ADVERTISEMENT

ಮಹತ್ವದ ತೀರ್ಪು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2011, 19:30 IST
Last Updated 12 ಏಪ್ರಿಲ್ 2011, 19:30 IST

ಮದುವೆಗೆ ಮುನ್ನ ಅಥವಾ ವಿವಾಹ ಸಂಬಂಧವಿಲ್ಲದೆ ದೈಹಿಕ ಸಂಪರ್ಕ ಬೆಳೆಸಿದವರಿಗೆ ಹುಟ್ಟುವ ಮಕ್ಕಳಿಗೆ ತಂದೆಯ ಆಸ್ತಿ ಮಾತ್ರವಲ್ಲದೆ ಪಿತ್ರಾರ್ಜಿತ ಆಸ್ತಿಯ ಮೇಲೂ ಹಕ್ಕು ಇರುವುದಾಗಿ ಸುಪ್ರೀಂ ಕೋರ್ಟ್ ಕಳೆದ ಶುಕ್ರವಾರ ನೀಡಿರುವ ಐತಿಹಾಸಿಕ ತೀರ್ಪು ಸ್ವಾಗತಾರ್ಹವಾದುದು. ಬದಲಾಗುತ್ತಿರುವ ಸಾಮಾಜಿಕ ಮೌಲ್ಯ ಮತ್ತು ಮಾನವ ಹಕ್ಕುಗಳ ಆಶಯದ ಹಿನ್ನೆಲೆಯಲ್ಲಿ ಇಂತಹ ಮಕ್ಕಳಿಗೆ ವಿವಾಹ ಸಂಬಂಧದಲ್ಲಿ ಹುಟ್ಟುವ ಮಕ್ಕಳಷ್ಟೇ ಸಮಾನ ಹಕ್ಕುಗಳನ್ನು ಈ ತೀರ್ಪು ದಯಪಾಲಿಸಿದೆ. ಕಾನೂನಿನ ಈ ಹೊಸ ವ್ಯಾಖ್ಯಾನವನ್ನು ಮತ್ತಷ್ಟು ಕಾಯ್ದೆಯ ಪರಿಧಿಯಲ್ಲಿ ತರುವ ಸಂಬಂಧ ಸಂವಿಧಾನ ಪೀಠವೊಂದನ್ನು ರಚಿಸಿ ಪರಾಮರ್ಶಿಸಬೇಕೆಂದು ನ್ಯಾಯಮೂರ್ತಿಗಳಾದ ಜಿ.ಎಸ್.ಸಿಂಘ್ವಿ ಮತ್ತು ಎ.ಕೆ. ಗಂಗೂಲಿ ಅವರು ಮುಖ್ಯನ್ಯಾಯಮೂರ್ತಿ ಅವರಿಗೆ ಮನವಿ ಮಾಡಿರುವುದು ಅಪರೂಪದ ಪ್ರಸಂಗ. ಗಂಡು ಹೆಣ್ಣಿನ ವಿವಾಹ ಪೂರ್ವ ಮತ್ತು ವಿವಾಹ ಬಾಹಿರದ ಸಂಬಂಧದಿಂದ ಹುಟ್ಟುವ ಮಕ್ಕಳನ್ನು ಸದ್ಯದ ಧಾರ್ಮಿಕ ಕಟ್ಟುಪಾಡುಗಳಿಂದ ಸಮಾಜವು ಕೀಳಾಗಿ ಕಾಣುತ್ತಿದೆ. ಅಲ್ಲದೆ, ತಂದೆಯ ಕುಟುಂಬದಲ್ಲೂ ‘ಬೇಡದ ಮಗು’ ಮತ್ತು ‘ನಮ್ಮ ಕುಟುಂಬಕ್ಕೆ ಸೇರಿಲ್ಲದ ಮಗು’ ಎನ್ನುವ ರೀತಿಯಲ್ಲಿ  ನೋಡಲಾಗುತ್ತಿದೆ. ತಂದೆಯ ಕುಟುಂಬದ ಅನಾದರಕ್ಕೆ ಒಳಗಾಗುವ ಮಗು ಮುಗ್ಧ ಎನ್ನುವುದಷ್ಟೇ ಸತ್ಯ. ತನ್ನ ಹುಟ್ಟಿನ ವಿಷಯದಲ್ಲಿ ಆ ಮಗುವಿನದು ಲವಲೇಶವೂ ತಪ್ಪಿರುವುದಿಲ್ಲ. ಆದ್ದರಿಂದ ಇಂತಹ ಮಗುವಿಗೆ ನ್ಯಾಯಬದ್ಧವಾಗಿ ದೊರೆಯುವ ಸಾಂವಿಧಾನಿಕ ಹಕ್ಕು ಲಭ್ಯವಾಗಬೇಕೆನ್ನುವ ಈ ತೀರ್ಪು ನಿಜಕ್ಕೂಶ್ಲಾಘನೀಯ.

ಸಮಾಜದಲ್ಲಿನ ಈ ಪರಿವರ್ತನೆಯ ಯುಗದಲ್ಲಿ ಕಾಲಕ್ಕೆ ತಕ್ಕಂತೆ ನಮ್ಮ ಕಾಯ್ದೆ ಕಾನೂನುಗಳೂ ಬದಲಾಗಬೇಕಾದ ಅವಶ್ಯಕತೆ ಇದೆ. ಈ ಹಿಂದೆ ಯಾವುದನ್ನು ನಾವು ಅಕ್ರಮ ಮತ್ತು ಅನೈತಿಕ ಎಂದು ಕಡೆಗಣಿಸಿದ್ದೇವೆಯೋ ಅವು ಈಗ ಸಕ್ರಮ ಮತ್ತು ನೈತಿಕ ಸ್ವರೂಪವನ್ನು ಪಡೆದುಕೊಳ್ಳಬಹುದು. ಸಾಮಾಜಿಕ ವ್ಯವಸ್ಥೆ ನಿಂತ ನೀರಲ್ಲ. ಯಾರು ಬಯಸಲಿ ಬಿಡಲಿ, ಅದು ಬದಲಾಗುತ್ತಾ ಹೋಗುತ್ತದೆ. ಆದ್ದರಿಂದ ಕಾಯ್ದೆಗಳೂ ಸ್ಥಗಿತಗೊಳ್ಳದಂತೆ ಅವುಗಳನ್ನು ಕೂಡ ಕಾಲಕ್ಕೆ ತಕ್ಕಂತೆ ತಿದ್ದುಪಡಿ ಮಾಡುತ್ತಾ ಹೋಗಬೇಕಾಗುತ್ತದೆ. ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗನುಗುಣವಾಗಿ ಅವುಗಳೂ ಚಲನಶೀಲವಾಗಬೇಕು. ಹಾಗೆಯೇ ಜಡ್ಡುಗಟ್ಟಿದಂತಿರುವ ಕೌಟುಂಬಿಕ ಸಂಪ್ರದಾಯ ಮತ್ತು ಸಂಬಂಧಗಳೂ ಬದಲಾಗಬೇಕಿದೆ ಎನ್ನುವ ಅಗತ್ಯವನ್ನು ಈ ತೀರ್ಪು ಒತ್ತಿಹೇಳಿದಂತಿದೆ. ಹಿಂದೂ ಸಂಪ್ರದಾಯವಾದಿ ಕುಟುಂಬಗಳಿಗೆ ಇಂತಹ ತೀರ್ಪನ್ನು ಜೀರ್ಣೀಸಿಕೊಳ್ಳುವುದು ಸದ್ಯಕ್ಕೆ ಕಷ್ಟವಾಗಬಹುದು. ಆದರೆ ವಿವಾಹಪೂರ್ವ ಮತ್ತು ವಿವಾಹ ಬಾಹಿರ ಸಂಬಂಧದಿಂದ ಹುಟ್ಟಿದ ಮಗು ಎಂದು ಅವರಿಗೆ ಯಾವುದೇ ಹಕ್ಕುಗಳನ್ನು ನಿರಾಕರಿಸುವುದು ನೈಸರ್ಗಿಕ ನ್ಯಾಯವಾಗಲಾರದು. ಆದ್ದರಿಂದ ಸುಪ್ರೀಂ ಕೋರ್ಟಿನ ಈ ತೀರ್ಪಿನಿಂದ ಅಂತಹ ಮಕ್ಕಳ ಸಾಮಾಜಿಕ ಸ್ಥಾನಮಾನವನ್ನು ಸಮಾಜವು ಮಾನ್ಯ ಮಾಡಿದಂತಾಗುತ್ತದೆ. ಹಿಂದೂ ವಿವಾಹ ಕಾಯ್ದೆ ಅನ್ವಯ ಉದ್ಭವಿಸುತ್ತಿದ್ದ ವಿವಾಹಪೂರ್ವ, ವಿವಾಹ ಬಾಹಿರ ಮತ್ತು ವಿವಾಹ ನಂತರದ ಮಕ್ಕಳ ಆಸ್ತಿ ವಿವಾದಕ್ಕೆ ಈ ತೀರ್ಪು ತೆರೆ ಎಳೆದಿದೆ. ಈ ದೃಷ್ಟಿಯಿಂದ ಇದೊಂದು ಮಹತ್ವದ ತೀರ್ಪು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.