ADVERTISEMENT

ವಿದ್ಯುತ್; ಹೆಚ್ಚಿನ ಪ್ರಯತ್ನ ಅಗತ್ಯ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 15:55 IST
Last Updated 15 ಫೆಬ್ರುವರಿ 2011, 15:55 IST

ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಛತ್ತೀಸಗಡ ಸರ್ಕಾರದ ಜೊತೆ ಮಾಡಿಕೊಂಡ ಒಪ್ಪಂದದ ವಿನಾ ಹೆಚ್ಚಿನ ಪ್ರಯತ್ನಗಳು ಈಚಿನ ವರ್ಷಗಳಲ್ಲಿ ಕಂಡುಬಂದಿಲ್ಲ. ವಿದ್ಯುತ್ ಕೊರತೆ ತೀವ್ರವಾದ ಸಂದರ್ಭಗಳಲ್ಲಿ ದುಬಾರಿ ಹಣ ಕೊಟ್ಟು ಕೊಳ್ಳುವುದೇ ಆಗಿದೆ. ಕಾವೇರಿ ಕಣಿವೆಯೂ ಸೇರಿದಂತೆ ವಿವಿಧ ಕಡೆ ಕಿರು ಜಲವಿದ್ಯುತ್ ಯೋಜನೆಗಳಿಗೆ ಮಂಜೂರಾತಿ ನೀಡಿ ದಶಕಗಳೇ ಕಳೆದರೂ ಯಾವ ಪ್ರಗತಿಯೂ ಆಗದೆ, ಅವೆಲ್ಲವನ್ನೂ ರದ್ದುಗೊಳಿಸುವುದಷ್ಟೆ ಆಗಿದೆ. ರಾಯಚೂರಿನಲ್ಲಿರುವ  ಶಾಖೋತ್ಪನ್ನ ವಿದ್ಯುತ್ ಘಟಕಗಳಲ್ಲಿ ಒಂದಲ್ಲ ಒಂದು ತಾಂತ್ರಿಕ ಸಮಸ್ಯೆ. ಹೊಸ ವಿದ್ಯುತ್ ಯೋಜನೆಗಳು ಅಸ್ತಿತ್ವಕ್ಕೆ ಬರುತ್ತಿಲ್ಲ. ಕೊರತೆ ನೀಗಿಸಲು ತತ್ಕಾಲದ ಉಪಶಮನ ಕ್ರಮಗಳನ್ನು ಸರ್ಕಾರ ಅನುಸರಿಸುತ್ತಿದ್ದರೆ ಬೊಕ್ಕಸದಿಂದ ಹಣ ಖರ್ಚಾಗುತ್ತಿದೆಯೇ ವಿನಾ ಶಾಶ್ವತ ಸ್ವರೂಪದ ಪ್ರಯೋಜನವೇನೂ ಆಗುತ್ತಿಲ್ಲ. ರಾಜ್ಯದ ತದಡಿ ಮತ್ತು ಕೂಡಗಿಯಲ್ಲಿ ಕೇಂದ್ರ ಸರ್ಕಾರ ವಿದ್ಯುತ್ ಸ್ಥಾವರ ಸ್ಥಾಪಿಸಲು ಬಂದರೆ ಅವುಗಳಿಗೆ ಭೂಮಿ ಕೊಡುವುದು ರಾಜ್ಯ ಸರ್ಕಾರದಿಂದ ಸಾಧ್ಯವಾಗಿಲ್ಲ.
 
ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಯೋಜನೆಗಳನ್ನು ಆರಂಭಿಸಲು ಕಲ್ಲಿದ್ದಲು ಪೂರೈಸುವ ಭರವಸೆಯನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲವೆಂದು ಇದೇ ಮೊದಲ ಬಾರಿಗೆ ವಿದ್ಯುತ್ ಖಾತೆ ಸಚಿವರು ಸಾರ್ವಜನಿಕವಾಗಿ ದೂರಿದ್ದಾರೆ. ‘ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ;  ಅನೇಕ ಸಲ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಕೇಂದ್ರ ಸರ್ಕಾರ ಅಸಹಕಾರ ತೋರುತ್ತಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ರಾಜಕೀಯವನ್ನು ತರಬಾರದು. ಅಂಥ ಪ್ರಯತ್ನಗಳು ಖಂಡನೀಯ.

ಹಾಗೆ ನೋಡಿದರೆ ಕೇಂದ್ರದ ಅನುಮತಿ ಪಡೆಯಬೇಕಿರುವ ಹಲವಾರು ಯೋಜನೆಗಳ ವಿಷಯದಲ್ಲಿ ರಾಜ್ಯ ಸರ್ಕಾರದಿಂದ ಪ್ರಾಮಾಣಿಕ ಪ್ರಯತ್ನವೇ ನಡೆದ ಸೂಚನೆಗಳಿಲ್ಲ. ರಾಜಕೀಯ ಕಾರಣಗಳಿಗಾಗಿ ದೆಹಲಿಗೆ ನಿಯೋಗ ಕೊಂಡೊಯ್ಯುವ ರಾಜ್ಯದ ಮುಖಂಡರು ಮಂಜೂರಾತಿ ಬೇಕಿರುವ ಯೋಜನೆಗಳ ಸಂಬಂಧದಲ್ಲಿ ಕೇಂದ್ರ ಸಚಿವರೊಂದಿಗೆ ಮುಖಾಮುಖಿಯಾಗಿ ಒತ್ತಡ ತಂದ ನಿದರ್ಶನಗಳೂ ಇಲ್ಲ.

ರಾಜ್ಯದ ಯೋಜನೆಗಳ ಬಗ್ಗೆ ಕೇಂದ್ರ ಸರ್ಕಾರ ಪಕ್ಷಪಾತ ತೋರುತ್ತಿದ್ದರೆ ಅದನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿ ನ್ಯಾಯ ಪಡೆಯುವ ಅವಕಾಶವನ್ನೂ ಬಳಸಿಕೊಂಡಂತಿಲ್ಲ. ಕೇಂದ್ರ ಸರ್ಕಾರದಲ್ಲಿ ಆಗಬೇಕಿರುವ ರಾಜ್ಯದ ಕೆಲಸಗಳಿಗೆ ಪ್ರಯತ್ನ ನಡೆಸಲು ದೆಹಲಿಯಲ್ಲಿ ಇಬ್ಬರು ವಿಶೇಷ ಪ್ರತಿನಿಧಿಗಳನ್ನು ನಿಯೋಜಿಸಲಾಗಿದೆ. ಸರ್ಕಾರಿ ಸೌಲಭ್ಯಗಳನ್ನು ಪಡೆಯುತ್ತಿರುವ ಇವರಿಂದ ಈ ದಿಸೆಯಲ್ಲಿ ಯಾವ ಪ್ರಯತ್ನಗಳು ನಡೆದಿವೆ ಎಂಬುದು ಗೊತ್ತಾಗುತ್ತಿಲ್ಲ. ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ಪಕ್ಷದ ಸರ್ಕಾರವಿದ್ದರೂ ಅಭಿವೃದ್ಧಿ ಯೋಜನೆಗಳನ್ನು ಪಡೆಯುವುದಕ್ಕೆ ಸತತ ಒತ್ತಾಯ ಹೇರಲೇಬೇಕಾದ ಪರಿಸ್ಥಿತಿ ಇದೆ. ಬೇರೆ ಬೇರೆ ಪಕ್ಷಗಳ ಸರ್ಕಾರಗಳಿದ್ದಾಗ ಈ ಒತ್ತಡ ಇನ್ನಷ್ಟು ತೀವ್ರವಾಗಬೇಕಾಗುತ್ತದೆ. ರಾಜ್ಯದ ಅಭಿವೃದ್ಧಿಯ ಬದ್ಧತೆ ಇದ್ದವರು ಪಟ್ಟು ಹಿಡಿದು ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ. ನೆಪಗಳನ್ನು ಒಡ್ಡುವುದು ಲೋಪಗಳನ್ನು ಮುಚ್ಚಿಕೊಳ್ಳುವ ತಂತ್ರ. ಅದರಿಂದ ಜನತೆಗೆ ಪ್ರಯೋಜನವಿಲ್ಲ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.