ADVERTISEMENT

ಹೇಯ ಕೃತ್ಯ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2013, 19:55 IST
Last Updated 8 ಸೆಪ್ಟೆಂಬರ್ 2013, 19:55 IST

ಭಾರತೀಯ ಮೂಲದ ಲೇಖಕಿ, ಸಮಾಜ ಸೇವಾ ಕಾರ್ಯಕರ್ತೆ ಸುಷ್ಮಿತಾ ಬ್ಯಾನರ್ಜಿ ಅವರನ್ನು ಇತ್ತೀಚೆಗೆ ಆಫ್ಘಾನಿಸ್ತಾನದಲ್ಲಿ ಅಮಾನುಷವಾಗಿ ಸಾಯಿಸಿರುವುದು ಅತ್ಯಂತ ಹೇಯ ಕೃತ್ಯ. ಮನೆಯಿಂದ ಹೊರಗೆ ಎಳೆದುತಂದು ಗುಂಡು ಹಾರಿಸಿ ಕೊಲ್ಲಲಾಗಿದೆ. ಇಪ್ಪತ್ತು ಗುಂಡುಗಳು ಅವರ ದೇಹವನ್ನು ಹೊಕ್ಕಿವೆ.

ಈ ಕೃತ್ಯ ಎಸಗಿದವರು ಯಾರು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ತಾಲಿಬಾನರ ಕೃತ್ಯ ಇರಬೇಕು ಎಂದು ಶಂಕಿಸಲಾಗಿದೆ. ತಾಲಿಬಾನ್ ಆಡಳಿತಾವಧಿಯ ದೌರ್ಜನ್ಯದ ನೆನಪುಗಳನ್ನು, ದಶಕದ ಹಿಂದೆ ಹೊರತಂದ ಕೃತಿಯೊಂದರಲ್ಲಿ ಅವರು ದಾಖಲಿಸಿದ್ದರು. ಆಫ್ಘಾನಿಸ್ತಾನದಿಂದ ಅವರು, ನಾಟಕೀಯವಾಗಿ ಪಾರಾಗಿ ಭಾರತಕ್ಕೆ ಬಂದ ವಿವರಗಳೂ ಈ ಕೃತಿಯಲ್ಲಿ ಸೇರಿವೆ.

ಒಣಹಣ್ಣು ಮಾರಾಟಗಾರ ಜಾನ್‌ಬಾಜ್ ಖಾನ್ ಅವರನ್ನು ವಿವಾಹವಾದ ಬಳಿಕ ಅವರು ಅ್ಲ್ಲಲೇ ನೆಲೆಸಿದ್ದರು. ಪತಿಯ ಜತೆಗೆ ವೈಮನಸ್ಯ ಹೊಂದಿದ ಕಾರಣ ಅವರಿಂದ ದೂರವಾಗಿ ಭಾರತಕ್ಕೆ ಬಂದು ತಮ್ಮ ಊರಾದ ಕೋಲ್ಕತ್ತಾದಲ್ಲಿ ನೆಲೆಸಿದ್ದರು. ಇತ್ತೀಚೆಗೆ ಆಫ್ಘಾನಿಸ್ತಾನಕ್ಕೆ ಮರಳಿ ತಮ್ಮ ಗಂಡನ ಮನೆಯಲ್ಲಿ ವಾಸಿಸಿದ್ದರು. ಅಲ್ಲಿನ ಪೂರ್ವ ಪ್ರಾಂತ್ಯವಾದ ಪಕ್ತಿಕಾದಲ್ಲಿ ಕ್ಲಿನಿಕ್ ಆರಂಭಿಸಿದ್ದರು.

ADVERTISEMENT

ಅಲ್ಲಿನ ಮಹಿಳೆಯರ ದೈನಂದಿನ ಬದುಕಿನ ವಿವರಗಳನ್ನು ಚಿತ್ರೀಕರಿಸುತ್ತಿದ್ದರು. ಈ ಕಾರಣಗಳಿಂದಾಗಿ ಸುಷ್ಮಿತಾ ಕುರಿತು ತಾಲಿಬಾನರಿಗೆ ಅಸಮಾಧಾನ ಮತ್ತು ಸಿಟ್ಟಿತ್ತು ಎಂದು ಹೇಳಲಾಗಿದೆ. ಮಹಿಳೆಯರು ಆಧುನಿಕ ಶಿಕ್ಷಣ ಪಡೆಯುವುದು, ಹೊರಗೆ ಉದ್ಯೋಗ ಮಾಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಇಲ್ಲದೇ ಕಾಣಿಸಿಕೊಳ್ಳುವುದನ್ನು ತಾಲಿಬಾನ್ ಆಡಳಿತ ನಿಷೇಧಿಸಿತ್ತು.

ಈ ನಿಷೇಧ ಉಲ್ಲಂಘಿಸಿದವರಿಗೆ ಸಾರ್ವಜನಿಕವಾಗಿ ಛಡಿ ಏಟು ಕೊಡುತ್ತಿದ್ದರು. 2001ರಲ್ಲಿ ತಾಲಿಬಾನರು ಅಧಿಕಾರ ಕಳೆದುಕೊಂಡ ಬಳಿಕ ಸ್ತ್ರೀಯರು ಹೊರಜಗತ್ತಿಗೆ ತೆರೆದುಕೊಂಡರು. ಜನಪ್ರತಿನಿಧಿ ಸಭೆಗಳಲ್ಲಿ ಪ್ರಾತಿನಿಧ್ಯ ಪಡೆದರು. ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಕೊಳ್ಳುವುದು ಹೆಚ್ಚಾಯಿತು. ಇದರಿಂದ ಮತಾಂಧರಿಗೆ ಮೈಪರಚಿಕೊಳ್ಳುವಂತೆ ಆಗಿದೆ. ಹೆಣ್ಣುಮಕ್ಕಳ ಶಾಲೆಗಳ ಮೇಲೆ ರಾಕೆಟ್ ದಾಳಿ, ಬಸ್ ಮೇಲೆ ಬಾಂಬ್ ಎಸೆತ ಈ ಮುಂತಾದ ಪೈಶಾಚಿಕ ಕೃತ್ಯಗಳನ್ನು ಎಸಗಿದ್ದಾರೆ.  ಸುಷ್ಮಿತಾ ಕೊಲೆ ಕೂಡ ಇಂತಹ ಮತಿಗೇಡಿಗಳ ಕೃತ್ಯವೇ ಆಗಿರುವ ಸಾಧ್ಯತೆ ಇದೆ.

ಜುಲೈನಲ್ಲಿ ಹೆಲ್ಮಂಡ್ ಪ್ರಾಂತ್ಯದಲ್ಲಿ ಹಿರಿಯ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರನ್ನು ಹತ್ಯೆ ಮಾಡಲಾಗಿತ್ತು. ಕಳೆದ ತಿಂಗಳು ಸಂಸತ್ ಸದಸ್ಯೆಯೊಬ್ಬರನ್ನು ಅಪಹರಿಸಿದ ಪ್ರಕರಣ ವರದಿಯಾಗಿತ್ತು. ಗಂಡಂದಿರ ಹಿಂಸೆ ತಾಳಲಾಗದೆ ಓಡಿಹೋದ ಮಹಿಳೆಯರನ್ನು ಸಾಯಿಸಿದ ಘಟನೆಗಳೂ ಅಲ್ಲಿ ನಡೆದಿವೆ. ಈ ಘಟನೆಗಳು ತಾಲಿಬಾನರು ಅಲ್ಲಿ ಮತ್ತೆ ಪ್ರಬಲವಾಗುತ್ತಿರುವುದರ ಸೂಚನೆ.

ಮೂಲಭೂತವಾದಿಗಳು ಧರ್ಮದ ಹೆಸರಿನಲ್ಲಿ ಹೊರಡಿಸುವ ಆದೇಶಗಳಿಗೆ ಕಿವಿ ಕೊಡದೆ ಮಹಿಳಾ ಸ್ವಾತಂತ್ರ್ಯ, ಸಬಲೀಕರಣಕ್ಕೆ ಹಾತೊರೆಯುವ ಮಹಿಳೆಯರನ್ನೇ ಗುರಿಯಾಗಿಸಿ ನಡೆಸುತ್ತಿರುವ ದಾಳಿ, ಅವರ ಕೈ ಮೇಲಾಗುತ್ತಿರುವುದಕ್ಕೆ ನಿದರ್ಶನ. ಕರ್ಜೈ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಭಾರೀ ಬೆಲೆ ತೆರಬೇಕಾದೀತು. ಸುಷ್ಮಿತಾ ಅವರ ಹತ್ಯೆ ಎಚ್ಚರಿಕೆಯ ಗಂಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.