ADVERTISEMENT

ಶೆಟ್ಟರ್‌ಗೆ ಮೊದಲ ಸವಾಲು

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 19:30 IST
Last Updated 17 ಜುಲೈ 2012, 19:30 IST

ನೂತನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮೊದಲ ಅಗ್ನಿಪರೀಕ್ಷೆಯನ್ನು ರಾಜ್ಯದ ಹೈಕೋರ್ಟ್‌ನಿಂದಲೇ ಎದುರಿಸಬೇಕಾಗಿ ಬಂದಿದೆ. `ವಾರದೊಳಗೆ ಲೋಕಾಯುಕ್ತರನ್ನು ನೇಮಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು~ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.
 
ಭ್ರಷ್ಟಾಚಾರದಿಂದ ಮುಕ್ತವಾದ ಆಡಳಿತ ನೀಡುವುದಾಗಿ ಘೋಷಿಸಿರುವ ಶೆಟ್ಟರ್ ಅವರಿಗೆ ತನ್ನ ಪ್ರಾಮಾಣಿಕತೆಯನ್ನು ಸಾಬೀತುಪಡಿಸಲು ಒಂದು ವಾರದ ಕಾಲಾವಕಾಶ ಮಾತ್ರ ಇದೆ, ಆಗಲೇ ಕ್ಷಣಗಣನೆ ಪ್ರಾರಂಭವಾಗಿದೆ.

ಲೋಕಾಯುಕ್ತರಾಗಿದ್ದ  ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ನಿವೃತ್ತಿಯಾಗಿ ಒಂದು ವರ್ಷವಾಗುತ್ತಾ ಬಂದರೂ ಆ ಹುದ್ದೆಯನ್ನು ತುಂಬಲು ಸಾಧ್ಯವಾಗದೆ ಇರುವುದು ಹೈಕೋರ್ಟ್ ಕೆಂಡಾಮಂಡಲವಾಗಲು ಕಾರಣ.
 
ಈ ಕರ್ತವ್ಯಲೋಪಕ್ಕೆ ರಾಜ್ಯ ಸರ್ಕಾರದ ನೈತಿಕ ದಿವಾಳಿತನವಲ್ಲದೇ ಬೇರೇನೂ ಕಾರಣ ಇಲ್ಲ. ಲೋಕಾಯುಕ್ತರ ನೇಮಕಕ್ಕೆ ನ್ಯಾಯಮೂರ್ತಿಗಳ ಅರ್ಹತೆ ಮತ್ತು ಪ್ರಾಮಾಣಿಕತೆಗಳೇ ಮಾನದಂಡವಾಗಬೇಕೇ ಹೊರತು ಜಾತಿ ಇಲ್ಲವೇ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರಗಳಲ್ಲ.
 
ಒಂದಷ್ಟು ಆರೋಪಗಳಿದ್ದರೂ ಲೋಕಾಯುಕ್ತರಾಗುವ ಅರ್ಹತೆ ಉಳ್ಳವರು ಇಲ್ಲವೇ ಇಲ್ಲ ಎನ್ನುವ ಸ್ಥಿತಿಯನ್ನು ನ್ಯಾಯಾಂಗ ತಲುಪಿಲ್ಲ. ಆದರೆ ರಾಜ್ಯ ಬಿಜೆಪಿ ಸರ್ಕಾರದ ಬೇರೆ ರೀತಿಯ ಲೆಕ್ಕಾಚಾರಗಳಿಂದಾಗಿ ಲೋಕಾಯುಕ್ತರ ನೇಮಕ ಸಾಧ್ಯವಾಗಿಲ್ಲ.

ಲೋಕಾಯುಕ್ತರಾಗಿ ನೇಮಕಗೊಂಡಿದ್ದ ಒಬ್ಬ ನ್ಯಾಯಮೂರ್ತಿಗಳು ನಿವೇಶನ ಹಗರಣದ ಆರೋಪ ಎದುರಿಸಿ ಪದತ್ಯಾಗ ಮಾಡಬೇಕಾಯಿತು. ಮತ್ತೊಬ್ಬರ ನೇಮಕಕ್ಕೆ ರಾಜ್ಯಪಾಲರೇ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಅದೂ ಸಾಧ್ಯವಾಗಲಿಲ್ಲ. ಇಂತಹದೇ ಕಾರಣಗಳಿಂದಾಗಿ ಇಬ್ಬರು ಉಪ ಲೋಕಾಯುಕ್ತರು ಕೂಡಾ ಬಹಳ ದಿನ ಹುದ್ದೆಯಲ್ಲಿ ಮುಂದುವರಿಯಲಿಲ್ಲ.

 ಗಣಿಲೂಟಿ ಹಗರಣಕ್ಕೆ ಸಂಬಂಧಿಸಿದಂತೆ ಹಿಂದಿನ ಲೋಕಾಯುಕ್ತರು ನೀಡಿರುವ ವರದಿಯಿಂದ ಮುಖ್ಯಮಂತ್ರಿಯೇ ಅಧಿಕಾರ ಕಳೆದುಕೊಂಡ ನಂತರ ಸರ್ಕಾರ ಜಾಗೃತವಾಗಿದೆ.
 
ಭ್ರಷ್ಟಾಚಾರದ ಹಗರಣಗಳು ಮುಖ್ಯಮಂತ್ರಿಯವರಿಂದ ಹಿಡಿದು ಸಚಿವರ ವರೆಗೆ ಎಲ್ಲರನ್ನೂ ನುಂಗಿಹಾಕುತ್ತಿರುವುದರಿಂದ ಎಚ್ಚರಗೊಂಡಿರುವ ರಾಜ್ಯಸರ್ಕಾರ ಶತಾಯಗತಾಯ ಲೋಕಾಯುಕ್ತ ಸಂಸ್ಥೆಯನ್ನು ನಿಷ್ಕ್ರಿಯಗೊಳಿಸಲು ಹಟತೊಟ್ಟಂತೆ ಕಾಣುತ್ತಿದೆ.

ರಾಷ್ಟ್ರಮಟ್ಟದಲ್ಲಿ ಲೋಕಪಾಲರ ನೇಮಕಕ್ಕೆ ಒತ್ತಾಯಿಸಿ ಅಣ್ಣಾಹಜಾರೆ ನಡೆಸುತ್ತಿರುವ ಚಳವಳಿಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಬಹಿರಂಗವಾಗಿ ಬೆಂಬಲ ಘೋಷಿಸಿದ್ದರು. ಆದರೆ  ಕರ್ನಾಟಕದಲ್ಲಿ ಖಾಲಿ ಬಿದ್ದಿರುವ ಲೋಕಾಯುಕ್ತ ಹುದ್ದೆ ಬಗ್ಗೆ ಮಾತ್ರ ಅವರು ತುಟಿ ಬಿಚ್ಚುತ್ತಿಲ್ಲ.  ಇದು ಆ ಪಕ್ಷದ ಆತ್ಮವಂಚನೆಯ ನಡವಳಿಕೆ. 

ಗಣಿಲೂಟಿ ಹಗರಣದ ಬಗ್ಗೆ ಹಿಂದಿನ ಲೋಕಾಯುಕ್ತರು ನೀಡಿರುವ ವರದಿಯಲ್ಲಿ ವಿರೋಧಪಕ್ಷಗಳ ಕೆಲವು ಹಿರಿಯ ನಾಯಕರ ಹೆಸರುಗಳೂ ಕಾಣಿಸಿಕೊಂಡಿರುವುದರಿಂದ ಅವುಗಳು ಕೂಡಾ ಜಾಣಮೌನದ ಮೂಲಕ ಸರ್ಕಾರದ ಹುನ್ನಾರದಲ್ಲಿ ಶಾಮೀಲಾಗಿರುವಂತೆ ವರ್ತಿಸುತ್ತಿವೆ.
 
ಈ ಕಣ್ಣುಮುಚ್ಚಾಲೆಯ ಆಟ ಬಹಳ ದಿನ ನಡೆಯಲಾರದು ಎಂಬುದಕ್ಕೆ ಹೈಕೋರ್ಟ್ ನೀಡಿರುವ ಎಚ್ಚರಿಕೆಯೇ ಸಂಕೇತ. ಸರ್ಕಾರದ ಕರ್ತವ್ಯಲೋಪದಿಂದಾಗಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿದೆ ಎಂಬ ಗಂಭೀರ ಮಾತುಗಳನ್ನು ಹೈಕೋರ್ಟ್ ಆಡಿದ ನಂತರ ರಾಜ್ಯಪಾಲರು ಕೈಕಟ್ಟಿ ಕೂರಲಾರರು.
 
ರಾಜ್ಯಸರ್ಕಾರದ ಕರ್ತವ್ಯಲೋಪ ಕಂಡ ಗುಜರಾತ್‌ನ ರಾಜ್ಯಪಾಲರು ತಾವೇ ಲೋಕಾಯುಕ್ತರನ್ನು ನೇಮಿಸಿದ ಪೂರ್ವನಿದರ್ಶನ ಇಲ್ಲಿನ ರಾಜ್ಯಪಾಲರ ಮುಂದೆಯೂ ಇದೆ. ಅನಗತ್ಯವಾದ ಇಂತಹ ವಿವಾದಕ್ಕೆ ಅವಕಾಶ ನೀಡದೆ ಹೈಕೋರ್ಟ್ ನೀಡಿದ ಗಡುವಿನೊಳಗೆ ಮುಖ್ಯಮಂತ್ರಿಗಳು ಲೋಕಾಯುಕ್ತರನ್ನು ನೇಮಿಸುವುದು ಒಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.