ADVERTISEMENT

ಕೃಷಿಗೆ ಪೂರಕ ಉದ್ಯಮಗಳ ಸ್ಥಾಪನೆ: ಪುಟ್ಟರಾಜು

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2014, 6:30 IST
Last Updated 8 ಏಪ್ರಿಲ್ 2014, 6:30 IST
ಸಿ.ಎಸ್‌. ಪುಟ್ಟರಾಜು
ಸಿ.ಎಸ್‌. ಪುಟ್ಟರಾಜು   

ಮಂಡ್ಯ ಲೋಕಸಭೆಗೆ ಜೆಡಿಎಸ್‌ ಅಭ್ಯರ್ಥಿಯಾಗಿ ಸಿ.ಎಸ್‌. ಪುಟ್ಟರಾಜು ಕಣಕ್ಕೆ ಇಳಿದಿದ್ದಾರೆ. ಕಳೆದ 20 ವರ್ಷಗಳಿಂದ ರಾಜಕೀಯದಲ್ಲಿ ಇದ್ದಾರೆ. ಒಂದು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರು, ಒಂದು ಬಾರಿ ಪಾಂಡವಪುರ ಹಾಗೂ ಇನ್ನೊಂದು ಬಾರಿ ಮೇಲುಕೋಟೆ ಕ್ಷೇತ್ರದಿಂದ ಶಾಸಕರಾಗಿರುವ ಅನುಭವ ಹೊಂದಿದ್ದಾರೆ.

ಕಳೆದ ಎಂಟು ತಿಂಗಳ ಹಿಂದೆ ನಡೆದ ಲೋಕಸಭೆ ಉಪಚುನಾವಣೆಯಲ್ಲಿ ಸೋತಿದ್ದಾರೆ. ಈ ಬಾರಿ ಮತ್ತೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಬಿರುಸಿನ ಪ್ರಚಾರದ ನಡುವೆಯೂ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ವಿವರಗಳು ಇಂತಿವೆ.

ಪ್ರ: ಪ್ರಚಾರ ಕಾರ್ಯ ಹೇಗೆ ಸಾಗಿದೆ.
ಉ:
ಚೆನ್ನಾಗಿ ನಡೆದಿದ್ದು, ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ಕಂಡು ಬರುತ್ತಿದೆ. ಉಳಿದ ಮುಖಂಡರು ಹಾಗೂ ಕಾರ್ಯಕರ್ತರೂ ತಮ್ಮ, ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರವನ್ನು ಜೋರಾಗಿ ಆರಂಭಿಸಿದ್ದಾರೆ. ಕಳೆದ ಬಾರಿಗಿಂತ ಹೆಚ್ಚು ಶ್ರಮಪಡುತ್ತಿದ್ದೇವೆ.

ಪ್ರ: ಪ್ರಚಾರ ಸಂದರ್ಭದಲ್ಲಿ ನಿಮಗೆ ಕಂಡು ಬಂದು ಸಮಸ್ಯೆಗಳು ಯಾವವು ?
ಉ:
ರಸ್ತೆ, ಕುಡಿಯುವ ನೀರು, ವಿದ್ಯುತ್‌ ಸಮಸ್ಯೆ ಕಂಡು ಬಂದವು. ಅವುಗಳಿಗಿಂತ ಮುಖ್ಯವಾಗಿ ಕಬ್ಬಿನ ಬಿಲ್‌ ಪಾವತಿಸಿಲ್ಲ ಎಂಬ ದೂರನ್ನೂ ಕೆಲವು ಕಡೆ ರೈತರು ಪ್ರಸ್ತಾಪಿಸಿದ್ದಾರೆ. ಮೂಲ ಸೌಕರ್ಯಗಳಿಲ್ಲ ಎಂಬುದು ಸೇರಿದಂತೆ ಹಲವು ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದಾರೆ.

ಪ್ರ: ನಿಮ್ಮ ಪ್ರಮುಖ ಎದುರಾಳಿ ಯಾರು ? ಅವರನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದೀರಿ ?
ಉ:
ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿ ನಮಗೆ ಪ್ರಮುಖ ಎದುರಾಳಿಯಾಗಿದ್ದಾರೆ. ಚುನಾವಣೆ ಹಾಗೂ ಎದುರಾಳಿಗಳನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ಅವರನ್ನು ಎದುರಿಸಲು ಪಕ್ಷದ ಎಲ್ಲರೂ ಒಗ್ಗಟ್ಟಾಗಿ ಪ್ರಚಾರ ಕಾರ್ಯವನ್ನು ತೀವ್ರಗೊಳಿಸಿದ್ದೇವೆ.

ಪ್ರ: ಸೋಷಿಯಲ್‌ ಡೆಮಾಕ್ರಟಿಕ್‌ ಫ್ರಂಟ್‌ ಆಫ್‌ ಇಂಡಿಯಾ (ಎಸ್‌ಡಿಪಿಐ) ಬೆಂಬಲ ನೀಡಿದ್ದರ ಉದ್ದೇಶ ಏನು?
ಉ:
ಪಕ್ಷದ ಜಾತ್ಯಾತೀತ ನಿಲುವಿನಿಂದಾಗಿ ನಮ್ಮೊಂದಿಗೆ ಕೈಜೋಡಿಸಿದ್ದಾರೆ. ಮುಸ್ಲಂ ಬಾಂಧವರೂ ನಮ್ಮೊಂದಿಗೆ ಒಂದಾಗಿ ಬಾಳಬೇಕು. ಅವರ ಬೆಂಬಲದಿಂದ ಜೆಡಿಎಸ್‌ಗೆ ಮತ್ತಷ್ಟು ಶಕ್ತಿ ಬಂದಿದೆ.

ಪ್ರ: ಶಾಸಕರಾಗಿ ಅಭಿವೃದ್ಧಿ ಮಾಡಿದ್ದೀರಿ ಎನ್ನುತ್ತೀರಿ. ಆದರೂ, ಜನರು ಸೋಲಿಸಿದ್ದು ಏಕೆ ?
ಉ:
ಜನರು ನನ್ನನ್ನು ಸೋಲಿಸಿಲ್ಲ. 2004ರಲ್ಲಿ 44,400 2008ರಲ್ಲಿ 66 ಸಾವಿರ ಹಾಗೂ 2013ರಲ್ಲಿ 71 ಸಾವಿರ ಮತ ನೀಡಿದ್ದಾರೆ. ಪತ್ರಿ ಬಾರಿಯೂ ಮತಗಳ ಪ್ರಮಾಣ ಹೆಚ್ಚಾಗಿದೆ. ಪುಟ್ಟರಾಜು ಗೆದ್ದರೆ ಶಕ್ತಿಯಾಗುತ್ತಾನೆ ಎಂದು ಕಾಂಗ್ರೆಸ್‌, ಸರ್ವೋದಯ ಕರ್ನಾಟಕ ಹಾಗೂ ಬಿಜೆಪಿ ಕೂಡಿಕೊಂಡು ಸೋಲಿಸಿವೆ.

ಪ್ರ: ನಿಮಗೆ; ನಿಮ್ಮ ಪಕ್ಷಕ್ಕೆ ಯಾಕೆ ಮತ ಹಾಕಬೇಕು ?
ಉ:
ಕಾವೇರಿ ನದಿ ನೀರಿನ ಸಮಸ್ಯೆಯು ಜಿಲ್ಲೆಯನ್ನು ಕಾಡುತ್ತಿದೆ. ಪಕ್ಷದ ವರಿಷ್ಠರಾದ ಎಚ್‌್.ಡಿ. ದೇವೇಗೌಡರು ಹಲವಾರು ವರ್ಷಗಳಿಂದ ಅದರ ಬಗ್ಗೆ ಸದನದ ಹೊರಗೆ ಹಾಗೂ ಒಳಗೆ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಅದಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ಪಕ್ಷಕ್ಕೆ ಮತ ನೀಡಬೇಕು.

ಜಿ.ಪಂ. ಸದಸ್ಯನಾಗಿ, ಶಾಸಕನಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ ಕನಸು ಹೊಂದಿದ್ದೇನೆ. ಆದ್ದರಿಂದ ನನಗೆ ಬೆಂಬಲ ಕೇಳುತ್ತಿದ್ದೇನೆ.

ಪ್ರ: ಸಂಸದರಾದರೆ, ಕ್ಷೇತ್ರದ ಅಭಿವೃದ್ಧಿಗೆ ಏನು ಯೋಜನೆ ಹಾಕಿಕೊಂಡಿದ್ದೀರಿ ?
ಉ:
ಕಾವೇರಿ ನದಿ ನೀರಿನ ಹಂಚಿಕೆಯ ಸಮಸ್ಯೆಗೆ ತಾರ್ಕಿಕ ಅಂತ್ಯ ಸಿಗದ ಹೊರತು ಜಿಲ್ಲೆಯ ಜನರಿಗೆ ನೆಮ್ಮದಿ ಇರುವುದಿಲ್ಲ. ಅದನ್ನು ಬಗೆಹರಿಸಲು ದೇವೇಗೌಡರ ಕೈ ಬಲಪಡಿಸಬೇಕಾಗಿದೆ. ಅದಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ.
ಕೈಗಾರಿಕೆಗಳು ನಿರೀಕ್ಷಿತ ಪ್ರಮಾಣದಲ್ಲಿ ಜಿಲ್ಲೆಗೆ ಬಂದಿಲ್ಲ. ಕೈಗಾರಿಕಾ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡುತ್ತೇನೆ. ಅದರಲ್ಲೂ ಕೃಷಿಗೆ ಪೂರಕವಾಗಿರುವಂತವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಇದರಿಂದ ಅವರ ಬೆಳೆಗಳಿಗೆ ಉತ್ತಮ ಬೆಲೆ ದೊರೆಯಲಿದೆ. ಯುವಕರಿಗೆ ಉದ್ಯೋಗವಕಾಶಗಳನ್ನು ಇಲ್ಲಿಯೇ ಸೃಷ್ಟಿಸಲು ಕೇಂದ್ರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುತ್ತೇನೆ. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದರ ಜತೆಗೆ, ವಿಶ್ವವಿದ್ಯಾಲಯ ಸ್ಥಾಪನೆಗೆ ಯತ್ನಿಸುತ್ತೇನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT