ADVERTISEMENT

ಈಗ ಜೈಲಲ್ಲಿರುವವರು ಬರಿ ಸ್ಯಾಂಪಲ್‌ಗಳಷ್ಟೇ...

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 19:30 IST
Last Updated 19 ಅಕ್ಟೋಬರ್ 2011, 19:30 IST

ರಾಜ್ಯದ ಮಾಜಿ ಮುಖ್ಯಮಂತ್ರಿಯವರು ಭ್ರಷ್ಟಾಚಾರದ ಆರೋಪಕ್ಕೆ ಸಿಲುಕಿ ಪರಪ್ಪನ ಅಗ್ರಹಾರದ ಜೈಲು ಸೇರಿದ್ದಾರೆ. ಅವರ ಜೊತೆ ಮತ್ತೊಬ್ಬ ಮಾಜಿ ಸಚಿವರೂ ಇದ್ದಾರೆ. ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಅತ್ಯಂತ ದಿಟ್ಟವಾಗಿ ಕೈಗೊಂಡ  ಕ್ರಮದ  ಬಗ್ಗೆ ಜನಸಾಮಾನ್ಯರು ಹೆಮ್ಮೆಯಿಂದ ಮಾತಾಡುತ್ತಿದ್ದಾರೆ.

ಮಾಜಿ ಸಚಿವರೂ ಆಗಿರುವ ಮತ್ತೊಬ್ಬ ಆರೋಪಿ ಶಾಸಕರು ನ್ಯಾಯಾಲಯದಲ್ಲಿಯೇ ತಮ್ಮ ಅನಾರೋಗ್ಯದ ಬಗ್ಗೆ ಯಡವಟ್ಟನ್ನು ಪ್ರದರ್ಶಿಸಿದರೂ, ನ್ಯಾಯಾಧೀಶರು ಯಾವುದೇ ಆತಂಕಕ್ಕೆ ಒಳಗಾಗದೆ ಕಾನೂನಿನ ಬಗ್ಗೆ ವಿಶ್ವಾಸ ಮೂಡುವಂತೆ ಅಂದು ನೀಡಿದ ಆದೇಶ ಮೆಚ್ಚುವಂತಹದ್ದು. ಹಣ, ಅಧಿಕಾರ, ವಂದಿ ಮಾಗಧರ ತಂಡ, ಬಹುಪರಾಕ್ ಇವು ಯಾವುವೂ ನಮ್ಮನ್ನು ಕಾನೂನಿನ ಕಣ್ಣಿನಿಂದ ಬಚಾವ್ ಮಾಡುವುದಿಲ್ಲ ಎನ್ನುವುದಕ್ಕೆ ಮಾಜಿ ಮುಖ್ಯಮಂತ್ರಿಯವರ ಜೈಲು ಪ್ರಸಂಗ ಒಂದು ಅತ್ಯುತ್ತಮ ನಿದರ್ಶನವಾಗಿ ದಾಖಲಾಗಿದೆ.

ವಿಧಾನಸೌಧದ ಎದುರು ಪ್ರಮಾಣವಚನ ಸ್ವೀಕರಿಸಿದ ನಂತರದ ದಿನದಿಂದಲೇ ಸುಳ್ಳು ಭರವಸೆಗಳನ್ನು ನೀಡುತ್ತಾ, ರಾಜ್ಯದ ಸಂಪತ್ತನ್ನು ಲೂಟಿ ಮಾಡುತ್ತಾ ಸಂವಿಧಾನವನ್ನು ಅಣಕಿಸುವಂತೆ ಸಾಗುವುದೇ ರಾಜಕಾರಣ ಎಂದು ಬಗೆದಿರುವ ಅದಷ್ಟೋ ನಾಯಕರುಗಳಿಗೆ ಈ ಪ್ರಕರಣ ಎಚ್ಚರಿಕೆಯ ಗಂಟೆ. ಈಗ ಜೈಲಲ್ಲಿರುವವರು ಬರೀ  ಸ್ಯಾಂಪಲ್‌ಗಳಷ್ಟೇ..!

ವಾಸ್ತವವಾಗಿ ಹಲವು ಸಚಿವರು, ಶಾಸಕರು ಜೈಲಿಗೆ ಹೋಗುವ ಎಲ್ಲ ಬಗೆಯ ಕ್ರಿಮಿನಲ್ ವ್ಯವಹಾರದಲ್ಲಿ ತೊಡಗಿರುವವರೇ ಇದ್ದಾರೆ. ಇಂಥ ಹಳವಂಡ ಮಾಡುವವರಿಂದಾಗಿಯೇ ಅನೇಕ ಪ್ರಾಮಾಣಿಕರು ರಾಜಕೀಯ ಪ್ರವೇಶಿಸಲು ಸಾಧ್ಯವಿಲ್ಲ ಎನ್ನುವಂತಹ ವಾತಾವರಣ ಸೃಷ್ಟಿಯಾಗಿದೆ. ಪ್ರಾಮಾಣಿಕರಿಗೆ ಯಾವ ರಾಜಕೀಯ ಪಕ್ಷವೂ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡುವುದಿಲ್ಲ. ಒಂದು ವೇಳೆ ಚುನಾವಣೆಗೆ ಸ್ಪರ್ಧಿಸಿದರೆ ರಾಜಕಾರಣಿಗಳು ಒಡ್ಡಿದ ಆಸೆ ಆಮಿಷಗಳಿಂದ ಪ್ರಭಾವಿತರಾಗಿರುವ ಜನರೂ ಇಂತಹವರನ್ನು ಆರಿಸುವುದಿಲ್ಲ. ಹಣ ಮತ್ತು ಜಾತಿ ಬಲದಿಂದ ಆಯ್ಕೆಯಾಗುವ ಈಗಿನ ಜನನಾಯಕರು ಒಂದೇ ಅವಧಿಗೆ ಶಾಸಕರಾದರೂ ಕೋಟಿಗಟ್ಟಲೆ ಹಣ, ಆಸ್ತಿಯನ್ನು ಕಮಾಯಿಸುವುದಿದೆ. ಅಣ್ಣಾ ಹಜಾರೆಯವರು ಪ್ರತಿಪಾದಿಸುತ್ತಿರುವ ಬಲಿಷ್ಠ ಜನಲೋಕಪಾಲ್ ಜಾರಿಯ ಹಿಂದಿರುವ ಒತ್ತಾಯ ಇಂಥವರನ್ನು ಹಿಡಿತದಲ್ಲಿಡುವುದೇ ಆಗಿದೆ.

ಹಿಂದೊಮ್ಮೆ ಇಂಡಿ ಕ್ಷೇತ್ರದ ಶಾಸಕರೊಬ್ಬರು ಜೈಲಿನಿಂದಲೇ ಆರಿಸಿ ಬಂದಿದ್ದರು. ಇಂತಹ ಪ್ರಕರಣ ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಸಾಮಾನ್ಯ. ಆದರೆ ಇಂಡಿ ಕ್ಷೇತ್ರದ ಆಗಿನ ಆ ಶಾಸಕರ ಜೈಲು ವಾಸಕ್ಕೆ ಕಾರಣ ಬೇರೆಯೇ ಆಗಿತ್ತು. ವಿಚಿತ್ರ ಎಂದರೆ  ಮಾಜಿ ಮುಖ್ಯಮಂತ್ರಿಗಳು `ಜೈಲಿನಿಂದಲೇ ನಾನು ರಾಜಕಾರಣ ಮಾಡುತ್ತೇನೆ~ ಎನ್ನುವ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ಪರಪ್ಪನ ಅಗ್ರಹಾರ ಪ್ರವೇಶ ಮಾಡಬೇಕಾದ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬಂದದ್ದು ವಿಪರ್ಯಾಸ.

ಪರಪ್ಪನ ಅಗ್ರಹಾರದ ಪರಿಸರವೇ ವಿಚಿತ್ರ..! ಅದು ಈ ಬಗೆಯ ಸಚಿವ, ಶಾಸಕರನ್ನು ದಕ್ಕಿಸಿಕೊಳ್ಳುವುದಿಲ್ಲ. ಅಲ್ಲಿಗೆ ಇಂಥಾ ರಾಜಕಾರಣಿಗಳು ತೆರಳಿದ ಕೂಡಲೇ ಎದೆ ನೋವು, ಮತ್ತೊಂದು, ಮಗದೊಂದು `ಕಾಯಿಲೆ~ಗಳು ಕಾಣಿಸಿಕೊಳ್ಳುತ್ತವೆ. ನಂತರ ಯಾವುದೋ ಒಂದು ಪ್ರತಿಷ್ಠಿತ ಆಸ್ಪತ್ರೆಯ ಕೊಠಡಿಯಲ್ಲಿ ವಾಸ್ತವ್ಯ. ಸಹಜವಾಗಿ ಈ ಬಗೆಯ ನ್ಯಾಯಾಂಗ ಬಂಧನ ಮಿಕ್ಕ ಎಲ್ಲ ಭ್ರಷ್ಟ ರಾಜಕಾರಣಿಗಳಿಗೊಂದು ಭಯ ಹುಟ್ಟಿಸುವಂತೆಯೇ, ಇನ್ನೊಂದು ಬದಿಗೆ ಹೀಗೆ ತರತರದ ಅನಾರೋಗ್ಯದ ಕಾರಣಗಳು, ನೋವುಗಳು  ಪರಪ್ಪನ ಅಗ್ರಹಾರದಿಂದ ಆಸ್ಪತ್ರೆಯ ಕೊಠಡಿಯನ್ನು ತಲುಪುವವರೆಗೂ ಸಹಕರಿಸುವುದು ಆ ಭಯವನ್ನು ಕೊಂಚ ಕಡಿಮೆ ಮಾಡಿದಂತಾಗುತ್ತದೆ.

  ರಾಜ್ಯದ ಜನನಾಯಕರೇ ಆಗಿರಲಿ, ಇಲ್ಲವೇ ಅಧಿಕಾರಿಗಳೇ ಆಗಿರಲಿ, ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿದರೆ ಲೋಕಾಯುಕ್ತ ನ್ಯಾಯಾಲಯ ಇಲ್ಲವೇ ಇತರೆ ನ್ಯಾಯಾಲಯಗಳು ಅವರನ್ನು ಪರಪ್ಪನ ಅಗ್ರಹಾರದ ಒಳಗೆ ಕಳುಹಿಸಲು ಆದೇಶ ನೀಡಿದರೆ ಅಣ್ಣಾ ಹಜಾರೆಯವರ ಜೊತೆಯಲ್ಲಿ ದೇಶದ ಜನತೆ ಭ್ರಷ್ಟಾಚಾರ ವಿರೋಧಿ ಆಂದೋಲನ ಕೈಗೊಂಡಿದ್ದು ಸಾರ್ಥಕವಾಗುತ್ತದೆ.

ಇಂಥ ಮಂತ್ರಿಗಳು, ಶಾಸಕರು, ನಟರು ಜೈಲಿಗೆ ಹೋಗುವ ಪರಿಣಾಮ ಸಣ್ಣ ಪುಟ್ಟ ಅಪರಾಧಗಳನ್ನು ಎಸಗುವ ಜನರನ್ನು ಹುರಿದುಂಬಿಸಿದಂತಾಗುವ ಅಪಾಯವೂ ಇದೆ. `ಅವರೇ ಹೋಗಿದ್ದಾರೆ, ಇನ್ನು ನಮ್ಮದೇನು..~ ಎನ್ನುವ ಸಮರ್ಥನಾ ವಾದ ಶುರುವಾಗಿ ಕ್ರಮೇಣ ಪರಪ್ಪನ ಅಗ್ರಹಾರದ ವರ್ಚಸ್ಸು ಒಂದು ಬಗೆಯ ಮೇಲ್ಮುಖವಾದ ಸಾಂಸ್ಕೃತಿಕ ಸಂಚಲನೆಗೆ ಎಡೆಮಾಡಿಕೊಡಬಹುದಾದ ಅಪಾಯಗಳೂ ಇವೆ.

ನಮ್ಮ ಜನನಾಯಕರು ಈಗಲಾದರೂ ಬದಲಾಗಬೇಕು. ಕಾಯ್ದೆ ಕಾನೂನನ್ನು ಎಷ್ಟು ದಿನ ಉಲ್ಲಂಘಿಸಲು ಸಾಧ್ಯ? ಕಾನೂನಿನ ಕೈಗಳು ಈಗ ಹಿಂದೆಂದಿಗಿಂತಲೂ ಬಿಗಿಯಾಗಿವೆ. ಜನ ನಿಮ್ಮನ್ನು ಆಯ್ಕೆ ಮಾಡಿ ಕಳುಹಿಸುವ ಉದ್ದೇಶ ಜನರ ಪರವಾಗಿ ಕಾರ್ಯ ನಿರ್ವಹಿಸಲೆಂದೇ ಹೊರತು, ಕೇವಲ ನೀವು, ನಿಮ್ಮ ಸಂಬಂಧಿಗಳು ಮಾತ್ರ ಬೆಳೆಯುವ ಮೂಲಕ ಬ್ರಹ್ಮಾಂಡ ಭ್ರಷ್ಟರಾಗುವುದಕ್ಕೆ ಅಲ್ಲ. ಇಲ್ಲಿ ಇಂಥ ಪಕ್ಷ ಅತ್ಯಂತ ಪ್ರಾಮಾಣಿಕವಾಗಿದೆ ಎಂದು ಹೇಳುವಂಥ ಧೈರ್ಯ ಈಗ ಯಾವ ಪ್ರಜೆಗಳಿಗೂ ಇಲ್ಲ. ಪ್ರಮಾಣದಲ್ಲಿ ವ್ಯತ್ಯಾಸಗಳಿರಬಹುದು ಅಷ್ಟೆ.

ರಾಜಕೀಯದಲ್ಲಿಯೂ ಒಂದು ಬಗೆಯ ತಾತ್ವಿಕತೆ, ಬದ್ಧತೆ, ಮೌಲ್ಯಗಳು ಬೇಕು. ಅವೆಲ್ಲವುಗಳನ್ನೂ ಗಾಳಿಗೆ ತೂರಿ ರಾಜ್ಯಾಡಳಿತ ನಡೆಸುವವರು ಯಾರೇ ಆಗಲಿ, ತಡವಾಗಿಯಾದರೂ ನೀರು ಕುಡಿಯಲೇಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.