ಇತ್ತೀಚೆಗೆ ಒಂದು ಅಪರೂಪದ ಉಪನ್ಯಾಸವನ್ನು ಕೇಳುವ ಅವಕಾಶ ದೆಹಲಿಯಲ್ಲಿ ದೊರೆಯಿತು. ಅದು, ಭಾರತೀಯ ಪತ್ರಿಕೋದ್ಯಮದ ಬಗ್ಗೆ ಅಪಾರ ಆಸಕ್ತಿಯುಳ್ಳ ಅಂತರರಾಷ್ಟ್ರೀಯ ಖ್ಯಾತಿಯ ಮಾಧ್ಯಮ ತಜ್ಞ ಪ್ರೊ.ರಾಬಿನ್ ಜೆಫ್ರಿ ಅವರದ್ದು.
ತಮ್ಮ ಉಪನ್ಯಾಸದಲ್ಲಿ ಜೆಫ್ರಿ ಅವರು ಕೆಲವು ವಿಶೇಷ ಹೊಳಹುಗಳನ್ನು ಪ್ರಸ್ತಾಪಿಸಿದರು. ಭಾರತೀಯ ಮಾಧ್ಯಮ ಕಚೇರಿಗಳಲ್ಲಿ ದಲಿತರ ಪ್ರಾತಿನಿಧ್ಯ ಕಡಿಮೆ ಇರುವುದು ಹಾಗೂ ಪತ್ರಿಕೆಗಳ ಪುಟಗಳಲ್ಲಿ ಮತ್ತು ವಾಹಿನಿಗಳ ಕಾರ್ಯಕ್ರಮಗಳಲ್ಲಿ ದಲಿತರರಿಗೆ ಸಮರ್ಪಕ ಪ್ರಾತಿನಿಧ್ಯ ದೊರೆಯುತ್ತಿಲ್ಲ ಎನ್ನುವುದು ಅವರ ಉಪನ್ಯಾಸದ ಮುಖ್ಯ ಆಶಯವಾಗಿತ್ತು. ಆ ಉಪನ್ಯಾಸ ಕೇಳಿದ ಕ್ಷಣದಿಂದ, ಮಾಧ್ಯಮಗಳಲ್ಲಿ `ದಲಿತ ದನಿ~ಗೆ ಸೂಕ್ತ ಪ್ರಾತಿನಿಧ್ಯ ದೊರೆಯುತ್ತಿಲ್ಲ ಎನ್ನುವ ಜೆಫ್ರಿ ಅವರ ಆತಂಕ ನನ್ನನ್ನೂ ಕಾಡತೊಡಗಿತು.
ದಲಿತರ ಒಟ್ಟಾರೆ ಬದುಕು ಹಾಗೂ ದಲಿತ ಚಿಂತನೆಯ ಅಭಿವ್ಯಕ್ತಿಯ ಸಾಧ್ಯತೆಗಳ ಬಗ್ಗೆ ಗೆಳೆಯರೊಂದಿಗೆ, ಸಹೋದ್ಯೋಗಿಗಳೊಂದಿಗೆ ಚರ್ಚಿಸುತ್ತಿದ್ದಾಗ, ಪತ್ರಿಕೆಯ ಒಂದು ಸಂಚಿಕೆಯನ್ನೇ `ದಲಿತ ವಿಶೇಷ ಸಂಚಿಕೆಯನ್ನಾಗಿ ರೂಪಿಸುವ ಚಿಂತನೆ ಹೊಳೆಯಿತು.
`ಅಂಬೇಡ್ಕರ್ ಜಯಂತಿ ಸನಿಹದಲ್ಲೇ ಇದ್ದುದು ನಮ್ಮ ಚಿಂತನೆಗೆ ಹುರುಪು ನೀಡಿತು. `ದಲಿತ ವಿಶೇಷ ಸಂಚಿಕೆಯ ಮೂಲಕ ಏಪ್ರಿಲ್ 14ರ ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದೆವು. ಅತಿಥಿ ಸಂಪಾದಕರೊಬ್ಬರ ಉಸ್ತುವಾರಿಯಲ್ಲಿ ವಿಶೇಷ ಸಂಚಿಕೆಯನ್ನು ರೂಪಿಸುವ ಯೋಚನೆ ನಮ್ಮದಾಗಿತ್ತು. ಆ ಕ್ಷಣಕ್ಕೆ ತಕ್ಷಣ ಹೊಳೆದ ಏಕೈಕ ಹೆಸರು, ದೇವನೂರ ಮಹಾದೇವ ಅವರದು.
ಎಂದಿನಂತೆ ದೇವನೂರರು ಆರಂಭದಲ್ಲಿ ಆತಂಕ ವ್ಯಕ್ತಪಡಿಸಿದರೂ ಪತ್ರಿಕೆಯ ಉದ್ದೇಶವನ್ನು ಮನಗಂಡು ಅತಿಥಿ ಸಂಪಾದಕರಾಗಲು ಮುಜುಗರದಿಂದಲೇ ಒಪ್ಪಿಕೊಂಡರು. ಕಡಿಮೆ ಕಾಲಾವಕಾಶದಲ್ಲೇ, ಜ್ವರವೇರಿಸಿಕೊಂಡ ಉತ್ಸಾಹದಲ್ಲಿ ಅವರು ಕಾರ್ಯ ತತ್ಪರವಾದುದರ ಫಲ, ಈಗ ನಿಮ್ಮ ಕೈಯಲ್ಲಿರುವ ಈ ಸಂಚಿಕೆ.
ದಲಿತರ ಬದುಕಿಗೆ ಸಂಬಂಧಿಸಿದ ಅನೇಕ ಮುಖಗಳನ್ನು ಒಳಗೊಳ್ಳುವಂತೆ ಈ ಸಂಚಿಕೆಯನ್ನು ರೂಪಿಸಲು ಪ್ರಯತ್ನಿಸಿದ್ದೇವೆ. ಈ ನಿಟ್ಟಿನಲ್ಲಿ ನಾಡಿನ ಪ್ರಮುಖ ದಲಿತ ಚಿಂತಕರು, ಬರಹಗಾರರು, ಕಲಾವಿದರು ನಮ್ಮ ಪ್ರಯತ್ನದಲ್ಲಿ ಜೊತೆಯಾಗಿದ್ದಾರೆ. ಇದು ದಲಿತ ದನಿಯ ವಿಶೇಷ ಸಂಚಿಕೆಯಾದರೂ, ಆಂತರ್ಯದಲ್ಲಿ ಇದು ಸೂಸುವುದು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಪಾದಿಸಿದ ಸಮಾನತೆ, ಸ್ವಾತಂತ್ರ್ಯ ಮತ್ತು ಸೋದರತೆ~ಯ ದನಿಯನ್ನೇ ಎನ್ನುವುದು ನಮ್ಮ ಗಮನದಲ್ಲಿದೆ.
ಈ ವಿಶೇಷ ಸಂಚಿಕೆಯ ಸಂದರ್ಭದಲ್ಲಿ `ಪ್ರಜಾವಾಣಿ’ ನಡೆದುಬಂದ ಹಾದಿಯ ನೆನಪು ಅನಪೇಕ್ಷಣೀಯವೇನೂ ಅಲ್ಲ. ಭಾರತ ಪಡೆದುಕೊಂಡ ಸ್ವಾತಂತ್ರ್ಯದ ಅರ್ಥ ಮತ್ತು ವ್ಯಾಪ್ತಿಯನ್ನು ನಿರ್ವಚಿಸಿದ ಸಂವಿಧಾನವನ್ನು ನಾವು ಒಪ್ಪಿಕೊಳ್ಳುವುದಕ್ಕೆ ಎರಡು ವರ್ಷಗಳ ಹಿಂದೆ `ಪ್ರಜಾವಾಣಿ’ ತನ್ನ ಪ್ರಕಟಣೆಯನ್ನು ಆರಂಭಿಸಿತು.
ಅಲ್ಲಿಂದ ಈ ತನಕ ಸಂಭವಿಸಿರುವ ಬದಲಾವಣೆಗಳು ಮತ್ತು ಪಲ್ಲಟಗಳು ಅನೇಕ. ಅವುಗಳನ್ನು ಕೇವಲ ಕಾಲದ ಕನ್ನಡಿಯಲ್ಲಿ ಕಂಡು ಪತ್ರಿಕೆಯಲ್ಲಿ ಪ್ರತಿಬಿಂಬಿಸುವಷ್ಟಕ್ಕೆ ಮಾತ್ರ `ಪ್ರಜಾವಾಣಿ’ ಸೀಮಿತಗೊಂಡಿಲ್ಲ.
ಹೊರಗಿನ ಬದಲಾವಣೆಗಳನ್ನು ನಿರ್ವಚಿಸುವ, ವಿಶ್ಲೇಷಿಸುವ ಮತ್ತು ಪ್ರಭಾವಿಸುವ ಕ್ರಿಯೆಯನ್ನು ಪ್ರಜಾವಾಣಿ ನಿರಂತರವಾಗಿ ನಡೆಸುತ್ತಿದೆ. ಈ ಕ್ರಿಯೆಯಲ್ಲಿ ಅದು ತನ್ನನ್ನೂ ಬದಲಾವಣೆಗೆ ಒಡ್ಡಿಕೊಂಡಿದೆ. ಅಂತೆಯೇ, ನಿರಂತರ ಬದಲಾವಣೆಯ ಈ ಹಾದಿಯಲ್ಲಿ ಪತ್ರಿಕೆಯ ಮೂಲ ಉದ್ದೇಶವಾದ ಜನಪರ ಕಾಳಜಿಗಳಿಗೆ ಧಕ್ಕೆ ಬಾರದಂತೆ ಎಚ್ಚರವಹಿಸಿದ್ದೇವೆ. ಆ ಕಾಳಜಿ ಮತ್ತು ವಿವೇಕದ ತಾಜಾ ಉದಾಹರಣೆ ಇಂದಿನ ವಿಶೇಷ ಸಂಚಿಕೆ.
–ಕೆ.ಎನ್. ಶಾಂತಕುಮಾರ್, ಸಂಪಾದಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.