ADVERTISEMENT

ಸ್ವಾವಲಂಬಿ ಜಿಲ್ಲೆಯ ನಿರ್ಮಾಣದತ್ತ ದಿಟ್ಟ ಹೆಜ್ಜೆ: ಶಿವಲಿಂಗಯ್ಯ

ಬಸವರಾಜ ಹವಾಲ್ದಾರ
Published 7 ಏಪ್ರಿಲ್ 2014, 9:25 IST
Last Updated 7 ಏಪ್ರಿಲ್ 2014, 9:25 IST

ಮಂಡ್ಯ ಲೋಕಸಭೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಪ್ರೊ.ಬಿ. ಶಿವಲಿಂಗಯ್ಯ ಅವರು, ಎಂಜಿನಿಯರಿಂಗ್‌ ಮಾಡಿ ಕೊಂಡಿದ್ದಾರೆ. ಪ್ರೊಫೆಸರ್‌ ಆಗಿ, ರಾಜ್ಯ ಪರಿಸರ ಮಾಲಿನ್ಯ ಮಂಡಳಿಯ ಅಧ್ಯಕ್ಷರಾಗಿ, ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆಗೆ (ಕೆಡೆಲ್‌) ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಎಸ್‌.ಬಿ. ಎಜುಕೇಷನ್‌ ಟ್ರಸ್ಟ್‌ ಹೆಸರಿನಲ್ಲಿ ಜಿಲ್ಲೆಯಲ್ಲಿ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪದವಿವರೆಗಿನ ಶಾಲಾ– ಕಾಲೇಜುಗಳನ್ನು ನಡೆಸು­ತ್ತಿದ್ದಾರೆ. ವೃತ್ತಿಶಿಕ್ಷಣವನ್ನೂ ನೀಡಲಾಗುತ್ತಿದೆ.
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಅಲೆಯೂ ದೇಶದಲ್ಲಿ ಅಷ್ಟೇ ಅಲ್ಲ; ಮಂಡ್ಯದಲ್ಲಿಯೂ  ಬೀಸುತ್ತಿದೆ ಎಂದು ಹೇಳುತ್ತಾ ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಅವರು, ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನ ಇಂತಿದೆ.
ಪ್ರ: ಪ್ರಚಾರ ಕಾರ್ಯ ಹೇಗೆ ಸಾಗಿದೆ?
ಉ:
ಬಹಳ ಚೆನ್ನಾಗಿದೆ. ಜಿಲ್ಲೆಯಲ್ಲಿ ಮೋದಿ ಅಲೆ ಇರುವುದು ಕಂಡು ಬರುತ್ತಿದೆ. ಯುವಕರು ಹಾಗೂ ವಿದ್ಯಾವಂತರು ನಮ್ಮತ್ತ ಮುಖ ಮಾಡಿದ್ದು, ನಮ್ಮತ್ತ ಕುತೂಹಲದಿಂದ ನೋಡುತ್ತಿದ್ದಾರೆ. ಇದು ಪ್ರಚಾರಕ್ಕೆ ನಮಗೆ ಮತ್ತಷ್ಟು ಹುಮ್ಮಸ್ಸು ತುಂಬಿದೆ. ಯುವಕರೇ ತಮ್ಮನ್ನು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರ: ಶಿಕ್ಷಣ ಸಂಸ್ಥೆ ನಡೆಸಿಕೊಂಡು ಹಾಯಾಗಿದ್ದವರು, ರಾಜಕೀಯ ಪ್ರವೇಶ ಮಾಡಿದ್ದು ಯಾಕೆ ?
ಉ:
ದೇಶ ಹಾಗೂ ಜಿಲ್ಲೆ ಅಭಿವೃದ್ಧಿಯ ದಿಕ್ಕನ್ನು ನೋಡಿ ನನಗೆ ಬೇಸರವಾಗುತ್ತಿತ್ತು. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಯಾವುದೇ ಹೇಳಿಕೊಳ್ಳುವಂತಹ ದೊಡ್ಡ ಯೋಜನೆಗಳು ಜಾರಿಯಾಗಿಲ್ಲ. ಯುವಕರು ಉದ್ಯೋಗ ಹುಡುಕಿಕೊಂಡು ಬೆಂಗಳೂರು ಹಾಗೂ ಮೈಸೂರಿಗೆ ಹೋಗುವಂತಹ ಸ್ಥಿತಿ ಇದೆ. ಹೀಗಿದ್ದಾಗ ಬಿಜೆಪಿಯವರು ಅವಕಾಶ ಮಾಡಿಕೊಟ್ಟರು. ಜನಪ್ರತಿನಿಧಿಯಾದರೆ ಸಮಸ್ಯೆಗಳಿಗೆ ಸ್ಪಂದಿಸಬಹುದು ಎಂದು ಬಂದಿದ್ದೇನೆ.

ಪ್ರ: ಬಿಜೆಪಿಯನ್ನು ಆಯ್ಕೆ ಮಾಡಿಕೊಂಡಿದ್ದು ಯಾಕೆ ?
ಉ:
ಗುಜರಾತ್‌ ರಾಜ್ಯದಲ್ಲಿ ನರೇಂದ್ರ ಮೋದಿ ಅವರು ಮಾಡಿರುವ ಅಭಿವೃದ್ಧಿಯನ್ನು ನೋಡಿ ಬಿಜೆಪಿ ಆಯ್ಕೆ ಮಾಡಿಕೊಂಡಿದ್ದೇನೆ. ಕೇಂದ್ರದಲ್ಲಿ ಸರ್ಕಾರ ಬಂದರೆ, ಅದೇ ರೀತಿ ಅಭಿವೃದ್ಧಿ ಮಾಡಬಹುದು ಎನ್ನುವ ಉದ್ದೇಶವೂ ಇದೆ. ದೇಶ ಭಕ್ತಿಯನ್ನು ಬೆಳೆಸುವ ಪಕ್ಷವಾಗಿದೆ.

ಪ್ರ: ನಿಮಗೆ ಟಿಕೆಟ್‌ ನೀಡಿದ್ದರಿಂದ ಕೆಲ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರಲ್ಲಾ ?
ಉ:
ಸಹಜವಾಗಿಯೇ ಅವರಿಗೆ ಒಂದಷ್ಟು ಬೇಸರವಾಗಿದ್ದು ನಿಜ. ಆದರೆ, ಈಗ ಎಲ್ಲವೂ ಸರಿಹೋಗಿದೆ. ಒಗ್ಗಟ್ಟಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ. ಮೋದಿ ಅವರನ್ನು ಪ್ರಧಾನಿಯಾಗಿಸುವುದು ನಮ್ಮೆಲ್ಲರ ಗುರಿಯಾಗಿದೆ. ಬಿಜೆಪಿ ಪಕ್ಷದಲ್ಲೇ ಇದ್ದು, ಪಕ್ಷವನ್ನು ಸಂಘಟಿಸುತ್ತೇನೆ.

ಪ್ರ: ಪ್ರಚಾರ ಸಂದರ್ಭದಲ್ಲಿ ನಿಮಗೆ ಕಂಡು ಬಂದ ಸಮಸ್ಯೆಗಳು ಯಾವವು ?
ಉ:
ವಿದ್ಯುತ್‌, ಶುದ್ಧ ಕುಡಿಯುವ ನೀರು ಹಾಗೂ ನಿರುದ್ಯೋಗದ ಸಮಸ್ಯೆಯಂತಹ ಸವಾಲುಗಳನ್ನು ಜನರು ನನ್ನ ಮುಂದೆ ಇಡುತ್ತಿದ್ದಾರೆ. ವಿದ್ಯುತ್‌ ಸಮಸ್ಯೆಯಿಂದಾಗಿ ಬೆಳೆ ಕಳೆದುಕೊಳ್ಳುವ ಸ್ಥಿತಿ ಇದೆ ಎನ್ನುತ್ತಾರೆ. ಇಷ್ಟು ವರ್ಷಗಳು ಕಳೆದರೂ ಮೂಲಸೌಕರ್ಯ ಒದಗಿಸಲಾಗಿಲ್ಲ ಎಂಬುದು ದುರಂತ. ಹೀಗೆ ಅನೇಕ ಸಮಸ್ಯೆಗಳನ್ನು ಜನರು ನಮ್ಮ ಗಮನಕ್ಕೆ ತರುತ್ತಿದ್ದಾರೆ.

ಪ್ರ: ನಿಮ್ಮ ಪ್ರಮುಖ ಎದುರಾಳಿ ಯಾರು ? ಅವರನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದೀರಿ ?
ಉ:
ಕಾಂಗ್ರೆಸ್‌ ಪಕ್ಷ ನಮಗೆ ಪ್ರಮುಖ ಎದುರಾಳಿಯಾಗಿದೆ. ಗಂಭೀರವಾಗಿ ಪರಿಗಣಿಸಿದ್ದು, ಆ ಪಕ್ಷವನ್ನು ಎದುರಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ.

ಪ್ರ: ನಿಮಗೆ; ನಿಮ್ಮ ಪಕ್ಷಕ್ಕೆ ಯಾಕೆ ಮತ ಹಾಕಬೇಕು ?
ಉ: 6
0 ವರ್ಷ ಆಳಿದ ಸರ್ಕಾರವು ಭಾರತ ನಿರ್ಮಾಣದ ಬಗ್ಗೆ ಮಾತನಾಡುತ್ತಿದೆ. ಆದರೆ, ದೇಶದ ಅಭಿವೃದ್ಧಿ ಶೂನ್ಯವಾಗಿದೆ. ಈ ದೇಶದ ಭದ್ರತೆ, ದಕ್ಷ ಅಧಿಕಾರ ಹಾಗೂ ಹಿತಕ್ಕಾಗಿ ನಮ್ಮನ್ನು ಬೆಂಬಲಿಸಬೇಕು. ಅಭಿವೃದ್ಧಿಯ ಬಗ್ಗೆ ನನ್ನದೇ ಆದ ಕನಸುಗಳು ಇವೆ. ಅವುಗಳನ್ನು ಸಾಕಾರಗೊಳಿಸಲು ಅವಕಾಶ ನೀಡಬೇಕು.

ಪ್ರ: ಸಂಸದರಾದರೆ, ಕ್ಷೇತ್ರದ ಅಭಿವೃದ್ಧಿಗೆ ಏನು ಯೋಜನೆ ಹಾಕಿಕೊಂಡಿದ್ದೀರಿ ?
ಉ:
ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಜಿಲ್ಲೆಯಲ್ಲಿಯೇ ಕಾವೇರಿ ನದಿ ನೀರಿನಿಂದ ಹಾಗೂ ಲಭ್ಯವಿರುವ ಕಬ್ಬಿನ ಸಿಪ್ಪೆ, ತೆಂಗಿನಕಾಯಿ ಸಿಪ್ಪೆಯಿಂದ ವಿದ್ಯುತ್‌ ತಯಾರಿಸಬಹುದಾಗಿದೆ. ಅದಕ್ಕೆ ಹೆಚ್ಚಿನ ಒತ್ತು ನಿಡುತ್ತೇನೆ. ಗುಡಿ ಕೈಗಾರಿಕೆಗಳ ಸ್ಥಾಪನೆ ಮಾಡುವ ಮೂಲಕ ಮನೆಯಲ್ಲಿಯೇ ಉದ್ಯೋಗದ ಅವಕಾಶ ಕಲ್ಪಿಸುವುದು. ಕೈಗಾರಿಕೆಗಳ ಬಾರದ್ದರಿಂದ ಇಲ್ಲಿನ ಯುವಕರು ಉದ್ಯೋಗ ಅರಸಿಕೊಂಡು ಬೇರೆ ಕಡೆಗೆ ಹೋಗಬೇಕಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ಮೂಲಕ ವಿದ್ಯಾವಂತ ಯುವಕರಿಗೆ ಉದ್ಯೋಗ ಕಲ್ಪಿಸುವುದು. ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗಬೇಕು. ಕೋಲ್ಡ್‌ ಸ್ಟೋರೇಜ್‌ ಹಾಗೂ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು. ರೈತರು ಉತ್ಪಾದಿಸಿದ ವಸ್ತುಗಳ ಮೌಲ್ಯವರ್ಧನೆಗೆ ಹೆಚ್ಚಿನ ಒತ್ತು ನೀಡುತ್ತೇನೆ.
ಕುಡಿಯುವ ನೀರು ರೋಗಗಳ ಮೂಲವಾಗಿದೆ. ಕುಡಿಯಲು ಶುದ್ಧ ನೀರು ಒದಗಿಸಲಾಗುವುದು. ಕೇಂದ್ರದ ಹೊಸ, ಹೊಸ ಯೋಜನೆಗಳನ್ನು ಜಿಲ್ಲೆಗೆ ತರುವ ಉದ್ದೇಶ ಹೊಂದಿದ್ದೇನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.