ದಾವಣಗೆರೆಯಲ್ಲಿ ನಡೆದ ಬೇವಿನುಡುಗೆಯ ಅರೆಬೆತ್ತಲೆ ಸೇವೆ ಹಾಗೂ ಕೊಪ್ಪಳ ಜಿಲ್ಲೆಯ ಹಿರೇಸಿಂಧೋಗಿ ಗ್ರಾಮದಲ್ಲಿ ಆಚರಣೆಯಲ್ಲಿರುವ ದೇವದಾಸಿ ಪದ್ಧತಿ, ಮೌಢ್ಯಗಳು ಇನ್ನೂ ಜೀವಂತ ವಾಗಿರುವುದರ ಪ್ರತೀಕ. ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ಮಹಿಳೆ ಯರನ್ನು ಶತಮಾನಗಳಿಂದಲೂ ಕಂದಾಚಾರದ ಕೂಪಕ್ಕೆ ದೂಡಲಾಗುತ್ತಿದೆ.
ಈ ಅಮಾನವೀಯ ಆಚರಣೆಯನ್ನು ಪೋಷಿಸಿಕೊಂಡು ಬರುತ್ತಿರು ವುದು ಖಂಡನಾರ್ಹ. ಅರೆಬೆತ್ತಲೆ ಸೇವೆ, ದೇವದಾಸಿ ಪದ್ಧತಿಗೆ ಹಿಂದುಳಿದ ಇಲ್ಲವೇ ದಲಿತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿರುವುದು ಆತಂಕದ ವಿಷಯ. ಅಜ್ಞಾನ, ಬಡತನ, ಅರಿವಿನ ಕೊರತೆಯೇ ಇದಕ್ಕೆ ಕಾರಣ. ಉನ್ನತ ಶಿಕ್ಷಣ ಪಡೆದ ಮಹಿಳೆಯರೂ ಬೇವಿನ ಉಡುಗೆ ತೊಟ್ಟು ಅರೆಬೆತ್ತಲೆ ಸೇವೆಯಲ್ಲಿ ಪಾಲ್ಗೊಳ್ಳುತ್ತಿರುವುದು ಆತಂಕಕಾರಿ.
21ನೇ ಶತಮಾನ ವೈಚಾರಿಕ ಜಾಗೃತಿಯ ಕಾಲ ಎಂದು ಭಾವಿಸಿರುವಾಗ ದೇವದಾಸಿ, ಅರೆಬೆತ್ತಲೆ ಸೇವೆಯಂಥ ಅನಿಷ್ಟ ಆಚರಣೆಗಳು ರೂಢಿಯಲ್ಲಿರು ವುದು ಸಮಾಜದಲ್ಲಿನ ಪ್ರಜ್ಞಾವಂತಿಕೆಯ ಕೊರತೆಯನ್ನು ತೋರಿಸುತ್ತದೆ. ದಾವಣಗೆರೆ ಜಿಲ್ಲೆಯಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ದುರ್ಗಾಂಬಿಕಾದೇವಿ ಜಾತ್ರೆಯಲ್ಲಿ (ದುಗ್ಗಮ್ಮನ ಹಬ್ಬ) ಆರೋಗ್ಯ ಭಾಗ್ಯ, ಸಂತಾನ ಭಾಗ್ಯ, ಸಂಕಷ್ಟ ನಿವಾರಣೆಗಾಗಿ ದೇವಿಗೆ ಭಕ್ತರು ಬೇವಿನ ಉಡುಗೆಯ ಹರಕೆ ಹೊರುತ್ತಾರೆ. ಅಷ್ಟೇ ಅಲ್ಲ, ಈ ಜಾತ್ರೆಯಲ್ಲಿ ಕೋಣ ಬಲಿಯೂ ನಡೆಯುತ್ತದೆ. ಜಿಲ್ಲಾ ಆಡಳಿತ, ಪೊಲೀಸ್ ಇಲಾಖೆಯ ಕಣ್ಣುತಪ್ಪಿಸಿ ಈ ಬಾರಿ ಕೋಣವನ್ನು ಬಲಿ ಕೊಡಲಾಗಿದೆ.
ಮಕ್ಕಳು, ಮಹಿಳೆಯರು ನಿರಾತಂಕವಾಗಿ ಅರೆಬೆತ್ತಲೆ ಸೇವೆ ನಡೆಸಿದರೂ ಪೊಲೀಸರು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಏನೂ ಕ್ರಮಕೈಗೊಂಡಿಲ್ಲ. ಇದು ಆಡಳಿತ ಹಾಗೂ ಕಾನೂನಿನ ವೈಫಲ್ಯಗಳನ್ನು ಎತ್ತಿ ತೋರಿಸುತ್ತದೆ. ಇಂತಹ ಆಚರಣೆಗಳು ಜರುಗುವ ಮುನ್ನವೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಲ್ಲಿ ಅರೆಬೆತ್ತಲೆ ಸೇವೆ, ಕೋಣಬಲಿಯನ್ನು ತಡೆಯಬಹುದಿತ್ತು. ಆದರೆ ಸಂಪ್ರದಾಯ, ಜನರ ನಂಬಿಕೆ ಪುರಸ್ಕರಿಸುವ ನೆಪದಿಂದ ಕಾನೂನು ಪಾಲಕರೂ ಸುಮ್ಮನಿರುತ್ತಾರೆ. ಕಂದಾಚಾರ ನಿರಂತರವಾಗಿ ನಡೆಯುತ್ತದೆ.
ರಾಜ್ಯದಲ್ಲಿ ದೇವದಾಸಿ ಪುನರ್ವಸತಿ ಯೋಜನೆ ಇದ್ದಾಗಲೂ ಹಿರೇಸಿಂಧೋಗಿ ಗ್ರಾಮದಲ್ಲಿ ಮುತ್ತು ಕಟ್ಟುವಂತಹ ಆಚರಣೆ ಅಬಾಧಿತವಾಗಿ ನಡೆದಿರುವುದು ಆಡಳಿತ ವ್ಯವಸ್ಥೆಯ ಹೊಣೆಗೇಡಿತನದ ಪರಾಕಾಷ್ಠೆ. ಮೂಢನಂಬಿಕೆಗಳನ್ನು ತೊಲಗಿಸಲು ನಿರಂತರ ಜನಜಾಗೃತಿಯೇ ಮದ್ದು. ಉತ್ತಮ ಶಿಕ್ಷಣ, ದುಡಿಯುವ ಅವಕಾಶ ಹಾಗೂ ಮೂಲಭೂತ ಸೌಲಭ್ಯ ಗಳನ್ನು ಒದಗಿಸಿಕೊಡುವ ಮೂಲಕ ಜನರು ಇಂತಹ ಮೂಢ ಆಚರಣೆ ಗಳಿಂದ ಹೊರಬರುವಂತೆ ಮಾಡಬಹುದು. ಈ ಕುರಿತಂತೆ ಸರ್ಕಾರ ನಿರಂತರ ಪ್ರಯತ್ನಗಳನ್ನು ಹಾಕಬೇಕು. ಇದಕ್ಕೆ ಇಚ್ಛಾಶಕ್ತಿ ಬೇಕು. ಇಂಥ ಆಚರಣೆ ಗಳನ್ನು ಇಲ್ಲವಾಗಿಸುವ ಹೊಣೆ ಸರ್ಕಾರದ್ದು ಮಾತ್ರವಲ್ಲ. ನಾಗರಿಕ ಸಮಾಜ ಹಾಗೂ ಸಂಘ–ಸಂಸ್ಥೆಗಳೂ ಸರ್ಕಾರದೊಂದಿಗೆ ಕೈಜೋಡಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.