ADVERTISEMENT

ಕೊಂಕಣಿಗರ ಲಿಪಿ ಚಳವಳಿ: ಬೇಕಿದೆ ‘ಕನ್ನಡ’ಬಲ

ಕೋಡಿಬೆಟ್ಟು ರಾಜಲಕ್ಷ್ಮಿ
Published 3 ಮಾರ್ಚ್ 2014, 19:30 IST
Last Updated 3 ಮಾರ್ಚ್ 2014, 19:30 IST

ಜಾಗತೀಕರಣದ ಭರಾಟೆಯಲ್ಲಿ ಕನ್ನಡ ಭಾಷೆ ಹಲವು ಬಿಕ್ಕಟ್ಟುಗಳನ್ನು ಎದು­ರಿ­ಸುತ್ತಿರು­ವಂತೆಯೇ ಸಣ್ಣ ಸಮುದಾಯಗಳು ಮಾತನಾ­ಡುವ ಕೊಂಕಣಿ, ಬ್ಯಾರಿ, ತುಳು ಭಾಷೆ­ಗಳೂ ಬಗೆ­ಬಗೆಯ ಸವಾಲುಗಳನ್ನು ಎದುರಿಸು­ತ್ತಿವೆ. ಕೊಂಕಣಿ­ಯನ್ನೇ ಉದಾಹರಿಸುವುದಾದರೆ, ಈ ಭಾಷಾವಲಯದಲ್ಲಿ ನಡೆಯುತ್ತಿರುವ ಪ್ರಕ್ರಿಯೆ­ಗಳ ಹಿನ್ನೆಲೆಯಲ್ಲಿ ಅದೊಂದು ಆಂತರಿಕ ಚಳವಳಿಗೆ ಸಜ್ಜಾಗುತ್ತಿರುವುದು ಸ್ಪಷ್ಟವಾಗುತ್ತದೆ.

ಕೊಂಕಣಿ ಭಾಷೆಯನ್ನು ಕನ್ನಡ, ದೇವನಾಗರಿ, ರೋಮನ್‌, ಮಲಯಾಳಂ  ಮತ್ತು ಪರ್ಸೋ­ಅರೇಬಿಕ್‌ ಲಿಪಿಯಲ್ಲಿ ಬರೆಯಲಾಗುತ್ತದೆ. ಆದರೆ ಕನ್ನಡ, ರೋಮನ್‌ ಮತ್ತು ದೇವನಾಗರಿ ಲಿಪಿ­ಯಲ್ಲಿ ಸಾಹಿತ್ಯ ಸೃಷ್ಟಿ ಆಗುತ್ತಿದೆ. ಈ ಮೂರರ ಪೈಕಿ ಕನ್ನಡ ಲಿಪಿಯಲ್ಲಿಯೇ ಅತೀ ಹೆಚ್ಚು ಕೊಂಕಣಿ ಸಾಹಿತ್ಯ ಸೃಷ್ಟಿ ಆಗುತ್ತಿರುವುದು ಮತ್ತು ರಚನಾತ್ಮಕ ಚಟುವಟಿಕೆಗಳು ನಡೆಯುತ್ತಿ­ರು­­ವುದು ಗಮನಾರ್ಹ.

ಎರಡನೇ ಸ್ಥಾನ ರೋಮನ್‌ ಲಿಪಿಗೆ ಸಲ್ಲಬೇಕು. ನಂತರದ ಸ್ಥಾನ ದೇವ­­ನಾಗರಿಗೆ. ಆದರೆ ಭಾರತ ಸರ್ಕಾರ, ದೇವ­ನಾಗರಿ ಲಿಪಿಯೇ ಅಧಿಕೃತ ಎಂದು ಘೋಷಿಸಿ­ದ್ದರಿಂದ, ಕನ್ನಡ ಲಿಪಿ ಬಳಸಿ ಸಮೃದ್ಧ ಸಾಹಿತ್ಯ ಸೃಷ್ಟಿಯಾದರೂ ಅದು ಪರಿಗಣನೆಗೆ ಬರುತ್ತಿಲ್ಲ.  ಗೋವಾದಲ್ಲಿ ಕೊಂಕಣಿಯೇ ಆಡಳಿತ ಭಾಷೆ­ಯಾಗಿದ್ದರೂ ಅಲ್ಲಿ ದೇವನಾಗರಿ ಲಿಪಿಯಲ್ಲಿ ಹೆಚ್ಚೇನೂ ಸಾಹಿತ್ಯ ಸೃಷ್ಟಿಯಾಗಿಲ್ಲ. ಅಲ್ಲಿ ವ್ಯಾವ­ಹಾರಿಕ­ವಾಗಿಯೇ ಮರಾಠಿ ಪ್ರಾಬಲ್ಯವಿದೆ. ಕೊಂಕಣಿಗೆ ಸಂಬಂಧಿಸಿದಂತೆ ರೋಮನ್‌ ಲಿಪಿ­ಯಲ್ಲೇ ತಕ್ಕಮಟ್ಟಿನ ಸಾಹಿತ್ಯ ಅಲ್ಲಿದೆ.

ಕೊಂಕಣಿ ಭಾಷೆ ಉಳಿಯಬೇಕಾದರೆ ಇತರ ಎಲ್ಲ ಲಿಪಿಗಳನ್ನು ಅನುಸರಿಸುವವರೂ ದೇವ­ನಾಗರಿ ಲಿಪಿಯನ್ನೇ ಕಲಿಯಬೇಕು ಎಂದು ವಾದಿ­ಸು­ವವರ ಪ್ರಬಲವಾದ ಗುಂಪು ಗೋವಾ ಪರಿಸರ­ದಲ್ಲಿದೆ. ಈ ವಾದಕ್ಕೆ ಅಧಿಕಾರದ ಮೊಗಸಾಲೆ­ಗಳಿಂದಲೂ ಬಲ ಸಿಗುತ್ತಿರುವುದರಿಂದ ಇತರ ಲಿಪಿಗಳಲ್ಲಿ ರೂಪುಗೊಳ್ಳುವ ಕೊಂಕಣಿ ಸಾಹಿತ್ಯ ಸಹಜವಾಗಿಯೇ ಮನ್ನಣೆಯಿಂದ ವಂಚಿತವಾಗು­ತ್ತಿದೆ. ಉದಾಹರಣೆಗೆ, ಕೇಂದ್ರ ಸಾಹಿತ್ಯ ಅಕಾ­ಡೆಮಿ ಪ್ರಶಸ್ತಿ ಸಂದರ್ಭದಲ್ಲಿ ದೇವನಾಗರಿ ಲಿಪಿ­ಯಲ್ಲಿರುವ ಕೊಂಕಣಿ ಕೃತಿಗಳು ಮಾತ್ರ ಪರಿ­ಗಣನೆಗೆ ಒಳಗಾಗುತ್ತವೆ.

ಹೀಗಾಗಿ, ಕನ್ನಡ ಲಿಪಿ­ಯನ್ನು ಅನುಸರಿಸುವ ಲೇಖಕರು ವಿಧಿಯಿಲ್ಲದೇ ತಮ್ಮ ಪುಸ್ತಕವನ್ನು ದೇವನಾಗರಿಗೆ ಲಿಪ್ಯಂತರ ಮಾಡಿ ಕಳುಹಿಸಬೇಕಾಗುತ್ತದೆ. ಇದು ಒಂದರ್ಥದಲ್ಲಿ ದೇವನಾಗರಿ ಲಿಪಿಯ ಹೇರಿಕೆ ಅಲ್ಲವೇ? ಈ ಹಿನ್ನೆಲೆಯಲ್ಲೇ– ‘ಇದು ಕನ್ನಡಕ್ಕೆ ಮಾಡುವ ಅವಮಾನ’ ಎಂದು ಜಾಗತಿಕ ಕೊಂಕಣಿ ಸಂಘಟನೆಯ ರೂವಾರಿ ಎರಿಕ್‌ ಒಜಾರಿಯೊ ಹೇಳುವ ಅಭಿಪ್ರಾಯವನ್ನು ಗಮನಿಸಬೇಕು.

‘ಕನ್ನಡ ಲಿಪಿಯಲ್ಲಿ ಮೂಡಿ ಬರುವ ಕೊಂಕ­ಣಿಗೆ ಮಾನ್ಯತೆ ನೀಡಬೇಕು’ ಎಂದು ಆಗ್ರಹಿಸುವ ಚಳವಳಿಯ ಮುಂಚೂಣಿಯಲ್ಲಿ ಎರಿಕ್‌ ಒಜಾ­ರಿಯೊ ಇದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ­ಯಲ್ಲಿ ಕೊಂಕಣಿ ಭಾಷೆಯಲ್ಲಿ ಎಲ್ಲ ಲಿಪಿಗಳಿಗೂ ಅವಕಾಶ ನೀಡುವಂತೆ ಆಗ್ರಹಿಸಿ ಅವರು ಕರ್ನಾ­ಟಕ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ‘ಸಾಹಿತ್ಯ ಅಕಾಡೆಮಿ ವರ್ಸಸ್‌ ಎರಿಕ್‌ ಒಜಾ­ರಿಯೊ ಮತ್ತಿತರರು’ ಪ್ರಕರಣದಲ್ಲಿ ಹೈಕೋರ್ಟ್‌ ಪ್ರತಿವಾದಿಗಳ ಪಟ್ಟಿಯಲ್ಲಿ ಕರ್ನಾಟಕ ಸರ್ಕಾರ­ವನ್ನೂ ಸೇರಿಸಿದೆ.

ಕದಂಬರ ಆಡಳಿತ ಸಂದರ್ಭದಲ್ಲಿ ಗೋವಾದ­ಲ್ಲಿಯೂ ಕೊಂಕಣಿಯನ್ನು ಕನ್ನಡ ಲಿಪಿ­ಯಲ್ಲಿಯೇ ಬರೆಯಲಾಗುತ್ತಿತ್ತು. ಗೋವಾ­ದಲ್ಲಿನ ಕೊಂಕಣಿ ಇತಿಹಾಸ ಗಮನಿಸಿದರೂ ಅಲ್ಲಿ ರೋಮನ್‌ ಲಿಪಿಯ ಬಳಕೆ ಹೆಚ್ಚಾಗಿದೆಯೇ ಹೊರತು ದೇವನಾಗರಿ ಲಿಪಿಯಲ್ಲ. ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್‌ ಧರ್ಮೀಯರನ್ನು ಏಕಸೂತ್ರದಲ್ಲಿ ಬೆಸೆದಿರುವ ಕೊಂಕಣಿ ಭಾಷೆಯ ಸೌಂದರ್ಯ ಇರುವುದೇ ವೈವಿಧ್ಯದಲ್ಲಿ. ಈ ಮೂಲ ಆಶಯಕ್ಕೆ ವಿರುದ್ಧವಾಗಿ ದೇವನಾಗರಿ ಲಿಪಿಗೆ ಮಾತ್ರ ಮನ್ನಣೆ ನೀಡಬೇಕು ಎಂಬ ಹೇರಿಕೆ ಫ್ಯಾಸಿಸಂ ಅಲ್ಲದೆ ಇನ್ನೇನೂ ಅಲ್ಲ ಎನ್ನುತ್ತಾರೆ ಒಜಾರಿಯೊ.

ಹಾಗೆ ನೋಡಿದರೆ ಕನ್ನಡ ಲಿಪಿಯನ್ನು ಬಳಸುವ ಪ್ರಾದೇಶಿಕ ಭಾಷೆಗಳು ಒಟ್ಟಂದದಲ್ಲಿ ಕನ್ನಡಕ್ಕೆ ಮಹತ್ವದ ಕೊಡುಗೆ ನೀಡುತ್ತಿವೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಕೊಂಕಣಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಹಿನ್ನೆಲೆಯಲ್ಲಿ ಈ ಜಿಲ್ಲೆಗಳ ಆಯ್ದ ಶಾಲೆಗಳಲ್ಲಿ ಮೂರನೇ ಭಾಷೆಯಾಗಿ ಕೊಂಕಣಿ ಕಲಿಸಲಾಗುತ್ತಿದೆ. ಈ ವರ್ಷ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಏಳು ಶಾಲೆಗಳ ಮಕ್ಕಳು ಹತ್ತನೇ ತರಗತಿಯಲ್ಲಿ ಕೊಂಕಣಿಯನ್ನು ಕನ್ನಡ ಲಿಪಿಯಲ್ಲಿ ಆಯ್ಕೆ ಮಾಡಿಕೊಂಡಿದ್ದಾರೆ.

ದೇವ­ನಾಗರಿ ಲಿಪಿಯನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿ­ಗಳ ಸಂಖ್ಯೆ ಬೆರಳೆಣಿಕೆಯಷ್ಟೂ ಇಲ್ಲ. ರಚನಾತ್ಮಕ ಚಟುವಟಿಕೆಗಳನ್ನು ಗಮನಿಸಿದರೂ ಸರ್ಕಾರದ ಬೆಂಬಲ ಇರುವ ಗೋವಾದಲ್ಲಿ ನಡೆ­ಯುವ ಕಾರ್ಯಕ್ರಮಗಳಿಗಿಂತ ಹೆಚ್ಚಿನ ಕಾರ್ಯ­ಕ್ರಮಗಳು ಖಾಸಗಿ ಮಟ್ಟದಲ್ಲಿ ಕರ್ನಾಟಕದಲ್ಲಿ ಕನ್ನಡ ಲಿಪಿ ಬಳಸುವವರ ನಡುವೆ ನಡೆಯುತ್ತಿವೆ.

ಜಾಗತಿಕ ಕೊಂಕಣಿ ಸಂಘಟನೆ, ಅಖಿಲ ಭಾರತ ಕೊಂಕಣಿ ಬರಹಗಾರರ ಸಂಘಟನೆ, ಸೃಜನಾತ್ಮಕ ಕೃತಿಗಳಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ಸಹಿತ ಪ್ರಶಸ್ತಿಗಳು, ಮಲಯಾಳಂ ಮತ್ತು ಇತರ ಲಿಪಿ ಬಳಸುವವರಿಗೂ ಪ್ರೋತ್ಸಾಹ ಧನ ನೀಡಿಕೆ– ಮುಂತಾಗಿ ಭರಪೂರ ಕೆಲಸಗಳು ಸಾಗುತ್ತಿವೆ. ಯಾವುದೇ ಲಿಪಿಯನ್ನು ನಿರಾಕರಿ­ಸದೆ ಎಲ್ಲ ವೈವಿಧ್ಯ­ವನ್ನೂ ಮನ್ನಿಸಿ ಎನ್ನುವ ಕನ್ನಡ ಕೊಂಕಣಿ­ಗರ ಮಾತಿಗೆ ಇದೀಗ ಇತರ ಕನ್ನಡಿಗರ ಬೆಂಬಲ ಬೇಕಾಗಿದೆ. ಯಾಕೆಂದರೆ ಕನ್ನಡ ಲಿಪಿಗಾಗಿ ಕೊಂಕಣಿಗರು ನಡೆಸುವ ಚಳವಳಿಗೆ ಯಶಸ್ಸು ದೊರೆ­ತರೆ ಅದರಿಂದ ಕನ್ನಡ ಭಾಷೆಗೂ ಒಳಿತಾ­ಗಲಿದೆ.

ರಾಜ್ಯ ಸರ್ಕಾರ, ಕನ್ನಡ ಭಾಷೆಯನ್ನು ಬೆಂಬಲಿ­ಸುವುದೇ ಆದರೆ ಕನ್ನಡ ಲಿಪಿಗಾಗಿ ಆಗ್ರಹಿ­ಸುತ್ತಿರುವ ಕೊಂಕಣಿಗರ ಹೋರಾಟಕ್ಕೆ ಬೆಂಬಲ ನೀಡಲೇಬೇಕಾಗುತ್ತದೆ. ಕೊಂಕಣಿ ಅಕಾಡೆಮಿ­ಯೂ ಈ ನಿಟ್ಟಿನಲ್ಲಿ ಯೋಚನೆ ಮಾಡಬೇಕಾ­ಗಿದೆ. ಶಾಲೆಗಳಲ್ಲಿ ಕೊಂಕಣಿಯನ್ನು ದೇವನಾಗರಿ ಲಿಪಿಯಲ್ಲೇ ಕಲಿಯಿರಿ ಎಂದು ಹೇರಿದರೆ ಮಕ್ಕಳು ಹೊಸದೊಂದು ಲಿಪಿ ಕಲಿಯುವ ಉಸಾಬರಿಗೆ ಒಗ್ಗಿಕೊಳ್ಳುವುದು ಕಷ್ಟ.
ಕನ್ನಡ ಲಿಪಿಯಲ್ಲಿ ಕೊಂಕಣಿ ಬರೆಯುವವ­ರನ್ನು ಸರ್ಕಾರ ಪ್ರೋತ್ಸಾಹಿಸಬೇಕಾದುದು ಇಂದಿನ ತುರ್ತು. ಆದ್ದರಿಂದ ಕನ್ನಡ ಲಿಪಿಯ ಪರ ನಿಂತಿರುವ ಭಾಷಾ ಚಳವಳಿಯ ಹೋರಾಟ­ಗಾರರ ಗುಂಪು ಇದೀಗ ಕೊಂಕಣಿ ಅಕಾಡೆಮಿಯ ಹೊಸ ಅಧ್ಯಕ್ಷರ ಬೆಂಬಲದ ನಿರೀಕ್ಷೆಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.