ADVERTISEMENT

ನಿಷ್ಕರುಣಿ ಅಪ್ಪಂದಿರ ಕ್ರೂರತನ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2012, 19:30 IST
Last Updated 26 ಏಪ್ರಿಲ್ 2012, 19:30 IST

ಇತ್ತೀಚೆಗೆ ಹೆಣ್ಣು ಶಿಶುಗಳ ಹತ್ಯೆ ಪ್ರಮಾಣ ಹೆಚ್ಚಾಗಿದೆ. ಈ ಸಮಾಜಕ್ಕೆ ಹೆಣ್ಣು ಮಗು ಬೇಡವೆ? ಹೆಣ್ಣು ಮಗುವಿಲ್ಲದೇ ಜಗತ್ತು ನಡೆಯುತ್ತದೆಯೆ? ಗಂಡು ಕೂಡ ತಾಯಿಯ ಗರ್ಭದಿಂದಲೇ ಹುಟ್ಟಿದವನಲ್ಲವೇ? ಎಲ್ಲರೂ ಗಂಡು ಮಕ್ಕಳನ್ನೇ ಹೆತ್ತರೆ ಅವರ ಮದುವೆಗೆ ಹೆಣ್ಣುಗಳೇನು ಗಿಡದಲ್ಲಿ ಬೆಳೆವ ಹಣ್ಣುಗಳೇ? ಹೆಣ್ಣು ಮಗುವಿಲ್ಲದ ಕುಟುಂಬದಲ್ಲಿ ಲವಲವಿಕೆಯೇ ಇಲ್ಲ.

ಹೆಣ್ಣು ಜೀವನೋತ್ಸಾಹದ ಪ್ರತೀಕ. ಬದುಕನ್ನು ರೂಪಿಸುವವಳೇ ಹೆಣ್ಣು. ಅವಳಿಲ್ಲದ ಸಮಾಜವನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಅಂತಹ ಸ್ಥಿತಿ ಸೃಷ್ಟಿಯ ಅಂತ್ಯವೂ ಹೌದು.

ಹೆಣ್ಣು ಮಗುವನ್ನು ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಬೇಕಿದ್ದ ಕೆಲವು ಅಪ್ಪಂದಿರಲ್ಲಿ ಅದೇಕೆ ಇಂತಹ ಕ್ರೌರ್ಯ ಮೂಡುತ್ತಿದೆ? ನೇಹಾ ಆಫ್ರೀನ್‌ಬಾನು ಎಂಬ ಕೂಸನ್ನು ಕೊಂದವನು ಅತ್ಯಂತ ನಿಷ್ಕರುಣಿ ತಂದೆ.

ಮೂರು ತಿಂಗಳ ಹಸುಗೂಸನ್ನು ಕಚ್ಚಿ, ಸಿಗರೇಟಿನಿಂದ ಸುಟ್ಟು, ತಲೆಯನ್ನು ಗೋಡೆಗೆ ಜಜ್ಜಿ, ದಿಂಬನ್ನು ಮುಖಕ್ಕಿಟ್ಟು ಅದುಮಿ ಕೊಲೆ ಮಾಡಿದ ದುಷ್ಟ.  ಹೆತ್ತ ತಂದೆಯ ಪೈಶಾಚಿಕ ಕೃತ್ಯಕ್ಕೆ ಬಲಿಯಾದ ನೇಹಾ ಕಣ್ಣು ಬಿಡುವ ಮೊದಲೇ ಮಣ್ಣು ಸೇರಿದ ಘಟನೆ ಅತ್ಯಂತ ದಾರುಣವಾದದ್ದು.

ಎರಡು ವರ್ಷದ ಹಸುಳೆ `ಬೇಬಿ ಫಾಲಕ್~ ಎಂಬ ಮಗು ಕೂಡ ತಂದೆಯ ದೌರ್ಜನ್ಯಕ್ಕೊಳಗಾಗಿ ನರಳಿ ದೆಹಲಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆಯಿತು. ಫಾಲಕ್‌ಳ ತಾಯಿ ಮುನ್ನಿಯ ಬದುಕು ಸಹ ಯಾತನಾಮಯವಾಗಿತ್ತು. ಫಾಲಕ್‌ಳ ಎರಡೂ ಕೈಗಳು ಮುರಿದಿದ್ದವು. ತಲೆ ಬುರುಡೆಯಲ್ಲಿ ಬಿರುಕು ಬಿಟ್ಟಿತ್ತು.

ಮೈಯೆಲ್ಲಾ ಗಾಯಗಳಾಗಿದ್ದವು. ಪ್ರಜ್ಞಾಹೀನಳಾಗಿ ಸಾವು ಬದುಕಿನೊಂದಿಗೆ ಎರಡು ತಿಂಗಳು ಹೋರಾಟ ನಡೆಸಿದ ಫಾಲಕ್ ಕೊನೆಗೂ ಉಳಿಯಲಿಲ್ಲ. ಫಾಲಕ್ ತಾಯಿ ಮುನ್ನಿಗೆ ಮೂರು ಮಕ್ಕಳನ್ನು ಕರುಣಿಸಿದ್ದ ಅವಳ ಗಂಡ ಓಡಿಹೋದ.

ದೆಹಲಿಯ ಶಾ ಹುಸೇನಿ ಎಂಬುವನು ಮುನ್ನಿ ಹಾಗೂ ಅವಳ ಮಕ್ಕಳನ್ನು ಸಾಕುವುದಾಗಿ ಹೇಳಿ ತನ್ನ `ತೃಷೆ~ ತೀರಿಸಿಕೊಂಡ ನಂತರ ಹೆಣ್ಣು ಸಂತತಿಯ ಬರ ಎದುರಿಸುತ್ತಿರುವ ರಾಜಸ್ತಾನದ ಮುದುಕನೊಬ್ಬನಿಗೆ ಅವಳನ್ನು ಮಾರಿದ್ದ. ಹುಸೇನಿ ಮತ್ತವಳ ಮೂರು ಹೆಣ್ಣು ಮಕ್ಕಳನ್ನು ರಾಜಸ್ತಾನದ ಮುದುಕ ಮಾರಿ ಪರಾರಿಯಾದ.

ಆಂಧ್ರದ ಹೈದರಾಬಾದಿನ ಪ್ರಕಾಶಂ ಜಿಲ್ಲೆಯ ಪಮರುನಲ್ಲಿ ಸಲೀಮಾಬೇಗಂ, ನಜೀರ್‌ಖಾನ್ ಎಂಬ ದಂಪತಿಗಳಿಗೆ ಶಕೀರನ್  ಮತ್ತು ಶಾಜೀದಾ  ಎಂಬ ಇಬ್ಬರು ಹೆಣ್ಣು ಮಕ್ಕಳು. ಹಿರಿಯ ಮಗಳು 8 ವರ್ಷದವಳಿರುವಾಗ ಕುತ್ತಿಗೆ ಹಿಸುಕಿ ಸಾಯಿಸಿ ಕೆರೆಗೆ ಎಸೆದ. ಈ ಘಟನೆ ನಡೆದದ್ದು 1998ರಲ್ಲಿ.
 
ಅನಂತರ ಎಸ್‌ಎಸ್‌ಎಲ್‌ಸಿವರೆಗೆ ಓದಿದ ಚಿಕ್ಕ ಮಗಳು ಶಾಜೀದಾ (16)ಳಿಗೆ ತಂಪು ಪಾನೀಯದಲ್ಲಿ ನಿದ್ದೆ ಗುಳಿಗೆ ಹಾಕಿ ರೈಲು ಹಳಿ ಮೇಲೆ ಮಲಗಿಸಿದ. ರೈಲಿಗೆ ಸಿಕ್ಕಿ ಅವಳ ಕತ್ತು   ತುಂಡರಿಸಿದ್ದನ್ನು ನೋಡಿದ ನಜೀರ್‌ಖಾನ್ ವರದಕ್ಷಿಣೆಯ ಕಾಟ ತಪ್ಪಿತು. ಹತ್ತು ಲಕ್ಷ ಹಣ ಉಳಿಯಿತು ಎಂದುಕೊಂಡ. ಅವನಂತಹ ಪಾಪಿ ತಂದೆ ಎಲ್ಲದರೂ ಇರಲು ಸಾಧ್ಯವೇ?

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಎರಡು ದಿನಗಳ ಹಸುಗೂಸಿಗೆ ಅವಳ ಅಪ್ಪನೇ ನಿಕೋಟಿನ್ ಕೊಟ್ಟು ಸಾಯಿಸಿದ. ಹರಿಯಾಣದ ಜಾಜ್ಜರ್ ಜಿಲ್ಲೆಯ ಬಾಹು ಗ್ರಾಮದಲ್ಲಿ ಇದೇ ತಿಂಗಳು 12ರಂದು ತನ್ನ ಮೂವರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ಮುಖೇಶ್ ಎಂಬ ಹೆಸರಿನ ತಂದೆಯೇ ನೇಣು ಹಾಕಿದ.

ಜಿಯಾ (4)ಮೃತಪಟ್ಟರೆ, ಅವಳ ಸೋದರಿಯರಾದ ಪಾಯಲ್ (7) ಮತ್ತು ವರ್ಷಾ ಸ್ಥಳೀಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಸಾವು ಬದುಕಿನೊಂದಿಗೆ ಹೋರಾಡುತ್ತಿದ್ದಾರೆ. ಮುಖೇಶ್ ತನ್ನ ಹೆಣ್ಣುಮಕ್ಕಳಿಗೆ ದೊಣ್ಣೆಯಿಂದ ಥಳಿಸಿ ಅನಂತರ ಫ್ಯಾನಿಗೆ ನೇಣು ಹಾಕಿದ್ದ.

ಜನ್ಮಕ್ಕೆ ಕಾರಣನಾದ  ಅಪ್ಪ ಎಂತಹ ಕ್ರೂರ ಪಶುವಾಗುತ್ತಾನಲ್ಲ? ತನ್ನದೇ ಮಕ್ಕಳ ಕೊಲೆ ಮಾಡುವ ಅಪ್ಪಂದಿರನ್ನು  ಈ ಸಮಾಜ, ಕಾನೂನು ಹೇಗೆ ಕ್ಷಮಿಸಲು ಸಾಧ್ಯ?
ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಹುಟ್ಟಿದ ಹೆಣ್ಣು ಕೂಸುಗಳನ್ನು ಕೊಲ್ಲುವ ಕ್ರಮಗಳು ಅತ್ಯಂತ ಭಯಾನಕ.
 
ಹೆಣ್ಣು ಮಗು ಹುಟ್ಟಿತು ಎಂದು ಗೊತ್ತಾದ ಕೂಡಲೇ ಆರೈಕೆ ಮಾಡದೆ ಸಾಯಿಸಲಾಗುತ್ತದೆ. ಮಣ್ಣಿನ ಮಡಕೆಯಲ್ಲಿ ಜೀವಂತ ಹೂತಿಟ್ಟು ಕೊಲ್ಲುತ್ತಾರೆ. ಎಳೆಯ ಕೂಸಿನ ಗಂಟಲಿಗೆ ಭತ್ತ ಕಾಳುಗಳನ್ನು ಹಾಕುತ್ತಾರೆ. ಹುಟ್ಟಿದ ಮಗು ಹೆಣ್ಣು ಎಂದು ಗೊತ್ತಾದ ಕೂಡಲೇ ತಾಯಿಗೆ ಕಿರುಕುಳ ಆರಂಭವಾಗುತ್ತದೆ.

ಹೆಣ್ಣು ಹೆತ್ತದ್ದಕ್ಕೆ ಅಸಡ್ಡೆಯ ಆರೈಕೆ. ನಿರ್ಲಕ್ಷ್ಯತನದ ಬಾಣಂತನ, ಕುಹಕದ ಮಾತುಗಳು. ಹೆಣ್ಣು ಹೆತ್ತ ತಾಯಿಗೆ  ಕುಟುಂಬ ನೀಡುವ ಬಳುವಳಿ ಅದು.  ಹೆಣ್ಣಾಗಿ ಹುಟ್ಟಿದ ಒಂದೇ ಕಾರಣಕ್ಕೆ ಪ್ರತಿವರ್ಷ ಭಾರತದಲ್ಲಿ ಲಕ್ಷಾಂತರ ಹೆಣ್ಣು ಶಿಶುಗಳ ಸದ್ದು ಅಡಗುತ್ತದೆ.

ಇದು ಹೆಣ್ಣಾಗಿ ಜನ್ಮ ತಳೆದ ಮಕ್ಕಳ ಕತೆಯಾದರೆ, ಭೂಮಿಗೆ ಬರುವ ಮೊದಲೇ, ತಾಯಿಯ ಗರ್ಭದಲ್ಲಿರುವಾಗಲೇ ಅದು  “ಹೆಣ್ಣು” ಎಂದು ಗೊತ್ತು ಮಾಡಿಕೊಂಡು ಹೊಸಕಿ ಹಾಕುತ್ತಾರೆ. ಕಳೆದ ಒಂದು ದಶಕದಲ್ಲಿಯೇ, 80,00,000 ಹೆಣ್ಣು ಭ್ರೂಣಗಳು ತಾಯಂದಿರ ಗರ್ಭದಲ್ಲಿಯೇ ಕೊನೆಯುಸಿರು ಎಳೆದಿವೆ.
 
ಗಂಡು ಹೆಣ್ಣು ನಡುವಿನ ಅನುಪಾತದಲ್ಲಿ ಏರಿಳಿತಗಳಾಗಿವೆ. ಪ್ರತಿ 1000 ಪುರುಷರಿಗೆ  908 ಮಹಿಳೆಯರಿದ್ದಾರೆ ಎಂದು 2011ರ ಜನಗಣತಿಯಿಂದ  ದೃಢಪಟ್ಟಿದೆ. ಹೆಣ್ಣು ಭ್ರೂಣಹತ್ಯೆ, ಹೆಣ್ಣು ಶಿಶು ಹತ್ಯೆಗಳು ನಮ್ಮ ಕ್ರೂರ ವ್ಯವಸ್ಥೆಗೆ ಹಿಡಿದ ಕೈಗನ್ನಡಿ. ಹೆಣ್ಣು ಶಿಶುಗಳು ಜೀವಿಸುವ ಹಕ್ಕನ್ನು ಬಲವಾಗಿ ಪ್ರತಿಪಾದಿಸಬೇಕು. ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಮಗುವಿನ ಬದುಕುವ  ಹಕ್ಕು ಸಂರಕ್ಷಣೆಯಾಗಬೇಕು.

 ಮಲಗಿದ ನಮ್ಮ ಆತ್ಮಗಳನ್ನು ನೇಹಾ ಆಫ್ರಿನ್‌ನಂತಹ ಮಕ್ಕಳು ಅಲ್ಲಾಡಿಸಿವೆ. ಅಪ್ಪನ ಕ್ರೂರತನಕ್ಕೆ ನೇಹಾನಂತಹ ಅಮಾಯಕ ಕಂದಮ್ಮಗಳು ಬಲಿಯಾಗುತ್ತಿವೆ. ನಮ್ಮ ಸಮಾಜದ ಕುರೂಪಗಳಿಗೆ ನೇಹಾ ಕೈಗನ್ನಡಿ. ಸ್ವಾರ್ಥಿಗಳ ಸಾಮ್ರಾಜ್ಯದಲ್ಲಿ ಮಾನವೀಯತೆ ಸಿಕ್ಕಿ ನರಳಿ ಬಿಕ್ಕುತ್ತಿದೆ. ಕಂದಮ್ಮಗಳ ರಕ್ಷಿಸಬೇಕಾದ ಕುಟುಂಬಗಳಿಂದು ಕ್ರೌರ್ಯದ ಗೂಡಾಗಿರುವುದನ್ನು ಪ್ರಶ್ನಿಸುತ್ತಿವೆ. “

ನಡುವೆ ಸುಳಿವಾತ್ಮ ಗಂಡೂ ಅಲ್ಲ ಹೆಣ್ಣೂ ಅಲ್ಲ” ಎಂದ ಹನ್ನೆರಡನೆಯ ಶತಮಾನದ ಶರಣರ ವಾಣಿ ಸತ್ಯವಾಗುವುದೆಂದು? ಹೆಣ್ಣು ಶಿಶುಗಳ ಜೀವಿಸುವ ಹಕ್ಕು ಮಾನವ ಹಕ್ಕಲ್ಲವೇ? ಅದನ್ನು ಜಾರಿ ಮಾಡುವವರು ಯಾರು? ಇವೆಲ್ಲ ಪ್ರಶ್ನೆಗಳನ್ನು ಮಗು ಆಫ್ರೀನ್ ನಮ್ಮ ಮುಂದಿಟ್ಟಿದ್ದಾಳೆ. ಇದನ್ನು ಎದುರಿಸುವ ನೈತಿಕ ಸ್ಥೈರ್ಯ ನಮ್ಮ ಸಮಾಜಕ್ಕಿದೆಯೆ? ಎಂದು ನಾವು ಈಗ ಪ್ರಶ್ನಿಸಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.