ADVERTISEMENT

ಸಂಪಾದಕೀಯ| ಮಾರ್ಗಸೂಚಿ ಗೊಂದಲ ನಿವಾರಿಸಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 18:09 IST
Last Updated 23 ಏಪ್ರಿಲ್ 2021, 18:09 IST
Edit 24.04.2021
Edit 24.04.2021   

ಕೋವಿಡ್– 19 ಹರಡುವಿಕೆಯನ್ನು ತಡೆಯಲು ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿರು ವುದಕ್ಕೆ ಯಾರ ಆಕ್ಷೇಪವೂ ಇಲ್ಲ. ಸೋಂಕು ಹರಡುತ್ತಿರುವ ವೇಗ ಗಮನಿಸಿದರೆ ಇದು ಅನಿವಾರ್ಯವೂ ಹೌದು. ಆದರೆ ಈ ಕಟ್ಟುನಿಟ್ಟಿನ ಕ್ರಮಗಳು ಯಾವುವು ಎನ್ನುವುದನ್ನು ಸಾರ್ವಜನಿಕರಿಗೆ ಸ್ಪಷ್ಟವಾಗಿ ಮತ್ತು ವಿವರವಾಗಿ ತಿಳಿಸುವುದು ಸರ್ಕಾರದ ಕರ್ತವ್ಯವೂ ಹೌದಲ್ಲವೇ? ‘ಯಾವುದೇ ಕಾರಣಕ್ಕೂ ಲಾಕ್‍ಡೌನ್ ಮಾಡುವುದಿಲ್ಲ’ ಎಂದು ಮುಖ್ಯಮಂತ್ರಿ ಮತ್ತು ಕೆಲವು ಸಚಿವರು ಕೆಲವು ದಿನಗಳಿಂದ ಮತ್ತೆ ಮತ್ತೆ ಹೇಳಿದ್ದರು. ಕೋವಿಡ್ ಮಾರ್ಗಸೂಚಿಗಳನ್ನು ಪ್ರಕಟಿಸಿ ಸರ್ಕಾರ ಸುತ್ತೋಲೆಯನ್ನೂ ಹೊರಡಿಸಿತ್ತು. ಕಠಿಣ ನಿರ್ಬಂಧಗಳು ಯಾವುವು ಎನ್ನುವುದನ್ನು ವಿವರಿಸಲಾಗಿತ್ತು. ಆದರೆ, ಗುರುವಾರ ಮಧ್ಯಾಹ್ನದ ಹೊತ್ತಿಗೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ಪೊಲೀಸರು ಹಠಾತ್ತಾಗಿ ಬೀದಿಗಿಳಿದು ಬಹುತೇಕ ಅಂಗಡಿ, ಮುಂಗಟ್ಟು ಗಳನ್ನು ಬಲವಂತವಾಗಿ ಮುಚ್ಚಿಸಿರುವುದು ಸರ್ಕಾರದ ಕಾರ್ಯನಿರ್ವಹಣೆಯ ಗೊಂದಲವನ್ನು ಸೂಚಿಸುತ್ತದೆ. ಕೆಲವು ನಗರಗಳಲ್ಲಿ ವರ್ತಕರು ಮತ್ತು ಗ್ರಾಹಕರ ಮೇಲೆ ಲಾಠಿ ಬೀಸಿರುವುದೂ ವರದಿ ಯಾಗಿದೆ. ಪೊಲೀಸರ ಈ ಕ್ರಮವು ಸರ್ಕಾರವು ದಿಢೀರನೆ ಲಾಕ್‍ಡೌನ್ ಜಾರಿಗೆ ತಂದಿತೇ ಎನ್ನುವ ಅನುಮಾನವನ್ನೂ ಸಾರ್ವಜನಿಕರಲ್ಲಿ ಮೂಡಿಸಿತು. ಕೋವಿಡ್ ಹಾವಳಿಯಿಂದಾಗಿ ತೀವ್ರ ಸಂಕಷ್ಟದಲ್ಲಿ ರುವ ಜನರಲ್ಲಿ ಪೊಲೀಸರ ಈ ಏಕಾಏಕಿ ಕಾರ್ಯಾ ಚರಣೆಯು ಇನ್ನಷ್ಟು ಆತಂಕ ಮೂಡಿಸಿತು. ಸಾರ್ವಜನಿಕರನ್ನು, ಉದ್ಯಮಿಗಳನ್ನು ಮತ್ತು ವ್ಯಾಪಾರಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರಿಯಾದ ಮುನ್ನೆಚ್ಚರಿಕೆಗಳನ್ನು ಕೈಗೊಂಡಿದ್ದಿದ್ದರೆ ಇಂತಹ ಅವ್ಯವಸ್ಥೆ ಸೃಷ್ಟಿಯಾಗುತ್ತಿರಲಿಲ್ಲ. ಸರ್ಕಾರವು ಪದೇ ಪದೇ ಮಾರ್ಗಸೂಚಿಗಳನ್ನು ಪರಿಷ್ಕರಿಸುತ್ತಿರುವುದೂ ಗೊಂದಲಗಳಿಗೆ ಕಾರಣವಾಗಿದೆ. ‘ಕೈಗಾರಿಕಾ ಚಟುವಟಿಕೆಗಳಿಗೆ ಯಾವುದೇ ಅಡ್ಡಿ ಇಲ್ಲ ಎಂದು ಸರ್ಕಾರ ಹೇಳಿದೆ. ಆದರೆ, ಕೈಗಾರಿಕೆಗಳು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ಇರುವ ಮಾರುಕಟ್ಟೆಗಳನ್ನು ಬಂದ್‌ ಮಾಡಲಾಗಿದೆ. ಉತ್ಪನ್ನಗಳನ್ನು ಮಾರಲು ಆಗದಿದ್ದರೆ ನೌಕರರಿಗೆ ಸಂಬಳ ಕೊಡುವುದು ಹೇಗೆ’ ಎಂಬ ಉದ್ಯಮಿಗಳ ಪ್ರಶ್ನೆ ಸೂಕ್ತವಾಗಿದೆ. ಇಂತಹ ಸಾಧ್ಯತೆ ಕುರಿತು ಮುಂಚಿತವಾಗಿ ತಿಳಿಸಬೇಕಾದುದು ಸರ್ಕಾರದ ಕರ್ತವ್ಯ. ಮದುವೆಗಳಿಗೆ ಷರತ್ತುಸಹಿತ ಅನುಮತಿ ನೀಡಿರುವ ಸರ್ಕಾರವೇ ಮದುವೆ ಸಾಮಗ್ರಿ ಖರೀದಿಗೆ ಬಂದ ಜನರನ್ನು ಲಾಠಿ ಬೀಸಿ ಚದುರಿಸಿ ದ್ದನ್ನು ಸಮರ್ಥಿಸಲಾಗದು. ಮಾರ್ಗಸೂಚಿ ಮತ್ತು ಅದರ ಅನುಷ್ಠಾನದ ಕುರಿತು ಜಿಲ್ಲಾ ಆಡಳಿತದ ಮಟ್ಟದಲ್ಲಿ ಸೂಕ್ತ ಮುನ್ನೆಚ್ಚರಿಕೆಯ ಕ್ರಮಗಳನ್ನು ಮೊದಲೇ ಪ್ರಕಟಿಸಿದ್ದರೆ ಜನರಲ್ಲಿ ಇಷ್ಟೊಂದು ಗೊಂದಲ ಮೂಡುತ್ತಿರಲಿಲ್ಲ. ಉದ್ಯಮ ಮತ್ತು ವರ್ತಕ ಸಮುದಾಯದ ಪ್ರಾತಿನಿಧಿಕ ಸಂಸ್ಥೆಗಳ ಮೂಲಕ ಈ ಕ್ರಮಗಳ ಸ್ಪಷ್ಟ ವಿವರಗಳನ್ನು ಸಂಬಂಧಿಸಿದವರಿಗೆ ತಲುಪಿಸುವ ಕೆಲಸವೂ ಆಗಬೇಕಿತ್ತು.

ಕೋವಿಡ್– 19 ಸೋಂಕು ರಾಜ್ಯದಲ್ಲಿ ಅತ್ಯಂತ ವೇಗವಾಗಿ ಹರಡುತ್ತಿದೆ. ಪ್ರತಿದಿನ ಹೊಸದಾಗಿ ಸೋಂಕಿಗೆ ಒಳಗಾಗುತ್ತಿರುವವರ ಸಂಖ್ಯೆ 25 ಸಾವಿರದ ಆಸುಪಾಸಿಗೆ ಬಂದಿದೆ. ಪ್ರತಿದಿನದ ಸಾವಿನ ಸಂಖ್ಯೆ ಸತತವಾಗಿ ನೂರರ ಗಡಿ ದಾಟಿದೆ. ಆರೋಗ್ಯ ಕ್ಷೇತ್ರದಲ್ಲಿ ತುರ್ತುಪರಿಸ್ಥಿತಿಯ ವಾತಾವರಣವಿದೆ ಎನ್ನುವುದನ್ನು ಜನರೂ ಅರ್ಥ ಮಾಡಿಕೊಳ್ಳಬೇಕು. ಸೋಂಕು ತಡೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳು, ಜನರ ಸಹಕಾರವಿಲ್ಲದೆ ಪರಿಣಾಮಕಾರಿಯಾಗಿ ಜಾರಿಗೆ ಬರಲು ಸಾಧ್ಯವಿಲ್ಲ. ವಾರಾಂತ್ಯದ ಲಾಕ್‍ಡೌನ್ ಮತ್ತು ರಾತ್ರಿ ವೇಳೆಯ ಕರ್ಫ್ಯೂ ಎರಡೂ ಪರಿಣಾಮಕಾರಿಯಾಗಿ ಜಾರಿಗೆ ಬರುವುದು ಈ ದಿಸೆಯಲ್ಲಿ ಬಹಳ ಮುಖ್ಯವಾದುದು. ಮಾರ್ಗಸೂಚಿ ಪಾಲನೆಗೆಸಾರ್ವಜನಿಕರು ಮನಃ
ಪೂರ್ವಕವಾಗಿ ಸ್ಪಂದಿಸಬೇಕಾದ ತುರ್ತು ಸಂದರ್ಭ ಇದು. ಸೋಂಕು ಹರಡುವಿಕೆ ತಡೆಗೆಸ್ವಯಂಶಿಸ್ತು
ಮುಖ್ಯ. ಅದು ನಮ್ಮ ಕರ್ತವ್ಯವೂ ಹೌದು. ಭಾಗಶಃ ಲಾಕ್‍ಡೌನ್ ಎನ್ನಬಹುದಾದ ಈ ಪರಿಸ್ಥಿತಿಯ ನಿರ್ವಹಣೆಗೆ ಸರ್ಕಾರವು ಜನರನ್ನು ಸಂಪೂರ್ಣವಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇನ್ನೊಂದೆಡೆ ಕೋವಿಡ್ ರೋಗಿಗಳ ಆರೈಕೆಯಲ್ಲಿ ಆಗುತ್ತಿರುವ ಲೋಪದೋಷಗಳನ್ನು ಕೂಡಲೇ ಸರಿಪಡಿಸಬೇಕು. ಅವರಿಗೆ ಬೇಕಾಗಿರುವ‌ ಔಷಧ, ಆಮ್ಲಜನಕ ಪೂರೈಕೆಗೂ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ಪೂರ್ಣ ವಿಫಲವಾಗಿದೆ ಎನ್ನುವ ಅನುಮಾನಗಳು ಜನರಲ್ಲಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಸಚಿವರು, ಶಾಸಕರು ಸಹಿತ ಜನಪ್ರತಿನಿಧಿಗಳು ಜನರ ಸಂಪರ್ಕಕ್ಕೆ ಸದಾ ಲಭ್ಯವಿದ್ದು ಅವರ ಸಂಕಷ್ಟಕ್ಕೆ ಸ್ಪಂದಿಸಬೇಕು. ಆ ಮೂಲಕ ವ್ಯವಸ್ಥೆಯ ಬಗ್ಗೆ ವಿಶ್ವಾಸ ಕುದುರಿಸಲು ಯತ್ನಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT