ADVERTISEMENT

ನುಡಿ ಬೆಳಗು: ಅತಿಯಾದ ಅವಲಂಬನೆ ಒಳ್ಳೆಯದಲ್ಲ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 1:11 IST
Last Updated 20 ಜೂನ್ 2025, 1:11 IST
<div class="paragraphs"><p>ದಯಾ ಗಂಗನಘಟ್ಟ</p></div>

ದಯಾ ಗಂಗನಘಟ್ಟ

   

ಒಬ್ಬ ರಾಜ ಅನಾರೋಗ್ಯದಿಂದ ಬಳಲುತ್ತಿದ್ದ. ರಾಜನನ್ನು ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನೂ ಮಾಡಲಾಯಿತು. ಆ ಎಲ್ಲಾ ಪ್ರಯತ್ನಗಳೂ ವಿಫಲವಾಗಿ ಅವನು ಕೊನೆಯುಸಿರೆಳೆಯುತ್ತಿದ್ದ. ರಾಣಿಯರು, ಮಕ್ಜಳು, ವೈದ್ಯರು ಮತ್ತು ಮಹಾಮಂತ್ರಿಯು ಅವನ ಆಸೆಯನ್ನು ತೊರೆದಿದ್ದರು. ಆಗ ಅಲ್ಲಿಗೆ ಒಬ್ಬ ಸನ್ಯಾಸಿ ಬಂದ. ರಾಜನನ್ನು ಹೇಗಾದರೂ ಮಾಡಿ ಉಳಿಸಿಕೊಡಿ ಎಂದು ಅವನನ್ನು ಎಲ್ಲರೂ ಬೇಡಿದರು. ಅವರ ದುಃಖ, ರಾಜನ ಮೇಲಿನ ಪ್ರೀತಿಯನ್ನು ಗಮನಿಸಿದ ಸನ್ಯಾಸಿ, ‘ಇದಕ್ಕೆ ಬಹು ಸುಲಭವಾದ ಉಪಾಯವಿದೆ. ರಾಜನ ಪ್ರಾಣಪಕ್ಷಿ ಈಗ ಹಾರಿಹೋಗಲಿ. ನಿಮ್ಮ ಅರಮನೆಯಲ್ಲಿ ಇರುವ ದೊಡ್ಡ ಉದ್ಯಾನವನದಲ್ಲಿ ಒಂದು ಮಾವಿನ ಮರವಿದೆ. ಅದರಲ್ಲಿ ಕಾಷ್ಠ ಕೀಟವೊಂದು ರೋಗದಿಂದ ಬಳಲುತ್ತಿದೆ. ರಾಜನಿಂದ ಹೊರ ಹೋಗುವ ಆತ್ಮ ಅದರಲ್ಲಿ ಹೋಗಿ ಸೇರಿಕೊಳ್ಳುತ್ತದೆ. ನೀವು ಆ ಕೀಟವನ್ನು ಹಿಡಿದು ಕೊಂದರೆ ಮತ್ತೆ ಆತ್ಮವು ಬಂದು ರಾಜನಿಗೆ ಸೇರಿ ಆತನ ಪುನರ್ಜನ್ಮ ಆಗುತ್ತದೆ’ ಎಂದ. ಆಗ ಎಲ್ಲರೂ ನಿರಾಳವಾಗಿ ರಾಜ ಸಾಯಲಿ ಎಂದುಕೊಂಡು ಕಾದು ಕುಳಿತರು.

ಈಗ ಯಾರಲ್ಲೂ ರಾಜ ಸಾಯುವ ಬಗ್ಗೆ ದುಗುಡ ಉಳಿಯಲಿಲ್ಲ. ರಾಜ ಬಹಳ ದಿನ ಸಾಯಲೇ ಇಲ್ಲ. ಈಗ ಎಲ್ಲರೂ ರಾಜ ಬೇಗ ಸಾಯಲಿ ಎಂದು ಪ್ರಾರ್ಥಿಸತೊಡಗಿದರು. ಒಂದು ವಾರದ ನಂತರ ರಾಜ ಮರಣ ಹೊಂದಿದ. ಮಂತ್ರಿಗಳು ಉದ್ಯಾನಕ್ಕೆ ಹೋಗಿ ಕೀಟವನ್ನು ಹಿಡಿಯಲು ತೊಡಗಿದರು‌. ಎಷ್ಟು ಪ್ರಯತ್ನಿಸಿದರೂ ಆ ಕೀಟ ಇವರಿಗೆ ಸಿಗಲಿಲ್ಲ. ಟೊಂಗೆಯಿಂದ  ಟೊಂಗೆಗೆ ಹಾರುತ್ತಿತ್ತು. ಬೇಸತ್ತ ಮಂತ್ರಿ ಮತ್ತಿತರರು ಸನ್ಯಾಸಿಯ ಬಳಿಗೆ ಬಂದು ದೂರಿದರು. ಅವರು ಯಾರಲ್ಲೂ ಈಗ ರಾಜ ಬದುಕಲೇ ಬೇಕು ಎಂಬ ತೀವ್ರ ಹಂಬಲ ಇರಲಿಲ್ಲ. ಇದನ್ನು ಗುರುತಿಸಿದ ಸನ್ಯಾಸಿ ನಗುತ್ತಾ, ‘ಜೀವನದ ಗತಿಯೆಂದರೆ ಇದೇ. ಜೀವವು ಇದ್ದಷ್ಟು ದಿನ ಆ ಶರೀರದ ಸ್ವತ್ತು ಅಷ್ಟೆ. ಅದು ರಾಜನಲ್ಲೇ ಇರಲಿ, ಉದ್ಯಾನದ ಕಾಷ್ಠ ಕೀಟದ ಶರೀರದಲ್ಲೇ ಇರಲಿ, ಅದಕ್ಕೆ ಅದರದೇ ರೂಪ ಬರುತ್ತದೆ. ನಮಗೆ ಅದನ್ನು ಹಿಡಿಯುವ ಮೋಹ ಬರುತ್ತದೆ. ಈ ಮೋಹ ಮಿಥ್ಯ. ಆದ್ದರಿಂದ ರಾಜನ ಶರೀರದ ಮೇಲಿನ ಮೋಹವನ್ನು ನೀವೂ ಬಿಟ್ಟು ಮುಂದಿನ ಕೆಲಸ ನೋಡಿ’ ಎನ್ನುತ್ತಾನೆ.

ADVERTISEMENT

ನಂಟು, ಸ್ನೇಹ, ಸಂಬಂಧಗಳೆಲ್ಲವೂ ಬದುಕಿಗೆ ಮುಖ್ಯ ನಿಜ. ಆದರೆ ಯಾವುದೇ ಸಂಬಂಧದ ಜೊತೆಯೂ ಅತಿಯಾದ ಅವಲಂಬನೆ ಒಳ್ಳೆಯದಲ್ಲ. ಸಂಬಂಧಗಳು ಬಹಳ ಬೇಗ ಶಿಥಿಲಗೊಳ್ಳುತ್ತಿರುವ ಈ ಕಾಲದಲ್ಲಿ ಅಂಟಿಯೂ ಅಂಟದ ಗೆರೆಯ ನಡುವೆಯೇ ಅವುಗಳನ್ನು ನಿಭಾಯಿಸುವುದು ಸೂಕ್ತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.