ADVERTISEMENT

ಡಬ್ಬಿಂಗ್‌ ಬರಲಿ; ಆದರೆ...?

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2015, 19:30 IST
Last Updated 10 ಆಗಸ್ಟ್ 2015, 19:30 IST

ಡಬ್ಬಿಂಗ್‌ ಬೇಕೇ ಬೇಡವೇ ಎಂಬ ಚರ್ಚೆಗೆ ಸಂಬಂಧಿಸಿದ ಲೇಖನದಲ್ಲಿ ಸಿದ್ಧೇಗೌಡರು (ಸಂಗತ ಆ. 5) 1999ರಿಂದ ಈಚೆಗೆ ಕನ್ನಡದಲ್ಲಿ ನೋಡಲು ಯೋಗ್ಯವಾದ ಯಾವುದೇ ಸಿನಿಮಾ ಬಂದಿಲ್ಲ ಎಂಬ ಅರ್ಥದ ಮಾತುಗಳನ್ನಾಡಿದ್ದಾರೆ. ಈ ರೀತಿಯ ಉಪೇಕ್ಷೆಯ ಮನೋಭಾವದಿಂದ ಯಾವುದೇ ಪ್ರಯೋಜನವಿಲ್ಲ.

ಸ್ಟಾರ್ ನಟರ ಸಿನಿಮಾಗಳಲ್ಲದಿದ್ದರೂ, ಪಿ.ಶೇಷಾದ್ರಿ, ಗಿರೀಶ್ ಕಾಸರವಳ್ಳಿ ಮುಂತಾದವರ ಸಿನಿಮಾಗಳನ್ನಾದರೂ ಇವರು ನೋಡಬಹುದಿತ್ತು. ಅಲ್ಲದೆ ಈಚೆಗೆ, ಹೊಸತನವಿರುವ ಸಿನಿಮಾಗಳು ಬರುತ್ತಿರುವ ಬಗ್ಗೆ ಇವರು ಯಾವುದೇ ಮಾತಾಡದೆ, ಡಬ್ಬಿಂಗ್ ಬಂದರೆ ಇತರ ಭಾಷೆಗಳಿಂದ ಕನ್ನಡಕ್ಕೆ ಭಾಷಾಂತರಗೊಂಡ ಸಿನಿಮಾಗಳನ್ನು ನೋಡಲು ಕನ್ನಡಿಗರು ಮತ್ತೆ ಚಿತ್ರಮಂದಿರದತ್ತ ಬರುತ್ತಾರೆ ಎಂದು ಹೇಳುವುದು ಸಮಂಜಸವಲ್ಲ. ಡಬ್ಬಿಂಗ್ ಬೆಂಬಲಿಸುವ ಭರದಲ್ಲಿ ಕನ್ನಡ ಚಿತ್ರರಂಗದಲ್ಲಿ ಇದುವರೆಗೆ ನಡೆದ ಹಾಗೂ ಈಗಲೂ ನಡೆಯುತ್ತಿರುವ ಉತ್ತಮ ಪ್ರಯತ್ನಗಳನ್ನು ಒಂದೇ ಏಟಿಗೆ ತಳ್ಳಿಹಾಕುವುದು ಬೇಡ.

ಎಲ್ಲ ಕಥಾ ಸಿನಿಮಾಗಳೂ ಡಬ್ಬಿಂಗ್ ಆಗಬೇಕಾದ ಅಗತ್ಯವಿಲ್ಲ. ಕನ್ನಡ ಮಕ್ಕಳ ಅರಿವಿಗೆ ಪೂರಕವಾಗುವಂತಹ ವಿಜ್ಞಾನ, ಇತಿಹಾಸದಂಥ ಶೈಕ್ಷಣಿಕ ವಿಷಯಗಳ ಸಿನಿಮಾ, ಕಿರು ಚಿತ್ರಗಳು, ಕನ್ನಡದಲ್ಲಿ ನಿರ್ಮಿಸಲು ಸಾಧ್ಯವಿಲ್ಲದಂಥವನ್ನು ಇತರ ಭಾಷೆಗಳಿಂದ ಡಬ್ಬಿಂಗ್ ಮಾಡಿ ಪ್ರದರ್ಶಿಸಲು ಪ್ರೋತ್ಸಾಹಿಸಬಹುದು. ಹೀಗಾಗಿ ಡಬ್ಬಿಂಗ್ ಬರಲಿ, ಆದರೆ ತಪ್ಪು ಕಾರಣಗಳಿಗಾಗಿ ಅದನ್ನು ಬೆಂಬಲಿಸುವುದು ಡಬ್ಬಿಂಗ್ ನಿಷೇಧದಷ್ಟೇ ದೊಡ್ಡ ತಪ್ಪು.
-ಡಾ. ಟಿ.ಗೋವಿಂದರಾಜು,
ಬೆಂಗಳೂರು


***
ಮನೋಭಾವ ಮುಖ್ಯ
ಈಗಿನ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ಡಬ್ಬಿಂಗ್‌ ಸಿನಿಮಾ ಅಗತ್ಯವೂ ಅಲ್ಲ, ಅನಿವಾರ್ಯವೂ ಅಲ್ಲ. ಈಗ ಡಬ್ಬಿಂಗ್‌ ವಿರೋಧದ ಹಿನ್ನೆಲೆಯತ್ತ ಒಮ್ಮೆ ನೋಡೋಣ. ಹಲವು ದಶಕಗಳ ಹಿಂದೆ ಕನ್ನಡ ಚಿತ್ರರಂಗ ಇನ್ನೂ ಆರ್ಥಿಕವಾಗಿ, ತಾಂತ್ರಿಕವಾಗಿ ಅಷ್ಟೊಂದು ಬೆಳೆದಿರಲಿಲ್ಲ. ಆದರೆ ಹಲವು ಉತ್ತಮ ಪ್ರಯತ್ನಗಳಿಂದಾಗಿ ಕನ್ನಡಿಗರನ್ನು ಸೆಳೆಯಲು ಶುರು ಮಾಡಿತ್ತು. ಚಿತ್ರರಂಗಕ್ಕೆ ಅತ್ಯುತ್ತಮ ಕಲಾವಿದರ, ನಿರ್ದೇಶಕರ ದಂಡೇ ಹರಿದು ಬರತೊಡಗಿತ್ತು.

ಕನ್ನಡಕ್ಕೆ ಆಗಿನ್ನೂ ಕಪ್ಪು ಬಿಳುಪಿನ ಕಾಲ. ಬೇರೆ ಭಾಷೆಯ  ಅದ್ದೂರಿ ವರ್ಣಮಯ ಚಿತ್ರಗಳ ಪ್ರದರ್ಶನ ನಿರಾಯಾಸವಾಗಿ ಸಾಗಿತ್ತು. ಭಾಷೆ ಅರ್ಥವಾಗದಿದ್ದರೂ ಜನ ಮುಗಿಬಿದ್ದು ನೋಡಿ ಸಂತೋಷ ಪಡುತ್ತಿದ್ದರು. ಇದು ಈಗಲೂ ಮುಂದುವರಿಯುತ್ತಿರುವುದು ಕನ್ನಡಿಗರ ಕಲೆಯ ಮೇಲಿನ ಪ್ರೀತಿ ಮತ್ತು ಭಾಷಾ ಭೇದಭಾವವಿಲ್ಲದ ಉನ್ನತ ಮನೋಭಾವದಿಂದ.

ಇಲ್ಲಿಯವರೆಗೆ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ಇದ್ದಕ್ಕಿದ್ದಂತೆ ಪರಭಾಷಾ ಚಿತ್ರಗಳ ಪಾತ್ರಗಳ ತುಟಿಗಳಿಗೆ ಕನ್ನಡವನ್ನು ಜೋಡಿಸಿ ಬಿಡುಗಡೆ ಮಾಡುವ ಪ್ರವೃತ್ತಿ ಆರಂಭವಾಯಿತು. ಇದರಿಂದ, ಆಗಷ್ಟೇ ಕಣ್ಣು ಬಿಡುತ್ತಿದ್ದ ಕನ್ನಡ ಚಿತ್ರರಂಗದ ಕಿರು ಮಾರುಕಟ್ಟೆ ತತ್ತರಿಸಿತು. ಇದರ ಪರಿಣಾಮವಾಗಿ ಇಡೀ ಚಿತ್ರರಂಗ, ಸಾಹಿತಿಗಳು, ಪತ್ರಕರ್ತರೆಲ್ಲ ಒಗ್ಗಟ್ಟಿನಿಂದ ಡಬ್ಬಿಂಗ್‌ ವಿರುದ್ಧ ಚಳವಳಿ ಮಾಡಿ ಯಶಸ್ವಿಯಾದರು. ಮುಂದಿನದು ಇತಿಹಾಸ.

ಅಂದಿನಿಂದ ಇಂದಿನವರೆಗೂ ಎಲ್ಲ ಭಾಷೆಯ ಚಿತ್ರಗಳಿಗೂ ಕನ್ನಡಿಗರ ಪ್ರೀತಿ, ಔದಾರ್ಯ ದಕ್ಕಿದೆ. ಇಂದು ಚಲನಚಿತ್ರ ಬರೀ ಕಲೆಯಾಗಿ ಉಳಿದಿಲ್ಲ. ಇದೊಂದು ದೊಡ್ಡ ಉದ್ದಿಮೆಯಾಗಿ ಬೆಳೆದು ಕೋಟಿಗಳಲ್ಲಿ ವ್ಯವಹಾರ ಮಾಡುತ್ತಿದೆ. ಕಲಾವಿದರು ಶ್ರೀಮಂತರಾಗಿದ್ದಾರೆ. ನಿರ್ಮಾಪಕರು ಗಳಿಸುತ್ತಾರೆ, ಕಳೆಯುತ್ತಾರೆ. ಇತ್ತೀಚಿನ ಕೆಲ ವರ್ಷಗಳಿಂದ ಕೆಲವು ನಿರ್ಮಾಪಕರು ಡಬ್ಬಿಂಗ್‌ ಕಡೆಗೆ ಚಿತ್ತ ಹರಿಸಿದ್ದರ ಪರಿಣಾಮ ಈ ಎಲ್ಲ ಗೊಂದಲ. ಇದು ವ್ಯಾವಹಾರಿಕ ಜಾಣತನ ಎಂಬ ಭ್ರಮೆ ಅವರಿಗಿರಬಹುದು. ಆದರೆ ಕನ್ನಡಿಗರಿಗೆ ಡಬ್ಬಿಂಗ್‌ ಕಡೆಗೆ ಆಕರ್ಷಣೆಯ ಲವಲೇಶವೂ ಇಲ್ಲ.

ಕನ್ನಡಿಗರು ಯಾವತ್ತೂ ಉದಾರ ಹೃದಯ ಉಳ್ಳವರು. ಯಾವುದೇ ಭಾಷಾ ಭೇದವಿಲ್ಲದೆ ಎಲ್ಲ ಚಿತ್ರಗಳನ್ನೂ ಅದೇ ಭಾಷೆಗಳಲ್ಲಿ ನೋಡಿ ಪ್ರೋತ್ಸಾಹಿಸುವ ಗುಣವುಳ್ಳವರು. ಕಾನೂನಿನ ಪ್ರಕಾರ ಡಬ್ಬಿಂಗ್‌ ವಿರೋಧ ಸಾಧುವಲ್ಲ. ಆದರೆ ಡಬ್ಬಿಂಗ್‌ ಚಿತ್ರಗಳನ್ನು ಸಾರಾಸಗಟಾಗಿ ತಿರಸ್ಕರಿಸುವ ಮನೋಭಾವದ ಮುಂದೆ ಯಾವ ಕಾನೂನೂ ಇಲ್ಲ. ಡಬ್ಬಿಂಗ್‌ ಸಿನಿಮಾ ಬೆಳ್ಳಿತೆರೆಗೆ ಬಂದರೆ ಅಷ್ಟೇನೂ ವ್ಯತ್ಯಾಸವಾಗದು. ಕಿರುತೆರೆಗೆ ಲಗ್ಗೆ ಇಟ್ಟರೆ ಮಾತ್ರ ಸಾವಿರಾರು ಕಲಾವಿದರು, ಕಾರ್ಮಿಕರು, ತಂತ್ರಜ್ಞರು ನಿರುದ್ಯೋಗಿಗಳಾಗುವುದು ಖಂಡಿತ. ಡಬ್ಬಿಂಗ್‌ ವಿರೋಧ ನಿಜಕ್ಕೂ ಅರ್ಥಪೂರ್ಣವಾಗುವುದು ಇಲ್ಲಿಯೇ.
-ರವೀಂದ್ರ ಬನ್ನಾಡಿ,
ಬೆಂಗಳೂರು


***
ಕನ್ನಡ ಉಳಿಯಲಿ
ಕರ್ನಾಟಕದಲ್ಲಿ ಕನ್ನಡೇತರ ಚಲನಚಿತ್ರ ‘ಬಾಹುಬಲಿ’ ಹಲವಾರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ಎರಡು ವಾರಗಳ ಕಾಲ ಕನ್ನಡ ಚಿತ್ರಗಳನ್ನು ಮಕಾಡೆ ಮಲಗಿಸಿತು. ಉತ್ತಮವಾಗಿ ಓಡುತ್ತಿದ್ದ ಕನ್ನಡ ಚಿತ್ರಗಳನ್ನು ತೆಗೆದುಹಾಕಿ ಈ ಚಿತ್ರಕ್ಕೆ ದಾರಿ ಮಾಡಿಕೊಡಲಾಯಿತು.

ಈ ಚಿತ್ರ ಕರ್ನಾಟಕದ ಅರ್ಧದಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಸಲ್ಮಾನ್ ಖಾನ್ ಮತ್ತು ಶಾರುಖ್‌ ಖಾನ್‌ರ ಚಿತ್ರಗಳು ಬಿಡುಗಡೆಯಾದಾಗಲೂ ಪೆಟ್ಟು ತಿನ್ನುವುದು ಕನ್ನಡ ಚಿತ್ರಗಳೇ. ಮುಂಬೈಯಿಂದ ಬಂದ ಹಾಡುಗಾರರಿಗೆ ಮಣೆ ಹಾಕಿ, ನಮ್ಮ ಹಿನ್ನೆಲೆ ಗಾಯಕರನ್ನು ರಜೆ ಮೇಲೆ ಕಳುಹಿಸಲಾಗಿದೆ. ಕನ್ನಡೇತರ ಚಿತ್ರಗಳನ್ನು ಕನ್ನಡಿಗರೇ  ಖರೀದಿಸಿ, ಕನ್ನಡ ಚಿತ್ರಗಳನ್ನು ತೆಗೆದು ಆ ಚಿತ್ರಗಳನ್ನು ಪ್ರದರ್ಶಿಸುತ್ತಾರೆ. ದಸರಾ ಉತ್ಸವಗಳಲ್ಲಿ ಲಕ್ಷಾಂತರ ರೂಪಾಯಿ ಕೊಟ್ಟು ಮುಂಬೈನಿಂದ   ಕಲಾವಿದರನ್ನು ಕರೆಸಿ, ನಮ್ಮವರಿಗೆ ಸಾವಿರದಲ್ಲಿ ಕೊಡಲೂ ಚೌಕಾಸಿ ಮಾಡುತ್ತಾರೆ.

ಕನ್ನಡ ಚಿತ್ರಗಳಲ್ಲಿ ತಂತ್ರಜ್ಞರು, ಫೈಟರ್‌ಗಳು, ಸಂಗೀತಗಾರರು ಬಹುತೇಕ ಹೊರ ರಾಜ್ಯಗಳಿಂದಲೇ ಬಂದವರಾಗಿರುತ್ತಾರೆ. ನಮ್ಮವರು ಮೈಚಳಿ  ಬಿಟ್ಟು ನಟಿಸುವುದಿಲ್ಲ ಎನ್ನುವ ನೆಪದಲ್ಲಿ ಹೊರ ರಾಜ್ಯಗಳಿಂದ ನಟಿಯರನ್ನು ಕರೆಸಲಾಗುತ್ತದೆ. ರೀಮೇಕ್ ಹೆಸರಿನಲ್ಲಿ ನಮ್ಮ ನಾಡು, ನುಡಿ ಮತ್ತು ಸಂಸ್ಕೃತಿಯನ್ನು ಮರೆಯಲಾಗಿದೆ. ಈ ಸಂದರ್ಭಗಳಲ್ಲಿ ನೆನಪಾಗದ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಕನ್ನಡಿಗರ ಹೊಟ್ಟೆಪಾಡು ಡಬ್ಬಿಂಗ್‌ ವಿಷಯದಲ್ಲಿ ಮಾತ್ರ ನೆನಪಾಗುತ್ತದೆ. ಕೆಲವರ ವ್ಯಾವಹಾರಿಕ ದೃಷ್ಟಿಕೋನ ಮತ್ತು ಸ್ವಹಿತವನ್ನು ಕನ್ನಡದ ಹಿತವಾಗಿ ಪರಿಗಣಿಸಿ, ಡಬ್ಬಿಂಗ್‌ ವಿರೋಧಿ ಹೋರಾಟವನ್ನಾಗಿ ಮಾರ್ಪಡಿಸಲಾಗುತ್ತಿದೆ.

ಒಂದು ಭಾಷೆ ಉಳಿದು ಬೆಳೆಯುವುದು ಅದು ಕಿವಿ ಮೇಲೆ ಬಿದ್ದಾಗ ಮತ್ತು ಸದಾ ಕಣ್ಣಿಗೆ ಕಾಣುತ್ತಿದ್ದಾಗ ಮಾತ್ರ. ಡಬ್ಬಿಂಗ್‌ ಬಂದರೆ ಕನಿಷ್ಠ ಅಷ್ಟರ ಮಟ್ಟಿಗಾದರೂ ಕನ್ನಡ  ಉಳಿಯುತ್ತದೆ. ಇಂದು ಹಿಂದಿ ನಮ್ಮ ರಾಜ್ಯದಲ್ಲಿ ಪ್ರಚಲಿತವಿದ್ದರೆ ಅದಕ್ಕೆ ಕಾರಣ ದೂರದರ್ಶನದಲ್ಲಿ ವರ್ಷಾನುಗಟ್ಟಲೆ ಬಂದ ಮಹಾಭಾರತ, ರಾಮಾಯಣ ಮತ್ತು  ಕ್ರಿಕೆಟ್ ಕಾಮೆಂಟರಿ ಎಂಬುದನ್ನು ಮರೆಯಲಾಗದು.
-ರಮಾನಂದ ಶರ್ಮಾ,
ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.