ಸುತ್ತೂರಿನಲ್ಲಿ ಇತ್ತೀಚೆಗೆ ಮೂರು ದಿನಗಳ ಕಾಲ ವೀರಶೈವ ಮಹಾಸಭೆಯ ಅಧಿವೇಶನ ಅಚ್ಚುಕಟ್ಟಾಗಿಯೇ ಜರುಗಿದೆ. ಎಂದಿನಂತೆ ಅಧಿವೇಶನದ ಕೊನೆಯ ದಿನ ಕೆಲವು ನಿರ್ಣಯಗಳನ್ನು ಸ್ವೀಕರಿಸಲಾಗಿದೆ. ಇವುಗಳಲ್ಲಿ ಮುಖ್ಯವಾಗಿ, ‘ಒಳಪಂಗಡಗಳ ಆಂತರಿಕ-ಬಹಿರಂಗ ಭಿನ್ನಾಭಿಪ್ರಾಯಗಳನ್ನು ಮರೆತು ನಾವೆಲ್ಲ ಒಂದು ಎಂಬ ದೃಢಸಂಕಲ್ಪ ಮಾಡಿ ಅದನ್ನು ಅನುಷ್ಠಾನಕ್ಕೆ ತರಬೇಕು’ ಎಂಬ ಸಾಲು ಸೇರಿದಂತೆ ಇನ್ನೊಂದೆರಡು ನಿರ್ಣಯಗಳನ್ನು ಅವಶ್ಯವಾಗಿ ಪ್ರಸ್ತಾಪಿಸಲೇಬೇಕಿದೆ.
ಈ ಸಮಾವೇಶದಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದ ಪಂಚಾಚಾರ್ಯ ಜಗದ್ಗುರುಗಳು ಮತ್ತು ಅವರ ಭಾಷಣದ ಬಗ್ಗೆ ಹಾಗೂ ಸಮಾವೇಶದ ಕೆಲವು ನಿರ್ಣಯಗಳ ನಡುವೆ ಕಾಣದ ತರಂಗಗಳು ಹೇಗೆ ಕೆಲಸ ಮಾಡಿವೆ ಎಂಬುದನ್ನು ಅರಿಯಬೇಕಿದೆ.
ಬಸವತತ್ವಗಳ ಆರಾಧಕರಲ್ಲಿ ಸಂಘರ್ಷಪೀಡಿತ ಪಂಥೀಯರು ಎಂದೇ ಗುರುತಿಸಿಕೊಂಡಿರುವ ಪಂಚಾಚಾರ್ಯರು ಮತ್ತು ಅವರ ತತ್ವಗಳು ಹೇಗೆ ಕಾಲಕಾಲಕ್ಕೆ ಬದಲಾಗುತ್ತಾ ಬಂದಿವೆ ಎಂಬ ಸೂಕ್ಷ್ಮಗಳಿಗೆ ಈ ತರಂಗಗಳು ಸಾಕ್ಷಿಯಾಗಬಲ್ಲವು.
ವೀರಶೈವರು-ಲಿಂಗಾಯತರು ಎಂಬ ಕಿತ್ತಾಟ ಹಾಗೂ ಈ ಮೂಲಕ ಒಳಪಂಗಡಗಳ ಪೋಷಕರಾದ ಪಂಚಾಚಾರ್ಯರು ಸದಾ ಪ್ರಚಾರದ ಮೂಲಕವೇ ಎತ್ತರಕ್ಕೆ ಏರಿದವರು.
ಇವರೆಲ್ಲರೂ ಸುತ್ತೂರು ಸಮಾವೇಶದಲ್ಲಿ ಇತರೆ ಸ್ವಾಮೀಜಿಗಳ ಜೊತೆ ಸಮಾನ ಸ್ಥಾನಗಳಲ್ಲಿ ಕುಳಿತುಕೊಳ್ಳುವ ಮೂಲಕ ತಮ್ಮ ಹಳೆಯ ಸಂಪ್ರದಾಯವೊಂದನ್ನು ಬದಿಗಿಟ್ಟಿದ್ದಾರೆ. ಈವರೆಗೂ ಇವರು ಯಾವುದೇ ವೇದಿಕೆಗಳಲ್ಲಿ ಎಲ್ಲರಿಗಿಂತಲೂ ಎತ್ತರದ ಸ್ಥಾನಗಳಲ್ಲಿಯೇ ಕುಳಿತುಕೊಳ್ಳುತ್ತಿದ್ದರು. ಈಗ ಇದ್ದಕ್ಕಿದ್ದಂತೆ ಇಲ್ಲಿ ವಿರಕ್ತರ ಜೊತೆ ಸಮಾನವಾಗಿ ಕೂರುವ ಮೂಲಕ ಮೆಚ್ಚುಗೆಗೆ ಅರ್ಹವಾಗಿದ್ದಾರೆ. ಮುಂದಿನ ದಿನಗಳಲ್ಲಿ ಇವರು ಇಂತಹ ಸಮಾನ ವೇದಿಕೆಗಳಿಂದ ಇನ್ನೂ ಸರಿಯಾದ ಸ್ಥಾನಕ್ಕೆ ಇಳಿಯುತ್ತಾರೆ ಎಂಬ ಆಶಯ ಈಗ ಹುಟ್ಟಿದೆ!
‘ಸಂಪ್ರದಾಯದ ಪ್ರಕಾರ ಪಂಚಾಚಾರ್ಯರು ಮತ್ತು ವಿರಕ್ತರಲ್ಲಿ, ವಿರಕ್ತರೇ ಶ್ರೇಷ್ಠ’ ಈ ಮಾತುಗಳನ್ನು ಖ್ಯಾತ ಸಂಶೋಧಕರಾದ ಡಾ.ಎಂ.ಚಿದಾನಂದಮೂರ್ತಿ ಹಾಗೂ ಎನ್.ಎಸ್.ಬಸವರಾಜಯ್ಯ ಅವರು ತಮ್ಮ ಪುಸ್ತಕಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಹೀಗಿರುವಾಗ ಒಣ ಪ್ರತಿಷ್ಠೆಗಳಿಂದ, ಬಡಿವಾರಗಳಿಂದ ಭಕ್ತರನ್ನು ನಿಯಂತ್ರಿಸುವ ಆಚಾರ್ಯರು ಈ ಸಮಾವೇಶದಲ್ಲಿ ತಮ್ಮ ಹಳೆಯ ರಿವಾಜುಗಳಲ್ಲಿ ಬದಲಾವಣೆ ಮಾಡಿಕೊಂಡಿದ್ದೇಕೆ ಎಂಬ ಜಿಜ್ಞಾಸೆಗೆ ಉತ್ತರ ಸುಲಭವಾಗಿ ಸಿಗುವುದಿಲ್ಲ.
ಎರಡನೆಯದಾಗಿ ಇದೇ ಸಮಾವೇಶದಲ್ಲಿ ಕಾಶಿ ಜಗದ್ಗುರುಗಳು ‘ನಮ್ಮ ಮಠದಲ್ಲಿ ಬಸವಣ್ಣನ ಫೋಟೊ ಹಾಕಿಕೊಳ್ಳುತ್ತೇವೆ. ವಿರಕ್ತರು ತಮ್ಮ ಮಠಗಳಲ್ಲಿ ಪಂಚಾಚಾರ್ಯರ ಫೋಟೊ ಹಾಕಿಕೊಳ್ಳುವಂತಾಗಲಿ’ ಎಂಬ ಹಾವೇರಿ ನ್ಯಾಯವೊಂದನ್ನು ಮುಂದಿಟ್ಟಿದ್ದಾರೆ.
ಇದು; ಇವರ ಖೋಟಾ ನೋಟುಗಳನ್ನು ವಿರಕ್ತರು ಬಳಸಬೇಕು. ಸಾಚಾ ನೋಟು ಹಿಡಿದು ಧರ್ಮದ ಹೆಸರಿನಲ್ಲಿ ಇವರು ಚೈನಿ ಹೊಡೆಯಬೇಕು ಎಂಬಂತಿದೆ. ಮೂಲತಃ ಬಸವಣ್ಣ ಒಬ್ಬ ಚಾರಿತ್ರಿಕ ವ್ಯಕ್ತಿ. ಪಂಚಾಚಾರ್ಯ ಎಂಬುದು ಎಷ್ಟೇ ಆದರೂ ಕಲ್ಪಿತ ಎಂಬ ಭಾವನೆಯನ್ನು ಇವರು ಈ ಮೂಲಕ ಜನಮಾನಸದಿಂದ ಅಳಿಸಲು ಹೊರಟಂತಿದೆ.
ಮೂರನೆಯದಾಗಿ, ‘ವೀರಶೈವ ಎಂಬ ಪದವು ವಚನಗಳಲ್ಲಿ 60 ಬಾರಿ ಕಾಣಿಸಿಕೊಂಡಿದೆ. ಹಾಗಾಗಿ ಇದನ್ನು ವೀರಶೈವ ಧರ್ಮ ಎಂದು ಘೋಷಿಸಬೇಕು’ ಎಂಬ ಮತ್ತೊಂದು ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಗಿದೆ. ವೀರಶೈವ ಎಂಬ ಪದ ವಚನಗಳಲ್ಲಿ 120 ಸಲ ಕಾಣಿಸಿಕೊಂಡರೂ ತಪ್ಪೇನಿಲ್ಲ. ಆದರೆ ಷಟ್‌ಸ್ಥಲ ಕಟ್ಟುಗಳಲ್ಲಿ ಹೆಚ್ಚಿನ ವಚನಗಳು ಖೋಟಾ ಆಗಿವೆ ಎಂಬುದನ್ನು ಈಗಾಗಲೇ ಹಲವು ವಿದ್ವಾಂಸರು ತೀರ್ಮಾನಿಸಿದ್ದಾರೆ.
ಇದರಿಂದ ಧರ್ಮದ ಹೆಸರು ವೀರಶೈವ ಹೇಗಾಗುತ್ತದೆ? ಬದಲಿಗೆ ಅದು ಲಿಂಗಾಯತ ಎಂದೇ ಆಗಬೇಕು. ಇಲ್ಲದೇ ಹೋದಲ್ಲಿ ಈ ತಾತ್ವಿಕ ತಪ್ಪು ಭವಿಷ್ಯದಲ್ಲಿ ಉಳಿದು ಬಿಡುವ ಅಪಾಯವಿದೆ.
ಪಂಚಾಚಾರ್ಯ ಹಾಗೂ ವಿರಕ್ತರು ಎಂಬ ಎರಡೂ ಸಂಪ್ರದಾಯಗಳು ಸಾಮರಸ್ಯದಿಂದ ನಡೆದುಕೊಂಡು ಹೋಗಬೇಕು ಎಂಬ ನಿರ್ಣಯದಲ್ಲಿ ಒಂದು ನಿಗೂಢ ಕಾರ್ಯಸೂಚಿ ಅಡಗಿದೆ. ಅದೆಂದರೆ; ‘ಈತನಕ ನಾವು ಸ್ವತಂತ್ರವಾಗಿ ಶೋಷಣೆ ಮಾಡುತ್ತಿದ್ದೆವು. ಇನ್ನು ಮುಂದೆ ಕೂಡಿಕೊಂಡು ಶೋಷಣೆ ಮಾಡೋಣ’ ಎಂಬುದು.
ಎರಡೂ ಧರ್ಮಗಳು ಸಾಮರಸ್ಯದಿಂದ ಇರಬೇಕು ಎಂದರೆ ಸಕ್ಕರೆ ಮತ್ತು ಉಪ್ಪು ಮಿಶ್ರಣ ಮಾಡಿದಂತೆಯೇ ಸರಿ. ಇದರಿಂದ ಎರಡೂ ನಿರುಪಯೋಗವೇ. ಯಾವುದು ಎಷ್ಟು ಸರಿ ಎನ್ನುವುದನ್ನು ಸಮಾಜದ ನಿರ್ಧಾರಕ್ಕೇ ಬಿಡುವುದು ಒಳಿತು. ಇದು ಸಾಮಾಜಿಕ ಪ್ರಯೋಜನ ಹಾಗೂ ಜಾಗತಿಕ ಪ್ರಸಿದ್ಧಿಗೆ ಸಂಬಂಧಿಸಿದ ಅಂಶ. ಯಾವುದು ಸಾಚಾ, ಯಾವುದು ಖೋಟಾ ಎಂಬುದನ್ನು ಸರಿಯಾದ ಸಮಯದಲ್ಲಿ ಸಮಾಜವೇ ನಿರ್ಣಯಿಸುತ್ತದೆ. ಇದಕ್ಕೆ ಯಾರದೇ ಫರ್ಮಾನು ಅಥವಾ ವೇದಿಕೆ ಮೇಲಿನ ಘೋಷಣೆ ದಾಖಲೆಯಾಗಬಾರದು ಮತ್ತು ಆಸರೆಯಾಗಬಾರದು.
ಅಷ್ಟಕ್ಕೂ ಪಂಚಾಚಾರ್ಯರು ಹೇಳುವ ಅರ್ಥದಲ್ಲಿ ಸಮನ್ವಯ ಎಂದರೆ ರುದ್ರಾಭಿಷೇಕ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗುವುದೇ ಎಂಬ ಪ್ರಶ್ನೆಯೂ ನಮ್ಮನ್ನು ಕಾಡುತ್ತದೆ. ನಿಜವಾಗಿಯೂ ಇಂತಹ ಸಮನ್ವಯ ಸಿದ್ಧಾಂತದಿಂದ ಸಮಾಜಕ್ಕೆ ಏನಾದರೂ ಪ್ರಯೋಜನವಾಗುತ್ತದೆ ಎಂದರೆ ಅಷ್ಟು ಸರಳವಾಗಿ ನಂಬಲು ಸಾಧ್ಯವಾಗುವುದಿಲ್ಲ. ಈಗಿನ ಗುರು ವಿರಕ್ತರ ಆಚರಣೆಗಳೆರಡೂ ಮಿಶ್ರಣಗೊಂಡರೆ ಅದು ನಿಸ್ಸಂಶಯವಾಗಿ ಮೂಲ ಬಸವ ತತ್ವವನ್ನು ಕಸಿ ಮಾಡಿದಂತೆ.
ಆಗಾಗ್ಗೆ ಹಲಬಗೆಯ ತಾತ್ವಿಕ ಕಿರಿಕಿರಿ, ವಿವಾದಾಸ್ಪದ ನಡೆಗಳನ್ನು ಅನುಸರಿಸುವ ಈ ವಿರಕ್ತೇತರ ಕಾವಿಧಾರಿಗಳು ಇನ್ನೂ ಯಾಕೆ ಏಕತತ್ವ ಆಚರಣೆ ಒಪ್ಪಿಕೊಳ್ಳುತ್ತಿಲ್ಲ ಎಂಬುದನ್ನು ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಅತ್ಯಂತ ಸೂಕ್ಷ್ಮವಾಗಿ ಗಮನಿಸಬೇಕಾಗಿದೆ.
‘ಒಂದೇ ರೀತಿ-ರಿವಾಜುಗಳ ನಡೆಯೇ ನಿಜವಾದ ಸಮನ್ವಯ’ ಎಂಬುದು ಗಾಳಿ ಬಂದಾಗ ತೂರಿಕೊಳ್ಳುವ ಜನರಿಗೆ ಅರ್ಥವೇ ಆಗುವುದಿಲ್ಲ. ಅಷ್ಟಕ್ಕೂ ಎರಡೂ ಮಠ ಸಂಪ್ರದಾಯಗಳು ತಮ್ಮ ಲಾಭ ಪ್ರತಿಷ್ಠೆಗೋಸ್ಕರ ಅಧಿಕಾರ, ಸರ್ಕಾರಿ ಅನುದಾನದ ಹಪಾಹಪಿಯಲ್ಲಿ ಒಟ್ಟಾಗುವುದಾದರೆ ಅದಕ್ಕೆ ಸಮಾಜ ಯಾಕೆ ತಲೆ ಕೆಡಿಸಿಕೊಳ್ಳಬೇಕು?-
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.