ADVERTISEMENT

ಬಾಲ್ಯ ವಿವಾಹಕ್ಕೆ ಕಡಿವಾಣ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2011, 15:25 IST
Last Updated 20 ಫೆಬ್ರುವರಿ 2011, 15:25 IST

ಬಾಲ್ಯ ವಿವಾಹಗಳನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳನ್ನು ಕುರಿತು ಸಲಹೆ ನೀಡಲು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲರ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರ ಕೋರ್ ಸಮಿತಿಯೊಂದನ್ನು ನೇಮಕ ಮಾಡಿದೆ. 2006ರಲ್ಲಿ ಸಮಾಜ ಕಾರ್ಯಕರ್ತರೊಬ್ಬರು ಬಾಲ್ಯ ವಿವಾಹಗಳನ್ನು ತಡೆಯುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಪರಿಗಣಿಸಿ ಹೈಕೋರ್ಟಿನ ವಿಭಾಗೀಯ ಪೀಠ ಸರ್ಕಾರಕ್ಕೆ ನೀಡಿದ್ದ ಆದೇಶಕ್ಕೆ ಅನುಗುಣವಾಗಿ ಸಮಿತಿ ರಚನೆಯಾಗಿದೆ. ಸಮಾಜದ ಗಣ್ಯರ ಸಮ್ಮುಖದಲ್ಲೇ ಸಾಮೂಹಿಕ ವಿವಾಹ ವೇದಿಕೆಗಳಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿವೆ ಎಂಬುದನ್ನು ಮಾಧ್ಯಮಗಳು ಹಾಗೂ ಅನೇಕ ಸಾಮಾಜಿಕ ಸಂಘಟನೆಗಳು ಸರ್ಕಾರದ ಗಮನ ಸೆಳೆಯುತ್ತಲೇ ಬಂದಿವೆ. ಆದರೂ ಇದನ್ನು ತಪ್ಪಿಸಬೇಕು ಎಂದು ಸರ್ಕಾರಕ್ಕೆ ಅನ್ನಿಸಿರಲಿಲ್ಲ. ಈಗ ಹೈಕೋರ್ಟಿನ ಮಧ್ಯಪ್ರವೇಶದಿಂದಾಗಿ ಬಾಲ್ಯ ವಿವಾಹಗಳನ್ನು ತಡೆಯುವ ಪ್ರಯತ್ನಕ್ಕೆ ಮುಂದಾಗಿದೆ. ಈ ಬೆಳವಣಿಗೆ ಸ್ವಾಗತಾರ್ಹ.

ಬಾಲ್ಯ ವಿವಾಹಗಳನ್ನು ತಡೆಯುವ ಕಾನೂನು ಈಗಾಗಲೇ ಜಾರಿಯಲ್ಲಿದೆ. ಆದರೆ ಸಂಬಂಧಿಸಿದ ಇಲಾಖೆಗಳ ಉದಾಸೀನದಿಂದಾಗಿ ಅದು ಪಾಲನೆ ಆಗುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಸಾಮೂಹಿಕ ವಿವಾಹ ವೇದಿಕೆಗಳಲ್ಲಿ ಬಾಲ್ಯ ವಿವಾಹಗಳು ನಡೆಯುವುದು ಹೆಚ್ಚಾಗಿದೆ. ಮಕ್ಕಳ ಮದುವೆ ಮಾಡಲು ಹಣ ಇಲ್ಲದ ಬಡವರು ಹಾಗೂ ನಿರ್ಗತಿಕರಿಗೆ ಅನುಕೂಲವಾಗಲೆಂದು ಸಾಮೂಹಿಕ ವಿವಾಹಗಳನ್ನು ಸಂಘಟಿಸುವ ಪ್ರಯತ್ನ ಸ್ವಾಗತಾರ್ಗವಾದರೂ ಅಂತಹ ವೇದಿಕೆಗಳಲ್ಲಿ ಬಾಲ್ಯ ವಿವಾಹಗಳಿಗೆ ಅವಕಾಶ ಇರಬಾರದು. ಇತ್ತೀಚಿನ  ವರ್ಷಗಳಲ್ಲಿ ಕೆಲವು ರಾಜಕೀಯ ಮುಖಂಡರು ಸಾಮೂಹಿಕ ವಿವಾಹಗಳನ್ನು ಸಂಘಟಿಸುತ್ತಿದ್ದಾರೆ. ಮದುವೆ ನೆಪದಲ್ಲಿ ಜನರ ಬೆಂಬಲ ಪಡೆಯುವ ದುರುದ್ದೇಶ ಅವರದು.

ಹೆಚ್ಚಿನ ಸಂಖ್ಯೆಯ ಮದುವೆಗಳನ್ನು ಮಾಡುವ ಗುರಿ ಹಾಕಿಕೊಂಡು ಅದನ್ನು ತಲುಪಲು ಆಗದೇ ಇದ್ದಾಗ ಅಪ್ರಾಪ್ತ ವಯಸ್ಸಿನವರನ್ನು ಕರೆತಂದು ಮದುವೆ ಮಾಡಿಸಿದ ನಿದರ್ಶನಗಳಿವೆ. ಸಾಮೂಹಿಕ ವಿವಾಹಗಳಿಗೂ ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆಯುವುದು ಕಡ್ಡಾಯವಾಗಬೇಕು. ವಧು, ವರರ ವಯಸ್ಸನ್ನು ದೃಢಪಡಿಸುವ ದಾಖಲೆ ಸಲ್ಲಿಸುವುದೂ ಕಡ್ಡಾಯವಾಗಬೇಕು. ಈ ನಿಮಯಗಳನ್ನು ಉಲ್ಲಂಘನೆ ಮಾಡಿದವರಿಗೆ ಶಿಕ್ಷೆಯಾಗುತ್ತದೆ ಎಂದಾದರೆ ಬಾಲ್ಯ ವಿವಾಹಗಳು ಕಡಿಮೆಯಾಗಬಹುದು.

ಉತ್ತರ ಕರ್ನಾಟಕದ ಒಂಬತ್ತು ಜಿಲ್ಲೆಗಳಲ್ಲಿ ಬಾಲ್ಯ ವಿವಾಹಗಳ ಪ್ರಮಾಣ ಹೆಚ್ಚಾಗಿದೆ ಎಂದು ಕೋರ್ ಸಮಿತಿ ಅಧ್ಯಕ್ಷರು ಹೇಳಿದ್ದಾರೆ.ಹೆಣ್ಣು ಮಕ್ಕಳ ಮದುವೆಯನ್ನು ಆದಷ್ಟು ಬೇಗ ಮಾಡಿ ಮುಗಿಸುವುದು ಅತ್ಯಂತ ದೊಡ್ಡ ಜವಾಬ್ದಾರಿ ಎಂದೇ ಅನೇಕ ಪಾಲಕರು ಭಾವಿಸುತ್ತಾರೆ. ಬಡತನ, ಸಾಮಾಜಿಕ ಸ್ಥಿತಿಗತಿ ಹಾಗೂ ಇತರ ಒತ್ತಡಗಳಿಂದ ಹೆಣ್ಣು ಮಕ್ಕಳ ಮದುವೆ ಮುಗಿಸಿ ತಮ್ಮ ಜವಾಬ್ದಾರಿ ಕಳೆದುಕೊಳ್ಳುವ  ಪಾಲಕರ ಮನಸ್ಥಿತಿಯೂ ಬಾಲ್ಯ ವಿವಾಹಗಳಿಗೆ ಪ್ರೇರಣೆ ಆಗಬಹುದು. ಕೋರ್ ಸಮಿತಿ ಈ ಎಲ್ಲ ಸಂಗತಿಗಳನ್ನು ಗಮನಕ್ಕೆ ತೆಗೆದುಕೊಳ್ಳಬೇಕು. ಸರ್ಕಾರ ಸಮಿತಿಯ ಶಿಫಾರಸುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಮೂಲಕ ಬಾಲ್ಯವಿವಾಹಗಳಿಗೆ ಕಡಿವಾಣ ಹಾಕಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.