ADVERTISEMENT

ಅಂತರರಾಜ್ಯ ನೀರಿನ ವಿವಾದ ಸೌಹಾರ್ದದಿಂದ ಬಗೆಹರಿಸಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2018, 19:30 IST
Last Updated 31 ಜನವರಿ 2018, 19:30 IST
ಅಂತರರಾಜ್ಯ ನೀರಿನ ವಿವಾದ ಸೌಹಾರ್ದದಿಂದ ಬಗೆಹರಿಸಿ
ಅಂತರರಾಜ್ಯ ನೀರಿನ ವಿವಾದ ಸೌಹಾರ್ದದಿಂದ ಬಗೆಹರಿಸಿ   

ಅಂತರರಾಜ್ಯ ನದಿ ನೀರಿನ ವಿವಾದ ರಾಜಕೀಯ ಚಕಮಕಿಗೆ ಕಾರಣವಾಗುತ್ತಿದೆ. ಮಹದಾಯಿ ಜೊತೆಗೆ ಈಗ ಕಾವೇರಿ ವಿವಾದವೂ ಸೇರಿಕೊಂಡಿರುವುದರಿಂದ ರಾಜ್ಯದ ಮೇಲಿನ ಒತ್ತಡ ಹೆಚ್ಚಿದೆ. ಮಹದಾಯಿ ವಿಷಯವನ್ನು ಕರ್ನಾಟಕ ಮತ್ತು ಗೋವಾ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವುದರಿಂದ ಸಮಸ್ಯೆ ದಿನದಿಂದ ದಿನಕ್ಕೆ ಜಟಿಲವಾಗುತ್ತಿದೆ. ಗೋವಾ ಜಲ ಸಂಪ‍ನ್ಮೂಲ ಸಚಿವ ವಿನೋದ್‌ ಪಾಲ್ಯೇಕರ್‌ ಕಣಕುಂಬಿಗೆ ಭೇಟಿ ನೀಡಿದ್ದ ಬೆನ್ನಲ್ಲೇ ಅಲ್ಲಿನ ಸ್ಪೀಕರ್‌ ಪ್ರಮೋದ್‌ ಸಾವಂತ್‌, ಉಪಸ್ಪೀಕರ್‌ ಮೈಕೆಲ್‌ ಲೋಬೊ ಬಂದು ಹೋಗಿದ್ದಾರೆ. ಉಪನದಿಗಳಾದ ಕಳಸಾ ಮತ್ತು ಬಂಡೂರಿ ನೀರನ್ನು ಮಲ‍ಪ್ರಭಾ ನದಿಗೆ ತಿರುಗಿಸಲು ಕರ್ನಾಟಕ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇದರ ವಿರುದ್ಧ ಬಜೆಟ್‌ ಅಧಿವೇಶನದಲ್ಲಿ ನಿರ್ಣಯ ಮಂಡಿಸುವುದಾಗಿಯೂ ಅವರು ಹೇಳಿದ್ದಾರೆ.

ಅಷ್ಟೇ ಅಲ್ಲ, ರಾಜ್ಯದ ನೀರಾವರಿ ಸಚಿವ ಎಂ.ಬಿ. ಪಾಟೀಲರೂ ಕಣಕುಂಬಿಗೆ ಹೋಗಿ ಬಂದಿದ್ದಾರೆ. ಗೋವಾ ಮಾಡಿರುವ ಆರೋಪಗಳ ವಿರುದ್ಧ ಪ್ರತಿಭಟಿಸಲು ನವಲಗುಂದ ಶಾಸಕ ಎನ್.ಎಚ್‌. ಕೋನರೆಡ್ಡಿ ಅವರೂ ರೈತರೊಂದಿಗೆ ಕಣಕುಂಬಿಗೆ ತೆರಳಿದ್ದಾರೆ. ತಂಟೆ ಮಾಡುವುದೇ ಗೋವಾದ ಕಸುಬು ಎಂದು ಮುಖ್ಯಮಂತ್ರಿ ಟೀಕಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ನಡೆದಿರುವ ಬೆಳವಣಿಗೆಗಳು ಉಭಯ ರಾಜ್ಯಗಳ ಸಂಬಂಧವನ್ನು ಇನ್ನಷ್ಟು ಗೋಜಲಾಗಿಸುತ್ತಿವೆ. ನದಿ ನೀರು ಜನರ ಬದುಕಿನ ಪ್ರಶ್ನೆ. ಈ ವಿಷಯವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವುದು ಸರಿಯಲ್ಲ. ಬಿಜೆಪಿ ಮತ್ತು ಕಾಂಗ್ರೆಸ್‌ ಇಲ್ಲಸಲ್ಲದ ಕಿತಾಪತಿ ಮಾಡದೆ ಒಗ್ಗೂಡಿ ಸೌಹಾರ್ದದ ವಾತಾವರಣದಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಸದ್ಯದಲ್ಲೇ ನಡೆಯುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪರಸ್ಪರರನ್ನು ಹಣಿಯಲು ನೀರನ್ನೇ ಸಾಧನವಾಗಿ ಬಳಸಿಕೊಳ್ಳಲು ಮುಂದಾಗಬಾರದು. 

ಬೇಸಿಗೆ ಸಮೀಪಿಸುತ್ತಿರುವುದರಿಂದ ಕಾವೇರಿ ನದಿ ನೀರಿನ ಸಮಸ್ಯೆಯೂ ಉಲ್ಬಣವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಕಾವೇರಿ ನದಿ ನೀರಿನ ಹಂಚಿಕೆ ಕುರಿತು ಚರ್ಚಿಸಲು ಸಮಯಾವಕಾಶ ನೀಡುವಂತೆ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ನಮ್ಮ ರಾಜ್ಯದ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಕಾವೇರಿ ಕಣಿವೆಯ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಿದೆ ಎಂದು ಕರ್ನಾಟಕ ಹೇಳುತ್ತಿದ್ದು, ಮಾತುಕತೆಗೆ ಇನ್ನೂ ದಿನ ನಿಗದಿಪಡಿಸಿಲ್ಲ. ಈ ಮಧ್ಯೆ, ಕಾವೇರಿ ನ್ಯಾಯಮಂಡಳಿ ಐತೀರ್ಪು ‍ಪ್ರಶ್ನಿಸಿ ಕರ್ನಾಟಕ, ತಮಿಳುನಾಡು ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆ ಪೂರ್ಣಗೊಳಿಸಿರುವ ಸುಪ್ರೀಂ ಕೋರ್ಟ್‌ ಸದ್ಯದಲ್ಲೇ ತೀರ್ಪು ಪ್ರಕಟಿಸುವ ನಿರೀಕ್ಷೆ ಇದೆ. ತೀರ್ಪು ಹೊರಬರಲಿರುವ ಹಿನ್ನೆಲೆಯಲ್ಲಿ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಪೊಲೀಸರು ಮಂಡ್ಯದಲ್ಲಿ ಸಭೆ ಸೇರಿ ಬಂದೋಬಸ್ತ್‌ ಕುರಿತು ಚರ್ಚಿಸಿದ್ದಾರೆ.

ADVERTISEMENT

ಹವಾಮಾನ ಬದಲಾವಣೆಯಿಂದ ಮಳೆ ಕಡಿಮೆಯಾಗಿ ತೀವ್ರ ನೀರಿನ ಸಮಸ್ಯೆ ಎದುರಾಗುತ್ತಿರುವುದು ಆತಂಕದ ಸಂಗತಿ. ನದಿ ನೀರಿಗಾಗಿ ಗುದ್ದಾಡುತ್ತಿರುವ ಸಂಬಂಧಪಟ್ಟ ಎಲ್ಲ ರಾಜ್ಯಗಳು ಈ ವಾಸ್ತವ ಅರ್ಥ ಮಾಡಿಕೊಂಡು ಪರಸ್ಪರ ಸಹಕಾರ ಮನೋಭಾವ ಪ್ರದರ್ಶಿಸಬೇಕು. ಅಂತರರಾಜ್ಯ ನದಿ ವಿವಾದ ಬರೀ ಕರ್ನಾಟಕ, ಗೋವಾ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದ ಸಮಸ್ಯೆಯಲ್ಲ. ಬೇರೆ ಬೇರೆ ರಾಜ್ಯಗಳಲ್ಲೂ ಬಿಕ್ಕಟ್ಟಿದೆ. ಇದನ್ನು ಅರ್ಥಮಾಡಿಕೊಂಡು ಕೇಂದ್ರ ಸರ್ಕಾರವು ವಿಶಾಲ ತಳಹದಿ ಮೇಲೆ ನದಿ ನೀರಿನ ಸಮಸ್ಯೆಗೆ ಪರಿಹಾರ ಹುಡುಕಬೇಕು. ಇಲ್ಲದಿದ್ದರೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.