ಹಿಂದುಳಿದಿರುವಿಕೆ ಎಂಬ ಪದಕ್ಕೆ ಬಹು ವಿಸ್ತೃತವಾದ ಅರ್ಥವ್ಯಾಪ್ತಿ ಇದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅನೇಕ ರಾಜ್ಯಗಳು, ಪ್ರಾಂತ್ಯ, ಪ್ರದೇಶಗಳು ರಾಜಕೀಯವಾಗಿ ಸಮಾನ ಅವಕಾಶ ಪಡೆದುಕೊಂಡಿದ್ದರೂ ಸ್ವಾತಂತ್ರ್ಯ ಪೂರ್ವದ ಹಲವು ಕಾರಣಗಳಿಂದಾಗಿ ಆರ್ಥಿಕವಾಗಿ ಈಗಲೂ ಹಿಂದುಳಿದಿರುವುದನ್ನು ಕಾಣುತ್ತೇವೆ.
ಹೀಗೆ ಚಾರಿತ್ರಿಕ ಕಾರಣಗಳಿಂದಾಗಿ ಹಿಂದುಳಿದಿರುವ ಪ್ರದೇಶಗಳಲ್ಲಿ ಹೈದರಾಬಾದ್ ಕರ್ನಾಟಕ ಅಗ್ರಗಣ್ಯ ಸ್ಥಾನದಲ್ಲಿದೆ. ಇದರಂತೆಯೇ ಹಿಂದುಳಿದ ಮಹಾರಾಷ್ಟ್ರದ ವಿದರ್ಭ, ಆಂಧ್ರಪ್ರದೇಶದ ತೆಲಂಗಾಣ ಮುಂತಾದ ಪ್ರದೇಶಗಳ ಜನರು ಮೂರು, ನಾಲ್ಕು ದಶಕಗಳ ಹಿಂದೆಯೇ ತಮ್ಮ ಹೋರಾಟದ ಮೂಲಕ ದನಿ ಎತ್ತರಿಸಿ ಕೇಂದ್ರ ಸರ್ಕಾರದ ಗಮನ ಸೆಳೆದು ಸಾಂವಿಧಾನಿಕವಾಗಿ ವಿಶೇಷ ಸವಲತ್ತುಗಳನ್ನು ಪಡೆದುಕೊಂಡಿದ್ದಾರೆ.
ರಾಜಕೀಯ ಸಂಕಲ್ಪದ ಕೊರತೆಯಿಂದಾಗಿ ಹೈದರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ದೊರಕಲಿಲ್ಲ. ಕಳೆದ ಶತಮಾನದ ಕೊನೆಯ ದಶಕದಲ್ಲಿ ಎಚ್ಚೆತ್ತುಕೊಂಡ ಕೆಲವು ಹೋರಾಟಗಾರರ, ರಾಜಕಾರಣಿಗಳ ಹಾಗೂ ವಿದ್ಯಾರ್ಥಿ, ಯುವ ಜನತೆಯ ಹೋರಾಟಗಳ ಫಲವಾಗಿ ಕೇಂದ್ರದಲ್ಲಿನ ಕಾಂಗ್ರೆಸ್ ಸರ್ಕಾರ ಸಂವಿಧಾನದ 371ನೇ ವಿಧಿಗೆ ಕೊನೆಗೂ ತಿದ್ದುಪಡಿ ತಂದು ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಈ ಭಾಗಕ್ಕೆ ಸೀಮಿತವಾದ ಮೀಸಲಾತಿಯನ್ನು ಒದಗಿಸಿದೆ.
ಈ ತಿದ್ದುಪಡಿ ಅಡಿಯಲ್ಲಿ ಸರ್ಕಾರ ಕೆಲವು ನಿಯಮಗಳನ್ನು ರಚಿಸಿ, ಈ ಅವಕಾಶಗಳನ್ನು ಕೂಡಲೇ ಜಾರಿಗೊಳಿಸಬೇಕಾಗಿದೆ. ಇದೇ ವೇಳೆಗೆ ಈ ಭಾಗದ ವಿದ್ಯಾರ್ಥಿ ಹಾಗೂ ಯುವಜನರು ಕೂಡಲೇ ಕೈಗೊಳ್ಳಬೇಕಾದ ಮಹತ್ವದ ಕಾರ್ಯವೊಂದಿದೆ. ಅದೇನೆಂದರೆ, ಈ ಭಾಗದ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಕರೆಯುವ ಮುಂಚೆಯೇ ಆಸಕ್ತ ಅಭ್ಯರ್ಥಿಗಳೆಲ್ಲರೂ ವಿವಿಧ ಹುದ್ದೆಗಳಿಗೆ ಅವಶ್ಯವಿರುವ ಪರಿಣತಿಯನ್ನು ಗಳಿಸಿಕೊಂಡು ಸ್ಪರ್ಧೆಗೆ ತಕ್ಕ ಸೂಕ್ತ ತಯಾರಿ ಮಾಡಿಕೊಳ್ಳುವುದು. ಇದಕ್ಕೆ ಬೇಕಾಗಿರುವುದು ವಿಸ್ತೃತವಾದ ಅಧ್ಯಯನ ಅಷ್ಟೇ ಅಲ್ಲ; ಓದಿನ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಲು ಬೇಕಾಗುವ ತರಬೇತಿ.
ಭಾರಿ ಪ್ರತಿಭಾವಂತರೆನಿಸಿಕೊಂಡವರು, ಶ್ರಿಮಂತರು ಎಂಜಿನಿಯರಿಂಗ್, ವೈದ್ಯಕೀಯ ಇತ್ಯಾದಿ ಕೋರ್ಸುಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಕಲಾ ಹಾಗೂ ವಾಣಿಜ್ಯ ಕೋರ್ಸುಗಳೆಂದರೆ ಎಲ್ಲರೊಳಗೆ ಒಂದು ಬಗೆಯ ಕೀಳರಿಮೆ ಮನೆ ಮಾಡಿಬಿಟ್ಟಿದೆ. ಅದರಲ್ಲಿಯೂ ಗ್ರಾಮಾಂತರದ ಬಹುಸಂಖ್ಯಾತ ವಿದ್ಯಾರ್ಥಿಗಳು ಪಿ.ಯು.ಸಿ ಮತ್ತು ಪದವಿ ಮಟ್ಟದಲ್ಲಿ ಕಲಾ ವಿಭಾಗಕ್ಕೆ ಮಾತ್ರ ಸೀಮಿತರಾಗಿರುತ್ತಾರೆ.
ವಿಷಾದನೀಯ ಸಂಗತಿ ಎಂದರೆ, ಎಲ್ಲಾ ಕಲಾ ಕಾಲೇಜುಗಳು ವಿದ್ಯಾರ್ಥಿಗಳಿಗೆ ತಮ್ಮ ನಿಗದಿತ ಪಠ್ಯಗಳನ್ನು ಕಲಿಸುವಲ್ಲಿ ಮಾತ್ರ ಮುತುವರ್ಜಿ ವಹಿಸುತ್ತವೆಯೇ ಹೊರತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಮನೋಭಾವ ರೂಢಿಸಲು ಮತ್ತು ಬೌದ್ಧಿಕ ಸಿದ್ಧತೆಯನ್ನು ಮಾಡಿಸಲು ಯಾವುದೇ ಪ್ರಯತ್ನ ಮಾಡುವುದಿಲ್ಲ.
ಹಾಗಾಗಿ ಪಿ.ಯು.ಸಿ ಮತ್ತು ಪದವಿ ಸರ್ಟಿಫಿಕೇಟ್‌ಗಳನ್ನು ಹೊತ್ತ ಸಾವಿರಾರು ವಿದ್ಯಾರ್ಥಿಗಳು ಕಾಲೇಜುಗಳಿಂದ ಹೊರಬಂದರೂ ಅವರಲ್ಲಿ ಹತ್ತಾರು ಜನರೂ ಸ್ಪರ್ಧಾ ಸಾಮರ್ಥ್ಯವನ್ನು ಪಡೆದಿರುವುದಿಲ್ಲ. ಯಾವುದೇ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ದಕ್ಷತೆಯನ್ನಾಗಲೀ, ಮಾನಸಿಕ ಸಿದ್ಧತೆಯನ್ನಾಗಲೀ ಅವರು ಹೊಂದಿರುವುದಿಲ್ಲ. ಸೂಕ್ತ ತರಬೇತಿಯ ಕೊರತೆಯಿಂದಾಗಿ ಸರ್ಕಾರಿ ನೌಕರಿಯ ಕನಸು ಕನಸಾಗಿಯೇ ಉಳಿಯುತ್ತದೆ.
ಆದ್ದರಿಂದಲೇ ಪಿ.ಯು.ಸಿ.ಯಿಂದಲೇ ಒಂದು ಇಂಟೆಗ್ರೇಟೆಡ್ ಡಿಗ್ರಿ ಕೋರ್ಸಿನ ಕಲ್ಪನೆಯನ್ನು ಕೇಂದ್ರೀಯ ವಿಶ್ವವಿದ್ಯಾಲಯ ಸಾದರಪಡಿಸುವಂತೆ, ನಮ್ಮ ಕಲಾ ಮಹಾವಿದ್ಯಾಲಯಗಳೂ ಇಂಥ ಒಂದು ಕೋರ್ಸನ್ನು ಆರಂಭಿಸಿ ಪಿ.ಯು.ಸಿ.ಯಿಂದಲೇ ವಿದ್ಯಾರ್ಥಿಗಳಿಗೆ ನಿಗದಿತ ಪಠ್ಯದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗುವ ಸೂಕ್ತ ತರಬೇತಿಯನ್ನು ಯಾಕೆ ಕೊಡಬಾರದು? ಸಾಮಾನ್ಯ ಪ್ರತಿಭೆಯ ವಿದ್ಯಾರ್ಥಿಗಳು ಕೂಡ ತರಬೇತಿಯ ಮುಖಾಂತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಬಹುದು ಎಂಬುದಕ್ಕೆ ನಿದರ್ಶನಗಳಿವೆ.
ಹೀಗಾಗಿ ತರಬೇತಿಯ ಅವಕಾಶಗಳನ್ನು ಪದವಿ ಪೂರ್ವ ಶಿಕ್ಷಣ ಮಟ್ಟದಿಂದಲೇ ಸೃಷ್ಟಿಸಿ ಪದವಿ ಅಭ್ಯಾಸದ ಉದ್ದಕ್ಕೂ ಮುಂದುವರಿಸಿದರೆ, ಹೈದರಾಬಾದ್ ಕರ್ನಾಟಕ ಭಾಗದ ನೂರಾರು ಅಲ್ಲ, ಸಾವಿರಾರು ಅಭ್ಯರ್ಥಿಗಳು ಬರಿ ಪ್ರಥಮ, ದ್ವಿತೀಯ ದರ್ಜೆಯ ಸಹಾಯಕರೋ, ಪೊಲೀಸ್ ಕಾನ್‌ಸ್ಟೆಬಲ್‌ಗಳೋ ಅಷ್ಟೇ ಅಲ್ಲ, ಕೆ.ಎ.ಎಸ್, ಐ.ಎ.ಎಸ್ ಅಧಿಕಾರಿಗಳಾಗಿಯೂ ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ. ಸಂಶಯವಿರುವುದು ಈ ಭಾಗದ ಕಾಲೇಜುಗಳು ಇಂಥ ತರಬೇತಿ ಕಾರ್ಯಕ್ರಮವನ್ನು ತಮ್ಮ ಅಧ್ಯಯನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬಹುದೇ ಎಂಬುದರ ಬಗ್ಗೆ.
ಗೊತ್ತು ಗುರಿ ಇಲ್ಲದ ಶಿಕ್ಷಣದಿಂದಾಗಿಯೇ ಹೈದರಾಬಾದ್ ಕರ್ನಾಟಕದ ಬಹುಸಂಖ್ಯಾತ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಮೂರ್ತಗೊಳಿಸಲು, ಸಾಬೀತುಗೊಳಿಸಲು ಸಾಧ್ಯವಾಗದೇ ನಿರುದ್ಯೋಗಿಗಳಾಗಿಯೇ ಉಳಿಯುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಗ್ರಾಮೀಣ ಭಾಗದವರೆಂಬುವುದು ದುಃಖದ ಸಂಗತಿ. ಆದ್ದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಈ ಕ್ಷಣದ ಅವಶ್ಯಕತೆ ಎಂದರೆ, ಅಂತಃಪ್ರೇರಣೆ.
ಅದು ದೊರಕುವುದು ಸೂಕ್ತ ತರಬೇತಿಯಿಂದ ಮಾತ್ರ.ನಮ್ಮ ವಿದ್ಯಾರ್ಥಿಗಳು, ಯುವಕರು ತಮ್ಮ ಆಲಸ್ಯ ಪ್ರವೃತ್ತಿಯನ್ನು ಮೆಟ್ಟಿ ನಿಂತರೆ, ಅಂದರೆ ತಮ್ಮ ದೃಷ್ಟಿಕೋನವನ್ನು ಬದಲಿಸಿಕೊಂಡರೆ, ಬದುಕನ್ನು ಬದಲಾಯಿಸಿಕೊಳ್ಳುವ ದಾರಿಯಲ್ಲಿ ದಾಪುಗಾಲು ಹಾಕಬಲ್ಲರು. ಸಂವಿಧಾನದ 371ನೇ ವಿಧಿಯ ತಿದ್ದುಪಡಿಯನ್ನು ಸೂಕ್ತ ತರಬೇತಿ ಮಾತ್ರ ಸಾರ್ಥಕಗೊಳಿಸಬಲ್ಲದು. ಇಲ್ಲಿಯ ಬದುಕನ್ನು ಬೆಳಗಬಲ್ಲದು.
-ಆರ್.ವೀ. ದೋಶೆಟ್ಟಿ, ಗುಲ್ಬರ್ಗ .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.