ದಕ್ಷಿಣ ಕನ್ನಡ ಜಿಲ್ಲೆ ಜನರು ತಮ್ಮದು ಬುದ್ದಿವಂತರ ಜಿಲ್ಲೆ ಎಂದು ಹೇಳಿಕೊಳ್ಳುತ್ತಾರೆ. ಹಾಗೆಯೇ ತಮ್ಮಂತಹ ದೈವ ಭಕ್ತರು ಬೇರೆಲ್ಲೂ ಇಲ್ಲ ಎಂದೂ ಭಾವಿಸಿದ್ದಾರೆ. ತಾನೇ ಹಗ್ಗದಿಂದ ಬಿಗಿದುಕೊಂಡು ನನ್ನನ್ನು ಬಿಡಿಸಿ ಎಂದು ಮೊರೆ ಇಡುವ ಮಗುವಿನಂತೆ ಮೇಲ್ಜಾತಿಯ ಜನರು ನಮ್ಮನ್ನು ತುಳಿಯುತ್ತಿದ್ದಾರೆ ಎಂದು ಮೊರೆ ಇಡುವ ಜನರೂ ಈ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಶ್ವತ್ಥಮರಕ್ಕೆ ಪ್ರದಕ್ಷಿಣೆ ಹಾಕಿದರೆ ಸಂತಾನ ಪ್ರಾಪ್ತಿ ಆಗುತ್ತದೆ ಎಂದು ನಂಬುವವರೂ ಇದ್ದಾರೆ. ಇಂಥವರಲ್ಲಿ ವಿದ್ಯಾವಂತರು ಮತ್ತು ದೊಡ್ಡ ಹುದ್ದೆಗಳಲ್ಲಿ ಇರುವವರೇ ಹೆಚ್ಚಾಗಿದ್ದಾರೆ. ಮಗನಿಂದ ಆಗದಿದ್ದದ್ದು ಮರದಿಂದ ಆಗುತ್ತದೆಯೇ ಎಂದು ಪ್ರಶ್ನೆ ಕೇಳುವ ಸೊಸೆಯರು ಇಲ್ಲಿ ವಿರಳ. ಈ ಮನೋಧರ್ಮ ಬದಲಾಗುವವರೆಗೂ ಈ ಬುದ್ದಿವಂತರು ದೇವಾಲಯಗಳಲ್ಲಿ ಸಹ ಪಂಕ್ತಿಯ ಭಾಗ್ಯ ಪಡೆಯುವುದಿಲ್ಲ. ಎಂಜಲೆಲೆಯ ಮೇಲೆ ಹೊರಳಾಡುವ ದೈನೇಸಿತನದಿಂದ ಮುಕ್ತರಾಗುವುದಿಲ್ಲ.
ಕೃಷಿ ಭೂಮಿಯಲ್ಲಿ ಕೊರೆಸಿದ ಕೊಳವೆ ಬಾವಿಯಲ್ಲಿ ನೀರು ಬಾರದಿದ್ದರೆ ಅಥವಾ ನೀರು ಕಮ್ಮಿಯಾದರೆ ಅದಕ್ಕೆ ವೈಜ್ಞಾನಿಕ ಕಾರಣ ಹುಡುಕಲು ಹೋಗುವುದಿಲ್ಲ. ಅವರು ಮೊದಲು ಓಡುವುದು ಜೋತಿಷಿಯೂ ಆಗಿರುವ ಮಂತ್ರವಾದಿಯ ಬಳಿಗೆ. ಜೋತಿಷಿ ಕವಡೆ ಹಾಕಿ ನಿಮ್ಮ ಭೂಮಿಯಲ್ಲಿ ತುಂಬ ವರ್ಷಗಳ ಹಿಂದೆ ಸತ್ತ ಬ್ರಾಹ್ಮಣನೊಬ್ಬ ಬ್ರಹ್ಮ ರಾಕ್ಷಸನಾಗಿ ಸೇರಿಕೊಂಡಿದ್ದಾನೆ. ಅವನಿಗೆ ಮೋಕ್ಷವಾಗದಿದ್ದರೆ ನೀವು ಮುಟ್ಟಿದ್ದೆಲ್ಲ ಮಸಿಯಾಗುತ್ತದೆ ಎಂದು ಭಯ ಪಡಿಸುತ್ತಾನೆ. ಅಲ್ಲಿ ಅನ್ಯ ಜಾತಿಯವನೂ ಸತ್ತಿರಬಹುದು. ಆದರೆ ಬ್ರಾಹ್ಮಣನಿಗೆ ಮಾತ್ರ ರಾಕ್ಷಸನಾಗುವ ಹಕ್ಕು ಇದೆಯೇ? ಉಳಿದ ಜಾತಿಯವರಿಗೆ ಆತ್ಮವೆಂಬುದು ಇಲ್ಲವೇ ಎಂದು ಯಾರೂ ಪ್ರಶ್ನಿಸುವುದಿಲ್ಲ.
ಆಹಾರಕ್ಕಾಗಿ ಕೊಲ್ಲುವ ಪ್ರಾಣಿಗಳು ಸತ್ತ ಮೇಲೆ ದೆವ್ವಗಳಾಗುವುದಿಲ್ಲವೇ? ಮನುಷ್ಯನಿಗೆ ಮಾತ್ರ ಯಾಕೆ ಅಂಥ ಅವಕಾಶವೆಂಬ ಜಿಜ್ಞಾಸೆ ಯಾರಿಗೂ ಮೂಡುವುದಿಲ್ಲ.
ಸರಿ;ಬ್ರಹ್ಮರಾಕ್ಷಸನಿಗೆ ಮೋಕ್ಷವಾಗದೆ ಭೂಮಿಯಲ್ಲಿ ಬರ್ಕತ್ತಿಲ್ಲ. ಅದಕ್ಕೆ ಆ ರಾಕ್ಷಸನ ವಂಶದವರನ್ನು ಯಾಚಿಸಿ ಕರೆತರಬೇಕು.
ಸುದರ್ಶನ ಹೋಮ; ತಿಲ ಹೋಮ ಇತ್ಯಾದಿಗಳಿಗೆ ಖರ್ಚು ಮಾಡಿ ಪ್ರೇತವನ್ನು ಆವಾಹಿಸಿ ಗಂಧದ ಕೊರಡಿನಲ್ಲಿ ಕೂಡಿಸಿ ಚಿನ್ನದ ಸರಿಗೆಯಿಂದ ಬಿಗಿಯಬೇಕು. ಈ ಕೊರಡನ್ನು ಗುರುವಾಯೂರಿಗೆ ತಲಪಿಸಬೇಕು. ಅಲ್ಲಿ ಕೊರಡನ್ನು ತೇದು ಗಂಧವನ್ನು ದೇವರಿಗೆ ಲೇಪಿಸಿ ಪೂರ್ಣವಾಗಿ ಕೊರಡು ಮುಗಿದರೆ ಪ್ರೇತಜನ್ಮದಿಂದ ಮುಕ್ತಿ ಎಂಬ ಪರಿಹಾರ ಸೂಚಿಸುತ್ತಾರೆ.
ಭೂಮಿಯಲ್ಲಿ ನೀರಿನ ಒಸರು ಬತ್ತಿ ಹೋಗಿ ನಷ್ಟ ಉಂಟಾಗಿದ್ದರೂ ಎಷ್ಟೇ ಖರ್ಚಾದರೂ ಸಾಲ ಮಾಡಿಯಾದರೂ ಪೀಡೆಯ ಉಚ್ಛಾಟನೆಗೆ ಬುದ್ದಿವಂತರು ಹಿಂದೆಗೆಯುವುದಿಲ್ಲ. ಅದಕ್ಕೆ ಕನಿಷ್ಠ ಐವತ್ತು ಸಾವಿರ ಖರ್ಚಾಗುತ್ತದೆ. ಮಗುವಿಗೆ ಫೀಸು ಕಟ್ಟಲು ಸಹಾಯಮಾಡಿ ಎಂದು ಕೈಯೊಡ್ಡಿದ ತಾಯಿಗೆ, ಕುಟುಂಬದ ಏಕೈಕ ಆಧಾರವಾದ ಗಂಡನ ಕಾಯಿಲೆಗೆ ಔಷಧಿಗೆ ನೆರವಾಗಿ ಎಂದು ಸೆರಗೊಡ್ಡುವ ಅವನ ಹೆಂಡತಿಗೆ ಒಂದೇ ಒಂದು ರೂಪಾಯಿ ಕೊಡಲೂ ತಯಾರಾಗದವರು ಯಾರದೋ ಬ್ರಹ್ಮ ರಾಕ್ಷಸನ ಮೋಕ್ಷಕ್ಕೆ ಸಾವಿರಾರು ರೂ ಖರ್ಚು ಮಾಡಲು ತಯಾರಾಗಿ ಬಿಡುತ್ತಾರೆ!
ಬ್ರಹ್ಮ ರಾಕ್ಷಸನ ವಶೀಕರಣದ ನಾಟಕವೂ ಶ್ರದ್ದಾ ಭಕ್ತಿಗಳಿಂದ ನಡೆಯುತ್ತದೆ. ಬಣ್ಣದ ಹುಡಿಗಳಿಂದ ಬರೆದ ದೊಡ್ಡ ಮಂಡಲಗಳು. ಹೋಮಗಳು ಪ್ರತಿ ಕ್ಷಣವೂ ನಂಬುಗೆಯನ್ನು ಬಲಪಡಿಸುತ್ತಲೇ ಹೋಗುತ್ತವೆ. ಅಂಗೈಯಲ್ಲಿ ಅರಳು ತುಂಬಿಕೊಂಡು ಅದರ ಮೇಲೆ ಕರ್ಪೂರ ಉರಿಸಿ ಮಣಮಣ ಮಂತ್ರ ಹೇಳುತ್ತಾ ಬ್ರಹ್ಮ ರಾಕ್ಷಸನನ್ನು ಕರೆಯುತ್ತಾರೆ.
ಅಂಗೈ ಸುಡುತ್ತದೆ ಅನ್ನುವಾಗ ಅರಳುಸಹಿತ ಉರಿಯುವ ಕರ್ಪೂರವನ್ನು ಕುಂಕುಮದ ನೀರಿಗೆ ಹಾಕಿ ಮತ್ತು ಕವಡೆ ಮಗುಚಿ ರಾಶಿ ನೋಡುತ್ತಾರೆ. ಬ್ರಹ್ಮರಾಕ್ಷಸ ಬರಲು ತಯಾರಿಲ್ಲ ಅನ್ನುತ್ತದೆ. ಏನು ಮಾಡುವುದು? ಸಾವಿರ ತಿಲಹೋಮ ಮಾಡಿದರೆ ಬರುತ್ತದೇನೋ ನೋಡಬಹುದು ಎನ್ನುತ್ತಾರೆ. ಖರ್ಚು ಹೆಚ್ಚಾಗುತ್ತದೆ; ತಯಾರಿದ್ದೀರಾ ಎಂಬ ಪ್ರಶ್ನೆ ಹಾಕಿ ಯಜಮಾನನನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾರೆ. ಕೆಲಸ ಪೂರ್ಣವಾಗದಿದ್ದರೆ ಮಾಡಿದ ಖರ್ಚು ನಿರರ್ಥಕ. ಹೀಗಾಗಿ ಅವರು ಎಲ್ಲ ಪರಿಹಾರಕ್ಕೂ ಒಪ್ಪುತ್ತಾರೆ. ಕಡೆಗೂ ಸತಾಯಿಸಿದ ಬ್ರಹ್ಮ ರಾಕ್ಷಸನನ್ನು ಬಿಗಿದು ಕಟ್ಟಿದ ಜೋತಿಷಿಯ ಬಗ್ಗೆ ಬುದ್ದಿವಂತ ಜನರಿಗೆ ಎಲ್ಲಿಲ್ಲದ ನಂಬಿಕೆ.
ಬಂಧಿಸಿದ ಬ್ರಹ್ಮ ರಾಕ್ಷಸನನ್ನು ಒಂದು ಬಿಳಿಯ ಬಟ್ಟೆಯಲ್ಲಿ ಸುತ್ತಿ ಅದನ್ನು ಗುರುವಾಯೂರಿಗೆ ಕೊಂಡು ಹೋಗುವ ತನಕ ನಿತ್ಯ ನೀರು ಕುಡಿಸಬೇಕು. ಮಕ್ಕಳು ಅದರ ಹತ್ತಿರ ಹೋಗದಂತೆ ನೋಡಿಕೊಳ್ಳಿ ಎಂದು ಎಚ್ಚರಿಸುತ್ತಾರೆ. ಈ ಎಲ್ಲ ಕಷ್ಟ ನಷ್ಟ ಎದುರಿಸಿದರೂ ಆರ್ಥಿಕ ಪರಿಸ್ಥಿತಿ ಸುಧಾರಿಸದೆ ಹೋದಾಗ ಇನ್ನೊಬ್ಬ ಜೋತಿಷಿಯ ಬಳಿಗೆ ಹೋಗಿ ನಡೆದುದನ್ನು ಹೇಳುತ್ತಾರೆ. ಆ ಹೊಸ ಜೋತಿಷಿ ಬ್ರಹ್ಮರಾಕ್ಷಸ ಅಲ್ಲಿಯೇ ಇದ್ದಾನೆ. ಪರಿಹಾರ ಕಾರ್ಯಗಳು ಸರಿಯಾಗಿ ನಡೆದಿಲ್ಲ ಎಂದು ಹೇಳಿ ಬೆಚ್ಚಿ ಬೀಳಿಸುತ್ತಾರೆ.
ಮತ್ತೊಮ್ಮೆ ಸಾಲ ಮಾಡಿ ಅವರಿಂದ ಉಚ್ಚಾಟನೆಯ ಕಾರ್ಯ ನೆರವೇರಿಸಿ ಧನ್ಯರಾಗುವ ಬುದ್ಧಿವಂತರು ಮೊದಲು ಉಚ್ಛಾಟನೆ ಮಾಡಿದವನ ಕಾಲರ್ ಹಿಡಿದು `ನೀನು ಚಿನ್ನದ ಸರಿಗೆಯಲ್ಲಿ ಬಂಧಿಸಿ ಬಿಳಿ ಬಟ್ಟೆಯಲ್ಲಿ ಕಟ್ಟಿ ಕೊಟ್ಟದ್ದು ಏನನ್ನು? ನೀನು ಮಾಡಿಸಿದ ವಿಧಿಗಳು ಸರಿಯಾಗಿಲ್ಲ ಎಂದು ಇನ್ನೊಬ್ಬರು ಹೇಳುತ್ತಿದ್ದಾರೆ. ನನಗೆ ತಗಲಿದ ಖರ್ಚನ್ನು ಕೊಡು~ ಎಂದು ಖಂಡಿತ ಕೇಳಬೇಕು ಎಂದು ಯಾರಿಗೂ ಅನ್ನಿಸುವುದಿಲ್ಲ. ಹೀಗೆ ಪ್ರಾರಬ್ಧವನ್ನು ನಂಬುವ ಜನ ಇರುವವರೆಗೆ ಅವರನ್ನು ನಂಬಿಸುವ ಜನರ ಸುಖ ಬದುಕಿಗೆ ಯಾವ ಕುಂದೂ ಬರುವುದಿಲ್ಲ.
ಹಳೆಯ ದೇವಾಲಯಗಳ ಜೀರ್ಣೋದ್ಧಾರ ಮಾಡುವ ಮುನ್ನ ಅಲ್ಲಿ ಅಷ್ಟಮಂಗಲ ಪ್ರಶ್ನೆ ಇಡುವ ಕ್ರಮವಿದೆ. ಅದಕ್ಕೆ ಮೊದಲು ಅನುಸರಿಸಬೇಕಾದ ಪರಿಹಾರ ವಿಧಿಗಳ ದೊಡ್ಡ ಪಟ್ಟಿಯೇ ಸಿಗುತ್ತದೆ. ಅದರಲ್ಲಿ ಆ ಊರಿನಲ್ಲಿ ಹಿಂದೆ ಸತ್ತಿರುವ ಬೇರೆ ಬೇರೆ ಜಾತಿಯವರ ಹಲವು ಪ್ರೇತಗಳು ದೇವರ ಜತೆಗಿವೆ. ಅವರಿಗೆಲ್ಲ ಶ್ರಾದ್ಧ ವಿಧಿಗಳನ್ನು ನೆರವೇರಿಸಿ ಮೋಕ್ಷಗಾಣಿಸಬೇಕು ಎಂಬುದು ಈ ವಿಧಿಗಳಲ್ಲಿ ಒಂದು. ಅದನ್ನೆಲ್ಲ ಮಾಡಿ ಪ್ರೇತವನ್ನು ಉಪ್ಪಿನಂಗಡಿಗೆ ಕರೆದುಕೊಂಡು ಹೋಗಿ ನದಿಯಲ್ಲಿ ವಿಸರ್ಜಿಸುತ್ತಾರೆ. ದೇವರ ಸನ್ನಿಧಿ ಮೋಕ್ಷ ಕಾರಕವೆಂದು ಇನ್ನೊಂದೆಡೆ ಹೇಳುವ ಇದೇ ಮಂದಿ ಪ್ರೇತಗಳು ದೇವರ ಜತೆಗೆ ಉಳಿದದ್ದೆೀಕೆ ಎಂದು ಪ್ರಶ್ನಿಸುವುದಿಲ್ಲ ಅದೇ ಬುದ್ದಿವಂತರ ಜಿಲ್ಲೆಯ ಹೃದಯವಂತಿಕೆ.
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬ್ರಹ್ಮಕಲಶ ಸ್ಥಾಪನೆ ಮುಗಿದ ಮೇಲೂ ಇನ್ನೊಬ್ಬ ಜೋತಿಷಿ ಪ್ರೇತಗಳ ಉಚ್ಚಾಟನೆ ಸರಿಯಾಗಿಲ್ಲ. ಅವು ಅಲ್ಲೇ ಉಳಿದು ಕೊಂಡಿವೆ ಎಂದು ಹೇಳಿ ಅವನ್ನು ಉಚ್ಚಾಟಿಸಲು ಜೋಳಿಗೆ ಹಿಡಿದು ಜನರ ಬಳಿಗೆ ಹಣ ಸಂಗ್ರಹಿಸಲು ಹೋಗುತ್ತಾರೆ. ಇದು ಮೌಢ್ಯದ ಪರಮಾವಧಿ ಎನ್ನಬೇಕೋ ಅಥವಾ ದೈವಭಕ್ತಿಯ ಪರಾಕಾಷ್ಠೆ ಎನ್ನಬೇಕೋ ಗೊತ್ತಾಗುವುದಿಲ್ಲ.
ದೂರದ ಮುಂಬೈಗೆ ವಲಸೆ ಹೋಗಿ ದುಡಿದು ನೆಲೆ ಕಲ್ಪಿಸಿಕೊಂಡ ಜನರೂ ಕೂಡ ಇಂಥ ಆಚರಣೆಗಳಿಗಾಗಿ ಗಳಿಸಿದ್ದರ ಬಹುಪಾಲನ್ನು ಸುರಿಯುತ್ತಾರೆ. ಈ ಜನರಿಗೆ ಬುದ್ದಿವಂತರ ಹಣೆಪಟ್ಟಿ ಯಾಕೆ ಬಂತೋ ಗೊತ್ತಾಗುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.