ADVERTISEMENT

ಮಠಾಧೀಶರ ಚಿತ್ತ ಕೊಂಚ ಹರಿಯಲಿ ಇತ್ತ...

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 19:30 IST
Last Updated 6 ಫೆಬ್ರುವರಿ 2012, 19:30 IST

ಥಂಡಿ ಕಳೆದು, ಸೂರ್ಯ ತನ್ನ ಬೆಚ್ಚನೆಯ ಕಿರಣಗಳನ್ನು ಸೋಕಿಸುತ್ತಿರುವ ಈ ದಿನಗಳಲ್ಲಿ ಹಬ್ಬ-ಹರಿದಿನ, ಜಾತ್ರೆಗಳ ಸಂಭ್ರಮದ ಮುನ್ನುಡಿ. ಈ ಸೂರ್ಯಪ್ರಭೆಯೊಂದಿಗೆ ನಾಡಿನ ಕೆಲ ಮಠಾಧೀಶರೂ ತಮ್ಮ `ಜ್ಞಾನಪ್ರಭೆ~ಯನ್ನು ಹೊರಸೂಸುತ್ತಿದ್ದಾರೆ.
 
ಸರ್ವಸಂಗ ಪರಿತ್ಯಾಗಿಗಳೂ, ಲೌಕಿಕ ಸುಖ ತೊರೆದವರೂ ಆಗಿರುವ ಈ ಸ್ವಾಮಿಗಳ ಚಿತ್ತ ಇದೀಗ ಜಾತ್ರೆಗಳಲ್ಲಿ ನಡೆಯುವ `ಕುರಿ, ಕೋಳಿ, ಕೋಣನ ಬಲಿಯತ್ತ~ ಹರಿದಿದೆ. ಇದು ಸ್ವಾಗತಾರ್ಹ ಸಂಗತಿ.

ಪ್ರತಿ ವರ್ಷ ಸಂಕ್ರಮಣ ಕಾಲದಲ್ಲಿ ಸೂರ್ಯನ ಪಥ ಬದಲಾಗುತ್ತದೆಯೇ ಹೊರತು ಜಾತ್ರೆಗಳಲ್ಲಿ ಬೇವಿನುಡುಗೆಯಲ್ಲಿ ಅರೆ ಬೆತ್ತಲೆಸೇವೆ ಸಲ್ಲಿಸುವ ಮಹಿಳೆಯರ ನೋವಿನ ಬದುಕಿನ ಪಥ ಇನ್ನೂ ಬದಲಾಗಿಲ್ಲ.
 
ತಡವಾಗಿಯಾದರೂ ಎಚ್ಚೆತ್ತುಕೊಂಡು ದೈವಕ್ಕೆ ಕುರಿ, ಕೋಳಿ, ಕೋಣ ಬಲಿ ಇತ್ಯಾದಿ ಸಲ್ಲದು ಎಂದು ಸಂದೇಶ ಸಾರುತ್ತಿರುವ ಮಠಾಧೀಶರು, ಇಂತಹ ಅರೆಬೆತ್ತಲೆ ಸೇವೆ, ಜಾತೀಯತೆಯಂತಹ ಸಮಸ್ಯೆಗಳ ಕಡೆಗೆ ಗಮನಹರಿಸುವ ತುರ್ತಿದೆ.

ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಫೆಬ್ರುವರಿಯಲ್ಲಿ ನಡೆಯಲಿರುವ ದುಗ್ಗಮ್ಮನ ಜಾತ್ರೆಯಲ್ಲಿ ಕೋಳಿ, ಕುರಿ, ಕೋಣಗಳ ಬಲಿಗಿಂತ ಅಮಾಯಕ, ಮುಗ್ಧ ಹೆಣ್ಣುಮಕ್ಕಳ ಬೇವಿನುಡುಗೆಯ ಅರೆ ಬೆತ್ತಲೆಸೇವೆ ರಾಜಾರೋಷವಾಗಿ ನಡೆಯುತ್ತದೆ.
 
ಎರಡು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಸಾವಿರಾರು ಮಂದಿ ಮಹಿಳೆ-ಪುರುಷರೆನ್ನದೆ ಮೈಗೆ ಬೇವಿನುಡುಗೆ ತೊಟ್ಟು `ಸೇವೆ~ ಸಲ್ಲಿಸುತ್ತಾರೆ. ಇದು ರಾಜ್ಯದ ವಿವಿಧೆಡೆಯೂ ನಡೆದುಕೊಂಡು ಬಂದಿದೆ. ವಿಶೇಷವೆಂದರೆ ಈ ರೀತಿ `ಅರೆ ಬೆತ್ತಲೆ ಸೇವೆ~ ಸಲ್ಲಿಸುವ ಬಹುತೇಕ ಮಹಿಳೆಯರು ಹಿಂದುಳಿದ ಜಾತಿಗೆ ಸೇರಿದವರು. ರಾಜ್ಯದ ವಿವಿಧೆಡೆ ಇರುವ ದೇವದಾಸಿಯರೂ ಹಿಂದುಳಿದ ಜಾತಿಗಳಿಗೆ ಸೇರಿದವರೇ. ಇಂತಹ ಸೇವೆ ನಡೆಯುವಾಗ ನೆರೆದವರ ಚಿತ್ತ ಆ ಮಹಿಳೆಯ ದೇಹದ ಮೇಲಿರುತ್ತದೆ.

ದೇವರ ಹೆಸರಲ್ಲಿ ನಡೆಯುವ ಅರೆ ಬೆತ್ತಲೆಸೇವೆ, ಮುತ್ತು ಕಟ್ಟುವ ಪದ್ಧತಿ (ದೇವದಾಸಿ) ಪ್ರಾಣಿಬಲಿಗಿಂತ ದೊಡ್ಡ ಅಪರಾಧ. ಇದು ಹೆಣ್ಣು ತನಗೆ ಅರವಿಲ್ಲದಂತೆ ಶೋಷಣೆಗೆ ಒಳಗಾಗುವ ಪ್ರಕ್ರಿಯೆ. ತನ್ನ ಅಸ್ತಿತ್ವಕ್ಕಾಗಿ ಇಂದಿಗೂ ಹೋರಾಟ ನಡೆಸುತ್ತಿರುವ ಮಹಿಳೆ, ದೇವರ ಹೆಸರಲ್ಲಿ ಶೋಷಣೆ ಒಳಗಾಗುತ್ತಿದ್ದಾಳೆ. ಪ್ರಾಣಿಬಲಿ ತಡೆಯುವುದಕ್ಕಿಂತ ಮಠಾಧೀಶರು ಇಂತಹ ಮಹಿಳೆಯರ `ಮನೋ ಬಲಿ~ ತಡೆಯುವುದಕ್ಕೆ ಆದ್ಯತೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಮಠಾಧೀಶರು ಗಮನ ಕೊಡಬೇಕಿದೆ.

ಜಾತಿಯಿಂದ ವ್ಯಕ್ತಿಯನ್ನು ಗುರುತಿಸುವುದು, ಅವಕಾಶ ಕಲ್ಪಿಸುವುದು ಪ್ರಾಣಿಬಲಿಗಿಂತ ಘೋರವಾದ ಅಪರಾಧ. ಪ್ರಾಣಿಗಿಂತ ಮೇಲ್ಪಟ್ಟದಲ್ಲಿರುವ, ನಾಗರಿಕನಾದ ಮನುಷ್ಯ ಕೆಲವೊಮ್ಮೆ ಪ್ರಾಣಿಗಿಂತ ಕಡೆಯಾಗಿ ನಡೆದುಕೊಳ್ಳುವುದನ್ನು ಸಹಿಸಲು ಅಸಾಧ್ಯ. ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವವರ ವ್ಯಕ್ತಿಗತ ನಡವಳಿಕೆಗಳು ಇತರರಿಗೆ ಮಾರ್ಗದರ್ಶನ ಮಾಡುವಂತಿರಬೇಕು ಎನ್ನುವ ಕೆಲ ಮಠಾಧೀಶರ ಮಠಗಳಲ್ಲಿನ ವ್ಯಕ್ತಿಗತ ನಡವಳಿಕೆಗಳು ಜನರಲ್ಲಿ ಜಾತೀಯತೆಯ ವಿಷಬೀಜವನ್ನು ಬಿತ್ತುತ್ತಿವೆ. 

 ಕೆಲ ಮಠಾಧೀಶರು ಮೇಲ್ನೋಟಕ್ಕೆ ತಾವು `ಪ್ರಗತಿಪರರು~ ಎಂದು ಸಾರುತ್ತಲೇ, ಆಂತರ್ಯದಲ್ಲಿ `ಸ್ವಜಾತಿ ಪ್ರೇಮ~ ಮೆರೆಯುತ್ತಾರೆ. ಪ್ರಾಣಿಬಲಿ ಸಲ್ಲದು ಎಂದು ಹೇಳಿಕೆ ನೀಡುವ ಈ ಮಠಾಧೀಶರಿಗೆ ಎಲ್ಲರಿಗೂ `ಲಿಂಗ ದೀಕ್ಷೆ~ ದಯಪಾಲಿಸಿ ಎಂದು ಪುಕ್ಕಟೆ ಸಲಹೆ ನೀಡುವ ಭಕ್ತರೂ ಉಂಟು. ಆ ಮೂಲಕ ತಮ್ಮದೇ ಜಾತಿ, ಧರ್ಮ ಶ್ರೇಷ್ಠ ಎಂದು ಸಾರಲು ಪ್ರಯತ್ನಿಸುವ ಸನಾತನ ಮನಸ್ಸುಗಳು `ಜಾತೀಯತೆ~ಗೆ ಪರೋಕ್ಷವಾಗಿ ಸಾರ್ವತ್ರಿಕ ಪೀಠಿಕೆ ಒದಗಿಸುತ್ತವೆ.

ಮಾಂಸಾಹಾರಕ್ಕೆ ಎಷ್ಟೊಂದು ವೆಚ್ಚವಾಗುತ್ತದೆ? ಮಸಾಲೆ, ಸಾಂಬಾರ ಪದಾರ್ಥಗಳು, ಬೀಗರು-ಬಿಜ್ಜರ ವಿಶೇಷ ಆತಿಥ್ಯಕ್ಕೆ ಮತ್ತಷ್ಟು ಖರ್ಚು (ಅಷ್ಟಕ್ಕೂ ಶಾಖಾಹಾರಿ ಪಟ್ಟತೊಟ್ಟವರೇ ಅಧಿಕ ಸಂಖ್ಯೆಯಲ್ಲಿ ಮಾಂಸಾಹಾರಿಗಳು!) ಎನ್ನುವ ಸ್ವಾಮೀಜಿಗಳಿಗೆ ತಮ್ಮದೇ ಜಾತ್ಯಸ್ಥರ ಸಂಘಟನೆಗಾಗಿ, ಸಂಸ್ಕೃತಿ ಉತ್ಸವ, ಹುಣ್ಣಿಮೆ ಮಹೋತ್ಸವಗಳಿಗೆ ಖರ್ಚಾಗುವ ಹಣದ ಬಗ್ಗೆ ಯೋಚನೆ ಮಾಡದಿರುವುದು ಆಶ್ಚರ್ಯವನ್ನುಂಟು ಮಾಡುತ್ತದೆ.

ಎಲ್ಲ ನಗರ, ಪಟ್ಟಣಗಳಲ್ಲಿ ಕುರಿ, ಕೋಳಿ, ಕೋಣಗಳನ್ನೇ ಆಹಾರವನ್ನಾಗಿ ಸ್ವೀಕರಿಸುವ ಲಕ್ಷಾಂತರ ಜನರ ನಿತ್ಯದ ಊಟದ ಬಗ್ಗೆ ಯಾವತ್ತೂ ಮಾತನಾಡದ ಮಠಾಧೀಶರು, ಎರಡು ವರ್ಷಕ್ಕೊಮ್ಮೆ ಜರುಗುವ ಕೆಳಸ್ತರದ ಜನರ ಜಾತ್ರೆಗಳ ಆಚರಣೆಗಳ ಸಂದರ್ಭಕ್ಕೆ `ಪ್ರಗತಿಪರತೆಯ ಲೇಪನ~ ಹಚ್ಚಿ ದೊಡ್ಡ ಪ್ರಚಾರ ಪಡೆಯುವ ಬದಲು, ಅದಕ್ಕಿಂತ ಘೋರವಾದ ಅರೆಬೆತ್ತಲೆಸೇವೆ ಕುರಿತು `ಮೌನ~ ತಾಳಿರುವುದರ ಮರ್ಮ ಅರ್ಥವಾಗದು.
 
ಅಷ್ಟಕ್ಕೂ ಸಾರ್ವಜನಿಕ ಸ್ಥಳದಲ್ಲಿ ಪ್ರಾಣಿಗಳಿಗೆ ಹಿಂಸೆ ಮಾಡಬಾರದು ಎಂದಾದರೆ, ವಿದೇಶಗಳಲ್ಲಿ ಇರುವಂತೆ ಪ್ರಾಣಿಗಳಿಗೆ ಅರಿವಳಿಕೆ ನೀಡಿ, ಸಾಯಿಸಿ ಎಂಬ ಹೇಳಿಕೆಯನ್ನಾದರೂ ನೀಡಬಹುದಲ್ಲ?

ಪ್ರಾಣಿಬಲಿ ತಡೆ, ಮಡೆಸ್ನಾನ ಕುರಿತು ಹೇಳಿಕೆ ನೀಡಿ `ನೆರೆಮನೆಯವರ ದುಃಖಕ್ಕೆ ಅಳುವ ಬದಲು~, ತಮ್ಮದೇ ಮನೆ (ಮಠ)ಗಳಲ್ಲಿ ಮನುಷ್ಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಶೋಷಣೆಗಳ ನಿವಾರಣೆಗೆ ಯತ್ನಿಸಿ ತಮ್ಮತಮ್ಮ ಮನವ ಸಂತೈಸಿಕೊಂಡಲ್ಲಿ ಬಸವಣ್ಣನ ಆದರ್ಶ ಸಮಾಜ ನಿರ್ಮಾಣವಾಗಬಲ್ಲದು. `ಮಾತು ಬಾರದ ಮೂಕಪ್ರಾಣಿಗಳಿಂದ ಶಾಪ ತಟ್ಟುವುದು~ ಎಂದು ಶಾಪ-ಪಾಪದ ಕುರಿತು ಮೂಢನಂಬಿಕೆ ಪ್ರತಿಪಾದಿಸುವ ಈ ಮಠಾಧೀಶರು ಮೊದಲು ಅಡ್ಡಪಲ್ಲಕ್ಕಿ ಉತ್ಸವ, ಪಾದಪೂಜೆ, ಚಿನ್ನದ ಕಿರೀಟ, ಬೆಳ್ಳಿ ಸಿಂಹಾಸನ ಪೀಠಾರೋಹಣದಂತಹ ಮೂಢನಂಬಿಕೆಗಳಿಗೆ ತಿಲಾಂಜಲಿ ನೀಡಬೇಕಿದೆ.

ಹುಣ್ಣಿಮೆ, ಉತ್ಸವಗಳನ್ನು `ನಾಡಹಬ್ಬ~ ಮಾಡಬೇಕೆನ್ನುವ, ಸ್ವಜಾತಿಯ, `ಭ್ರಷ್ಟಾತಿಭ್ರಷ್ಟ~ ರಾಜಕಾರಣಿಗಳನ್ನು  ತಿದ್ದಲಾರದ ಈ ಮಠಾಧೀಶರು ಮೊದಲು ತಮ್ಮ ಭಕ್ತರನ್ನು ಭ್ರಷ್ಟಾಚಾರ ಮುಕ್ತರನ್ನಾಗಿ ಮಾಡುವ ದೀಕ್ಷೆ ತೊಡಲಿ. ಉತ್ಸವ, ಮಹೋತ್ಸವಗಳ `ವಾರ್ಷಿಕ ಕೊಯ್ಲಿ~ಗಾಗಿ ಭಕ್ತರಿಗೆ ಇಂತಿಷ್ಟು ಕಪ್ಪಕಾಣಿಕೆ ಸಲ್ಲಿಸಬೇಕು ಎಂದು ಫರ್ಮಾನು ಹೊರಡಿಸುವ ಮಠಾಧೀಶರು ಮೊದಲು ತಮ್ಮ `ಫ್ಯಾಸಿಸ್ಟ್~ ಧೋರಣೆಗಳಿಂದ ಹೊರಬಂದು, ಬದುಕನ್ನು ಸಾಮಾನ್ಯ ಮನುಷ್ಯನ ಕಣ್ಣಲ್ಲಿ ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.