ಎಂಬತ್ತರ ದಶಕದ ಪ್ರಾರಂಭದಲ್ಲಿ ನಾನು ಬೆಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗಕ್ಕೆ ಸೇರಿದೆ. ನನಗೆ ಬರುತ್ತಿದ್ದ ಸಂಬಳ ತಿಂಗಳಿಗೆ ನಾನ್ನೂರು ರೂಪಾಯಿ. ಅದು ಸಂಪೂರ್ಣ ಖರ್ಚಾಗುತ್ತಿರಲಿಲ್ಲ. ನನ್ನ ಐದಾರು ತಿಂಗಳ ಉಳಿತಾಯದಲ್ಲಿ ನನ್ನ ಬಹುದಿನಗಳ ಬಯಕೆಯಾಗಿದ್ದ `ಪ್ಯಾನಸೋನಿಕ್ ಟೂ ಇನ್ ಒನ್~ ಖರೀದಿಸಿದೆ.
ನಂತರ ನಾನು ಟೀವಿ, ಫ್ರಿಜ್, ವಾಷಿಂಗ್ ಮಷೀನ್ ಏನೆಲ್ಲ ಖರೀದಿಸಿದರೂ ಅದು ಉಳಿತಾಯದ ಹಣದಿಂದ ಮಾತ್ರ. ಸಾಲವನ್ನೇ ಮಾಡದ ನಾನು ಸಹೋದ್ಯೋಗಿಗಳಿಗೆ ಒಂದು ರೀತಿಯಲ್ಲಿ ಅಚ್ಚರಿಯಾಗಿದ್ದೆ.
ಎಷ್ಟೋ ಸಹೋದ್ಯೋಗಿಗಳು ನನ್ನ ಹೆಸರಿನಲ್ಲಿ ತಮಗೆ ಸಾಲ ಕೊಡಿಸಬೇಕೆಂದು, ಅದಕ್ಕೆ ಹೆಚ್ಚಿನ ಬಡ್ಡಿ ಕೊಡುತ್ತೇವೆಂದು ಪುಸಲಾಯಿಸಿ ವಿಫಲರಾಗಿದ್ದರು. ನಾನು ಸಾಲದ ಬೋಣಿ ಮಾಡಿದ್ದು ಮನೆ ಕಟ್ಟುವಾಗ!
ಹಾಗೆ ನೋಡಿದರೆ ಮೇಲಿನದು ನನ್ನೊಬ್ಬನ ಅನುಭವ ಅಲ್ಲ. ನನ್ನ ತಲೆಮಾರಿನವವರಲ್ಲಿ ಹೆಚ್ಚಿನವರು ಉಳಿತಾಯದ ಹಣದಲ್ಲಿ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಿದ್ದರು. ಇವತ್ತಿನ ಯುವಕರು ಕೆಲಸ ಸಿಕ್ಕೊಡನೆ ಸೆಲ್ ಫೋನ್, ಟೀವಿ, ಬೈಕ್ ಕೊಳ್ಳಲು ಸಾಲದ ಮೊರೆ ಹೋಗುತ್ತಾರೆ.
ಸಾಲ ಕೊಡುವವರಿದ್ದಾಗ ತೆಗೆದುಕೊಳ್ಳುವುದೇನೂ ತಪ್ಪಲ್ಲ ಎಂದು ಅಂದುಕೊಳ್ಳಬಹುದು. ಈ ರೀತಿಯ ಸಾಲದಿಂದ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಿ, ಆರ್ಥಿಕ ಬೆಳವಣಿಗೆ ಹೆಚ್ಚುತ್ತದೆ ಎನ್ನುವುದು ಪಾಶ್ಚಿಮಾತ್ಯ ಅರ್ಥಶಾಸ್ತ್ರಜ್ಞರ ವಾದ. ಇಂತಹ ಸಾಲ ಕೊಡುವವರು ದೇಶವನ್ನು ಉದ್ಧಾರ ಮಾಡುತ್ತಾರೋ, ಹಾಳು ಮಾಡುತ್ತರೋ ಎಂಬುದು ಚರ್ಚಾಸ್ಪದ.
ಆದರೆ ಸಾಲ ತೆಗೆದುಕೊಳ್ಳುವವರು ಮಾತ್ರ ತಮ್ಮ ಆದಾಯದ ಹೆಚ್ಚಿನ ಭಾಗವನ್ನು ಪ್ರತಿ ತಿಂಗಳು ಕಂತುಗಳ ರೂಪದಲ್ಲಿ ಪಾವತಿ ಮಾಡಬೇಕಾಗುತ್ತದೆ. ಆದರೆ ಒಂದು ಸಾಲ ತೀರಿದ ನಂತರ ಮತ್ತೊಂದು, ಆನಂತರ ಇನ್ನೊಂದು... ಹೀಗೆ ಹೊಸ ಹೊಸ ವಸ್ತುಗಳನ್ನು ಕೊಳ್ಳುವುದನ್ನು ಮುಂದುವರಿಸುತ್ತಾರೆ. ಒಂದರ್ಥದಲ್ಲಿ ಇಂಥವರು ಬದುಕಿನ ಉದ್ದಕ್ಕೂ ಸಾಲಗಾರರು.
ಸಾಲ ಮಾಡುವುದು ಅವಮಾನಕರ ಎಂದುಕೊಳ್ಳುವ ಕಾಲವೊಂದಿತ್ತು. ಈ ಕುರಿತು ಈ ಕಾಲದ ಯುವಕರನ್ನು ಕೇಳಿದರೆ, `ಟಾಟಾ, ಬಿರ್ಲಾ, ಅಂಬಾನಿ~ಗಳೇ ಸಾಲ ಮಾಡುತ್ತಿದ್ದಾರೆ. ಅಷ್ಟೇ ಏಕೆ ಭಾರತ ಸರ್ಕಾರವೇ ಸಾಲದಲ್ಲಿ ನಡೆಯುತ್ತಿದೆಯಲ್ಲ, ಅದರ ಮುಂದೆ ನಮ್ಮದು ಯಾವ ಲೆಕ್ಕ, ಎಂಬ ಉಡಾಫೆಯ ಮಾತು ಆಡುತ್ತಾರೆ.
ಉದ್ಯಮಿಗಳು ಅಥವಾ ಸರ್ಕಾರ ಮಾಡುವ ಸಾಲ ಬಂಡಾವಾಳ ಹೂಡಿಕೆಯ ರೂಪದಲ್ಲಿ ಇರುತ್ತದೆ. ಆದರೆ ವ್ಯಕ್ತಿಯೊಬ್ಬ ವ್ಯಾಪಾರ, ವ್ಯವಹಾರಗಳ ಉದ್ದೆೀಶದ ಹೊರತಾಗಿ ಸಾಲ ಕೊಳ್ಳುವುದು ಅಂದರೆ ನಾವು ನಮ್ಮ ನಾಳೆಯ ಆದಾಯವನ್ನು ಇವತ್ತೇ ಖರ್ಚು ಮಾಡಿದಂತೆ. ಇದು ಸಾಲ ಕೊಟ್ಟವನನ್ನು ಉದ್ಧಾರ ಮಾಡುವ ಕೆಲಸ.
ಅಪ್ಪ ಅಮ್ಮ ಮಾಡಿದ ಸಾಲ ತೀರಿಸಲು ಮಕ್ಕಳನ್ನು ಜೀತದಾಳುಗಳಾಗಿ ದುಡಿಯುತ್ತಿದ್ದ ಪದ್ಧತಿ ಈಗ ಹೊಸ ರೂಪದಲ್ಲಿ ಮುಂದುವರೆಯುತ್ತಿದೆ.ಹಾಗೆ ನೋಡಿದರೆ ನಾಳೆಗಳನ್ನು ಇಂದೇ ಅನುಭವಿಸುವ ಆಧುನಿಕ ಮಾನವನ ಈ ವಿಕೃತಿ ಕೇವಲ ಆರ್ಥಿಕ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ.
ನಾಗರಿಕ ಜಗತ್ತು ಎಂದು ಕರೆಸಿಕೊಳ್ಳುವ ಪಶ್ಚಿಮ ಯೂರೋಪ್ ಮತ್ತು ಉತ್ತರ ಅಮೆರಿಕಾದ ದೇಶಗಳ ಕೈಗಾರಿಕಾ ಕ್ರಾಂತಿಯ ನಂತರ ಅಲ್ಲಿನ ಜನರಲ್ಲಿ ಬೆಳೆದ ಮನೋಭಾವ ಇದು. ಅದೀಗ ಜಗತ್ತಿನ ಅನೇಕ ದೇಶಗಳ ಎಲ್ಲಾ ಕ್ಷೇತ್ರಗಳಿಗೂ ಹಬ್ಬಿದೆ.
ಮುಂದಿನ ತಲೆಮಾರುಗಳಿಗಾಗಿ ಉಳಿಸಬೇಕಾದ ನೀರು, ಖನಿಜ, ಅದಿರು, ಇಂಧನ ತೈಲ ಇತ್ಯಾದಿಗಳನ್ನು ನಾವು ನಮ್ಮ ಕಾಲದಲ್ಲೇ ಅತಿ ಹೆಚ್ಚಾಗಿ ಬಳಸುತ್ತಿದ್ದೇವೆ. ಎಲ್ಲ ಸಂಪನ್ಮೂಲಗಳನ್ನು ಮಿತವಾಗಿ ಬಳಸಿ, ಅವನ್ನು ಹೆಚ್ಚಿನ ರೂಪಾಂತರ ಮಾಡದೆ ಪ್ರಕೃತಿ ಸಹಜವಾಗಿ ಒಪ್ಪಿಕೊಳ್ಳುವಂತಹ ಸ್ಥಿತಿಯಲ್ಲಿ ಅವನ್ನು ಹಿಂತಿರುಗಿಸಬೇಕಾದ ನಾವು ಸಾಲಗಾರರಂತೆ ಸಿಕ್ಕಿದ್ದನ್ನು ಬಾಚಿಕೊಳ್ಳುತ್ತಿದ್ದೆೀವೆ.
ಜೊತೆಗೆ ಪ್ರಕೃತಿ ಒಪ್ಪಿಕೊಳ್ಳದಂತಹ ತ್ಯಾಜ್ಯಗಳನ್ನು ನೀಡುತ್ತಿದ್ದೆೀವೆ. ಸಾವಿರಾರು ವರ್ಷಗಳ ನಂತರ ಉದ್ಭವಿಸಬಹುದಾದ ವಾಯು ಮಾಲಿನ್ಯದ ಪರಿಸ್ಥಿತಿಯನ್ನು ಈಗಲೇ ನಿರ್ಮಾಣ ಮಾಡಿದ್ದೇವೆ ಮತ್ತು ಅನುಭವಿಸುತ್ತಿದ್ದೇವೆ.
ಇಷ್ಟೇ ಅಲ್ಲ, ಭವಿಷ್ಯವನ್ನು ಇಂದೇ ಅನುಭವಿಸುವುದು ಈ ಕಾಲದ ಜೀವನ ಶೈಲಿಯೇ ಆಗಿಬಿಟ್ಟಿದೆ. ಮಕ್ಕಳು ತಮ್ಮ ವಯಸ್ಸಿಗೆ ಮೀರಿದ್ದನ್ನು ಕಲಿತು ಇಂದೇ ಮಹಾ ಬುದ್ದಿವಂತನಾಗಬೇಕೆಂದು ಪಾಲಕರು ತಮ್ಮ ಮಕ್ಕಳ ಮೇಲೆ ಏನೆಲ್ಲ ಒತ್ತಡ ಹೇರುತ್ತಾರಲ್ಲ ಹಾಗೆ.
ಬಾಲ ಪ್ರತಿಭೆಗಳನ್ನು ಗುರುತಿಸುವ ನೆಪದಲ್ಲಿ ಟೀವಿ ರಿಯಾಲಿಟಿ ಷೋಗಳು ಮುಗ್ಧ ಮಕ್ಕಳನ್ನು ಚಿತ್ರ ವಿಚಿತ್ರ ಪ್ರದರ್ಶನಕ್ಕೆ ಒಳಪಡಿಸುವ ಪ್ರಯತ್ನವೂ ಇಂಥದೇ. ಮಕ್ಕಳು ಸಹಜ ಬಾಲ್ಯವನ್ನೇ ಅನುಭವಿಸದೆ ದೊಡ್ಡವರಂತೆ ವರ್ತಿಸಬೇಕೆಂಬ ಅಪೇಕ್ಷೆಯೂ ಅಸಹಜವಾದದ್ದೇ.
ಅಪಕ್ವ ವಯಸ್ಸಿನಲ್ಲಿ ಲೈಂಗಿಕ ಆಕರ್ಷಣೆಗೆ ತುತ್ತಾಗಿ ಅಸಹಜ ರೋಮಾಂಚನಗಳನ್ನು ಅಕಾಲದಲ್ಲಿ ಅನುಭವಿಸುವ ಪ್ರಯತ್ನವೂ ಇಂಥದೇ. ರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸುವ ಸಲುವಾಗಿ ಮಕ್ಕಳಿಗೆ ಹಾರ್ಮೋನುಗಳನ್ನು ನೀಡಿ ಅವರನ್ನು ದೊಡ್ಡವರನ್ನಾಗಿಸಲು ಮಾಡುವ ಪ್ರಯತ್ನವೂ ಹೀಗೆ. ಎಲ್ಲವೂ ಹಿಂಸೆ, ವಿಕೃತಿಗಳೇ. ಇಂತಹ ಇನ್ನೂ ಅನೇಕ ಬಗೆಯ ವಿಕೃತಿಗಳಿವೆ.
ನಾಳೆಗಳನ್ನು ಇಂದೇ ಹೆಚ್ಚೆಚ್ಚು ಪರಿಣಾಮಕಾರಿಯಾಗಿ ಅನುಭವಿಸುವವರು ಹೆಚ್ಚು ಆಧುನಿಕರು, ಮುಂದುವರಿದವರು ಮತ್ತು ನಾಗರಿಕರು ಎಂಬ ಭಾವನೆ ಅನೇಕರಲ್ಲಿದೆ. ಇದು ಪಾಶ್ಚಿಮಾತ್ಯ ದೇಶಗಳ ಅನುಕರಣೆಯ ಪರಿಣಾಮ.
ಇದೊಂದು ಬಗೆಯ ಮನೋವೈಕಲ್ಯ. ಈ ಪ್ರವೃತ್ತಿ ವೈಯುಕ್ತಿಕ ಮಟ್ಟದಲ್ಲಿ ಆರಂಭವಾಗಿ ಸಮೂಹದ ಸನ್ನಿಯಾಗಿ ಬಿಡುತ್ತದೆ. ಸಾವಿರಾರು ವರ್ಷಗಳು ಬಳಸಬಹುದಾದ ಸಂಪನ್ಮೂಲಗಳನ್ನು ಕೆಲವೇ ವರ್ಷಗಳಲ್ಲಿ ಬಳಸುವ ಧಾವಂತದಿಂದಾಗಿ ನಮ್ಮ ನಿಸರ್ಗ ಸಂಪತ್ತು ಬರಿದಾಗುತ್ತದೆ.
ಪ್ರಕೃತಿದತ್ತವಾದ ಪ್ರತಿಯೊಂದರ ಚಲನೆಗೂ ಅದರದ್ದೆೀ ಆದ ವೇಗವಿದೆ. ಆ ವೇಗವನ್ನು ಕೃತಕವಾಗಿ ಹೆಚ್ಚಿಸುವ ಪ್ರಯತ್ನ ಮಾಡುವ ಮಾನವ ಎಲ್ಲ ಸೌಲಭ್ಯಗಳನ್ನು ಅನುಭವಿಸುವ ಭ್ರಮೆಯಲ್ಲಿ ತಾನು ದುರ್ಬಲನಾಗುತ್ತಾನೆ. ಇದೆಲ್ಲದರ ತಾರ್ಕಿಕ ಕೊನೆ ಸರ್ವನಾಶ. ಆದರೆ ಅದನ್ನು ಹೇಳುವವರನ್ನು ಅಭಿವೃದ್ಧಿ ವಿರೋಧಿ, ಸಿನಿಕ, ನಿರಾಶಾವಾದಿ ಎಂಬ ಹೆಸರಿಟ್ಟು ಉಪೇಕ್ಷಿಸುತ್ತಾರೆ. ಅದೇ ಇಂದಿನ ದುರಂತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.