ಪ್ರಯಾಣ ದರವನ್ನು ಹೆಚ್ಚಿಸುವ ಮೂಲಕ ತನ್ನ ಆದಾಯ ಹಾಗೂ ವೆಚ್ಚದ ಸಮತೋಲನ ಕಾಪಾಡಿಕೊಳ್ಳುವ ಚಿಂತನೆಗೆ ರೈಲ್ವೆ ಸಚಿವಾಲಯ ಮುಂದಾಗಿದೆ. ಅನೇಕ ವರ್ಷಗಳಿಂದ ರೈಲ್ವೆ ಸಚಿವರು ಪ್ರಯಾಣ ದರ ಹೆಚ್ಚಿಸುವ ಚಿಂತನೆಯನ್ನೇ ಮಾಡಿರಲಿಲ್ಲ.
ಕೇಂದ್ರದಲ್ಲಿ ಪ್ರಾದೇಶಿಕ ಪಕ್ಷಗಳ ಸಹಕಾರದಿಂದ ಸರ್ಕಾರ ರಚನೆ ಮಾಡುವ ರಾಜಕೀಯ ಪರಿಸ್ಥಿತಿ ನಿರ್ಮಾಣವಾದ ನಂತರ ದೇಶದ ರೈಲ್ವೆ ವ್ಯವಸ್ಥೆ ದುರ್ಬಲಗೊಳ್ಳುತ್ತ ಬಂದಿತು. ಕಳೆದ ಒಂದು ದಶಕ ಅವಧಿಯಲ್ಲಿ ಪ್ರಾದೇಶಿಕ ಪಕ್ಷಗಳ ಮುಖಂಡರೇ ರೈಲ್ವೆ ಖಾತೆಯ ಜವಾಬ್ದಾರಿ ನಿರ್ವಹಿಸುತ್ತ ಬಂದಿದ್ದಾರೆ. ಅವರೆಲ್ಲ ತಮ್ಮ ರಾಜ್ಯಗಳಲ್ಲಿ ರೈಲ್ವೆ ಅಭಿವೃದ್ಧಿಗಷ್ಟೇ ಗಮನ ನೀಡಿ ಉಳಿದ ರಾಜ್ಯಗಳನ್ನು ಉಪೇಕ್ಷಿಸಿದರು.
ಜನಪ್ರಿಯ ಬಜೆಟ್ ಮಂಡಿಸುವ ಭರದಲ್ಲಿ ಸಂಪನ್ಮೂಲ ಕ್ರೋಡೀಕರಣಕ್ಕೆ ಗಮನ ಕೊಡಲಿಲ್ಲ. ಈಗ ಸರ್ಕಾರ ಎಚ್ಚೆತ್ತುಕೊಂಡು ಸ್ಯಾಮ್ ಪಿತ್ರೋಡಾ ನೇತೃತ್ವದಲ್ಲಿ ಐವತ್ತು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ರೈಲ್ವೆ ಆಧುನೀಕರಣ ಯೋಜನೆಗೆ ಕೈಹಾಕಿದೆ. ಇದಕ್ಕಾಗಿ ಸಂಪನ್ಮೂಲ ಸಂಗ್ರಹಿಸಲು ಪಿತ್ರೋಡಾ ಸಮಿತಿ ಶಿಫಾರಸಿನಂತೆ ರೈಲ್ವೆ ಸಚಿವಾಲಯ ಪ್ರಯಾಣ ದರ ಹೆಚ್ಚಳಕ್ಕೆ ಮುಂದಾಗಿದೆ.
ಇದು ಅನಿವಾರ್ಯವಾದರೂ ಬಡವರಿಗೆ ಹೆಚ್ಚು ಹೊರೆಯಾಗದಂತೆ ನೋಡಿಕೊಳ್ಳಬೇಕು. ಬಹುತೇಕ ರೈಲ್ವೆ ನಿಲ್ದಾಣಗಳಲ್ಲಿ ನೈರ್ಮಲ್ಯದ ಅಭಾವವಿದೆ. ರೈಲು ಬೋಗಿಗಳೂ ಕೊಳಕಾಗಿವೆ. ಶೌಚಾಲಯಗಳ ನಿರ್ವಹಣೆಯೂ ಸರಿಯಾಗಿಲ್ಲ. ಪ್ಯಾಸೆಂಜರ್ ರೈಲುಗಳಲ್ಲಿ ಕಾಲಿಡಲೂ ಆಗದಷ್ಟು ಪ್ರಯಾಣಿಕರ ಒತ್ತಡವಿದೆ. ಪ್ರಯಾಣ ದರ ಹೆಚ್ಚಳದ ಜತೆಗೆ ಗುಣಮಟ್ಟದ ಸೌಕರ್ಯಗಳನ್ನು ಒದಗಿಸಲು ರೈಲ್ವೆ ಗಮನ ಕೊಡಬೇಕು.
ರೈಲ್ವೆ ಸೌಲಭ್ಯದ ವಿಷಯದಲ್ಲಿ ಕಳೆದ ಒಂದು ದಶಕದಿಂದ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಬಜೆಟ್‌ನಲ್ಲಿ ನೂತನ ರೈಲು ಮಾರ್ಗಗಳ ಸಮೀಕ್ಷೆ ಪ್ರಸ್ತಾವಗಳಷ್ಟೇ ಆಗುತ್ತಿವೆ. ಬೆಂಗಳೂರಿನಿಂದ ಉತ್ತರ ಭಾರತದ ಪ್ರಮುಖ ನಗರಗಳಿಗೆ ಹೊಸ ರೈಲುಗಳ ಓಡಾಟ ಆರಂಭಿಸಿದ್ದನ್ನೇ ರೈಲ್ವೆ ಸಚಿವರು ಕರ್ನಾಟಕಕ್ಕೆ ನೀಡಿದ ಕೊಡುಗೆ ಎಂಬಂತೆ ಬಿಂಬಿಸುತ್ತಿದ್ದಾರೆ.
ಈ ರೈಲುಗಳಿಂದ ರಾಜ್ಯದ ಜನರಿಗೆ ಪ್ರಯೋಜನವಿಲ್ಲ. ಉತ್ತರದ ರಾಜ್ಯಗಳ ನಿರುದ್ಯೋಗಿಗಳು, ಬಡವರು ಕರ್ನಾಟಕಕ್ಕೆ ವಲಸೆ ಬರಲು ಈ ರೈಲುಗಳು ಸಹಾಯಕವಾಗಿವೆಯಷ್ಟೆ. 2010ರಲ್ಲಿ ರೈಲ್ವೆ ಬಜೆಟ್‌ನಲ್ಲಿ ಮಮತಾ ಬ್ಯಾನರ್ಜಿ ಕರ್ನಾಟಕದ 13 ರೈಲು ಸಂಪರ್ಕ ಯೋಜನೆಗಳಿಗೆ ಸಮೀಕ್ಷೆ ನಡೆಸುವುದಾಗಿ ಪ್ರಕಟಿಸಿದ್ದರು. ಇಂಥ ಸಮೀಕ್ಷೆಗಳಿಂದ ರಾಜ್ಯಕ್ಕೆ ಪ್ರಯೋಜನವಿಲ್ಲ. ಹರಿಹರ-ಕೊಟ್ಟೂರು ರೈಲು ಮಾರ್ಗ ನೆನೆಗುದಿಗೆ ಬಿದ್ದಿದೆ.
ಬೆಂಗಳೂರು- ಮೈಸೂರು ಜೋಡಿ ಮಾರ್ಗ ವಿಳಂಬವಾಗುತ್ತಿದೆ. ಹಳೆಯ ಯೋಜನೆಗಳನ್ನು ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿ ಜನರ ಕಣ್ಣೊರೆಸುವ ಬದಲು ಬೆಂಗಳೂರಿನಿಂದ ರಾಜ್ಯದ ಪ್ರಮುಖ ನಗರಗಳಿಗೆ ಹೆಚ್ಚಿನ ರೈಲುಗಳನ್ನು ಓಡಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು. ರಸ್ತೆ ಪ್ರಯಾಣಕ್ಕಿಂತ ರೈಲು ಪ್ರಯಾಣ ಸುಖಕರ ಮತ್ತು ಕ್ಷೇಮಕರ. ರೈಲ್ವೆ ಖಾತೆಯ ರಾಜ್ಯ ಸಚಿವರಾದ ಮುನಿಯಪ್ಪ ಅವರು ರಾಜ್ಯದ ಸಮಸ್ಯೆಗಳೆಲ್ಲ ಗೊತ್ತಿವೆ. ಪ್ರಸ್ತುತ ರೈಲ್ವೆ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ರಾಜ್ಯದ ಸಂಸದರು ಅವರಿಗೆ ಒತ್ತಾಸೆಯಾಗಿ ನಿಲ್ಲಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.