ನರೇಂದ್ರ ಮೋದಿಯವರನ್ನು ಟೀಕಿಸಲು ಕೇಂದ್ರ ವಿದೇಶಾಂಗ ವ್ಯವಹಾರ ಸಚಿವ ಸಲ್ಮಾನ್ ಖುರ್ಷಿದ್ ಅವರು ನಪುಂಸಕ ಪದ ಬಳಕೆ ಮಾಡಿದ್ದಾರೆ. ನರೇಂದ್ರ ಮೋದಿ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆಯೇ, ಗುಜರಾತ್‌ನಲ್ಲಿನ 2002ರ ಗಲಭೆ ನಿಯಂತ್ರಿಸುವಲ್ಲಿನ ಆಡಳಿತ ವೈಫಲ್ಯವನ್ನು ದೂಷಿಸುವುದಕ್ಕಾಗಿ ಈ ಪದವನ್ನು ಖುರ್ಷಿದ್ ಬಳಸಿರುವುದು ಕೀಳು ಅಭಿರುಚಿಯ ದ್ಯೋತಕ.
ಭಾರತದಲ್ಲಿ ರಾಜಕೀಯ ವಾಗ್ವಾದಗಳು ಎಷ್ಟರಮಟ್ಟಿಗೆ ಅಧೋಗತಿಗೆ ಇಳಿಯುತ್ತಿವೆ ಎಂಬುದನ್ನು ಇದು ಬಿಂಬಿಸುತ್ತದೆ. ತಾವೂ ನಪುಂಸಕರಲ್ಲ ಎಂಬುದನ್ನು ಖುರ್ಷಿದ್ ಸಾಬೀತುಪಡಿಸಲಿ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಈ ವಿಚಾರವನ್ನು ಬೆಳೆಸಿ ಸವಾಲು ಹಾಕಿರುವುದು ರಾಜಕೀಯ ಪಕ್ಷಗಳ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಖುರ್ಷಿದ್ ಮಾತುಗಳಿಗೆ ಬಿಜೆಪಿ ಸಹ ತೀವ್ರ ಪ್ರತಿಕ್ರಿಯೆಗಳನ್ನು ನೀಡಿದೆ. ತಮ್ಮ ಮಾತು ಸಮರ್ಥಿಸಿಕೊಳ್ಳಲು ಖುರ್ಷಿದ್ ನಡೆಸಿದ ಪ್ರಯತ್ನವೂ ಹಾಸ್ಯಾಸ್ಪದ.
ಆದರೆ ಇಂತಹ ಅಭಿರುಚಿಹೀನ ಹೇಳಿಕೆಗಳಿಗೆ ಬಿಜೆಪಿ ನಾಯಕರುಗಳೇನೂ ಹೊರತಾಗಿಲ್ಲ. 2004ರಲ್ಲಿ ಯಶವಂತ ಸಿನ್ಹಾ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ‘ಶಿಖಂಡಿ’ ಎಂದು ಕರೆದಿದ್ದರು. ತೀರಾ ಇತ್ತೀಚೆಗೆ ಯೋಗ ಗುರು ಬಾಬಾ ರಾಮದೇವ್, ಪ್ರಧಾನಿ ಅವರನ್ನು ‘ನಾಮರ್ದ್’ ಎಂದು ಟೀಕಿಸಿದ್ದರು. ಸ್ವತಃ ನರೇಂದ್ರ ಮೋದಿ ಅವರೂ ಸುನಂದಾ ಪುಷ್ಕರ್ ಅವರನ್ನು ಶಶಿ ತರೂರ್ ಅವರ ‘ ₨ 50 ಕೋಟಿ ಬೆಲೆಬಾಳುವ ಗರ್ಲ್ ಫ್ರೆಂಡ್’ ಎಂದು ಕರೆದಿದ್ದರು.
ಲಿಂಗ ಸಮಾನತೆಗೆ ಬೆಂಬಲ ಕೊಡುವ ಪ್ರಗತಿಪರರೆಂದು ಬಣ್ಣಿಸಿಕೊಳ್ಳುವ ಎಡ ಪಕ್ಷವೂ ರಾಜಕೀಯ ಪ್ರತಿಸ್ಪರ್ಧಿಗಳ ವಿಚಾರದಲ್ಲಿ ಎಲುಬಿಲ್ಲದ ನಾಲಿಗೆಯನ್ನೇ ಹರಿಯಬಿಟ್ಟಿದೆ. ಸಿಪಿಎಂ ಸಂಸತ್ ಸದಸ್ಯರೊಬ್ಬರು ಈ ಹಿಂದೆ ಮಮತಾ ಬ್ಯಾನರ್ಜಿ ಅವರನ್ನು ಲೈಂಗಿಕ ಕಾರ್ಯಕರ್ತೆಗೆ ಹೋಲಿಸಿದ್ದರು.
ಅಧಿಕಾರವನ್ನು ಪುರುಷತ್ವಕ್ಕೆ ತಳಕು ಹಾಕುವ ಈ ಪ್ರವೃತ್ತಿ ಹಿಂದಿನಿಂದಲೂ ನಡೆದು ಬಂದಿದೆ. ಇದರ ಬೇರಿರುವುದು ಪಿತೃಪ್ರಧಾನ ಸಂಸ್ಕೃತಿಯಲ್ಲಿ. ನಿರ್ಧಾರ ಕೈಗೊಳ್ಳಲಾಗದ ಸಂದರ್ಭಗಳಲ್ಲಿ ‘ಬಳೆ ತೊಟ್ಟ ಹೆಣ್ಣಿನಂತೆ’ ಎಂದು ಸಮೀಕರಿಸಿ ಕೇವಲವಾಗಿ ಮಾತನಾಡುವುದು ಮಾಮೂಲು. ರಾಷ್ಟ್ರಈಗ ಲೋಕಸಭಾ ಚುನಾವಣೆಗೆ ಸಜ್ಜುಗೊಳ್ಳುತ್ತಿದೆ.
ಇಂತಹ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರಗಳ ಕಾವೂ ಏರ ತೊಡಗುತ್ತದೆ. ಆದರೆ ಪ್ರಚಾರ ಗಿಟ್ಟಿಸುವುದಕ್ಕಾಗಿ ಪರಸ್ಪರ ವೈಯಕ್ತಿಕ ನಿಂದನೆಗಳ ಕೆಸರೆರಚಾಟಕ್ಕೆ ರಾಜಕೀಯ ಪ್ರತಿಸ್ಪರ್ಧಿಗಳು ಇಳಿಯುವುದು ಪ್ರಬುದ್ಧ ರಾಜಕಾರಣದ ಲಕ್ಷಣವಂತೂ ಅಲ್ಲ.
ರಚನಾತ್ಮಕ ಟೀಕೆ, ವಿಮರ್ಶೆಗಳಿಗೆ ಒತ್ತು ನೀಡುವ ಮೂಲಕ ಚರ್ಚೆಗಳನ್ನು ಹುಟ್ಟುಹಾಕುವುದು ಅಗತ್ಯ. ತಮ್ಮ ಬದುಕಿಗೆ ಸಂಬಂಧಪಡುವ ಎಷ್ಟೊಂದು ವಿಚಾರಗಳ ಬಗ್ಗೆ ರಾಜಕೀಯ ಅಭ್ಯರ್ಥಿಗಳ ನಿಲುವುಗಳೇನು ಎಂಬುದನ್ನು ತಿಳಿಯಲು ಮತದಾರರು ಉತ್ಸುಕರಾಗಿರುತ್ತಾರೆ.
ಜನಪರವಾದ ಆಡಳಿತ ಹಾಗೂ ಅಭಿವೃದ್ಧಿ ವಿಚಾರಗಳು ಈ ಚರ್ಚೆಗಳಿಗೆ ದಿಕ್ಸೂಚಿಯಾಗಬೇಕು. ಕೆರಳಿಸುವಂತಹ, ವೈಯಕ್ತಿಕವಾಗಿ ಅವಹೇಳನ ಮಾಡುವ ಅಪನಿಂದೆಗಳಿಗೆ ಅವಕಾಶ ಇರಕೂಡದು ಎಂಬ ನೀತಿಸಂಹಿತೆಯನ್ನು ರಾಜಕೀಯ ಪಕ್ಷಗಳು ಪಾಲಿಸುವುದು ಒಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.