ADVERTISEMENT

ನುಡಿ ಬೆಳಗು: ಯೋಚಿಸಿದಂತೆ ಬದುಕು

ಪ್ರೊ. ಎಂ. ಕೃಷ್ಣೇಗೌಡ
Published 5 ಅಕ್ಟೋಬರ್ 2023, 23:30 IST
Last Updated 5 ಅಕ್ಟೋಬರ್ 2023, 23:30 IST
ನುಡಿ ಬೆಳಗು
ನುಡಿ ಬೆಳಗು   

ಅದೊಂದು ಬಿಲ್ಲು ವಿದ್ಯೆ ಕಲಿಸುವ ಶಾಲೆ. ಹಿಮಾಲಯ ತಪ್ಪಲಿನ ಕಾಡಿನ ಮಧ್ಯದಲ್ಲಿತ್ತು ಅದು. ಆ ಶಾಲೆಗೆ ತನ್ನ ಮಗನನ್ನು ಸೇರಿಸಲು ಹೋಗುತ್ತಿದ್ದ ರಾಮ್ ಪಾಲ್. ಶಾಲೆ ಸಮೀಪಿಸಿದಂತೆ ಅವನು ಒಂದು ವಿಶೇಷವನ್ನು ಗಮನಿಸಿದ.

ಸುತ್ತಮುತ್ತಲ ಮರಗಳ ಕಾಂಡದ ಮೇಲೆ ಒಂದೊಂದು ವೃತ್ತಾಕಾರದ ಗುರುತಿನ ಸರೀ ಮಧ್ಯಕ್ಕೆ ಬಾಣಗಳು ನಾಟಿದ್ದವು. ರಾಮ್ ಪಾಲ್ ಸರಿಯಾಗಿಯೇ ಊಹಿಸಿದ. ಈ ಪ್ರದೇಶದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಬಿಲ್ಲು ವಿದ್ಯಾಭ್ಯಾಸ ನಡೆಯುತ್ತದೆ.

ವಿದ್ಯಾರ್ಥಿಗಳು ಮರದ ಕಾಂಡಗಳಿಗೆ ಬಾಣ ಬಿಟ್ಟು ಆ ವೃತ್ತಾಕಾರದ ಗುರುತುಗಳ ಮಧ್ಯಕ್ಕೆ ಬಾಣಗಳನ್ನು ನಾಟಿದ್ದಾರೆ. ಆದರೆ ಅವನಿಗೆ ಅಚ್ಚರಿಯಾದುದೇನೆಂದರೆ ಎಲ್ಲ ಬಾಣಗಳೂ ಗುರಿಯ ಮಧ್ಯಕ್ಕೆ ಸರಿಯಾಗಿ ನಾಟಿವೆ. ಎಲಾ ಎಲಾ! ಎಷ್ಟು ಚಂದ ಬಿಲ್ಲು ವಿದ್ಯಾಭ್ಯಾಸ ನಡೆದಿದೆ ಇಲ್ಲಿ ಅಂದುಕೊಂಡ.

ADVERTISEMENT

ರಾಮ್ ಪಾಲ್ ತನ್ನ ಮಗನೊಂದಿಗೆ ಹೋಗಿ ಶಾಲೆಯ ಪ್ರಿನ್ಸಿಪಾಲರನ್ನು ಕಂಡ. ಪ್ರಿನ್ಸಿಪಾಲರು ಕೆಲವು ಪ್ರಶ್ನೆಗಳನ್ನು ಕೇಳಿ ವಿದ್ಯಾರ್ಥಿಯನ್ನು ಶಾಲೆಗೆ ಸೇರಿಸಿಕೊಳ್ಳಲು ಒಪ್ಪಿಕೊಂಡರು. ಆಗ ರಾಮ್ ಪಾಲ್ ತಾನು ಬರುವ ದಾರಿಯಲ್ಲಿ ಕಂಡ ವಿಶೇಷವನ್ನು ಹೇಳಿ ಪ್ರಿನ್ಸಿಪಾಲರನ್ನು ಕೇಳಿದ- ‘ಮರಗಳ ಕಾಂಡದ ಮೇಲೆ ಆ ವೃತ್ತಾಕಾರದ ಗುರುತುಗಳ ಮಧ್ಯಕ್ಕೆ ಸರಿಯಾಗಿ ನಿಮ್ಮ ವಿದ್ಯಾರ್ಥಿಗಳು ಬಾಣಗಳನ್ನು ನಾಟಿದ್ದಾರಲ್ಲ, ಅದು ಹೇಗೆ ಸಾಧ್ಯ? ಅವರಲ್ಲಿ ಯಾರೊಬ್ಬರೂ ಗುರಿ ತಪ್ಪುವುದೇ ಇಲ್ಲವೆ’.

ಪ್ರಿನ್ಸಿಪಾಲರು ನಕ್ಕು ಉತ್ತರಿಸಿದರು- ‘ಅದು ಹಾಗಲ್ಲ, ನಾವು ವಿದ್ಯಾರ್ಥಿಗಳಿಗೆ ಮನಸೋ ಇಚ್ಛೆ ಬಾಣಪ್ರಯೋಗ ಮಾಡಲು ಹೇಳುತ್ತೇವೆ. ಅವರು ಬಾಣ ಪ್ರಯೋಗ ಮಾಡಿದ ಮೇಲೆ ಬಾಣಗಳು ಎಲ್ಲೆಲ್ಲಿ ನಾಟಿವೆಯೋ ಅದರ ಸುತ್ತಾ ವೃತ್ತಾಕಾರದ ಗುರುತುಗಳನ್ನು ಹಾಕುತ್ತೇವೆ. ಎಷ್ಟೋ ಬಾಣಗಳು ಮರದ ಕಾಂಡಗಳಿಗೆ ತಾಕದೇ ಎಲ್ಲೆಲ್ಲೋ ಬಿದ್ದುಹೋಗುತ್ತವೆ. ಅಂಥವನ್ನು ಅಲ್ಲಿಂದ ಎತ್ತಿಕೊಂಡು ಬಂದುಬಿಡುತ್ತೇವೆ, ಅಷ್ಟೆ’

ರಾಮ್ ಪಾಲ್‌ಗೆ ಬೇಸರವಾಯಿತು. ‘ಹೀಗೆ ಮಾಡುವುದು ಸರಿಯಾ ನೀವು’ ಅಂತ ಪ್ರಿನ್ಸಿಪಾಲರನ್ನು ಕೇಳಿದ. ಅದಕ್ಕೆ ಅವರು ಹೇಳಿದರು- ‘ನಮ್ಮ ಬದುಕಿನಲ್ಲೂ ಬಹಳ ಸಲ ಹೀಗೇ ಆಗುತ್ತದೆ ಅಲ್ಲವಾ? ನಾವು ಸರಿಯಾದ ಗುರಿ ತಲುಪದೆ ಹೋದಾಗ ತಲುಪಿದ್ದನ್ನೇ ಗುರಿ ಎಂದುಕೊಳ್ಳುತ್ತೇವೆ. ಸರಿಯಾದುದನ್ನು ಮಾಡಲಾಗದೆ ಹೋದಾಗ ನಾವು ಮಾಡಿದ್ದನ್ನೇ ಸರಿ ಎನ್ನುತ್ತೇವೆ. ಹೌದು ತಾನೆ?’

ಯಾರೋ ಒಬ್ಬ ಜ್ಞಾನಿ ಹೇಳಿದ ಮಾತು ನೆನಪಾಗುತ್ತಿದೆ- ‘ನಾವು ಆಲೋಚಿಸಿದಂತೆ ಬದುಕಬೇಕು. ಇಲ್ಲವಾದರೆ ಕ್ರಮೇಣ ನಾವು ಬದುಕಿದಂತೆಯೇ ಆಲೋಚಿಸುವುದಕ್ಕೆ ಶುರುಮಾಡುಬಿಡುತ್ತೇವೆ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.