ADVERTISEMENT

ಜನರ ಜತೆ ಇದ್ದು ಕೆಲಸ ಮಾಡಿರುವೆ

ಬಿಜೆಪಿ ಅಭ್ಯರ್ಥಿ ಸಿದ್ದೇಶ್ವರ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2014, 5:19 IST
Last Updated 12 ಏಪ್ರಿಲ್ 2014, 5:19 IST
ಸಿದ್ದೇಶ್ವರ
ಸಿದ್ದೇಶ್ವರ   

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಈ ಬಾರಿ ಒಟ್ಟು 18 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 17ರ ಚುನಾವಣಾ ದಿನ ಹತ್ತಿರ ಬರುತ್ತಿರುವಂತೆ ಪ್ರಚಾರದ ಭರಾಟೆ ಜೋರಾಗಿದೆ. ಈ ಹಿಂದೆ ಬಿಜೆಪಿ ಮತ್ತು ಕಾಂಗ್ರೆಸ್‌ ಇಲ್ಲಿ ಪ್ರಬಲ ನೆಲೆ ಹೊಂದಿದ್ದವು. 1977ರಿಂದ 2009ರವರೆಗೆ ನಡೆದ 10 ಚುನಾವಣೆಗಳಲ್ಲಿ 6 ಬಾರಿ ಕಾಂಗ್ರೆಸ್, 4 ಬಾರಿ ಬಿಜೆಪಿ ಗೆಲುವು ಕಂಡಿವೆ. 1996ಕ್ಕೂ ಮೊದಲು ಈ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆಯಾಗಿತ್ತು. 1996ರ ನಂತರ ನಡೆದ ಚುನಾವಣೆಗಳಲ್ಲಿ ಒಮ್ಮೆ ಮಾತ್ರ ಕಾಂಗ್ರೆಸ್ ಗೆಲುವು ಕಂಡಿದೆ.

ಜಿ.ಎಂ.ಸಿದ್ದೇಶ್ವರ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. 2004 ಹಾಗೂ 2009ರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಕಂಡಿದ್ದರು. ಹಿಂದಿನ ಎರಡೂ ಚುನಾವಣೆಯಲ್ಲೂ ತಮಗೆ ಸ್ಪರ್ಧೆ ಒಡ್ಡಿದ್ದ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಎಸ್.ಮಲ್ಲಿಕಾರ್ಜುನ್‌ ಈ ಬಾರಿಯೂ ಅವರಿಗೆ ಪ್ರತಿಸ್ಪರ್ಧಿಯಾಗಿದ್ದಾರೆ.

ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯೊಂದಿಗೆ ಕ್ಷೇತ್ರದೆಲ್ಲೆಡೆ ಬಿರುಸಿನ ಪ್ರಚಾರ ಕೈಗೊಂಡಿರುವ ಸಿದ್ದೇಶ್ವರ ಅವರು ‘ಪ್ರಜಾವಾಣಿ’ಗೆ ನೀಡಿದ ಕಿರು ಸಂದರ್ಶನದ ಸಂಕ್ಷಿಪ್ತಸಾರ ಇಲ್ಲಿದೆ.

* ಕ್ಷೇತ್ರದಲ್ಲಿ ನರೇಂದ್ರ ಮೋದಿ ಅಲೆ ಇದೆಯೇ?
–ದೇಶದ ಎಲ್ಲೆಡೆ ಈ ಬಾರಿ ಮೋದಿ ಅಲೆ ಇದೆ. 10 ವರ್ಷ ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್‌ ದುರಾಳಿತ, ಭ್ರಷ್ಟಾಚಾರದಿಂದ ಜನ ಬೇಸತ್ತು ಹೋಗಿದ್ದಾರೆ. ಮೋದಿ ಪ್ರಧಾನಿಯಾದರೆ ದೇಶದ ಪ್ರಗತಿ, ಭದ್ರತೆ ಸಾಧ್ಯ ಎಂದು ನಂಬಿದ್ದಾರೆ. ಹಾಗಾಗಿ, ಮೋದಿ ಅಲೆ ಕ್ಷೇತ್ರದಲ್ಲೂ ವರದಾನವಾಗಿದೆ.

* ಈ ಬಾರಿ ಗೆಲ್ಲುತ್ತೀರೆಂದು ಯಾವ ಆಧಾರದಲ್ಲಿ ಹೇಳುತ್ತೀರಿ?
–10 ವರ್ಷ ಕ್ಷೇತ್ರದ ಜನರ ಸಮಸ್ಯೆಗೆ ಸ್ಪಂದಿಸಿದ್ದೇನೆ. ಜನರ ಜತೆ ನಿರಂತರವಾಗಿ ಸಂಪರ್ಕ ಇಟ್ಟುಕೊಂಡಿದ್ದೇನೆ, ಸಂಸದರ ಪ್ರದೇಶಾಭಿವೃದ್ಧಿ ಯಲ್ಲಿ ದೊರೆತ ಅನುದಾನವನ್ನು ಕ್ಷೇತ್ರಕ್ಕೆ ಹಂಚಿಕೆ ಮಾಡಿದ್ದೇನೆ. ಸ್ಥಳೀಯ ಸಂಸ್ಥೆಗಳು, ಶಾಸಕರು ಮಾಡಬೇಕಾದ  ಕೆಲಸಕ್ಕೆ ಜನ ನನ್ನ ಬಳಿ ಬರುತ್ತಾರೆ. ಅಂಥ ಸಮಸ್ಯೆಗಳಿಗೆ ಬೇಸರಿಸಿಕೊಳ್ಳದೇ ಸ್ಪಂದಿಸಿದ್ದೇನೆ. ಜನರಿಗೆ ಸಲುಭವಾಗಿ ಕೈಗೆ ಸಿಗುತ್ತೇನೆ. ಯಾವುದೇ ಸಭೆ ಸಮಾರಂಭಗಳಿಗೆ ಕರೆದರೂ ಹೋಗಿ ಬಂದಿದ್ದೇನೆ. ಒಟ್ಟಿನಲ್ಲಿ ಜನರ ಮಧ್ಯೆ ಇದ್ದು ಕೆಲಸ ಮಾಡಿದ್ದೇನೆ.

* ಎರಡು ಬಾರಿ ಸಂಸದರಾಗಿ ಕ್ಷೇತ್ರಕ್ಕೆ ನಿಮ್ಮ ಕೊಡುಗೆ?
ಹಲವು ಗ್ರಾಮಗಳಲ್ಲಿ ಸಿಮೆಂಟ್‌ ರಸ್ತೆ, ಸಮುದಾಯ ಭವನ, ಅಂಗನವಾಡಿ ಕಟ್ಟಡ, ರಂಗಮಂದಿರ, ಶಾಲಾ ಕೊಠಡಿ, ಬಸ್‌ತಂಗುದಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಹಂಚಿಕೆ ಮಾಡಿದ್ದೇನೆ. ವೈಯಕ್ತಿಕ ಸಮಸ್ಯೆಗಳಿಗೂ ಸ್ಪಂದಿಸಿದ್ದೇನೆ. ಲೋಕಸಭೆಯಲ್ಲಿ ಹೆಚ್ಚು ಪ್ರಶ್ನೆ ಕೇಳಿ, ಸಮಸ್ಯೆಗಳ ಇತ್ಯರ್ಥಕ್ಕೆ ಶ್ರಮಿಸಿದ್ದೇನೆ. 22 ಕೆರೆ ಏತ ನೀರಾವರಿ, ಕೊಟ್ಟೂರು ರೈಲ್ವೆ, ಉದ್ಯೋಗ ಖಾತ್ರಿ ಸೇರಿದಂತೆ ಕೇಂದ್ರದ ಹತ್ತು ಹಲವು ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುವಂತೆ ನಿಗಾ ವಹಿಸಿದ್ದೇನೆ. ಫಲಾನುಭವಿಗಳಿಗೆ ಯೋಜನೆಗಳ ಪ್ರತಿಫಲ ದೊರಕುವಂತೆ ಎಚ್ಚರ ವಹಿಸಿದ್ದೇನೆ.

* ನಿಮ್ಮ ತಂದೆಯ ಹೆಸರು ಗೆಲುವಿಗೆ ನೆರವಾಗುತ್ತದೆಯೇ?
ಖಂಡಿತ ನೆರವಾಗುತ್ತದೆ. 1996ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅವರು ಮೊದಲ ಬಾರಿ ಸ್ಪರ್ಧಿಸಿ, ಗೆಲುವು ಕಂಡಿದ್ದರು. ಸಂಸದರ ನಿಧಿ ಎನ್ನುವುದು ಇದೆ. ಅದನ್ನು ಕ್ಷೇತ್ರದ ಅಭಿವೃದ್ಧಿಗೆ ಬಳಸಬಹುದು ಎಂದು ತೋರಿಸಿಕೊಟ್ಟಿದ್ದೇ ನಮ್ಮ ತಂದೆ. ಪಕ್ಷ ಭೇದವಿಲ್ಲದೇ ಸ್ಪಂದಿಸುತ್ತಿದ್ದ ಅವರನ್ನು ಜಿಲ್ಲೆಯ ಜನ ಇಂದಿಗೂ ‘ಅಜಾತ ಶತ್ರು’ಎಂದೇ ಕರೆಯುತ್ತಾರೆ. ಅವರ ಸಜ್ಜನಿಕೆ, ಸರಳತೆ ನನಗೆ ಶ್ರೀರಕ್ಷೆಯಾಗಿದೆ.

* ಜೆಡಿಎಸ್‌ ನಿಮ್ಮ ಗೆಲುವಿಗೆ ಅಡ್ಡಿಯಾಗಿದೆಯೇ?
ಮಹಿಮ ಅವರಿಗೆ ಟಿಕೆಟ್‌ ನೀಡುವುದಾಗಿ ನಂಬಿಸಿ ಕಾಂಗ್ರೆಸ್‌ ಮೋಸ ಮಾಡಿದೆ. ಹಾಗಾಗಿ, ಅವರು ಕಾಂಗ್ರೆಸ್‌ ವಿರುದ್ಧ ತೊಡೆತಟ್ಟಿದ್ದಾರೆ. ಕಾಂಗ್ರೆಸ್‌ ವೋಟ್ ಬ್ಯಾಂಕ್ ವಿಭಜಿತವಾಗುವ ಕಾರಣ ಬಿಜೆಪಿಗೆ ಇನ್ನಷ್ಟು ಅನುಕೂಲವಾಗಲಿದೆ.

* ಕ್ಷೇತ್ರ ಅಭಿವೃದ್ಧಿಯ ನಿಮ್ಮ ಭವಿಷ್ಯದ ಕನಸು?
– ಇಡೀ ಲೋಕಸಭಾ ಕ್ಷೇತ್ರಕ್ಕೆ ಸಂಪೂರ್ಣ ನೀರಾವರಿ ಸೌಲಭ್ಯ ದೊರೆಯಬೇಕು. ಅದಕ್ಕಾಗಿ ನದಿಗಳ ಜೋಡಣೆ ಜಾರಿಗೆ ಒತ್ತಡ ಹಾಕುತ್ತೇನೆ. ಅಡಿಕೆ ಆಹಾರ ಬೆಳೆ ಎಂದು ಘೋಷಿಸಲು ಕ್ರಮ ಕೈಗೊಳ್ಳುತ್ತೇನೆ. ಕೈಗಾರಿಕಾ ಪ್ರಗತಿ ಹಾಗೂ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವಂತೆ ನೋಡಿಕೊಳ್ಳುತ್ತೇನೆ. ಕೇಂದ್ರದಲ್ಲಿ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದ್ದು,  ಎಲ್ಲ ಬೆಳೆಗಳಿಗೂ ವೈಜ್ಞಾನಿಕ ಬೆಲೆ ಸೇರಿದಂತೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT