ADVERTISEMENT

ಇಂಟರ್‌ನೆಟ್‌ಗೆ ಕನ್ನ ಕೊರೆಯುವ ಖದೀಮರು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 19:30 IST
Last Updated 19 ಫೆಬ್ರುವರಿ 2012, 19:30 IST

ಕೆನೆಟ್ ಜಿ ಲಿಬರ್ತಲ್ ಅವರು ಅಮೆರಿಕದ ಬ್ರೂಕಿಂಗ್ಸ್ ಸಂಸ್ಥೆಯಲ್ಲಿ (ಲಾಭರಹಿತ ಉದ್ದೇಶದ ಸಾರ್ವಜನಿಕ ನೀತಿ ನಿರೂಪಣಾ ಸಲಹಾ ಸಂಸ್ಥೆ) ಚೀನಾಕ್ಕೆ ಸಂಬಂಧಪಟ್ಟ ವಿಷಯದ ತಜ್ಞ. ಇವರದೊಂದು ಪರಿಪಾಠ ಇದೆ.
 
ಕಾರ್ಯ ನಿಮಿತ್ತ ಚೀನಾಕ್ಕೆ ಹೋಗುವಾಗ ತಮ್ಮ ಮೊಬೈಲ್, ಲ್ಯಾಪ್‌ಟಾಪ್‌ಗಳನ್ನು ವಾಷಿಂಗ್ಟನ್‌ನ ಮನೆಯಲ್ಲೇ ಇಡುತ್ತಾರೆ. ಬದಲಾಗಿ ಎರವಲು ಅಥವಾ ಬಾಡಿಗೆ `ಫೋನ್, ಲ್ಯಾಪ್‌ಟಾಪ್~ ಪಡೆದು ಅದರಲ್ಲಿನ ಎಲ್ಲ ಮಾಹಿತಿ, ಡಾಟಾಗಳನ್ನು ಸಂಪೂರ್ಣ ಅಳಿಸಿ ಚೀನಾಕ್ಕೆ ಒಯ್ಯುತ್ತಾರೆ.

ಅಲ್ಲಿಂದ ಮರಳಿ ಬರುತ್ತಿದ್ದಂತೆ ಮತ್ತೆ ಅದರಲ್ಲಿನ ಡಾಟಾಗಳನ್ನು ಒಂದು ಚೂರೂ ಬಿಡದೆ ಅಳಿಸಿ ಹಾಕುತ್ತಾರೆ. ಇದನ್ನು ಕೇಳಿದಾಗ ಇಂಗ್ಲಿಷ್ ಪತ್ತೇದಾರಿ ಸಿನಿಮಾದ ನೆನಪಾಗುತ್ತದೆ, ಅಲ್ಲವೇ?

ಚೀನಾದಲ್ಲಿ ಇದ್ದಾಗಲೂ ಅಷ್ಟೇ. ಈ ಎರವಲು ಸಾಧನಗಳ ಬ್ಲೂಟೂತ್, ವೈ ಫೈ ಸಂಪರ್ಕವನ್ನು ತೆಗೆದು ಹಾಕುತ್ತಾರೆ. ಮೊಬೈಲನ್ನು ಅರೆಕ್ಷಣವೂ ಎಲ್ಲಿಯೂ ಕೈಬಿಡುವುದಿಲ್ಲ, ಸಮಾಲೋಚನಾ ಸಭೆಯಲ್ಲಿ ಭಾಗವಹಿಸುವಾಗ ಮೊಬೈಲ್ ನಿಷ್ಕ್ರಿಯಗೊಳಿಸುತ್ತಾರೆ (ಸ್ವಿಚ್ ಆಫ್); ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅದರ ಬ್ಯಾಟರಿಯನ್ನೂ ಹೊರ ತೆಗೆದಿಡುತ್ತಾರೆ.

ಸ್ವಿಚ್ ಆಫ್ ಮಾಡಿದ್ದರೂ ಬ್ಯಾಟರಿ ಅದರಲ್ಲಿಯೇ ಇದ್ದರೆ ಬಾಹ್ಯ ಸಂಜ್ಞೆಗಳ ಮೂಲಕ ರಹಸ್ಯವಾಗಿ ಈ ಮೊಬೈಲ್‌ನ ಮೈಕ್ರೋಫೋನ್ ಚಾಲು ಮಾಡಿ, ಇವರ ಮಾತುಕತೆಗಳನ್ನು ಕದ್ದು ಕೇಳಲು ಸಾಧ್ಯ ಎಂಬುದೇ ಈ ಅಸಾಧಾರಣ ಮುನ್ನೆಚ್ಚರಿಕೆಗೆ ಕಾರಣ.

ಇಷ್ಟೇ ಅಲ್ಲ. ಲ್ಯಾಪ್‌ಟಾಪ್ ಬಳಸುವಾಗ ಎನ್‌ಕ್ರಿಪ್ಟೆಡ್ (ಕಂಪ್ಯೂಟರ್ ಗೂಢಲಿಪಿ) ಪಾಸ್‌ವರ್ಡ್ ಇರುವ ಇಂಟರ್‌ನೆಟ್ ಜಾಲಕ್ಕೆ ಮಾತ್ರ ಸಂಪರ್ಕ ಜೋಡಿಸಿಕೊಳ್ಳುತ್ತಾರೆ.

ಯುಎಸ್‌ಬಿಯಲ್ಲಿ ಸಂಗ್ರಹಿಸಿದ ತಮ್ಮ ಬೆರಳಚ್ಚಿನ ಪಾಸ್‌ವರ್ಡ್‌ನ (ಗೂಢ ಸಂಕೇತಾಕ್ಷರ) ಪ್ರತಿ ಮಾಡಿ ಅದನ್ನು ಅಂಟಿಸಿ ಸಂಪರ್ಕ ಸಾಧಿಸುತ್ತಾರೆ. ಅಪ್ಪಿತಪ್ಪಿಯೂ ಪಾಸ್‌ವರ್ಡನ್ನು ಕೈಯಿಂದ ಟೈಪ್ ಮಾಡುವುದಿಲ್ಲ.

`ಎಲ್ಲ ದೂರದಿಂದ ಇಂಟರ್‌ನೆಟ್ ಮೂಲಕವೇ ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಕಿ ಲಾಗಿಂಗ್ (ನೀವು ಯಾವ ಅಕ್ಷರ ಒತ್ತಿದಿರಿ ಎಂಬುದರ ವಿವರವನ್ನು ಕಂಪ್ಯೂಟರ್ ಮಾಹಿತಿ ಕಳ್ಳನಿಗೆ ಅಂದರೆ ಕಂಪ್ಯೂಟರ್ ಹ್ಯಾಕರ್‌ಗೆ ರವಾನಿಸುವುದು) ಸಾಫ್ಟ್‌ವೇರ್ ಅಳವಡಿಸುವುದರಲ್ಲಿ ಚೀನಿಯರು ಪರಿಣಿತರು.
 
ಅದಕ್ಕಾಗಿ ಈ ಎಲ್ಲ ಕಸರತ್ತು~ ಎನ್ನುವುದು ಅವರ ವಿವರಣೆ.
ಇದೆಲ್ಲ ಓದಿದಾಗ, ಈ ಮನುಷ್ಯ ಯಾಕೆ ಹೀಗೆ ತಲೆಕೆಟ್ಟ ಸಂಶಯ ಪಿಶಾಚಿ ಥರ ವರ್ತಿಸುತ್ತಾರೆ ಅನ್ನಿಸಬಹುದು.

ಹೌದು! ಈಗ ರಷ್ಯಾ ಮತ್ತು ಚೀನಾದಲ್ಲಿ ವಹಿವಾಟು ನಡೆಸುವ ಗೂಗಲ್, ಆ್ಯಂಟಿವೈರಸ್‌ಗೆ ಹೆಸರಾದ ಮ್ಯಾಕ್‌ಫಿಯಂಥ ಕಂಪೆನಿ ಸಿಬ್ಬಂದಿಗಳು, ಈ ದೇಶಗಳಿಗೆ ಕಾರ್ಯ ನಿಮಿತ್ತ ಹೋಗುವ ಅಮೆರಿಕ ಸರ್ಕಾರದ ಮತ್ತು ಸಂಶೋಧನಾ ಸಂಸ್ಥೆಗಳ ಅಧಿಕಾರಿಗಳೆಲ್ಲ ಕೆನೆತ್ ಮಾಡಿದಂತೇ ಮಾಡುತ್ತಾರೆ. ಸಾಕಷ್ಟು ಮುಂಜಾಗ್ರತೆ ವಹಿಸುವ ಪರಿಪಾಠ ಇಟ್ಟುಕೊಂಡಿದ್ದಾರೆ.

ಏಕೆಂದರೆ ಸುರಕ್ಷತಾ ತಜ್ಞರು ಹೇಳುವ ಪ್ರಕಾರ, ಈ ಎರಡೂ ದೇಶಗಳಲ್ಲಿ `ಡಿಜಿಟಲ್ ಗೂಢಚರ್ಯೆ~ ಜಾಲ ದಿನದಿಂದ ದಿನಕ್ಕೆ ವಿಸ್ತರಿಸುತ್ತಿದ್ದು ನೈಜ ಸವಾಲು ಒಡ್ಡುತ್ತಿದೆ. ಇದರ ಹಿಂದೆ ಇರುವುದು ಸರ್ಕಾರಿ ಮಾಹಿತಿಗಳನ್ನು, ಕಂಪೆನಿಗಳ ವ್ಯಾಪಾರಿ ರಹಸ್ಯಗಳನ್ನು ಕದಿಯುವ ಮತ್ತು ಅದರ ಮೂಲಕ ಪ್ರತಿತಂತ್ರ ಹೆಣೆಯುವ ಉದ್ದೇಶ.

ಒಂದು ವೇಳೆ ಚೀನಾ, ರಷ್ಯಾಗಳಿಗೆ ಆಸಕ್ತಿ ಇರುವ ಉತ್ಪನ್ನ, ಬೌದ್ಧಿಕ ಹಕ್ಕುಸ್ವಾಮ್ಯದ ಕಂಪೆನಿಗಳ ವತಿಯಿಂದ ನೀವೇನಾದರೂ ಆ ದೇಶಗಳಿಗೆ ಹೋದರೆ ನಿಮಗೇ ಗೊತ್ತಿಲ್ಲದಂತೆ ನಿಮ್ಮ ಮೊಬೈಲ್‌ನ ಸಂಭಾಷಣೆ, ಮಾಹಿತಿಗಳಿಗೆ ಕನ್ನ ಹಾಕುವುದಂತೂ ಖಚಿತ ಎಂದು ಎಚ್ಚರಿಸುತ್ತಾರೆ ಅಮೆರಿಕದ ರಾಷ್ಟ್ರೀಯ ಬೇಹುಗಾರಿಕೆ ದಳದ ನಿರ್ದೇಶಕರ ಕಚೇರಿಯ ಮಾಜಿ ಪ್ರತಿ-ಬೇಹುಗಾರಿಕೆ ಅಧಿಕಾರಿ ಜೋಲ್ ಬ್ರೆನ್ನರ್.

ಆಗ- ಈಗ: ಒಂದು ಕಂಪೆನಿಯ ವ್ಯಾಪಾರಿ ರಹಸ್ಯಗಳನ್ನು ಕದಿಯುವುದು ಹೊಸದೇನಲ್ಲ; ಹಿಂದೆಯೂ ಇತ್ತು. ಆದರೆ ಆಗೆಲ್ಲ, ಅದೇ ಕಂಪೆನಿಯ ಅತೃಪ್ತ ಉದ್ಯೋಗಿಗಳು, ಎದುರಾಳಿ ಕಂಪೆನಿ ಗೂಢಚಾರಿಗಳು ಇಂಥ ಕೆಲಸಕ್ಕೆ ಇಳಿಯುತ್ತಿದ್ದರು.
 
ಆದರೆ ಈಗ ದೂರದಲ್ಲೆಲ್ಲೋ ಕುಳಿತು ಕದಿಯುವುದು ಇನ್ನೂ ಸುಲಭವಾಗಿದೆ. ಇದಕ್ಕೆ ಇಂಟರ್‌ನೆಟ್, ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಿರುವುದು, ಸ್ವಂತ ಸಾಧನಗಳನ್ನು ಕಂಪೆನಿಯ ನೆಟ್‌ವರ್ಕ್‌ಗಳಿಗೆ ಜೋಡಿಸಿ ಮಾಹಿತಿ ವಿನಿಮಯ ಮಾಡಿಕೊಳ್ಳುವ ಸಿಬ್ಬಂದಿಗಳ ಚಾಳಿ ಮುಖ್ಯ ಕಾರಣ.

ಇದನ್ನೇ ಬಳಸಿಕೊಳ್ಳುವ ಕಂಪ್ಯೂಟರ್ ಮಾಹಿತಿ ಕಳ್ಳರು ಯಾವುದೇ ಸುಳಿವನ್ನು ಲವಲೇಶವೂ ಬಿಡದೆ ಸಾಮಾನ್ಯವಾಗಿ ಕಂಪೆನಿ ನೌಕರರ ಸಾಧನಗಳು, ನೆಟ್‌ವರ್ಕ್‌ಗಳಿಗೇ ಕನ್ನ ಹಾಕಿ ಅಮೂಲ್ಯ ದಾಖಲೆಗಳನ್ನು ಕದಿಯುತ್ತಾರೆ.

ಬಹುತೇಕ ಸಂದರ್ಭಗಳಲ್ಲಿ ಇದು ಬೆಳಕಿಗೂ ಬರುವುದಿಲ್ಲ, ನೌಕರರಿಗಂತೂ ಗೊತ್ತೇ ಆಗುವುದಿಲ್ಲ. ಇನ್ನು ಕಂಪೆನಿಗಳ ಮಟ್ಟದಲ್ಲಿ ಗೊತ್ತಾದರೂ ತಮ್ಮ ಷೇರು ಬೆಲೆ ಕುಸಿದೀತು ಎಂದು ಅವು ಬಾಯಿಯನ್ನೇ ಬಿಡುವುದಿಲ್ಲ.

ಆದರೆ 2010ರಲ್ಲಿ ಅಮೆರಿಕದ ವಾಣಿಜ್ಯೋದ್ಯಮ ಮಂಡಳಿಗೆ ಸಂಬಂಧಿಸಿದಂತೆ ನಡೆದ ವಿದ್ಯಮಾನವೊಂದು ಇದರ ಗಂಭೀರತೆ, ಅನಾಹುತಗಳ ಮೇಲೆ ಬೆಳಕು ಚೆಲ್ಲುತ್ತದೆ. ಅದರ ನಾಲ್ವರು ಏಷ್ಯಾ ನೀತಿ ತಜ್ಞರ ಕಂಪ್ಯೂಟರ್, ಮೊಬೈಲ್‌ನ ಮಾಹಿತಿಗಳನ್ನು ದೂರದ ಚೀನಾದಲ್ಲಿನ ಕಂಪ್ಯೂಟರ್ ಸರ್ವರ್ ಒಂದರ ಮೂಲಕ ಕದಿಯಲಾಗುತ್ತಿತ್ತು.
 
ಇವರೆಲ್ಲ ಒಂದಲ್ಲ ಒಂದು ಸಲ ಚೀನಾಕ್ಕೆ ಹೋಗಿ ಬಂದಿದ್ದರು. ಈ ರೀತಿ ಕದಿಯುವ ಕೆಲಸ ಒಂದು ತಿಂಗಳಿಂದಲೂ ನಡೆಯುತ್ತಿದೆ ಎಂದು ಅಮೆರಿಕದ ಬೇಹುಗಾರಿಕೆ ದಳ `ಎಫ್‌ಬಿಐ~ ಹೇಳಿದಾಗ ಮಂಡಳಿ ಬೆಚ್ಚಿ ಬಿತ್ತು.
 
ತನ್ನೆಲ್ಲ ನೆಟ್‌ವರ್ಕ್‌ಗಳನ್ನು ಅದು ಭದ್ರಪಡಿಸಿಕೊಳ್ಳುವ ಹೊತ್ತಿಗೆ ಇನ್ನೆರಡು ವಾರ ಕಳೆದಿತ್ತು. ಅಷ್ಟರಲ್ಲಿ ಚೀನಾದ ಕಂಪ್ಯೂಟರ್ ಕನ್ನಗಳ್ಳರು ವಾಣಿಜ್ಯ ಮಂಡಳಿಯ ಪ್ರಮುಖ ಸದಸ್ಯ ಕಂಪೆನಿಗಳ ಆರು ವಾರಗಳ ಇ ಮೇಲ್ ಮಾಹಿತಿಗಳನ್ನೆಲ್ಲ ಕದ್ದು ಮುಗಿಸಿದ್ದರು (ಇದರಲ್ಲಿ ಅನೇಕವು ಅಮೆರಿಕದ ಅತ್ಯಂತ ಪ್ರತಿಷ್ಠಿತ, ಪ್ರಮುಖ ಕಂಪೆನಿಗಳು).

ಇಷ್ಟೆಲ್ಲ ಬಂದೋಬಸ್ತ್ ಮಾಡಿದ ನಂತರವೂ ಅದರ ಕೇಂದ್ರ ಕಚೇರಿಯಲ್ಲಿನ ಒಂದು ಪ್ರಿಂಟರ್ ಮತ್ತು ಕಾರ್ಪೊರೇಟ್ ಅಪಾರ್ಟ್‌ಮೆಂಟ್‌ನ ಥರ್ಮೋಸ್ಟಾಟ್‌ಗೆ ಚೀನಾದ ಇಂಟರ್‌ನೆಟ್ ವಿಳಾಸವೊಂದರ ಸಂಪರ್ಕ ಮುಂದುವರಿದೇ ಇತ್ತು.

ಮೊದಲ ಹೆಜ್ಜೆ: ಕಂಪ್ಯೂಟರ್ ಕನ್ನಗಳ್ಳರು ಹೇಗೆ ಕನ್ನ ಹಾಕಿದರು ಎಂಬುದನ್ನು ಮಂಡಳಿ ಬಹಿರಂಗಪಡಿಸಲು ಹೋಗಲಿಲ್ಲ. ಆದರೆ ಚೀನಾ ಸೇರಿ ಕೆಲ ದೇಶಗಳಿಗೆ ಮೊಬೈಲ್, ಲ್ಯಾಪ್‌ಟಾಪ್ ಒಯ್ಯದಂತೆ ಸಿಬ್ಬಂದಿಗೆ ಸೂಚಿಸಿತು.

ಚೀನಾಕ್ಕೆ ನೀವು ಯಾವುದೇ ಸಂಪರ್ಕ ಸಾಧನ ಒಯ್ಯರೆ ಅದರಲ್ಲಿನ ಮಾಹಿತಿಗೆ ಕನ್ನ ಬಿದ್ದಿರುವುದು ಖಂಡಿತ. ಹೀಗಾಗಿ 21ನೇ ಶತಮಾನದಲ್ಲಿ ಆ ದೇಶದಲ್ಲಿ ನೀವು ವಹಿವಾಟು ನಡೆಸುವವರಾದರೆ ನಿಮ್ಮ ಯಾವುದೇ ಸಾಧನಗಳನ್ನೂ ಅಲ್ಲಿ ಒಯ್ಯಬಾರದು ಎಂಬುದು ಈಗ ಎಲ್ಲರಿಗೂ ಗೊತ್ತಾಗಿದೆ ಎಂದು ಹೇಳುತ್ತಾರೆ ಗುಡ್ ಹಾರ್ಬರ್ ಸಂಸ್ಥೆಯ ಸೈಬರ್ ಸುರಕ್ಷತಾ ಪರಿಣಿತ ಜಾಕೋಬ್ ಒಲ್ಕೋಟ್.

ಈ ಬಗ್ಗೆ ಪ್ರತಿಕ್ರಿಯಿಸಲು ವಾಷಿಂಗ್ಟನ್‌ನಲ್ಲಿನ ಚೀನಾ ಮತ್ತು ರಷ್ಯಾ ರಾಯಭಾರ ಕಚೇರಿಗಳು ತಯಾರಿಲ್ಲ.
 
ಆದರೆ ಚೀನಾ ಕಡೆಯಿಂದ ಯಾರೋ ತನ್ನ ಕಂಪ್ಯೂಟರ್ ವ್ಯವಸ್ಥೆಯೊಳಗೆ ನುಸುಳಿ ಕಿತಾಪತಿ ಮಾಡಿದ್ದಾರೆ ಎಂದು 2010ರಲ್ಲಿ ಗೂಗಲ್ ಆರೋಪಿಸಿದಾಗ `ನಮ್ಮ ನೆಲದಲ್ಲಿ ವಹಿವಾಟು ನಡೆಸುವ ವಿದೇಶಿ ಕಂಪೆನಿಗಳ ನ್ಯಾಯಬದ್ಧ ಹಿತಾಸಕ್ತಿ ರಕ್ಷಣೆಗೆ ನಾವು~ ಬದ್ಧ ಎಂದು ಚೀನಾ ಸರ್ಕಾರದ ವಕ್ತಾರರು ಹೇಳಿ ತಿಪ್ಪೆಸಾರಿಸುವ ಪ್ರಯತ್ನ ನಡೆಸಿದ್ದರು.

ಆದರೆ, ಈಗಲೂ ಕಾರ್ಪೊರೇಟ್ ಕಂಪ್ಯೂಟರ್ ನೆಟ್‌ವರ್ಕ್‌ಗಳಿಗೆ ಚೀನಾ, ರಷ್ಯಾದಲ್ಲಿ ಮೊಬೈಲ್ ಅಥವಾ ಇತರ ಸಾಧನಗಳ ಮೂಲಕ ಕನ್ನ ಹಾಕುವುದು ಮುಂದುವರಿದಿದ್ದು, ಇದು ಆತಂಕ ಹೆಚ್ಚಿಸುತ್ತಲೇ ಇದೆ ಎಂದು ಅಮೆರಿಕ ಸರ್ಕಾರದ ಅಧಿಕಾರಿಗಳು, ಸುರಕ್ಷತಾ ಪರಿಣಿತರು ಹೇಳುತ್ತಾರೆ.

ಕಳೆದ ವಾರ ಅಮೆರಿಕ ಸೆನೆಟ್‌ನ ಬೇಹುಗಾರಿಕೆ ಉಪ ಸಮಿತಿ ಮುಂದೆ ಹಾಜರಾಗಿದ್ದ ರಾಷ್ಟ್ರೀಯ ಬೇಹುಗಾರಿಕೆ ವಿಭಾಗದ ನಿರ್ದೇಶಕ ಜೇಮ್ಸ ಬಿ ಕ್ಲಾಪರ್, ರಷ್ಯಾ ಮತ್ತು ಚೀನಾದಲ್ಲಿ ವ್ಯಾಪಾರಿ ರಹಸ್ಯಗಳನ್ನು ಕದಿಯುವ ಪ್ರವೃತ್ತಿ ಹೆಚ್ಚಿದೆ ಎಂದು ಎಚ್ಚರಿಸಿದ್ದರು.

ಸರ್ಕಾರ, ಕಾಂಗ್ರೆಸ್, ರಕ್ಷಣೆ ಮತ್ತು ಬಾಹ್ಯಾಕಾಶ ಇಲಾಖೆ, ಅಮೂಲ್ಯ ವ್ಯಾಪಾರಿ ರಹಸ್ಯಗಳ ಕಂಪೆನಿಗಳ ಕಂಪ್ಯೂಟರ್‌ಗಳಿಗೆ ಬೆದರಿಕೆ ತಪ್ಪಿಲ್ಲ ಎಂದು ರಾಷ್ಟ್ರೀಯ ಬೇಹುಗಾರಿಕೆ ವಿಭಾಗದ ಮಾಜಿ ನಿರ್ದೇಶಕ ಮೈಕ್ ಮ್ಯಾಕೊನೆಲ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ರಷ್ಯಾ ಮತ್ತು ಚೀನಾಕ್ಕೆ ತೆರಳುವ ಪ್ರವಾಸಿಗರು ಕೂಡ ಗುಪ್ತ ಸಂಕೇತಾಕ್ಷರ (ಎನ್‌ಕ್ರಿಪ್ಟೆಡ್) ಬಳಸುವ ಸಾಧನಗಳನ್ನು ಆಯಾ ಸರ್ಕಾರದ ಅನುಮತಿ ಇಲ್ಲದೆ ಒಯ್ಯುವಂತಿಲ್ಲ. ಎರಡೂ ಸರ್ಕಾರಗಳು ಅಂಥದ್ದೊಂದು ನಿರ್ಬಂಧ ಹೇರಿವೆ.
 
ಈ ದೇಶಗಳ ಅಧಿಕಾರಿಗಳು ಅಮೆರಿಕಕ್ಕೆ ಭೇಟಿ ಕೊಟ್ಟಾಗ ತಮ್ಮ ಸಂಚಾರಿ ಸಂಪರ್ಕ ಸಾಧನಗಳ ಮಾಹಿತಿಗೆ ಕನ್ನ ಬೀಳದಂತೆ ದುಪ್ಪಟ್ಟು ಮುನ್ನೆಚ್ಚರಿಕೆ ವಹಿಸುತ್ತಾರೆ.

ಈಗ ಅಮೆರಿಕ ಸರ್ಕಾರ, ಕಂಪೆನಿಗಳು ಕೂಡ ಚೀನಾಕ್ಕೆ ಹೋಗುವಾಗ ಸ್ವಂತದ ಮೊಬೈಲ್, ಲ್ಯಾಪ್‌ಟಾಪ್ ಒಯ್ಯಬಾರದು ಎಂದು ತಮ್ಮ ಸಿಬ್ಬಂದಿ ಮೇಲೆ  ನಿರ್ಬಂಧ ಹೇರುತ್ತಿವೆ.
 
`ದಾಖಲೆಗಳನ್ನು ಅಳಿಸಿ ಸ್ವಚ್ಛವಾಗಿರುವ ಸಾಧನಗಳನ್ನು ಮಾತ್ರ ಚೀನಾಕ್ಕೆ ಒಯ್ಯಬಹುದು, ಆದರೂ ಅಲ್ಲಿಂದ ಯಾವುದೇ ಕಾರಣಕ್ಕೂ ಸರ್ಕಾರಿ ಕಂಪ್ಯೂಟರ್ ಜಾಲವನ್ನು (ನೆಟ್‌ವರ್ಕ್) ಸಂಪರ್ಕಿಸಬಾರದು~ ಅಮೆರಿಕ ಸೆನೆಟ್‌ನ ಬೇಹುಗಾರಿಕೆ ಸಮಿತಿ ಅಧ್ಯಕ್ಷ ಮೈಕ್ ರೋಜರ್ ಅವರು ಸಮಿತಿಯ ಎಲ್ಲ ಸದಸ್ಯರಿಗೆ ಕಟ್ಟುನಿಟ್ಟು ನಿರ್ದೇಶನ ಕೊಟ್ಟಿದ್ದಾರೆ. `ನಾನಂತೂ ಎಲೆಕ್ಟ್ರಾನಿಕ ಸಾಧನಗಳನ್ನು ಅಲ್ಲಿ ಒಯ್ಯುತ್ತಲೇ ಇಲ್ಲ.
ಇದೊಂದು ರೀತಿ ಎಲೆಕ್ಟ್ರಾನಿಕ್ ನಗ್ನತೆ~ ಎಂದು ಹೇಳುತ್ತಾರೆ.

ವ್ಯಾಪಾರಿ ರಹಸ್ಯಗಳನ್ನು ಕಂಪ್ಯೂಟರ್, ಇಂಟರ್‌ನೆಟ್ ಮೂಲಕ ಕದಿಯುವುದರ ವಿರುದ್ಧ ಕಾನೂನು ರೂಪಿಸಲು ಅಮೆರಿಕದ ಶಾಸನಸಭೆ ಆಲೋಚಿಸುತ್ತಿದೆ.

ಆದರೆ ಇದು ವ್ಯಾಪಾರೋದ್ದೇಶದಿಂದ ವಿದೇಶಕ್ಕೆ ಹೋದಾಗ ಆಗುತ್ತಿರುವ ಸಮಸ್ಯೆ ಪರಿಹರಿಸುವುದೋ ಇಲ್ಲವೋ ತಿಳಿಯದು. ಇದರ ನಡುವೆಯೇ ಅನೇಕ ಕಂಪೆನಿಗಳು ಮುಂದಿನ ಪರಿಣಾಮಗಳ ಪರಿವೆಯೇ ಇಲ್ಲದೆ ತಮ್ಮ ಮಹತ್ವದ ಮಾಹಿತಿ ಸೋರಿಕೆಯಾಗಲು ಬಿಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.