ADVERTISEMENT

ಸಾವಯವ ಕೃಷಿಯಿಂದ ರೈತರ ಉದ್ಧಾರ ಸಾಧ್ಯವಿಲ್ಲ!

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 19:30 IST
Last Updated 18 ಏಪ್ರಿಲ್ 2012, 19:30 IST

`ಕೋಟಿವಿದ್ಯೆಗಳಲ್ಲಿ ಮೇಟಿ ವಿದ್ಯೆ ಮೇಲು~ ಎಂದು ಸರ್ವಜ್ಞ ಹೇಳಿದ್ದರೂ ಅದನ್ನು ಈಗಲೂ ಒಪ್ಪಿಕೊಳ್ಳುವ ಪರಿಸ್ಥಿತಿ ರೈತನಿಗಿಲ್ಲ. ಸದ್ಯ ಕೃಷಿಕರದು ಸಂಕಟ ಸಮಯ. ಈ ವರ್ಷ ಹಿಂಗಾರು ಮಳೆ ಸಂಪೂರ್ಣವಾಗಿ ಕೈಬಿಟ್ಟಿದ್ದರಿಂದ ಬೀದರನಿಂದ ಬೆಂಗಳೂರುವರೆಗೆ ಎಲ್ಲೆಡೆ ಯಾವುದೇ ಬೆಳೆ ಸರಿಯಾಗಿ ಬಂದಿಲ್ಲ. ಕುಡಿಯುವ ನೀರು, ಜಾನುವಾರುಗಳ ಮೇವಿಗಾಗಿ ಹಾಹಾಕಾರ ಎದ್ದಿದೆ. ರಾಜಕೀಯ ಮುಖಂಡರು ಬರ ಪರಿಶೀಲನೆ ನೆಪದಲ್ಲಿ ಅಡ್ಡಾಡುತ್ತಿದ್ದಾರೆ. ರೈತರು ಇವರ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದರೂ ಭರವಸೆಗಳ `ಮಳೆ~ ಬಿಟ್ಟರೆ ಬೇರೇನೂ ಸಿಗುತ್ತಿಲ್ಲ.

ದೇಶದಲ್ಲಿ ಶೇ 70 ರಷ್ಟು ರೈತರು. ಇವರೆಲ್ಲ ಒಮ್ಮನಸ್ಸಿನಿಂದ ಇದ್ದರೆ ಅದೊಂದು ದೊಡ್ಡ ಶಕ್ತಿ. ಆದರೆ ಅತಿವೃಷ್ಟಿ, ಅನಾವೃಷ್ಟಿ, ಸರ್ಕಾರದ ತಪ್ಪು ನೀತಿ, ಲಾಭ ಕೊಡದ ಯೋಜನೆಗಳಿಂದಾಗಿ ರೈತರ ಜಂಘಾಬಲ ಉಡುಗಿಹೋಗಿದೆ. ಇವರಲ್ಲಿ ಆತ್ಮವಿಶ್ವಾಸ ತುಂಬಬೇಕಾದ ಜನಪ್ರತಿನಿಧಿಗಳು  ಪರಿಣಾಮಕಾರಿಯಾದ ಉಪಾಯ ಕಂಡು ಹಿಡಿಯದೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. `ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ~ ಎನ್ನುವಂತೆ ಕೆಲ ಯೋಜನೆಗಳು ಕೃಷಿಕರಿಗಾಗಿ ರೂಪಿಸಿದ್ದರೂ ಅದರಿಂದ ಬೇರೆಯವರ ಜೇಬು ತುಂಬುತ್ತಿದೆ.
ಕರ್ನಾಟಕ ಸ್ಥಾಪಿಸಿರುವ `ಸಾವಯವ ಕೃಷಿ ಮಿಷನ್~ ಇಂಥದ್ದೇ ಯೋಜನೆ. ಇದು ಬೇಸಾಯಗಾರರ ಮನೆ ತುಂಬುವ ಬದಲು ಜೇಬು ಖಾಲಿ ಮಾಡುತ್ತಿದೆ. ರಾಸಾಯನಿಕ ಗೊಬ್ಬರದ ಬೆಲೆಗಿಂತಲೂ ಸಾವಯವ ಗೊಬ್ಬರದ ಬೆಲೆ ಹೆಚ್ಚಾಗಿದ್ದು ಈ ಗೊಬ್ಬರದ ಬಳಕೆ ಮಾಡುವುದೆಂದರೆ ಬಾವಿ ನೀರು ಬಿಟ್ಟು ಬಾಟ್ಲಿ ನೀರು ಖರೀದಿಸಿದಂತೆ.

ಪ್ರಸಿದ್ಧ ಕೃಷಿ ತಜ್ಞ ಸುಭಾಷ ಪಾಳೇಕರ್ ಸಹ ಈ ಬಗ್ಗೆ ಬಹಿರಂಗವಾಗಿ ತಮ್ಮ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಈಚೆಗೆ ಬಸವಕಲ್ಯಾಣ ತಾಲ್ಲೂಕಿನ ಹುಲಸೂರನಲ್ಲಿ ನಡೆದ ಮೂರು ದಿನಗಳ ಕೃಷಿಕರ ಶಿಬಿರದಲ್ಲಿ ಅವರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾರ್ಗದರ್ಶನ ಮಾಡುವಾಗ `ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿಗೆ ಉತ್ತೇಜನ ಕೊಡಬೇಕು ಎಂದು ಕೇಳಿಕೊಂಡರೆ ಸರ್ಕಾರ ಸಾವಯವ ಕೃಷಿ ಮಿಷನ್ ಮೂಲಕ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಈ ಮಿಷನ್ ಸ್ಥಾಪನೆ ಯಾರ ಹಿತಕ್ಕಾಗಿ? ಈ ಬಗ್ಗೆ ರಾಜಕೀಯ ಮುಖಂಡರಿಗೆ ಮತ್ತು ಅಧಿಕಾರಿಗಳಿಗೆ ಪ್ರಶ್ನಿಸಿದ್ದೇನೆ. ಆದರೂ ಯಾರೂ ಉತ್ತರಿಸಿಲ್ಲ. ಈ ಸಂಬಂಧ ತಪ್ಪು ಗ್ರಹಿಕೆ ಆಗಿರುವ ಸಾಧ್ಯತೆಯೂ ಇದೆ. ಅಸಲಿಗೆ ನೈಸರ್ಗಿಕ ಕೃಷಿ ಮತ್ತು ಸಾವಯವ ಕೃಷಿಯಲ್ಲಿನ ಅಂತರವೇ ಇವರಿಗೆ ತಿಳಿದಿಲ್ಲ~ ಎಂದು ಹತಾಶೆಯಿಂದ ಹೇಳಿದರು.

ಪಾಳೇಕರರು ಪ್ರತಿಪಾದಿಸುವ ನೈಸರ್ಗಿಕ ಕೃಷಿಯೇ ಬೇರೆ. ಸರ್ಕಾರ ಉದ್ದೇಶಿಸಿದ ಸಾವಯವ ಕೃಷಿಯೇ ಬೇರೆ. ಸಾವಯವ ಕೃಷಿ ಸ್ವದೇಶಿ ಅಲ್ಲ. ಈ ಪದ್ಧತಿಯಲ್ಲಿ ಎರೆಹುಳು ಗೊಬ್ಬರ ತಯಾರಿಕೆಗೆ ಉಪಯೋಗಿಸುವ ಎರೆಹುಳು `ಅಸಲಿ~ ಅಲ್ಲ.

ದೇಶೀಯ ಎರೆಹುಳುವಿನಲ್ಲಿ ಇರಬೇಕಾದ 16 ಗುಣಗಳು ಅದರಲ್ಲಿ ಇಲ್ಲ. ಅಲ್ಲದೆ ಕಾಂಪೋಸ್ಟ್ ಮತ್ತು ಎರೆಹುಳು ಗೊಬ್ಬರದ ಬೆಲೆ ತಿಪ್ಪೆಗೊಬ್ಬರಕ್ಕಿಂತ ಹತ್ತುಪಟ್ಟು ಅಧಿಕ. ಹೀಗೆ ಹೆಚ್ಚಿನ ಖರ್ಚು ತರುವ ಸಾವಯವ ಕೃಷಿ ಕೈಗೊಂಡ ರೈತ ಉತ್ಪನ್ನ ಕಡಿಮೆಯಾದಾಗ ಆತ್ಮಹತ್ಯೆ ಮಾಡಿಕೊಳ್ಳದೆ ಇನ್ನೇನು ಮಾಡುತ್ತಾನೆ.

ಆದರೆ, ನೈಸರ್ಗಿಕ ಕೃಷಿಯಲ್ಲಿ ಹಣ ಖರ್ಚು ಮಾಡುವ ಅಗತ್ಯವೇ ಇಲ್ಲ. ಇದಕ್ಕಾಗಿ ಗೊಬ್ಬರ, ಬೀಜ ಮತ್ತು ಕೀಟನಾಶಕ ಖರೀದಿಸುವ ಅಗತ್ಯವೂ ಬೀಳುವುದಿಲ್ಲ. ಎಲ್ಲವೂ ನಿಸರ್ಗದಿಂದಲೇ ಪಡೆಯಬೇಕು. ಈ ಪದ್ಧತಿಯಿಂದ ರಾಸಾಯನಿಕ ಮತ್ತು ಸಾವಯವ ಕೃಷಿಗಿಂತ ಮೂರುಪಟ್ಟು ಹೆಚ್ಚಿನ ಉತ್ಪನ್ನ ದೊರೆಯುತ್ತದೆ. ಆಹಾರಧಾನ್ಯ ಪೌಷ್ಠಿಕಾಂಶದಿಂದ ಕೂಡಿರುವುದರಿಂದಲೂ ಅದಕ್ಕೆ ಹೆಚ್ಚಿನ ಬೆಲೆ ಬರುತ್ತದೆ. ಇಂಥ ಲಾಭದಾಯಕ ಕೃಷಿ ಕೈಗೊಂಡರೆ ರೈತನಿಗೆ ಸಂಕಟ ಏಕೆ ಬರುತ್ತದೆ?

ಪ್ರತಿ ಜಿಲ್ಲೆಯಲ್ಲಿಯೂ ಇಂಥ ಕೃಷಿ ಕೈಗೊಂಡ ರೈತರಿದ್ದಾರೆ. ಈ ಪದ್ಧತಿ ಅನುಸರಿಸುವವರು ಬಿತ್ತನೆಗಾಗಿ ಸಾಲ ಮಾಡುವುದೇ ಇಲ್ಲ ಎಂದಾದರೆ, ಒಂದುವೇಳೆ ಅನಾವೃಷ್ಟಿ ಇಲ್ಲವೆ ಅತಿವೃಷ್ಟಿಯಿಂದ ಹಾನಿಯಾದರೂ ಸಾಲ ತೀರಿಸುವ ಚಿಂತೆಯೇ ಇರುವುದಿಲ್ಲ. ಹೀಗಿದ್ದಾಗ ಬೇಸಾಯಗಾರ ಮುಂದಿನ ಬೆಳೆ ಬರುವವರೆಗೆ ಇದ್ದುದರಲ್ಲಿಯೇ ಜೀವನ ನಡೆಸುತ್ತಾನೆಯೇ ಹೊರತು ಆತ್ಮಹತ್ಯೆಯ ಬಗ್ಗೆ ಕನಸಿನಲ್ಲಿಯೂ ಯೋಚಿಸಲಾರ.

ನೈಸರ್ಗಿಕ ಪದ್ಧತಿಯಲ್ಲಿ ಗೊಬ್ಬರದ ಬದಲಾಗಿ ಗೋಮೂತ್ರ, ಸಗಣಿ, ಮಣ್ಣು, ಸುಣ್ಣ, ಬೆಲ್ಲ ಬಳಸಿ ಸಿದ್ಧಪಡಿಸಿದ `ಬೀಜಾಮೃತ~ ಮತ್ತು `ಜೀವಾಮೃತ~ ಬಳಸಬೇಕಾಗುತ್ತದೆ. ಬೀಜಕ್ಕೆ ಬೀಜಾಮೃತ ಲೇಪಿಸಿ ಬಿತ್ತಿದರೆ ಮೊಳಕೆಗಳು ಸರಿಯಾಗಿ ಬರುತ್ತವೆ. ಜೀವಾಮೃತ ಜಮೀನಿಗೆ ಸಿಂಪಡಿಸಿದರೆ ಅದರಲ್ಲಿನ ಪೋಷಕಾಂಶ ಅಧಿಕವಾಗಿ ಬಿತ್ತನೆ ಬೀಜಕ್ಕೆ ನೂರಕ್ಕೆ ನೂರರಷ್ಟು ಮೊಳಕೆಗಳು ಅಂಕುರಿಸುತ್ತವೆ.

ಕೀಟಗಳಿಂದ ಬೆಳೆ ಸಂರಕ್ಷಣೆಗಾಗಿ ಬೇವಿನ ಎಲೆ, ಸೀತಾಫಲ ಎಲೆ, ಬಿಲ್ವಪತ್ರೆಯಂತಹ ವಿವಿಧ ಎಲೆಗಳನ್ನು ಬಳಸಿ ಸಿದ್ಧಪಡಿಸಿದ `ಬ್ರಹ್ಮಾಸ್ತ್ರ~ ಮತ್ತು `ನೀಮಾಸ್ತ್ರ~ ಉಪಯೋಗಿಸಬೇಕಾಗುತ್ತದೆ.

ಹೊಲದಲ್ಲಿನ ಕಸಕಡ್ಡಿ ಸುಡಬಾರದು. ಅದನ್ನು ಜಮೀನಿನ ಮೇಲೆ ಹಾಗೆಯೇ ಹರವಿ ಇಡುವುದರಿಂದ ಲಾಭವಿದೆ. ಇದರಿಂದ ಜಮೀನಿನ ತೇವಾಂಶ ಹೆಚ್ಚುತ್ತದೆ. ಹೀಗಾಗಿ ಎರೆಹುಳುಗಳು ಜಮೀನಿನಲ್ಲಿ ರಂಧ್ರ ಕೊರೆದು ಫಲವತ್ತತೆ ಹೆಚ್ಚಿಸುತ್ತವೆ. ಬೆಳೆಗಳ ಸಾಲುಗಳಲ್ಲಿ ಅಂತರ ಸಹ ಇಡಬೇಕು. ನೀರಿನ ಕೊರತೆ ಇರುವಲ್ಲಿ ಹೀಗೆ ಹೆಚ್ಚಿನ ಅಂತರದಲ್ಲಿ ಬಿತ್ತನೆ ಮಾಡಿದರೆ 100 ಲೀಟರ್ ನೀರು ಬೇಕಾಗುವಲ್ಲಿ ಕೇವಲ 10 ಲೀಟರ್ ಸಾಕಾಗುತ್ತದೆ ಮತ್ತು ಉತ್ಪನ್ನ ಸಹ ವೃದ್ಧಿಸುತ್ತದೆ. ಆದ್ದರಿಂದ ಸರ್ಕಾರ ತಮ್ಮ ನಿರ್ಣಯ ಬದಲಿಸಿ ಸಾವಯವ ಕೃಷಿ ಬದಲಾಗಿ ನೈಸರ್ಗಿಕ ಕೃಷಿಗೆ ಉತ್ತೇಜನ ಕೊಡಬೇಕು. ಇಂಥ ಕೃಷಿ ಕೈಗೊಳ್ಳುವವರಿಗೆ ಸಹಾಯ ಮಾಡುವುದು ಉತ್ತಮ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.