ADVERTISEMENT

ಸರ್ಕಾರಕ್ಕೆ ಕಪಾಳಮೋಕ್ಷ

​ಪ್ರಜಾವಾಣಿ ವಾರ್ತೆ
Published 15 ಜುಲೈ 2012, 19:30 IST
Last Updated 15 ಜುಲೈ 2012, 19:30 IST

ಬ್ಯಾಕ್‌ಲಾಗ್ ಹುದ್ದೆ ಅಡಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದ, ನಂತರ ಕಾಯಂಗೊಂಡಿರುವ ಲೋಕೋಪಯೋಗಿ, ನೀರಾವರಿ ಹಾಗೂ ಪಂಚಾಯತ್‌ರಾಜ್ ಇಲಾಖೆಗಳಲ್ಲಿನ 1,797 ಎಂಜಿನಿಯರ್‌ಗಳ ನೇಮಕಾತಿಯನ್ನು ರದ್ದು ಮಾಡಿ ಹೈಕೋರ್ಟ್ ಹೊರಡಿಸಿರುವ ಆದೇಶ ಸರ್ಕಾರಕ್ಕೆ ಮಾಡಿದ ಕಪಾಳ ಮೋಕ್ಷ.

ನಿಯಮಗಳನ್ನು ಉಲ್ಲಂಘಿಸಿ, ಕಾನೂನನ್ನು ಲೆಕ್ಕಿಸದೆ ನೇಮಕಾತಿ ನಡೆಸಿದ ಇಲಾಖೆಗಳ ಉಡಾಫೆತನವೇ ಈ ಎಲ್ಲ ಗೊಂದಲದ ಸ್ಥಿತಿಗೆ ಕಾರಣ. 2003-04 ರ ಅವಧಿಯಲ್ಲಿ ಬ್ಯಾಕ್‌ಲಾಗ್ ಹುದ್ದೆ, 1993-94 ರಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ನೇಮಕವಾಗಿದ್ದ ಒಟ್ಟು 1,797 ಎಂಜಿನಿಯರ್‌ಗಳ ನೇಮಕಾತಿ ರದ್ದು ಮಾಡಿ ಹೈಕೋರ್ಟ್ ನೀಡಿರುವ ತೀರ್ಪು ಎಂಜಿನಿಯರ್‌ಗಳ ಪಾಲಿಗೆ ಬರಸಿಡಿಲು.

ಬ್ಯಾಕ್‌ಲಾಗ್ ಹುದ್ದೆಯ ನೇಮಕಾತಿ ಪ್ರಕ್ರಿಯೆಯ ಬಗ್ಗೆ ಕರ್ನಾಟಕ ಆಡಳಿತ ನ್ಯಾಯಮಂಡಳಿ ನೀಡಿರುವ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ನೇಮಕ ಪ್ರಕ್ರಿಯೆ ಕಾನೂನುಬದ್ಧವಾಗಿಲ್ಲವಾದ್ದರಿಂದ ಮುಂದಿನ ಆರು ತಿಂಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ನ್ಯಾಯಾಲಯ ಸೂಚಿಸಿದೆ. ಕೆಲಸ ಕಳೆದುಕೊಳ್ಳುವ ಎಂಜಿನಿಯರ್‌ಗಳಿಗೆ ಅಲ್ಲಿಯವರೆಗೆ ಸೇವಾ ಮುಂದುವರಿಕೆಯಷ್ಟೇ ಸಮಾಧಾನಕರ ಅಂಶ.

ಬ್ಯಾಕ್‌ಲಾಗ್ ಹುದ್ದೆಗಳಿಗೆ ಲೋಕಸೇವಾ ಆಯೋಗದ ಮೂಲಕವೇ ನೇಮಕಾತಿ ನಡೆಯಬೇಕೆಂಬ ಆದೇಶವಿದ್ದರೂ, ಅದನ್ನು ಲೆಕ್ಕಿಸದೆ, ಲೋಕೋಪಯೋಗಿ ಇಲಾಖೆ 2001 ರಲ್ಲಿ ಪ್ರತ್ಯೇಕ ಸಮಿತಿ ರಚಿಸಿ, ನೇರ ನೇಮಕಾತಿ ಪ್ರಕ್ರಿಯೆ ನಡೆಸಿ ನಿಯಮವನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ.
 
ಇಲ್ಲಿಯೇ ಅಕ್ರಮದ ವಾಸನೆ ಕಂಡುಬರುತ್ತದೆ. ಸ್ವಜನ ಪಕ್ಷಪಾತ, ಭ್ರಷ್ಟಾಚಾರಕ್ಕೆ ಇದೊಂದು ದಾರಿಯಾಗಿದೆ. ಬ್ಯಾಕ್‌ಲಾಗ್ ಹುದ್ದೆಯ ಅಡಿ ಪರಿಶಿಷ್ಟೇತರ ವರ್ಗಕ್ಕೆ ಸೇರಿದವರ ನೇಮಕಾತಿ ನಡೆದಿರುವುದಾಗಿ ಅರ್ಹ ಅಭ್ಯರ್ಥಿಗಳು ಈ ಸಂಬಂಧ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು.

ಆ ಸಮಯದಲ್ಲಿ ಹೈಕೋರ್ಟಿಗೆ ಮುಚ್ಚಳಿಕೆ ಬರೆದುಕೊಟ್ಟಿದ್ದ ಸರ್ಕಾರ `ಈಗ ಗುತ್ತಿಗೆ ಆಧಾರದ ಮೇಲಷ್ಟೇ ನೇಮಕಾತಿ ನಡೆದಿದೆ, ಇವರ ಸೇವೆ ಒಂದು ವರ್ಷ ಅವಧಿಯದ್ದು ಮಾತ್ರ. ಈ ಅವಧಿ ಮುಗಿದ ನಂತರ ಅವರನ್ನು ಕಾಯಂಗೊಳಿಸುವುದಿಲ್ಲ~ ಎಂದು ಹೇಳಿತ್ತು. ತನ್ನ ಮಾತನ್ನು ತಾನೇ ಮರೆತ ಸರ್ಕಾರ 2005 ರಲ್ಲಿ ವಿಶೇಷ ನೇಮಕಾತಿ ಆದೇಶ ಜಾರಿಗೆ ತಂದು ಎಂಜಿನಿಯರ್‌ಗಳ ಸೇವೆಯನ್ನು ಕಾಯಂಗೊಳಿಸಿತು.
 
ಬ್ಯಾಕ್‌ಲಾಗ್ ಹುದ್ದೆಗಳಿಗೆ ಎರಡು ಹಂತದ ಪ್ರಕ್ರಿಯೆಯಲ್ಲಿ ನೇಮಕಾತಿ ನಡೆಯಬೇಕೆಂಬ ನಿಯಮವನ್ನೂ ಪಾಲಿಸದೆ, ಮೂರು ಹಂತವನ್ನು ಸೃಷ್ಟಿಸಿಕೊಳ್ಳಲಾಯಿತು. ಪ್ರತೀ ಹಂತದಲ್ಲೂ ಅಕ್ರಮಗಳು ಎದ್ದುಕಂಡಿದ್ದವು. ವಂಚಿತ ಅಭ್ಯರ್ಥಿಗಳು ಕುಪಿತರಾಗಲು ಸಹಜವಾಗಿಯೇ ಇದು ಕಾರಣವಾಗಿದೆ. ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿರುವ ಸರ್ಕಾರ ಪ್ರತೀ ಹಂತದ್ಲ್ಲಲೂ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ನುಣುಚಿಕೊಳ್ಳುವ ಯತ್ನ ನಡೆಸಿತು.
 
ಮಾನವೀಯ ದೃಷ್ಟಿಯಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಹೈಕೋರ್ಟ್ ಕೂಡ ಒಂದು ಹಂತದಲ್ಲಿ ಸೂಚಿಸಿದ್ದು ವ್ಯರ್ಥವಾಯಿತು. ರಾಜಕಾರಣಿಗಳು ತಮ್ಮ ಮೂಗಿನ ನೇರಕ್ಕೆ ಮಾಡಿಕೊಳ್ಳುವ ಅನುಕೂಲ ಸಿಂಧು ನಿಯಮಗಳನ್ನು ಹೈಕೋರ್ಟ್ ಮಾನ್ಯಮಾಡದೆ ಚಾಟಿ ಬೀಸಿದೆ. ಆ ಮೂಲಕ ಅನ್ಯಾಯಕ್ಕೆ ಒಳಗಾದ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿದೆ ಎನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.