ರಂಗಕರ್ಮಿ ಕೆ.ವಿ. ಅಕ್ಷರ ಅವರು ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಇತ್ತೀಚಿನ ಬೆಳವಣಿಗೆಗಳ ಕುರಿತಾಗಿ ಬರೆದಿರುವ ಲೇಖನ (ಸಂಗತ ಆ.11) ಸಮಾನ ದುಃಖಿಗಳಾದ ಹಲವು ಕಲಾವಿದರ ಆತಂಕವನ್ನು ಹೊರತಂದಿದೆ. ಸಂಸ್ಕೃತಿ ಸಚಿವಾಲಯ ಕಳೆದ ಐದು ವರ್ಷಗಳಿಂದ ತಕ್ಕಮಟ್ಟಿಗೆ ಪಾರದರ್ಶಕವಾಗಿ ಕಾರ್ಯ ನಿರ್ವಹಿಸುವಲ್ಲಿ ಸಫಲವಾಗಿತ್ತು.
ಅದರ ಲಾಭ ಪಡೆಯಲು ಎಷ್ಟು ಅರ್ಹ ಕಲಾವಿದರಿಗೆ ಅಥವಾ ಕಲಾತಂಡಗಳಿಗೆ ಸಾಧ್ಯವಾಗಿತ್ತು ಎಂಬ ಮಾತು ಬೇರೆ. ಆದರೆ ತಾಂತ್ರಿಕವಾಗಿ ಸರಿಯಾದ ದಾಖಲೆಗಳಿದ್ದಲ್ಲಿ, ಸಕಾಲಕ್ಕೆ ಅನುದಾನ–ಶಿಷ್ಯವೇತನದ ಹಣ ತಲುಪದಿದ್ದರೂ, ಮೊದಲನೇ ಅಥವಾ ಎರಡನೇ ವರ್ಷದ ಕೊನೆಯಲ್ಲಿ ನೇರವಾಗಿ ಕಲಾವಿದರ ಅಥವಾ ಕಲಾತಂಡಗಳ ಬ್ಯಾಂಕ್ ಖಾತೆಗೇ ಹಣ ಸಂದಾಯ ಆಗುತ್ತಿತ್ತು.
ನನ್ನಂಥ ಕಲಾವಿದರು ಮತ್ತು ಹಲವಾರು ಕಲಾತಂಡಗಳು ಈ ಅನುದಾನಕ್ಕೆ ಅರ್ಜಿ ಸಲ್ಲಿಸುತ್ತಿದ್ದುದು, ಸರ್ಕಾರಿ ಅಧಿಕಾರಿಗಳಿಗೆ ಸಲಾಮು ಹೊಡೆಯದೇ, ಲಂಚ ತಿನ್ನಿಸದೇ ಅಂತರ್ಜಾಲ ತಾಣದ ಮೂಲಕ ನೇರವಾಗಿ ಅರ್ಜಿ ಪಡೆದು, ಸಲ್ಲಿಸಿ ಗೌರವದಿಂದ, ‘ಸಂಸ್ಕೃತಿ’ಗೇ ಸಂಬಂಧಿಸಿದ ಅನುದಾನವನ್ನು ಅರ್ಹತೆಯ ಆಧಾರದ ಮೇಲೆ ಪಡೆಯುವ ದಾರಿ ಇದು ಎಂಬ ಕಾರಣಕ್ಕೆ.
ಸಲ್ಲಿಸುವ ಎಲ್ಲ ಅರ್ಜಿಗಳೂ ವಿಷಯತಜ್ಞರ ಸಮಿತಿಯಿಂದ ಪರಿಶೀಲನೆಗೆ ಒಳಪಟ್ಟು, ಸಕಾರಣಗಳೊಂದಿಗೆ ಅನುದಾನ ನೀಡಬೇಕೇ -ಬೇಡವೇ ಎಂದು ತೀರ್ಮಾನ ಆಗುತ್ತಿದ್ದವು. ವೇತನ ಅನುದಾನದ ಸಂಸ್ಥೆಗಳನ್ನು ಕಳೆದ ಮೂರು ವರ್ಷಗಳಿಂದ ಕಡ್ಡಾಯವಾಗಿ ಪರಿಶೀಲನಾ ಭೇಟಿಗೆ ಒಳಪಡಿಸಲಾಗುತ್ತಿತ್ತು.
ಈ ಎಲ್ಲಾ ಕ್ರಮ-ಯೋಜನೆಗಳೂ ವ್ಯವಸ್ಥಿತವಾಗಿ ರೂಪುಗೊಂಡ ಕಾರಣದಿಂದ, ಹೆಚ್ಚು ಹೆಚ್ಚು ಕಲಾವಿದರು ತಮ್ಮ ಅರ್ಜಿಗಳನ್ನು ಈ ತನಕ ಸಲ್ಲಿಸುತ್ತಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ಎಲ್ಲಾ ಯೋಜನೆಗಳನ್ನು ವಿವಿಧ ಅಂಗಸಂಸ್ಥೆಗಳ ನಿರ್ವಹಣೆಗೆ ವಹಿಸಲು ತೀರ್ಮಾನಿಸಲಾಗಿದೆ. ನೇರವಾಗಿ ಅರ್ಜಿಗಳನ್ನು ಈ ಸಂಸ್ಥೆಗಳಿಗೇ ಕಳುಹಿಸಬೇಕು ಎಂದೂ ಸೂಚಿಸಲಾಗಿದೆ.
ಈಗಾಗಲೇ ಕಳಿಸಿರುವ ಅರ್ಜಿಗಳ ಬಗ್ಗೆ ಯಾವುದೇ ಸೂಚನೆಯಿಲ್ಲ. ಈ ಮಧ್ಯೆ ಸಂಸ್ಕೃತಿ ಸಚಿವಾಲಯದ ಇಡೀ ಚಟುವಟಿಕೆಯೇ ಬೇರೊಂದು ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಆದರೆ ಈ ಬಗ್ಗೆ ಕಲಾವಿದರಿಗೆ ಮತ್ತು ಸಂಸ್ಥೆಗಳಿಗೆ ಯಾವುದೇ ಮಾಹಿತಿಯಿಲ್ಲ.
ಸಚಿವಾಲಯಕ್ಕೆ ಸಲ್ಲಿಸುವ ಅರ್ಜಿಗಳಿಗೆಲ್ಲ ಆಯಾ ರಾಜ್ಯ ಸರ್ಕಾರದ ಅಕಾಡೆಮಿ–ಸಂಸ್ಕೃತಿ ಇಲಾಖೆಗಳ ಶಿಫಾರಸು ಕಡ್ಡಾಯ. ಗ್ರಾಮೀಣ ಕಲಾವಿದರಿಗೆ ಮತ್ತು ವಿವಿಧ ಕಾರಣಗಳಿಂದ ಈ ಶಿಫಾರಸಿನ ಕಷ್ಟ, -ಅಡ್ಡಿ-, ಆತಂಕಗಳನ್ನು ಮನಗಂಡು ಕಳೆದ ಬಾರಿಯ ಪರಿಣತ ಸಮಿತಿ ಈ ಶಿಫಾರಸನ್ನು ‘ಕಡ್ಡಾಯ’ ಎಂಬ ಅಂಶದಿಂದ ಕೈಬಿಡಬೇಕೆಂದು ಸೂಚಿಸಿತ್ತು.
ಈ ಸೂಚನೆ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಈಗ ‘ವಿಕೇಂದ್ರೀಕ-ರಣ’ದ ಹೆಸರಿನಲ್ಲಿ ಯಾರೂ ‘ಹೊಣೆ ಹೊತ್ತುಕೊಳ್ಳದ’ ಅರ್ಜಿಗಳ ಬಗ್ಗೆ ಯಾರನ್ನು, ಎಲ್ಲಿ ವಿಚಾರಿಸಬೇಕೆಂದು ತಿಳಿಯದ ಅರಾಜಕತ್ವ ಉದ್ಭವಿಸುವ ಸಾಧ್ಯತೆಯೇ ಹೆಚ್ಚು. ಸಂಸ್ಕೃತಿ ಸಚಿವಾಲಯದ ಅನುದಾನವನ್ನು ಪಡೆಯಲು ಸಂಸ್ಥೆಯ ನೋಂದಣಿ, ಸರಿಯಾದ ಲೆಕ್ಕಪತ್ರ, ಉತ್ತಮ ಕಾರ್ಯಕ್ರಮ ಯೋಜನೆ, ಅನುದಾನದ ಉತ್ತಮ ನಿರ್ವಹಣೆ ಇವು ಕಡ್ಡಾಯವಾಗಿತ್ತು. ಅಧಿಕಾರಿಗಳ ಪರಿಚಯವಿರದಿದ್ದರೂ, ದೆಹಲಿಗೆ ಒಮ್ಮೆಯೂ ಹೋಗದೆಯೂ ಸಂಸ್ಥೆಗಳು ಅನುದಾನ ಪಡೆಯುತ್ತಿದ್ದವು. ಅನುದಾನ ಪಡೆಯುವುದು ಕಾರ್ಯಕ್ರಮದ ಗುಣಮಟ್ಟದ ಗುರುತು ಎಂದೂ ಎನಿಸುತ್ತಿತ್ತು.
ಇವೆಲ್ಲವೂ ಹೊಸ ಬದಲಾವಣೆಗಳ ನಂತರವೂ ಮುಂದುವರೆಯಬಹುದು. ಆದರೆ ಹೊಸ ಕಚೇರಿಗಳು ಹೊಸ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಆತಂಕಗಳು-ಅಡ್ಡಿಗಳು-ತಪ್ಪುಗಳು ನುಸುಳುವ ಸಾಧ್ಯತೆ ಹೆಚ್ಚು. ಇಂಥ ಸಾಧ್ಯತೆಗಳನ್ನು ಗಮನದಲ್ಲಿರಿಸಿಕೊಂಡು ಸಂಸ್ಕೃತಿ ಸಚಿವಾಲಯ ಕಲಾವಿದರ ಅಂದರೆ ಕಲೆಯ ಉನ್ನತಿಗಾಗಿ ಅವಕಾಶಗಳನ್ನು ಕಲ್ಪಿಸಲಿ ಎಂದು ಆಶಿಸೋಣ.
ಸಾಹಿತ್ಯ ಜಗತ್ತಿಗೆ ಸಂಬಂಧಿಸಿದ ಸಮಸ್ಯೆಗಳ ಚರ್ಚೆ ನಡೆದಷ್ಟು ನೃತ್ಯ,- ಸಂಗೀತ,- ನಾಟಕ ಕ್ಷೇತ್ರಗಳ ಸಮಸ್ಯೆಗಳು ಚರ್ಚೆಯಾಗುವುದಿಲ್ಲ. ಸಿನಿಮಾ ಹಿನ್ನೆಲೆಯಿರದ, ಆದರೆ ಅತಿ ಪ್ರಸಿದ್ಧ ಕಲಾವಿದರು ಅತ್ಯಂತ ಶ್ರಮ, -ಅರ್ಹತೆಗಳ ನಡುವೆಯೂ ಇಲಾಖೆಯಿಂದ ಪಡೆಯಬಹುದಾದ ಹಾಗೂ ಒಂದು ಕಾರ್ಯಕ್ರಮಕ್ಕೆ ಪಡೆಯುವ ಸಂಭಾವನೆ ಸುಮಾರು ₨೨ ಲಕ್ಷ. ಇದರ ಹಿಂದೆ ವರ್ಷಗಳ ಸಾಧನೆಯೊಂದಿಗೆ ೨ ಗಂಟೆಗಳ ಕಾಲ ಒಂದೇ ಸಮ ಹಾಡುವ, ನರ್ತಿಸುವ ಬೌದ್ಧಿಕ -ದೈಹಿಕ -ಮಾನಸಿಕ ಶ್ರಮವೂ ಸೇರಿರುತ್ತದೆ ಎಂಬುದನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕು.
ಈ ಸಂಭಾವನೆ ಸಿನಿಮಾ ಕಲಾವಿದರಿಗೆ, ಪಾಪ್ ಸಂಗೀತ ಕಲಾವಿದರಿಗೆ ಹೋಲಿಸಿ ನೋಡಿದರೆ ಅತ್ಯಂತ ಕಡಿಮೆ. ಇಂದು ಒಂದು ಹಿನ್ನೆಲೆ ಸಂಗೀತವನ್ನು ಹೊಂದಿದ ನೃತ್ಯ ಕಾರ್ಯಕ್ರಮಕ್ಕೆ ಇಡೀ ತಂಡಕ್ಕೆ ₨೫೦,೦೦೦ ತಲುಪಿದರೆ ಅದು ಹೆಚ್ಚು! ಇಂಥ ಪರಿಸ್ಥಿತಿಯಲ್ಲಿ ರಾಜ್ಯ ಅಥವಾ ಕೇಂದ್ರದ ಸಂಸ್ಕೃತಿ ಸಚಿವಾಲಯ ಯಾವುದೇ ದಿಢೀರ್ ಬದಲಾವಣೆಗಳನ್ನು ಮಾಡುವ ಮೊದಲು ಕೂಲಂಕಷವಾಗಿ ಪರಿಸ್ಥಿತಿಯನ್ನು ಅವಲೋಕಿಸಿ, ಸಾಂಸ್ಕೃತಿಕ ರಾಯಭಾರಿಗಳಾದ ಕಲಾವಿದರ ಅಭಿಪ್ರಾಯ ಕೇಳುವುದು ಅಗತ್ಯ.
ಅಥವಾ ಮಾಡಿರುವ ಬದಲಾವಣೆಯ ಸಂಪೂರ್ಣ ವಿವರಣೆ, ಮಾರ್ಗಸೂಚಿ ಮತ್ತು ಎಲ್ಲಾ ಕಲಾವಿದರಿಗೆ (ವಿಶೇಷವಾಗಿ ದೊಡ್ಡ ನಗರಗಳ ಹೊರಗಿರುವ ಅರ್ಹ ಕಲಾವಿದರು ಮತ್ತು ಕಲಾತಂಡಗಳು) ಅರ್ಜಿ ಸಲ್ಲಿಸಲು ಸುಲಭವಾಗುವಂತೆ ಮಾರ್ಗದರ್ಶನ ನೀಡಬೇಕಾದ್ದು ಅತ್ಯವಶ್ಯ.
ಇದರೊಂದಿಗೆ ರಾಜ್ಯ ಸರ್ಕಾರದ ಸಂಸ್ಕೃತಿ ಇಲಾಖೆ ಅನುದಾನದ ಹೊಸ ಮಾರ್ಗಸೂಚಿ- ಅರ್ಜಿಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಸಂಗೀತ-, ನೃತ್ಯ ಪರೀಕ್ಷೆಗಳು ಪ್ರತಿವರ್ಷವೂ ಸಂಗೀತ ವಿಶ್ವವಿದ್ಯಾಲಯ ಮತ್ತು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಜಗ್ಗಾಟದಲ್ಲಿ ಭವಿಷ್ಯದ ಖಚಿತತೆಯಿಲ್ಲದೆ ಹೇಗೋ ಸಾಗುತ್ತಿವೆ.
ಕಲಾಜಗತ್ತನ್ನು ನಿರಾತಂಕವಾಗಿರಿಸಿ ಉತ್ತಮ ಕಲೆ ಸೃಷ್ಟಿಸಲು ಎಲ್ಲ ಅವಕಾಶಗಳನ್ನು ಕಲ್ಪಿಸುವ ಸಂದ-ರ್ಭವನ್ನು ನಿರ್ಮಾಣ ಮಾಡುವ ಹೊಣೆ ಯಾರದ್ದು? ಎಂಬ ಪ್ರಶ್ನೆಯನ್ನು ಕಲಾವಿದ ಎದುರಿಸುತ್ತಿರುವುದು ಕಲೆಯ ದುರಂತವೋ ಅಥವಾ ಸಮಾಜದ ದುರಂತವೋ?!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.