ಸಾಕಷ್ಟು ಯಾತನೆಯ ವರ್ಷಗಳ ನಂತರ ಬದಲಾವಣೆಗೆ ತೆರೆದುಕೊಳ್ಳುತ್ತಿದ್ದ ಆಫ್ಘಾನಿಸ್ತಾನ ಮತ್ತೆ ತಾಲಿಬಾನ್ ಯುಗಕ್ಕೆ ಮರಳುತ್ತಿದೆಯೇ? ಆ ದೇಶದ ಉನ್ನತ ಉಲೇಮಾ ಧಾರ್ಮಿಕ ಮಂಡಳಿ ಈಚೆಗೆ ಹೊರಡಿಸಿದ `ಮಹಿಳಾ ವಿರೋಧಿ~ ಹುಕುಂ ಮತ್ತೆ ಅಂಥ ಅನುಮಾನ ಹುಟ್ಟುಹಾಕುತ್ತಿದೆ. ಅದರ ಪ್ರಕಾರ ಇನ್ನು ಮುಂದೆ ಪುರುಷರಿರುವ ಕಡೆ ಮಹಿಳೆಯರು ಉದ್ಯೋಗಕ್ಕೆ ಹೋಗುವಂತಿಲ್ಲ, ಹುಡುಗರಿದ್ದ ಶಾಲೆಗಳಲ್ಲಿ ಓದುವಂತಿಲ್ಲ, ಪುರುಷ ಸಂಬಂಧಿಯೊಬ್ಬ ಜೊತೆಗೆ ಇಲ್ಲದಿದ್ದರೆ ಮನೆಯಿಂದ ಹೊರಕ್ಕೆ ಬರುವಂತಿಲ್ಲ, ಒಟ್ಟಾರೆ ಸಾರ್ವಜನಿಕವಾಗಿ ಇಬ್ಬರೂ ಬೆರೆಯುವಂತಿಲ್ಲ.
`ಇಸ್ಲಾಂ ಪ್ರಕಾರ ಮಹಿಳೆಯರ ಕರ್ತವ್ಯ ಮತ್ತು ಹಕ್ಕುಗಳನ್ನು ಪಟ್ಟಿ ಮಾಡಿ~ ಉಲೇಮಾ ಮಂಡಳಿ ಹೊರಡಿಸಿದ ಪ್ರಕಟಣೆಯಲ್ಲಿ ಈ ನಿರ್ಬಂಧಗಳಿವೆ. ಸುಧಾರಣಾವಾದಿ ಎಂದು ತೋರಿಸಿಕೊಳ್ಳುತ್ತಿರುವ ಅಧ್ಯಕ್ಷ ಹಮೀದ್ ಕರ್ಜೈ ಕೂಡ ಇದನ್ನು ಸ್ವಾಗತಿಸಿದ್ದಾರೆ. ಇದು ಆತಂಕಕಾರಿ ಬೆಳವಣಿಗೆ ಎನ್ನುತ್ತಿದೆ ಮಾನವ ಹಕ್ಕು ಸಂಘಟನೆ `ಹ್ಯೂಮನ್ ರೈಟ್ಸ್ ವಾಚ್~.
ಆದರೆ ತನ್ನ ಈ ಸೂಚನೆಗಳು `ಆದೇಶ ಅಲ್ಲ; ಬರೀ ಮನವಿ. ಮಹಿಳೆಯರಿಗೆ ಸಂಬಂಧಿಸಿದಂತೆ ಇಸ್ಲಾಂನ ಕಟ್ಟುಪಾಡುಗಳನ್ನು ನೆನಪಿಸುವುದಷ್ಟೆ ಇದರ ಉದ್ದೇಶ~ ಎನ್ನುತ್ತಿದೆ ಮಂಡಳಿ.
ಹಾಗಂತ ಮಂಡಳಿಯ ಈ ಸ್ಪಷ್ಟನೆಯನ್ನು ಪ್ರಗತಿಪರರು ಒಪ್ಪುತ್ತಿಲ್ಲ. ಇದು ತಾಲಿಬಾನ್‌ನ ದಿನಗಳನ್ನು ನೆನಪಿಸುತ್ತಿದೆ ಎಂಬುದು ಅವರ ಆಕ್ಷೇಪ. ಎರಡು ವರ್ಷಗಳ ಹಿಂದೆ ತಾಲಿಬಾನ್ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಬಚಾವಾದ ಆಫ್ಘಾನ್ ಪಾರ್ಲಿಮೆಂಟ್‌ನ ಪ್ರಮುಖ ಸದಸ್ಯೆ ಫೌಜಿಯಾ ಕೂಫಿ ಅವರಂತೂ `ಇದು ತಾಲಿಬಾನ್ ಕಾಲದ ಕರಾಳ ದಿನಗಳತ್ತ ಮಹಿಳೆಯರನ್ನು ತಳ್ಳುವ ಯತ್ನದ ಆರಂಭ~ ಎಂದು ಟೀಕಿಸಿದ್ದಾರೆ. `ಇದು ಅಪಾಯಕಾರಿ, ಆಫ್ಘಾನ್ ಮಹಿಳೆಯರಿಗೆ ಎಚ್ಚರಿಕೆಯ ಗಂಟೆ~ ಎಂದು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
`ನಾವು ಸ್ವತಂತ್ರರಾಗಿರಲು ಬಯಸುತ್ತೇವೆ~ (ವಿ ವಾಂಟ್ ಟು ಬಿ ಫ್ರೀ) ಎಂಬ ಹೆಸರಿನ ಆಂದೋಲನದ ಕಾರ್ಯಕರ್ತರಂತೂ ಈ ನಿರ್ಬಂಧಗಳನ್ನು ಹೇರುತ್ತಿರುವ ಸಮಯಕ್ಕೂ ಅಧ್ಯಕ್ಷರ ನಡೆಗೂ ಸಂಬಂಧ ಇದೆ ಎನ್ನುತ್ತಿದ್ದಾರೆ. `ತಾಲಿಬಾನಿಗಳನ್ನು ಒಲಿಸಿಕೊಳ್ಳಲು ಅಧ್ಯಕ್ಷ ಕರ್ಜೈ ಯತ್ನಿಸುತ್ತಿದ್ದಾರೆ. ಅವರೊಡನೆ ಶಾಂತಿ ಸಾಧಿಸುವ ಉಮೇದಿನಲ್ಲಿ ಮಹಿಳೆಯರ ಹಕ್ಕುಗಳನ್ನು ಬಲಿ ಕೊಡಲು ತಯಾರಾಗಿದ್ದಾರೆ. ಈ ಮೂಲಕ ತಾಲಿಬಾನಿಗಳನ್ನು ಸಂಧಾನದ ಮೇಜಿಗೆ ಕರೆತರುವ, ನಮ್ಮ ನಿಮ್ಮ ಧೋರಣೆಗಳ ಮಧ್ಯೆ ಭಾರೀ ಪ್ರಮಾಣದ ಸಾಂಸ್ಕೃತಿಕ ಅಂತರ ಇಲ್ಲ ಎಂದು ತೋರ್ಪಡಿಸುವ ಉದ್ದೇಶ ಇರಬಹುದು~ ಎಂದು ಆರೋಪಿಸುತ್ತಾರೆ ಹ್ಯೂಮನ್ ರೈಟ್ಸ್ ವಾಚ್‌ನ ಹೀತರ್ ಬಾರ್.
`ಬಂಡುಕೋರರ ಜತೆ ನಡೆಯುವ ಯಾವುದೇ ಒಪ್ಪಂದದಲ್ಲಿ ಬೆಲೆ ತೆರಬೇಕಾದವರು ಮಹಿಳೆಯರು. ಭಾರಿ ಮೊತ್ತದ ಅಂತರರಾಷ್ಟ್ರೀಯ ನೆರವಿನೊಡನೆ ದೇಶ ಇತ್ತೀಚಿನ ವರ್ಷಗಳಲ್ಲಿ ಸಾಧಿಸಿದ ಪ್ರಗತಿ ಇದರಿಂದ ಮತ್ತೆ ಹಿಂದಕ್ಕೆ ಹೋಗುವಂತಾಗುತ್ತದೆ. ನಾವು ಸುಧಾರಣೆಗಾಗಿ 10 ವರ್ಷ ಹೋರಾಡಿದ್ದೇವೆ. ಅದರಿಂದ ಸಾಕಷ್ಟು ಮುಂದೆ ಬಂದಿದ್ದೇವೆ. ಆದರೆ ಈಗ ನಡೆಯುವುದನ್ನು ನೋಡಿದರೆ ನಾವು ಮತ್ತು ಅಂತರರಾಷ್ಟ್ರೀಯ ಸಮುದಾಯ ಅಪಾರ ಹಣ, ಪ್ರಾಣ ತ್ಯಾಗ ಮಾಡಿ ಗಳಿಸಿದ್ದು ನಿರರ್ಥಕವಾಗಲಿದೆ~ ಎಂದು ಆತಂಕದಿಂದಲೇ ಹೇಳುತ್ತಾರೆ ಕೂಫಿ.
ಬೆಲೆಯಿಲ್ಲದ ಆದೇಶ: ಇದರ ನಡುವೆಯೇ ಕಾಬೂಲ್‌ನ ಕೆಲ ಯುವತಿಯರು ಮಾತ್ರ ಉಲೇಮಾಗಳ ಕಟ್ಟಪ್ಪಣೆಯನ್ನು ನಿರ್ಲಕ್ಷಿಸುವ ಆಲೋಚನೆಯಲ್ಲಿದ್ದಾರೆ. `ಜನ ಇದಕ್ಕೆ ಕಿಮ್ಮತ್ತು ಕೊಡದೇ ಇರುವುದೇ ಮೇಲು. ಶಾಲೆಗಳಲ್ಲಿ ಹುಡುಗರ ಜತೆ ಹುಡುಗಿಯರು ತೊಂದರೆ ಇಲ್ಲದೆ ಓದಬಹುದು. ಅವರಿಗೇನೂ ಸಮಸ್ಯೆಯಿಲ್ಲ. ನಾವು ಸ್ವತಂತ್ರವಾಗಿ ಓದಲು, ಬದುಕಲು, ಆಲೋಚಿಸಲು ಬಯಸುತ್ತೇವೆ~ ಎನ್ನುತ್ತಾಳೆ ವೈದ್ಯಕೀಯ ಕಲಿಯುವ ಆಸೆ ಇಟ್ಟುಕೊಂಡ ಯುವ ವಿದ್ಯಾರ್ಥಿನಿ ಫ್ರೆಬಾ.
ಆಫ್ಘಾನಿಸ್ತಾನದ ಚಾನೆಲ್ 1 ಟಿವಿಯಲ್ಲಿ ನಿರೂಪಕಿಯಾಗಿರುವ 23 ವರ್ಷದ ನಿಶಾನಿ ಇಬ್ರಾಹಿಮಿಗೆ ಮಾತ್ರ ಉಲೇಮಾಗಳ ಆದೇಶದಿಂದ ನಿರಾಶೆಯಾಗಿದೆ. ಆಕೆಯ ಕಚೇರಿಯಲ್ಲಿನ ತಾಂತ್ರಿಕ ಸಿಬ್ಬಂದಿಗಳೆಲ್ಲ ಪುರುಷರು. `ಅವರ ಜತೆ ಕೆಲಸ ಮಾಡಬಾರದು ಎನ್ನುವುದು ಅತಿರೇಕ. ನನ್ನ ಕೆಲಸದ ಬಗ್ಗೆ ನನಗಂತೂ ಹೆಮ್ಮೆಯಿದೆ. ಮನೆಯಿಂದ ಹೊರಗೆ ಒಂದೇ ಕಚೇರಿಯಲ್ಲಿ ಪುರುಷರ ಜತೆ ಉದ್ಯೋಗ ಮಾಡುವುದು ನನಗಂತೂ ಸಮಸ್ಯೆ ಎನಿಸಿಲ್ಲ~ ಎಂದಾಕೆ ಹೇಳುತ್ತಾರೆ.
ಕೆಲ ಸಮಯದ ಹಿಂದೆ ಟಿವಿಗಳಲ್ಲಿ ವಾರ್ತೆ ಓದುವ ಮಹಿಳೆಯರು ಕಡ್ಡಾಯವಾಗಿ ತಲೆಗೆ ಮುಸುಕು ಧರಿಸಬೇಕು, ಅತಿಯಾಗಿ ಮೇಕಪ್ ಮಾಡಿಕೊಳ್ಳಬಾರದು ಎಂದು ಸರ್ಕಾರ ನೀಡಿದ್ದ ಸೂಚನೆ ದೊಡ್ಡ ಸುದ್ದಿಯಾಗಿತ್ತು.
ಈಗಲೂ ಇಬ್ರಾಹಿಮಿ ವಾರ್ತೆ ಓದುವಾಗ ತಲೆಗೆ ವಸ್ತ್ರ ಹೊದ್ದುಕೊಳ್ಳುತ್ತಾರೆ. ಆದರೆ ಮೇಕಪ್ ಮಾತ್ರ ಬಿಟ್ಟಿಲ್ಲ. ಉಲೇಮಾಗಳ ಆದೇಶದ ಹಿನ್ನೆಲೆಯಲ್ಲಿ ಆಫ್ಘಾನ್ ಮಹಿಳೆಯರ ಭವಿಷ್ಯದ ಬಗ್ಗೆ ಆಕೆಗೆ ಭಯವಂತೂ ಇದ್ದೇ ಇದೆ. `ತಾಲಿಬಾನ್ ಮತ್ತು ಸರ್ಕಾರದ ನಡುವಿನ ಸಂಧಾನ ಮಾತುಕತೆಯ ಬಗ್ಗೆ ಅನೇಕ ಮಹಿಳೆಯರಿಗೆ ಆತಂಕವಾಗಿದೆ. ಒಪ್ಪಂದಕ್ಕೆ ನಾನು ಕಟ್ಟಾ ವಿರೋಧಿ. ತಾಲಿಬಾನ್ ಮತ್ತೆ ಮರಳಿ ಬಂದರೆ ನಮಗೆ ಸಂಕಷ್ಟ ತಪ್ಪಿದ್ದಲ್ಲ~ ಎಂದು ಆಕೆ ಹೇಳುತ್ತಾರೆ.
`ಉಲೇಮಾ ಮಂಡಳಿಯ ಹೇಳಿಕೆ ದೇಶದಲ್ಲಿ ತಾಲಿಬಾನೀಕರಣದ ಪ್ರಕ್ರಿಯೆಯ ಆರಂಭ~ ಎನ್ನುವುದು ಕೂಫಿ ವ್ಯಾಖ್ಯಾನ. `ಒಟ್ಟಿಗೆ ಉದ್ಯೋಗ ಮಾಡುವ, ಒಟ್ಟಿಗೆ ಒಡನಾಡುವ, ಮುಕ್ತವಾಗಿ ತಿರುಗಾಡುವ ಕೆಲ ಮೂಲಭೂತ ಹಕ್ಕುಗಳನ್ನೂ ಕಿತ್ತುಕೊಳ್ಳುವ ಕೆಲಸವನ್ನು ಉಲೇಮಾಗಳು ಆರಂಭಿಸಿದ್ದಾರೆ. ನನಗಂತೂ ಇದು ಹೀಗೆ ಮುಂದುವರಿದರೆ ನನ್ನ ಹೆಣ್ಣುಮಕ್ಕಳು, ಜೊತೆಗೆ ಈ ದೇಶದ ಹುಡುಗಿಯರು, ಮಹಿಳೆಯರ ಗತಿಯೇನು ಎಂಬ ಚಿಂತೆ. ಮೌಲ್ವಿಗಳು ಮತ್ತು ಅಧ್ಯಕ್ಷರು ಇಂಥ ಒಂದು ವಿಚಾರ ಹರಿ ಬಿಡುವ ಮೂಲಕ ದೇಶದ ಒಳಗೆ- ಹೊರಗೆ ಏನು ಪ್ರತಿಕ್ರಿಯೆ ಬರಬಹುದು ಎಂದು ನೋಡುವ ತಂತ್ರ ಅನುಸರಿಸಿದಂತೆ ಕಾಣುತ್ತದೆ. ಈಗ ನಾವು ಯಾವುದೇ ಪ್ರತಿರೋಧ ತೋರದಿದ್ದರೆ ಇನ್ನಷ್ಟು ಕರಾಳ ನಿರ್ಬಂಧಗಳನ್ನು ಅನುಭವಿಸುವ ದಿನಗಳು ಬರಬಹುದು~ ಎಂದಾಕೆ ಎಚ್ಚರಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.