ADVERTISEMENT

ವಿವಾದಾತ್ಮಕ ನಾಯಕ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2012, 19:30 IST
Last Updated 19 ನವೆಂಬರ್ 2012, 19:30 IST

ಮರಾಠಿ ಸ್ವಾಭಿಮಾನ, ಮತಾಂಧತೆ ಹಾಗೂ ರಾಷ್ಟ್ರೀಯವಾದದ ಉಗ್ರ ಪ್ರತಿಪಾದನೆ ಮಾಡುತ್ತಲೇ ವಿವಾದಾಸ್ಪದ ನಾಯಕರಾಗಿ ಬೆಳೆದವರು ಶನಿವಾರ ನಿಧನರಾದ ಶಿವಸೇನಾ ಮುಖ್ಯಸ್ಥ ಬಾಳ ಠಾಕ್ರೆ. ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ಸದಾ ಸುದ್ದಿಯಲ್ಲಿರುತ್ತಿದ್ದವರು ಅವರು.

ಅವರ ರಾಜಕೀಯ ಬದುಕು ಪೂರ್ತಿ ವಿರೋಧಾಭಾಸಗಳಿಂದ ಕೂಡಿತ್ತು. ವ್ಯಂಗ್ಯ ಚಿತ್ರಕಾರರಾಗಿ ವೃತ್ತಿಜೀವನ ಆರಂಭಿಸಿದ ಬಾಳ ಠಾಕ್ರೆ, 1960ರ ದಶಕದಲ್ಲಿ ಕಾರ್ಮಿಕ ಚಳವಳಿ ಹಾಗೂ ರಾಜಕೀಯ ಕ್ಷೇತ್ರಕ್ಕೆ ಪ್ರವೇಶ ಪಡೆದರು. ಮುಂಬೈ ಎಂಬುದು ರಾಷ್ಟ್ರದ ಎಲ್ಲಾ ಭಾಗಗಳ ಜನರಿಗೆ, ಅದೂ ವಿಶೇಷವಾಗಿ ದುಡಿಯುವ ಜನರಿಗೆ ಆಸರೆಯಾಗಿರುವಂತಹ ಬೃಹತ್ ನಗರ.

ಆದರೆ ರಾಷ್ಟ್ರದ ಬೇರೆ ಬೇರೆ ಭಾಗಗಳಿಂದಾಗುವ ಈ ವಲಸೆ, ಮರಾಠಾ ಪ್ರಾಧಾನ್ಯಕ್ಕೆ ಕುಂದು ತರುತ್ತದೆ ಎಂಬುದು ಠಾಕ್ರೆಯವರ ಭಾವನೆಯಾಗಿತ್ತು. ಇದರ ವಿರುದ್ಧದ ಹೋರಾಟಕ್ಕಾಗಿ ಶಿವಸೇನೆಯನ್ನು ಆರಂಭಿಸಿದರು ಅವರು. ರಾಜಕೀಯದಲ್ಲಿ ನೆಲೆ ಕಂಡುಕೊಳ್ಳಲು ರಾಜ್ಯದ `ಹೊರಗಿನವರ~ ವಿರುದ್ಧ ಅನಾಗರಿಕ ಹಿಂಸೆಯನ್ನು ಬಳಸಿದಂತಹ ಪ್ರಾದೇಶಿಕ ಪಕ್ಷವಾಗಿ ಶಿವಸೇನೆ ದೊಡ್ಡದಾಗಿ ಬೆಳೆಯಿತು.

ಮುಂಬೈನಲ್ಲಿ (ಆಗಿನ ಬಾಂಬೆಯಲ್ಲಿ) ಜೀವನೋಪಾಯ ಕಂಡುಕೊಂಡಿದ್ದ ದಕ್ಷಿಣ ಭಾರತೀಯರ ಮೇಲೆ 1960 ಹಾಗೂ 70ರ ದಶಕದಲ್ಲಿ  ಶಿವಸೇನೆಯ ಗೂಂಡಾಗಳು ನಡೆಸಿದಂತಹ ದೌರ್ಜನ್ಯ ಮುಂಬೈ ನಗರದ ಇತಿಹಾಸದಲ್ಲಿ ಕರಾಳ ಅಧ್ಯಾಯವಾಗಿದೆ. ಇದರಿಂದಾಗಿ ಸಾವಿರಾರು ಕುಟುಂಬಗಳು ಮುಂಬೈ ತೊರೆಯುವಂತಾಗಿದ್ದನ್ನು ಮರೆಯಲಾಗದು.

ಆದರೆ `ಮರಾಠಿ ಮಾನೂಸ್~ನ ರಕ್ಷಕನೆಂಬುದಾಗಿ ತಮ್ಮನ್ನು ಬಿಂಬಿಸಿಕೊಳ್ಳಲು ಈ ಪ್ರಕರಣಗಳನ್ನು ಬಳಸಿಕೊಂಡರು ಠಾಕ್ರೆ. ಹಾಲು, ಪತ್ರಿಕೆ ವಿತರಕರಾಗಿ, ಟ್ಯಾಕ್ಸಿ ಚಾಲಕರಾಗಿ ಜೀವನ ನಿರ್ವಹಿಸುತ್ತಿರುವ ಬಿಹಾರಿಗಳು ಹಾಗೂ ಉತ್ತರ ಪ್ರದೇಶದವರನ್ನು 2008ರಲ್ಲಿ `ಅತಿಕ್ರಮಣಕಾರ~ರೆಂದು ಬಿಂಬಿಸಿ ನಡೆಸಿದಂತಹ ದೌರ್ಜನ್ಯಗಳನ್ನು ಜನ ಮರೆತಿಲ್ಲ.  ಈ ಅಸಹನೆಯ ಬೆಂಕಿಗೆ ಮುಸ್ಲಿಮರೂ ಗುರಿಯಾಗಿದ್ದಾರೆ.

ಪ್ರಗತಿಪರ ಮಹಿಳಾ ವಿಚಾರಗಳೂ ಅನೇಕ ಸಂದರ್ಭಗಳಲ್ಲಿ ಶಿವಸೈನಿಕರ ಆಕ್ರೋಶಗಳಿಗೆ ನೆಲೆಯಾಗುತ್ತಿದ್ದುದನ್ನು ಮರೆಯಲಾಗದು. ಪ್ರಚೋದನಾತ್ಮಕ ವಿಚಾರಗಳನ್ನು ಮಂಡಿಸಲು ತಮ್ಮ ಮರಾಠಿ ಪತ್ರಿಕೆ  `ಸಾಮ್ನಾ~ವನ್ನು ಠಾಕ್ರೆ  ಬಳಸಿಕೊಂಡರು.

 ದ್ವೇಷವನ್ನೇ ಉಗುಳುವ ಅತಿರೇಕಗಳ ಉನ್ಮತ್ತ ವಿಚಾರಧಾರೆಗಳು - ತಮ್ಮದೇ ಮತಬ್ಯಾಂಕ್ ಅನ್ನು  ಬಾಳ ಠಾಕ್ರೆಗೆ ಸೃಷ್ಟಿಸಿಕೊಟ್ಟ್ದ್ದಿದೂ ನಿಜ. ಕಾಕತಾಳೀಯ ಎಂದರೆ ಬಾಳ ಠಾಕ್ರೆ ಹಿಟ್ಲರನ ಅಭಿಮಾನಿಯಾಗಿದ್ದರು. ಮುಸ್ಲಿಮರ ವಿರುದ್ಧ ಠಾಕ್ರೆಯವರ ದ್ವೇಷದ ರಾಜಕಾರಣ ಅವರನ್ನು ಬಿಜೆಪಿಗೆ ಹತ್ತಿರವಾಗಿಸಿತು.

ಹಿಂದೂತ್ವ ಶಕ್ತಿಗಳ ಜೊತೆಗೂಡಿದ ಶಿವಸೇನೆ ವಿಧಾನಸಭೆ ಚುನಾವಣೆಗಳಲ್ಲಿ ಜಯ ಗಳಿಸಿದ್ದಲ್ಲದೆ ಸಂಸತ್ತಿಗೂ ಪ್ರವೇಶ ಪಡೆದದ್ದು ಇತಿಹಾಸ. ತಮ್ಮ ಮಾತುಗಾರಿಕೆಯಿಂದ ಜನರನ್ನು ಸೆಳೆಯಬಲ್ಲವರಾಗಿದ್ದ ಠಾಕ್ರೆ 1995ರಲ್ಲಿ  ಮಹಾರಾಷ್ಟ್ರ ಮುಖ್ಯಮಂತ್ರಿಯಾಗಬಹುದಿತ್ತು.

ಆದರೆ ದೊರೆಯಾಗುವುದಕ್ಕಿಂತ `ಕಿಂಗ್ ಮೇಕರ್~ ಆಗಿಯೇ ತಮ್ಮ ಪ್ರಭಾವವನ್ನು ಉಳಿಸಿಕೊಳ್ಳುವ ಜಾಯಮಾನ ಅವರದಾಗಿತ್ತು. ರಾಜಕೀಯದ ಮೇಲಾಟಗಳ ಪ್ರಕ್ರಿಯೆಯಲ್ಲಿ ಅತಿರೇಕ, ಅಸಹನೆಯಂತಹ ನಕಾರಾತ್ಮಕ ಕಾರ್ಯತಂತ್ರಗಳನ್ನೇ ಬಳಸಿದ ಠಾಕ್ರೆಯವರು ಸಾರ್ವಜನಿಕ ಬದುಕಲ್ಲಿ ಕೆಟ್ಟ ಪರಂಪರೆಯನ್ನು ಹುಟ್ಟುಹಾಕಿದಂತಹ ವಿವಾದಾತ್ಮಕ, ವರ್ಣರಂಜಿತ ಹಾಗೂ ವಿರೋಧಾಭಾಸ ನಿಲುವುಗಳ ವ್ಯಕ್ತಿ. ಆದರೂ ಅವರನ್ನು `ಮರಾಠಿಗರ ರಕ್ಷಕ~ ಎಂದು ಜನ ಆರಾಧಿಸಿದರು. ಹೀಗಾಗಿ ಠಾಕ್ರೆ ಸಾಕಷ್ಟು ಜನಪ್ರಿಯರೂ ಆದರು. ಜನಪ್ರಿಯತೆಯ ಅಲೆಯ ಮೇಲೆ ಠಾಕ್ರೆ ಮಿಂದಿದ್ದೂ ನಿಜ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.