ರಾಧಿಕಾರ ರಚಿಸಿದೆ. ಕೆರೆಗಳ ಒತ್ತುವರಿಯನ್ನು ತೆರವು ಮಾಡಲು ಸದನ ಸಮಿತಿಯನ್ನೂ ರಚಿಸಿದೆ. ಈಗ ಅದೇ ಸರ್ಕಾರ ಬತ್ತಿಹೋದ ಕೆರೆಗಳ ಡಿನೋಟಿಫೈ ಪ್ರಸ್ತಾವವನ್ನೂ ಮುಂದಿಟ್ಟಿದೆ. ಇದನ್ನೆಲ್ಲ ನೋಡಿದರೆ ಈ ಸರ್ಕಾರದ ಆಡಳಿತಕ್ಕೆ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ.

ಸತತ ಬರಗಾಲ ಬಂದಿದ್ದರಿಂದ ರಾಜ್ಯದ ಜನರಲ್ಲಿ ನೀರಿನ ಮಹತ್ವದ ಬಗ್ಗೆ ಅರಿವು ಹೆಚ್ಚಾಗುತ್ತಿದೆ. ಮಳೆ ನೀರು ಸಂಗ್ರಹಿಸುವ ಮತ್ತು ಅಂತರ್ಜಲ ಹೆಚ್ಚಿಸುವ ಕಾಯಕವನ್ನು ಜನರು ಸ್ವಪ್ರೇರಣೆಯಿಂದ ಕೈಗೊಂಡಿದ್ದಾರೆ. ಕೆರೆಗಳ ಹೂಳೆತ್ತಿ ನೀರು ಸಂಗ್ರಹಿಸಲು ಮುಂದಾಗಿದ್ದಾರೆ. ಸಿನಿಮಾ ನಟರೂ ಇದಕ್ಕೆ ಕೈಜೋಡಿಸುತ್ತಿದ್ದಾರೆ.

ಈ ಆಂದೋಲನದ ಪರಿಣಾಮವಾಗಿ ರಾಜ್ಯದ ಹಲವಾರು ಕಡೆ ತಹಶೀಲ್ದಾರರು, ಉಪ ವಿಭಾಗಾಧಿಕಾರಿಗಳು ಕೆರೆ ಒತ್ತುವರಿ ತೆರವು ಮಾಡಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಬತ್ತಿಹೋದ ಕೆರೆಗಳ ಡಿನೋಟಿಫೈ ಪ್ರಸ್ತಾವವನ್ನು ಮಂಡಿಸಿದರೆ ಕೆರೆಗಳ ಒತ್ತುವರಿ ಹೆಚ್ಚಾಗುತ್ತದೆಯೇ ವಿನಾ ಕೆರೆಗಳ ಪುನಶ್ಚೇತನ ಆಗುವುದಿಲ್ಲ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿಯೇ 10,472 ಎಕರೆ ಕೆರೆ ಜಾಗ ಒತ್ತುವರಿಯಾಗಿದೆ ಎಂದು ಸದನ ಸಮಿತಿ ಗುರುತಿಸಿದೆ.

ಈ ಭೂಮಿಯ ಬೆಲೆ ಸಾವಿರಾರು ಕೋಟಿಗಳಷ್ಟಾಗುತ್ತದೆ. ಈಗ ಅದನ್ನು ಡಿನೋಟಿಫೈ ಮಾಡಿದರೆ ಇದು ಒತ್ತುವರಿದಾರರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದಲೇ ಮಾಡಲಾಗಿದೆ ಎಂದು ಹೇಳದೆ ವಿಧಿ ಇಲ್ಲ. ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕೆರೆ ಜಾಗಗಳನ್ನು ಒತ್ತುವರಿ ಮಾಡಿಕೊಂಡವರು ರಾಜಕೀಯವಾಗಿ ಪ್ರಭಾವಶಾಲಿಗಳೇ ಆಗಿದ್ದಾರೆ.

ಬೆಂಗಳೂರಿನಲ್ಲಿ ಹಳೆಯ ಕಟ್ಟಡಗಳ ಕಸ–ಉಳಿಕೆ ಸುರಿದು ಕೆರೆ, ಕಟ್ಟೆ, ರಾಜಕಾಲುವೆಗಳನ್ನು ದುರುದ್ದೇಶದಿಂದ ಬತ್ತಿಸಲಾಗಿದೆ. ಈಗ ಅವು ಮೂಲಸ್ವರೂಪ ಕಳೆದುಕೊಂಡಿವೆ ಎಂದು  ಡಿನೋಟಿಫೈ ಮಾಡಿದರೆ  ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಮಾರಕವಾಗಲಿದೆ. ಇದು ರಾಜ್ಯದ ಜನರಿಗೆ ಮಾಡುವ ದ್ರೋಹ.

ಇಂತಹ ಆಲೋಚನೆಯನ್ನು ಕೈಬಿಟ್ಟು ಕೆರೆ ಕಟ್ಟೆಗಳನ್ನು ಉಳಿಸಿಕೊಂಡು, ಅವುಗಳಿಗೆ ಮರುಜೀವ ತುಂಬಲು ಸರ್ಕಾರ ಮುಂದಾಗಬೇಕು. ಈಗಾಗಲೇ ರಾಜ್ಯದಲ್ಲಿ ಜನರು ಸ್ವಪ್ರೇರಣೆಯಿಂದ ಕೈಗೊಂಡಿರುವ ಕೆರೆ ಕಾಯಕಕ್ಕೆ ಸರ್ಕಾರವೂ ಕೈಜೋಡಿಸಬೇಕು. ಬತ್ತಿಹೋಗಿರುವ ಕೆರೆಗಳನ್ನು ಕೈಬಿಡುವ ನೆವದಲ್ಲಿ ಎಲ್ಲ ಕೆರೆಗಳನ್ನೂ ಆಪೋಶನ ತೆಗೆದುಕೊಳ್ಳಲು ಸರ್ಕಾರವೂ ಅವಕಾಶ ಮಾಡಿಕೊಡಬಾರದು. ಜನರೂ ಬಿಡಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.