ADVERTISEMENT

ಊರೊಟ್ಟಿನ ಕೆಲಸದ ನೆಪದಲ್ಲಿ ಮರಳಿನ ದಂಧೆ!

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2011, 19:30 IST
Last Updated 22 ಮಾರ್ಚ್ 2011, 19:30 IST

ಕಳೆದ ಬಾರಿ ಗ್ರಾಮ ಪಂಚಾಯ್ತಿ ಚುನಾವಣೆ ಸಂದರ್ಭದಲ್ಲಿ, ವಿಶೇಷವಾಗಿ  ಮೈಸೂರು ಭಾಗದಲ್ಲಿ ಕೆಲವು ಗ್ರಾಮಗಳ ಯಜಮಾನರೆಲ್ಲಾ ಸೇರಿ ಗ್ರಾಮ ಪಂಚಾಯ್ತಿ ಸದಸ್ಯತ್ವವನ್ನು  ಹರಾಜು ಹಾಕಿದರು. ಹೆಚ್ಚು ಹಣ ಕೊಟ್ಟವರು ಗ್ರಾಮ ಪಂಚಾಯ್ತಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದರು. ಹರಾಜಿನಲ್ಲಿ ಬಂದ ಹಣವನ್ನು ‘ಊರೊಟ್ಟಿನ ಕೆಲಸ’ಕ್ಕೆ ಬಳಸಿಕೊಳ್ಳಲಾಯಿತು.

ಊರೊಟ್ಟಿನ ಕೆಲಸ ಎಂದರೆ ಹೆಚ್ಚಿನ ಸಂದರ್ಭಗಳಲ್ಲಿ ದೇವಾಲಯಗಳ ಅಭಿವೃದ್ಧಿ ಮಾತ್ರ. ಶಾಲಾ ಕೊಠಡಿಗಳ ನಿರ್ಮಾಣ, ಶೌಚಾಲಯ ನಿರ್ಮಾಣ, ಚರಂಡಿ ಸ್ವಚ್ಛತೆ ಅಥವಾ ನಿರ್ಮಾಣ, ಆಸ್ಪತ್ರೆಗೆ ಈ ಹಣವನ್ನು ಬಳಸಿಕೊಂಡ ಪ್ರಕರಣಗಳು ನಡೆದಂತಿಲ್ಲ. ರಾಮ ರಾಜ್ಯ ಮಾಡಲು ಗ್ರಾಮ ರಾಜ್ಯದ ಕಲ್ಪನೆಯನ್ನು ನೀಡಿ ಪ್ರಜಾಪ್ರಭುತ್ವದ ಬೆನ್ನೆಲುಬಾಗಿ ಜಾರಿಗೆ ಬಂದ ಗ್ರಾಮ ಪಂಚಾಯ್ತಿಯಲ್ಲಿ ಈ  ಹರಾಜು ಪ್ರಕ್ರಿಯೆ ಪ್ರಜಾಪ್ರಭುತ್ವವನ್ನೇ ಅಣಕಿಸುವಂತೆ ಮಾಡಿತು. ಜನರೇ ಭ್ರಷ್ಟಾಚಾರ ವ್ಯವಸ್ಥೆಯನ್ನು ಒಪ್ಪಿಕೊಂಡದ್ದರಿಂದ ಇದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.

ಈಗ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನಲ್ಲಿ ಇನ್ನೂ ಆಘಾತಕರ ವಿದ್ಯಮಾನ ನಡೆಯುತ್ತಿದೆ. ಮರಳಿಗಾಗಿ ಜನರು ಮರುಳರಾಗಿದ್ದಾರೆ. ನರಸೀಪುರ ತಾಲ್ಲೂಕಿನಲ್ಲಿ ಕಪಿಲಾ ಮತ್ತು ಕಾವೇರಿ ನದಿಗಳು ಹರಿಯುತ್ತಿವೆ. ಈ ನದಿಗಳ ದಂಡೆಯಲ್ಲಿ ಅಕ್ರಮವಾಗಿ ಮರಳು ಎತ್ತುವುದು ಮತ್ತು ಸಾಗಣೆ ನಿರಾತಂಕವಾಗಿ, ನಿರಂತರವಾಗಿ ನಡೆಯುತ್ತಲೇ ಇದೆ. ಮಿತಿಗಿಂತ ಜಾಸ್ತಿ ಮರಳನ್ನು ತುಂಬಿಕೊಂಡ ಲಾರಿಗಳು ಸಂಚರಿಸಿ ರಸ್ತೆಗಳು ಹಾಳಾಗುತ್ತಿವೆ.

ಹರ್ಷ ಗುಪ್ತ ಮೈಸೂರು ಜಿಲ್ಲಾಧಿಕಾರಿಯಾಗಿಬಂದ ನಂತರ ಈ ಮರಳು ದಂಧೆಯ ವಿರುದ್ಧ ಸಮರವನ್ನೇ ಸಾರಿದರು. ದಿಢೀರ್ ದಾಳಿ ನಡೆಸಿ ಒಂದಿಷ್ಟು ಲಾರಿ, ಕೊಪ್ಪರಿಗೆಗಳನ್ನು ವಶಪಡಿಸಿಕೊಂಡರು. ಜಿಲ್ಲಾ ಉಸ್ತುವಾರಿ ಸಚಿವರೂ ಕೂಡ ಇಂತಹ ದಾಳಿ ನಡೆಸಿದರು. ಆದರೂ ಮರಳು ದಂಧೆ ಮಾತ್ರ ನಿಲ್ಲದೆ, ನಿರಂತರವಾಗಿ ನಡೆಯುತ್ತಲೇ ಇದೆ. ಇದಕ್ಕೆಲ್ಲಾ ಕಾರಣ: ಗ್ರಾಮಸ್ಥರ ಒಗ್ಗಟ್ಟು. ಊರಿಗೆ ಊರೇ ಅಕ್ರಮ ಮರಳು ಗಣಿಗಾರಿಕೆಗೆ ಬೆನ್ನೆಲುಬಾಗಿ ನಿಂತಿದೆ.

ನರಸೀಪುರ ತಾಲ್ಲೂಕಿನ ತಾಯೂರು ಮತ್ತು ಕುಪ್ಪೇಗಾಲ ನಡುವೆ ಕಪಿಲಾ ನದಿಗೆ ಸೇತುವೆ ನಿರ್ಮಾಣವಾಗಿದೆ. ಈ ಸೇತುವೆಯ ಬಳಿಯೇ ಅಕ್ರಮ ಮರಳುಗಾರಿಕೆ ನಡೆಯುತ್ತದೆ. ಕಪಿಲಾ ನದಿಯ ದಂಡೆಯ ಮೇಲೆ ಇರುವ ಬಹುತೇಕ ಗ್ರಾಮಗಳಲ್ಲಿ ಅಕ್ರಮ ಮರಳು ಗಣಿಗಾರಿಕೆಯನ್ನು ಗ್ರಾಮಸ್ಥರೇ ಹರಾಜು ಮಾಡುತ್ತಾರೆ.

ಗ್ರಾಮದ ಎಲ್ಲ ಜಾತಿಯ ಯಜಮಾನರು ಸೇರಿ ಸಭೆ ನಡೆಸಿ ಅಕ್ರಮ ಗಣಿಗಾರಿಕೆಗೆ ‘ಅನುಮತಿ’ ನೀಡುತ್ತಾರೆ. ಮರಳು ಗಣಿಗಾರಿಕೆಯ ಪರವಾನಗಿಯನ್ನು ಗಣಿ ಮತ್ತು ಭೂಗರ್ಭ ಇಲಾಖೆಯವರು ನೀಡಬೇಕು. ಗ್ರಾಮ ಪಂಚಾಯ್ತಿಗೆ ರಾಜಸ್ವ ನೀಡಬೇಕು. ಇದೆಲ್ಲಾ ಕಾನೂನು ಬದ್ಧವಾಗಿ ನಡೆಯುವ ಮರಳು ಗಣಿಗಾರಿಕೆಯ ಮಾತು. ಆದರೆ, ಈ ಗ್ರಾಮಗಳಲ್ಲಿ ನಡೆಯುವುದು ಮರಳು ಹರಾಜಲ್ಲ. ಅಕ್ರಮ ಮರಳು ಹರಾಜು.

ಅಕ್ರಮ ಮರಳು ಹರಾಜಿನಲ್ಲಿ ಬಂದ ಹಣವನ್ನು ‘ಊರೊಟ್ಟಿನ ಕೆಲಸ’ಕ್ಕೆ ಬಳಸಿಕೊಳ್ಳಲಾಗುತ್ತದೆ. ಒಂದೊಮ್ಮೆ ಊರೊಟ್ಟಿನ ಕೆಲಸಗಳು  ಯಾವುದೂ ಇಲ್ಲದಿದ್ದರೆ ಗ್ರಾಮದ ಪ್ರತಿಯೊಂದು ಮನೆಗೂ ಇಷ್ಟಿಷ್ಟು ಹಣ ಎಂದು ಹಂಚಲಾಗುತ್ತದೆ. ಈ ಬಾರಿ 2 ಗ್ರಾಮಗಳಲ್ಲಿ ಪ್ರತಿ ಮನೆಗೂ ತಲಾ ಒಂದೂವರೆ ಸಾವಿರ ರೂಪಾಯಿಗಳನ್ನು ನೀಡಲಾಗಿದೆಯಂತೆ. ಹೀಗೆ ತಲಾ ಒಂದೂವರೆ ಸಾವಿರ ರೂಪಾಯಿಗಳನ್ನು ಪಡೆದ ಕುಟುಂಬಗಳ ಸಂಖ್ಯೆ ಒಂದು ಸಾವಿರಕ್ಕೂ ಹೆಚ್ಚು. ಅಂದಹಾಗೆ ಈ ಎರಡೂ ಗ್ರಾಮಗಳು ಅಭಿವೃದ್ಧಿ ಹೊಂದಿದ ಗ್ರಾಮಗಳೇನಲ್ಲ. ಆದರೂ ಈ ಬಾರಿ ಊರೊಟ್ಟಿನ ಕೆಲಸ ಯಾವುದೂ ಇಲ್ಲ ಎಂದು ಅಕ್ರಮ ಗಣಿಗಾರಿಕೆ ಹರಾಜಿನಲ್ಲಿ ಬಂದ ಹಣವನ್ನು ಗ್ರಾಮದ ಎಲ್ಲ ಮನೆಗಳಿಗೆ ಹಂಚಲಾಗಿದೆ.

ಹೀಗೆ ಗ್ರಾಮದ ಯಜಮಾನರ ಸಭೆಯಲ್ಲಿ ಅಕ್ರಮ ಮರಳು ಗಣಿಗಾರಿಕೆಯ ‘ಪರವಾನಗಿ’ಯನ್ನು ಪಡೆದ ವ್ಯಕ್ತಿಗೆ ಇಡೀ ಗ್ರಾಮ ಬೆಂಗಾವಲಾಗಿ ನಿಲ್ಲುತ್ತದೆ. ಇದು ಭ್ರಷ್ಟಾಚಾರಕ್ಕೆ ಇಡೀ ಗ್ರಾಮವೇ ಸಹಕಾರ ನೀಡುವ ಉದಾಹರಣೆ. ಪರಿಸರ ನಾಶಕ್ಕೂ ತಾವು ಸಹಕಾರ ನೀಡುತ್ತಿದ್ದೇವೆ ಎಂಬ ಕಲ್ಪನೆ ಅವರಿಗಿಲ್ಲ.

ಅಕ್ರಮ ಮರಳು ಗಣಿಗಾರಿಕೆಯ ವಿರುದ್ಧ ಜಿಲ್ಲಾಡಳಿತ ಈಗ ಕಠಿಣ ಕ್ರಮ ಕೈಗೊಳ್ಳುತ್ತಿರುವುದರಿಂದ ಲಾರಿಗಳಲ್ಲಿ ಮರಳು ಸಾಗಿಸುವುದು ಸ್ವಲ್ಪ ಕಷ್ಟವಾಗಿದೆ. ಆದರೆ ಈ ಗ್ರಾಮದ ಜನರು ಪೊಲೀಸರು ಮತ್ತು ಗಣಿ ಇಲಾಖೆಯ ಸಿಬ್ಬಂದಿ ಸಹಾಯದಿಂದಲೇ ಮರಳನ್ನು ಸಾಗಿಸುತ್ತಿದ್ದಾರೆ. ಬಹುತೇಕ ಮನೆಯ ಹಿಂದುಗಡೆ ಮರಳು ಸಾಗಣೆಯ ಲಾರಿಗಳನ್ನು ನಿಲ್ಲಿಸಲಾಗುತ್ತದೆ. ಅದಕ್ಕೆ ಮನೆಯ ಯಜಮಾನನಿಂದ ಯಾವುದೇ ಅಭ್ಯಂತರ ಇಲ್ಲ. ಅಲ್ಲದೆ ನರಸೀಪುರ-ಮೈಸೂರು ಮುಖ್ಯರಸ್ತೆಯಲ್ಲಿ ಪೊಲೀಸರ ಕಾವಲು ಕಡಿಮೆ ಇರುವ ಮಾಹಿತಿ ಪೊಲೀಸ್ ಠಾಣೆಯಿಂದಲೇ ಹೋಗುತ್ತದೆ. ಆಗ ಈ ಲಾರಿಗಳು ನಿರಾತಂಕವಾಗಿ ತಲುಪಬೇಕಾದ ಜಾಗವನ್ನು ತಲುಪುತ್ತವೆ.

ಊರಲ್ಲಿ ಯಾರೋ ಒಬ್ಬ ಕಳ್ಳತನ ಮಾಡುತ್ತಿದ್ದರೆ ಅವನನ್ನು ಹಿಡಿಯಬಹುದು. ಆದರೆ ಇಡೀ ಊರಿಗೆ ಊರೇ ಕಳ್ಳತನಕ್ಕೆ ಸಹಕಾರಿಯಾಗಿದ್ದರೆ ಅದನ್ನು ತಡೆಯುವುದು ಹೇಗೆ? ‘ಊರೊಟ್ಟಿನ ಕೆಲಸ’ ಎಂದು ಇದೇ ಅಕ್ರಮ ಹಣದಿಂದಲೇ ಅಭಿವೃದ್ಧಿ ಹೊಂದಿದ ಆ ಊರಿನ ದೇವರೂ ಕೂಡ ಏನೂ ಮಾಡಲಿಕ್ಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.