‘ಈ ಸಲ ವಾಡಿಕೆಗಿಂತ ಹೆಚ್ಚಿನ ಮಳೆ ಬೀಳಲಿದೆ’ ಎಂಬ ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ರೈತರಲ್ಲಿ ಹೊಸ ಆಸೆಯನ್ನೇ ಚಿಗುರಿಸಿತ್ತು. ಸತತ ಮೂರು ಬರಗಾಲಗಳಿಂದ ಕಂಗೆಟ್ಟವರ ಪಾಲಿಗೆ ನಿಸ್ಸಂಶಯವಾಗಿ ಇದೊಂದು ಶುಭ ವಾರ್ತೆ ಆಗಿತ್ತು. ಆದರೆ, ಆಗಿದ್ದೇ ಬೇರೆ.
ಆರಂಭದಲ್ಲಿ ಅಬ್ಬರಿಸಿದ ಮಳೆ ಬರುಬರುತ್ತಾ ಕ್ಷೀಣಿಸುತ್ತಾ ಹೋಗಿದ್ದರಿಂದ ಮಲೆನಾಡು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳು ಮತ್ತೆ ಮಳೆ ಕೊರತೆ ಅನುಭವಿಸಬೇಕಾಗಿದೆ. ಮಲೆನಾಡು ಪ್ರದೇಶವೊಂದರಲ್ಲೇ ಶೇ 27ರಷ್ಟು ಮಳೆ ಅಭಾವ ಉಂಟಾಗಿದೆ.
‘ಭಾರತದ ಕೃಷಿ ಎಂದರೆ ಅದು ಮಾನ್ಸೂನ್ ಜತೆಗಿನ ಜೂಜಾಟ’ ಎಂಬ ಮಾತು ಲಾಗಾಯ್ತಿನಿಂದಲೂ ಇದೆ. ಅದಕ್ಕೆ ಪ್ರಸಕ್ತ ಮಳೆಗಾಲ ಮತ್ತೊಂದು ಸಾಕ್ಷಿಯಾಗಿದೆ. ಮುಂಗಾರಿನಲ್ಲೇ ರಾಜ್ಯದ ಬೆಳೆ ಹಂಗಾಮು ಜೋರಾಗಿದ್ದು, ಅದಕ್ಕೆ ಹೋಲಿಸಿದರೆ ಹಿಂಗಾರಿನಲ್ಲಿ ಬಿತ್ತನೆ ಪ್ರಮಾಣ ಕಡಿಮೆ.
ಆಲಮಟ್ಟಿ ಅಣೆಕಟ್ಟು ಜಲಾನಯನ ಪ್ರದೇಶ ಹೊರತುಪಡಿಸಿದರೆ ಮಿಕ್ಕ ಕಡೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬಿದ್ದಿದೆ. ಇದರಿಂದ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ತಳಮಟ್ಟದಲ್ಲಿದ್ದು, ಕೃಷಿ ಕ್ಷೇತ್ರ ಬಿಕ್ಕಟ್ಟು ಎದುರಿಸುತ್ತಿದೆ. ಏಳು ಲಕ್ಷ ಹೆಕ್ಟೇರ್ ಪೈಕಿ 2.42 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಭತ್ತದ ನಾಟಿ ಮಾಡಲಾಗಿದೆ.
ಜಲಾಶಯಗಳಲ್ಲಿ ನೀರಿನ ಕೊರತೆ ಉಂಟಾಗಿರುವ ಕಾರಣ ವಿದ್ಯುತ್ ಉತ್ಪಾದನೆಯೂ ಕುಸಿಯುವ ಭೀತಿ ವ್ಯಕ್ತವಾಗಿದೆ. ಮಳೆ ಪರಿಸ್ಥಿತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅವರು ಪ್ರಧಾನಿ ಅವರಿಗೆ ಬರೆದಿರುವ ಪತ್ರದಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿರುವ ವಿಷಯ ಪ್ರಸ್ತಾಪಿಸಿದ್ದಾರೆ.
ಕಳೆದ ವರ್ಷ ರಾಜ್ಯದ 137 ತಾಲ್ಲೂಕುಗಳು ಬರದ ದವಡೆಯೊಳಗೆ ಸಿಲುಕಿದರೆ, ಈ ಸಲ ಇನ್ನಷ್ಟು ಭೀಕರ ಸನ್ನಿವೇಶ ಸೃಷ್ಟಿಯಾಗುವ ಆತಂಕ ಮನೆಮಾಡಿದೆ. ಈ ಸಂಕಷ್ಟಗಳು ಸಾಲದೆಂಬಂತೆ ಕಾವೇರಿ ನೀರಿಗಾಗಿ ತಮಿಳುನಾಡು ಮತ್ತೆ ತಗಾದೆ ತೆಗೆದಿದೆ.
ಮಳೆಯೊಂದಿಗೆ ಕೃಷಿ ಕ್ಷೇತ್ರವಷ್ಟೇ ನೇರ ಸಂಬಂಧ ಹೊಂದಿದ್ದರೂ ಅದರ ಅಭಾವದಿಂದ ಉಂಟಾಗುವ ಬರ ಒಟ್ಟಾರೆ ರಾಜ್ಯದ ಆರ್ಥವ್ಯವಸ್ಥೆ ಮೇಲೆ ಕರಿಛಾಯೆ ಮೂಡಿಸಲಿದೆ. ಆಹಾರ ಉತ್ಪಾದನೆ ಕುಗ್ಗಿದರೆ ಹಣದುಬ್ಬರ ಹೆಚ್ಚಲಿದೆ. ನೀರಿಲ್ಲದೆ ವಿದ್ಯುತ್ ಉತ್ಪಾದನೆಯಲ್ಲಿ ಕುಂಠಿತವಾದರೆ ಉತ್ಪಾದನಾ ಹಾಗೂ ಸೇವಾ ವಲಯಗಳಿಗೆ ಅದರ ಬಿಸಿ ತಟ್ಟಲಿದೆ. ಸಾಲ ವಸೂಲಾತಿಗೆ ಬ್ಯಾಂಕಿಂಗ್ ಕ್ಷೇತ್ರವೂ ಪರದಾಟ ನಡೆಸಬೇಕಾಗುತ್ತದೆ.
ಒಟ್ಟಾರೆ ರಾಜ್ಯದ ನಿವ್ವಳ ಆಂತರಿಕ ಉತ್ಪನ್ನದ ಮೇಲೂ ಮಳೆ ಕೊರತೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಶಾಂತ ಸಾಗರದ ಪೂರ್ವ ಮತ್ತು ಕೇಂದ್ರ ಭಾಗಗಳಲ್ಲಿ ತಾಪಮಾನದ ಹೆಚ್ಚಳದಿಂದ ಆಗುವ ‘ಎಲ್ ನಿನೊ’ ಪ್ರಭಾವದಿಂದ ಮೋಡಗಳು ಮುಂದಕ್ಕೆ ಓಡುತ್ತಿರುವ ವಿದ್ಯಮಾನ ಮಾತ್ರವಲ್ಲದೆ ಮಳೆ ಅಭಾವಕ್ಕೆ ಬೇರೆ ಕಾರಣಗಳೂ ಉಂಟು.
ಒಂದೆಡೆ ಪಶ್ಚಿಮಘಟ್ಟದಂತಹ ಪರಿಸರ ಸೂಕ್ಷ್ಮ ಪ್ರದೇಶದಲ್ಲೂ ಅರಣ್ಯ ನಾಶ, ಇನ್ನೊಂದೆಡೆ ಭರದಿಂದ ನಡೆದಿರುವ ನಗರೀಕರಣ ಪ್ರಕ್ರಿಯೆಗಳು ಕೂಡ ಮಳೆಚಕ್ರದ ದಿಕ್ಕು ತಪ್ಪಿಸುತ್ತಿವೆ ಎಂಬುದು ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರ ಸಂಶೋಧನೆಯಿಂದ ದೃಢಪಟ್ಟಿದೆ.
ಅಭಿವೃದ್ಧಿ ಹೆಸರಿನಲ್ಲಿ ಪರಿಸರವನ್ನೇ ಬಲಿಕೊಟ್ಟಿರುವ ಪ್ರಮಾದಕ್ಕೆ ನಾವೀಗ ಬೆಲೆ ತೆರಬೇಕಾಗಿದೆ. ಮಳೆಗಾಲದ ಮೊದಲ ಮೂರು ತಿಂಗಳ ಸನ್ನಿವೇಶವನ್ನು ಸಕಾಲಕ್ಕೆ ನಿಕಷಕ್ಕೆ ಒಳಪಡಿಸಿರುವ ರಾಜ್ಯ ಸರ್ಕಾರ, ಸಂಕಷ್ಟ ಎದುರಿಸಲು ಪರಿಹಾರ ಕಾರ್ಯಗಳತ್ತ ಗಮನಹರಿಸಿರುವುದು ಸ್ವಾಗತಾರ್ಹ.
ಅಣೆಕಟ್ಟುಗಳಲ್ಲಿ ಸಂಗ್ರಹವಾಗಿರುವ ನೀರನ್ನು ಕಾಲುವೆಗಳಿಗೆ ಹರಿಸದೆ ಕುಡಿಯುವ ನೀರಿಗಾಗಿ ಮೀಸಲು ಇಡುವುದು, ಹೆಚ್ಚಿನ ನೀರು ಬಯಸುವ ಬೆಳೆಗಳತ್ತ ಒಲವು ತೋರದಂತೆ ರೈತರ ಮನವೊಲಿಸುವುದು, ಕಾವೇರಿ ಜಲಾನಯನ ಪ್ರದೇಶದಲ್ಲಿ ನರೇಗಾ ಯೋಜನೆಯ ಕಾಮಗಾರಿಗಳನ್ನು ಮತ್ತಷ್ಟು ವಿಸ್ತರಿಸುವುದು ಉತ್ತಮ ನಿರ್ಧಾರಗಳು. ಆದರೆ, ಇವೆಲ್ಲ ಅಲ್ಪಾವಧಿ ಪರಿಹಾರ ಮಾರ್ಗಗಳು.
ಮಳೆಚಕ್ರದೊಂದಿಗೆ ನೇರ ಸಂಬಂಧ ಹೊಂದಿರುವ ಪರಿಸರವನ್ನು ಸಂರಕ್ಷಿಸಿಕೊಂಡು ಸುಸ್ಥಿರ ಅಭಿವೃದ್ಧಿಗೆ ಪೂರಕವಾದಂತಹ ಯೋಜನೆಗಳನ್ನು ರೂಪಿಸಬೇಕಿದೆ. ವಿದ್ಯುತ್ ಉತ್ಪಾದನೆಗೆ ಅಣೆಕಟ್ಟೆಗಳ ಮೇಲಿನ ಅತಿಯಾದ ಅವಲಂಬನೆ ತಪ್ಪಿಸಿ ಪರ್ಯಾಯ ಮಾರ್ಗಗಳತ್ತ ಲಕ್ಷ್ಯ ಹರಿಸಬೇಕಿದೆ.
ಪ್ರತಿಯೊಂದು ಕೃಷಿಭೂಮಿಯಲ್ಲೂ ಬಿದ್ದ ಮಳೆನೀರನ್ನು ಅಲ್ಲಿಯೇ ಸಂಗ್ರಹಿಸುವಂತಹ ವ್ಯವಸ್ಥೆ ಆಗಬೇಕಿದೆ. ಹವಾಮಾನ ಬದಲಾವಣೆ ಹಾಗೂ ನೀರಿನ ಲಭ್ಯತೆಗೆ ತಕ್ಕಂತೆ ಕೃಷಿ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವಂತೆ ರೈತರ ಮನವೊಲಿಸಬೇಕಿದೆ. ಮಣ್ಣಿನ ಮಕ್ಕಳ ಆತ್ಮಹತ್ಯೆ ಪ್ರಕರಣಗಳು ಮತ್ತೆ ಘಟಿಸದಿರಲು ಸರ್ಕಾರ ಈ ಕಾರ್ಯಗಳತ್ತ ತುರ್ತು ಗಮನಹರಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.