ADVERTISEMENT

ಹೆಣ್ಣುಮಗು: ಈ ದೌರ್ಜನ್ಯ ಏಕೆ?

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2012, 19:30 IST
Last Updated 10 ಏಪ್ರಿಲ್ 2012, 19:30 IST

ಗರ್ಭದಲ್ಲಿರುವಾಗಲೇ ಹೆಣ್ಣು ಭ್ರೂಣಗಳನ್ನು ಹೊಸಕಿ ಹಾಕುವ ಕಾರ್ಯ ನಿರಂತರವಾಗಿ ನಡೆಯುತ್ತಲೇ ಇದೆ. ನಮ್ಮ ಜನಸಂಖ್ಯಾ ಗಣತಿ ಅಂಕಿಅಂಶಗಳು ಇದಕ್ಕೆ ಪುರಾವೆ ಒದಗಿಸುತ್ತಿದ್ದು ವರ್ಷದಿಂದ ವರ್ಷಕ್ಕೆ ಹೆಣ್ಣುಸಂತತಿ ಕ್ಷೀಣಿಸುತ್ತಿದೆ.

ಹೆಣ್ಣು ಭ್ರೂಣಗಳ ಹತ್ಯೆ ಜೊತೆಜೊತೆಗೇ ಹೆಣ್ಣುಶಿಶು ಹತ್ಯೆ ಪ್ರಕರಣಗಳೂ ಈ ಇಪ್ಪತ್ತೊಂದನೇ ಶತಮಾನದ್ಲ್ಲಲ್ಲೂ ಜೀವಂತವಾಗಿವೆ ಎಂಬುದು ನಾಗರಿಕ ಸಮಾಜಕ್ಕೆ ಕಪ್ಪು ಚುಕ್ಕೆ. ಇದಕ್ಕೆ ಹೊಸ ನಿದರ್ಶನ ಬೆಂಗಳೂರಿನಲ್ಲಿ ನಡೆದಿರುವ ಮೂರು ತಿಂಗಳ ಹಸುಳೆ ನೇಹಾ ಅಫ್ರೀನ್‌ನ ಹತ್ಯೆ ಯತ್ನ.

ಈ ಹತ್ಯೆಗೆ ಯತ್ನಿಸಿರುವುದು ಮಗುವಿನ ತಂದೆಯೇ  ಎಂಬುದಂತೂ ಪ್ರಕರಣದ ತೀವ್ರತೆಯನ್ನು ಹೆಚ್ಚಿಸಿದೆ. ಈ ಎಳೆ ಕಂದನ ಮೇಲೆ ಸ್ವಂತ ತಂದೆಯ ಆಕ್ರಮಣ ಎಷ್ಟು ಭೀಕರವಾಗಿದೆ ಎಂದರೆ ಮಿದುಳಿನಲ್ಲಿ ರಕ್ತಸ್ರಾವ ಹಾಗೂ ಊತದಿಂದ ಸಾವು-ಬದುಕಿನ ನಡುವೆ ಆಸ್ಪತ್ರೆಯಲ್ಲಿ ಮಗು ಹೋರಾಡುವಂತಾಗಿದೆ.
 
ಹೆಣ್ಣು ಮಕ್ಕಳ ಕುರಿತಾಗಿ ಕುಟುಂಬಗಳಲ್ಲಿರುವ ನಿಕೃಷ್ಟ ಭಾವನೆಯ ಅತಿರೇಕದ ವರ್ತನೆ ಇದು. ಗಂಡು ಮಗುವಿನ ವ್ಯಾಮೋಹ, ಹೆಣ್ಣು ಮಗು ಕುರಿತಾಗಿ ಸೃಷ್ಟಿಸುವ ಕ್ರೌರ್ಯದ ಪರಮಾವಧಿಗೆ ಇದು ಜ್ವಲಂತ ಉದಾಹರಣೆ.   

ತೀವ್ರ ದೌರ್ಜನ್ಯಕ್ಕೆ ಸಿಲುಕಿ ದೆಹಲಿಯ ಆಸ್ಪತ್ರೆಯೊಂದರಲ್ಲಿ ಸತ್ತ ಎರಡು ವರ್ಷದ ಬೇಬಿ ಫಾಲಕ್ ಪ್ರಸಂಗ ಜನಮಾನಸದ ನೆನಪಿನಿಂದ ಮಾಸುವುದರೊಳಗೆ ಈ ಪ್ರಕರಣ ವರದಿಯಾಗಿದೆ. ಜೊತೆಗೆ ಆಂಧ್ರಪ್ರದೇಶದಲ್ಲಿ, ವರದಕ್ಷಿಣೆ ಹಣ ಉಳಿಸುವುದಕ್ಕಾಗಿ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ತಂದೆಯೇ ಕೊಲೆಗೈದ ಹೇಯ ಪ್ರಕರಣವೂ ಹಸಿರಾಗಿದೆ.

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಎರಡು ದಿನಗಳ ಹೆಣ್ಣುಕೂಸಿಗೆ ಮತ್ತೆ ತಂದೆಯೇ ನಿಕೊಟಿನ್ ಕೊಟ್ಟು ಸಾಯಿಸಿರುವ ತಣ್ಣನೆಯ ಕ್ರೌರ್ಯದ ಪ್ರಕರಣವೂ ಬೆಳಕಿಗೆ ಬಂದಿದೆ. ಹೆಣ್ಣುಮಕ್ಕಳ ವಿರುದ್ಧದ ದೌರ್ಜನ್ಯದ ಈ ಸರಣಿ ಪ್ರಕರಣಗಳು ಆಘಾತಕಾರಿ.
 
ಹೆಣ್ಣುಮಕ್ಕಳ ಈ ಅಪಮೌಲ್ಯೀಕರಣಕ್ಕೆ ಕೊನೆ ಎಂದು? ಇಂತಹ ಮನೋಧರ್ಮಗಳ ಪರಿಣಾಮವಾಗಿ ಈಗಾಗಲೇ ಆರು ವರ್ಷದೊಳಗಿನ ಹೆಣ್ಣು ಮಕ್ಕಳ ಸಂಖ್ಯೆ 1000 ಗಂಡು ಮಕ್ಕಳಿಗೆ 914ಕ್ಕೆ ಕುಸಿದಿದೆ ಎಂಬುದನ್ನು ಸಮಾಜ ಗಂಭೀರವಾಗಿ ಪರಿಗಣಿಸಬೇಕಿದೆ. 

`ಹೆಣ್ಣುಮಕ್ಕಳು ಎಂದಿದ್ದರೂ ಪರರ ವಸ್ತು~, `ಗಂಡು ಮಕ್ಕಳೇ ಕೊನೆಗಾಲದಲ್ಲಿ ಆಗುವವರು~, `ಗಂಡುಮಕ್ಕಳಿಲ್ಲದಿದ್ದಲ್ಲಿ ಮೋಕ್ಷ ಸಿದ್ಧಿಸುವುದಿಲ್ಲ~ ಎಂಬಂತಹ ನಂಬಿಕೆಗಳ ಅರ್ಥಹೀನತೆಯನ್ನು ಬಯಲಿಗೆಳೆಯುವುದು ಮುಖ್ಯ ಕಾಳಜಿಯಾಗಬೇಕಿದೆ.
 
ಹೆಣ್ಣು ಭ್ರೂಣ ಹತ್ಯೆ ತಡೆ ಸೇರಿದಂತೆ ಹೆಣ್ಣುಮಗುವಿನ ವಿರುದ್ಧದ ದೌರ್ಜನ್ಯಗಳ ವಿರುದ್ಧ ಅನೇಕ ಕಾನೂನುಗಳೂ ಅಸ್ತಿತ್ವದಲ್ಲಿದ್ದರೂ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣುತ್ತಿಲ್ಲ. ಈ ಕಾನೂನುಗಳು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರಬೇಕಿದೆ. ಶಿಶು ಗಂಡೋ ಅಥವಾ ಹೆಣ್ಣೊ ಎಂಬುದನ್ನು ನಿರ್ಧರಿಸುವುದು ಗಂಡಿನ ವೀರ್ಯಾಣುವಿನಲ್ಲಿರುವ `ವೈ~ ಕ್ರೊಮೊಸೊಮ್.
 
ಶಿಶುವಿನ ಲಿಂಗ ನಿರ್ಧಾರಕ್ಕೆ ಗಂಡೇ ಕಾರಣ ಎಂಬುದರ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಿದೆ. `ಹೆಣ್ಣು ಹೆತ್ತವಳು~ ಎಂದು ತಾಯಂದಿರನ್ನು ದೂಷಿಸುವುದಕ್ಕೆ ವೈಜ್ಞಾನಿಕ ಆಧಾರವೇ ಇಲ್ಲ. ಗಂಡು- ಹೆಣ್ಣು ನಡುವೆ ತಾರತಮ್ಯ ಇರುವ ಸಮಾಜ ಎಂದೂ ಅಭಿವೃದ್ಧಿ ಸಾಧಿಸುವುದು ಸಾಧ್ಯವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.