ADVERTISEMENT

ಹಾರು ಬೂದಿಗೆ ಊರು ನಾಶವಾಗುವ ಮುನ್ನ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2011, 16:20 IST
Last Updated 6 ಮಾರ್ಚ್ 2011, 16:20 IST

ಪಡುಬಿದ್ರಿಗೆ ಸಮೀಪದ ಗ್ರಾಮವೊಂದರ ಮನೆಯಲ್ಲಿ ಹಲವು ವರ್ಷಗಳಿಂದ ವೈವಿಧ್ಯಮಯ ತರಕಾರಿ ಕೃಷಿ ಮಾಡುತ್ತಿದ್ದಾರೆ. ಹಚ್ಚ ಹಸಿರಾಗಿರಬೇಕಾದ ತರಕಾರಿ ಗಿಡಗಳ ಎಲೆಗಳು ಬೆಂಕಿಗೆ ಸಿಲುಕಿದಂತೆ ಕರಟಿ ಕಪ್ಪಾಗಿವೆ. ಹೂವಿಲ್ಲ. ಕಾಯಿಗಳಿಲ್ಲ. ‘ಬ್ಯಾಂಕು ಸಾಲ ಮಾಡಿ ಇಷ್ಟೊಂದು ಕೃಷಿ ಮಾಡಿದ್ದೆ. ಬಡ್ಡಿ ಕಟ್ಟುವುದಕ್ಕೆ ಕೂಡ ಆದಾಯ ಬರಲಿಕ್ಕಿಲ್ಲ. ಮುಂದಿನ ಜೀವನಕ್ಕೆ ಏನು ದಾರಿ ಎಂದು ದೇವರಿಗೇ ಗೊತ್ತು’ ಎಂದು ಮನೆಯಾತ ಚಿಂತನೆಯ ಬೆಟ್ಟ ಹೊತ್ತಿದ್ದರು.

ಕುಡಿಯಲು ನೀರು ಕೇಳಿದೆ ಲೋಟದಲ್ಲಿ ತಂದು ಎದುರಿಗಿಟ್ಟರು. ‘ಲಿಂಬೆ ಪಾನಕ ಮಾಡಿದಿರೇನೋ, ನನಗೆ ಬರೇ ನೀರು ಸಾಕಾಗಿತ್ತು’ ಎಂದೆ. ‘ಇದು ನೀರೇ. ಆದರೆ ಅದರ ಬಣ್ಣ ಪಾನಕದ ಹಾಗಿದೆ. ನೋಡಿ ನೀರಿನ ತಳದಲ್ಲಿ ದಪ್ಪಗೆ ಕುಳಿತಿರುವುದು ಸಕ್ಕರೆ ಅಲ್ಲ. ಹಾರು ಬೂದಿ’ ಅವರೆಂದರು.

ಪಡುಬಿದ್ರಿಯ ವಿದ್ಯುತ್ ಸ್ಥಾವರದ ಒಳಗೆ ಕಲ್ಲಿದ್ದಲು ಬೆಂದು ವಿದ್ಯುತ್ತಾಗಿ ಪರಿವರ್ತನೆ ಹೊಂದಿ ತಂತಿಗಳ ಮೂಲಕ ಅಭಿವೃದ್ಧಿಯ ಪಥದೆಡೆಗೆ ಸಾಗುವಾಗ ನಂದಿಕೂರು ಪ್ರದೇಶದ ನೂರಾರು ಮನೆಗಳವರ ಪಾಲಿಗೆ ಮರಣ ಮೃದಂಗದ ನಾದ ಕೇಳಿಬರಲಾರಂಭಿಸಿದೆ. ಅಲ್ಲಿಂದ ಗಾಳಿಯಲ್ಲಿ ಹಾರಿಬರುವ ವಿಷಯುಕ್ತ ಬೂದಿಯಿಂದ ತರಕಾರಿ ಗಿಡಗಳು ಬೆಂಕಿ ಹಚ್ಚಿದ ಹಾಗೆ ಒಣಗುತ್ತಿವೆ. ಕುಡಿಯುವ ನೀರು ಕಲುಷಿತವಾಗಿ ಕುಡಿಯಲಾಗದ ಸ್ಥಿತಿ ಬಂದಿದೆ.

ಭುಜಂಗಶೆಟ್ಟಿ ಎಂಬುವರ ಮೈತುಂಬ ಅಂಗೈಯಗಲದ ಗಾತ್ರದಲ್ಲಿ ಅಲ್ಲಲ್ಲಿ ಕಜ್ಜಿಗಳಾಗಿ ಚರ್ಮ ಕಿತ್ತು ಬರುತ್ತಿದೆ. ತುರಿಸಿ ತುರಿಸಿ ರಕ್ತ ಬಂದರೂ ತುರಿಕೆ ಮಾತ್ರ ನಿಲ್ಲುತ್ತಿಲ್ಲ. ಯಾವ ಔಷಧಿಯೂ ನಾಟುತ್ತಿಲ್ಲ. ಹಾರುಬೂದಿಯ ಕಾರಣದಿಂದ ಇಲ್ಲಿ ಅಲ್ಪ ಸ್ವಲ್ಪ ಚರ್ಮವ್ಯಾಧಿ ಇದ್ದವರಿಗೆ ಅದೀಗ ಜೋರೇ ಆಗುತ್ತಿದೆ ಎಂದರು ಶೆಟ್ಟರು. ನವಜಾತ ಶಿಶುಗಳಿಗೆ ಉಸಿರುಕಟ್ಟುವ ವ್ಯಾಧಿ, ಆಸ್ತಮಾ ಕಾಣಿಸಿಕೊಳ್ಳುತ್ತಿದೆಯಂತೆ. ಇದಕ್ಕೆಲ್ಲ ಕಾರಣ ಅಂತ ಎಲ್ಲರೂ ಬೆರಳು ತೋರಿಸುವುದು ಹಾರು ಬೂದಿಯೆಡೆಗೆ.

ಈ ಯೋಜನೆಗೆ ಕಾರಣ ಈಗಿನ ಸರ್ಕಾರ ಅಲ್ಲವಾದರೂ ಅದರ ಚಾಲನೆ ಪ್ರಗತಿ ಕಂಡದ್ದು ಜೆಡಿಎಸ್-ಬಿಜೆಪಿ ಆಳ್ವಿಕೆಯ ಕಾಲದಲ್ಲಿ.ಎಂಡೋಸಲ್ಫಾನ್ ಬಳಕೆಯ ಭೀಕರ ದುರಂತ ನಮ್ಮ ಕಣ್ಮುಂದೆಯೇ ಇದೆ. ನಿಷೇಧದ ಕಣ್ಕಟ್ಟು ನಡೆದಿದೆ. ಎಂಡೋಸಲ್ಫಾನ್ ಬಳಕೆಯ ಪ್ರದೇಶದಲ್ಲಿ ಬುದ್ಧಿಮಾಂಧ್ಯ, ಪಕ್ಷವಾತಕ್ಕೆ ಬಲಿಯಾಗಿ ಬದುಕಿದಷ್ಟು ದಿನವೂ ನರಕಯಾತನೆ ಅನುಭವಿಸುತ್ತಿರುವ ಜನಸಮೂಹದ ಕಣ್ಣೀರೊರೆಸುವುದಕ್ಕಿಂತಲೂ ಅದಕ್ಕೆ ಕಾರಣವಾದವರಿಗೆ ಘೋರ ಶಿಕ್ಷೆ ವಿಧಿಸಬೇಕಾದ ಪ್ರಭುತ್ವ ಮೌನವಾದಂತಿದೆ.

ಖ್ಯಾತ ಪರಿಸರ ಪ್ರೇಮಿ ಮುಳಿಯ ವೆಂಕಟಕೃಷ್ಣ ಶರ್ಮರು, ‘ಎಂಡೋಸಲ್ಫಾನ್ ದುರಂತ ಪ್ರದೇಶದಲ್ಲಿ ಒಬ್ಬನೇ ಒಬ್ಬ ಸಸ್ಯಾಹಾರಿಯೂ ಅದರಿಂದಾಗಿ ವ್ಯಾಧಿಗ್ರಸ್ಥನಾದಂತೆ ಕಾಣುವುದಿಲ್ಲ. ಎಲ್ಲರೂ ಮಾಂಸಾಹಾರಿಗಳು. ವಿಷದ ಪ್ರಭಾವಕ್ಕೊಳಗಾದ ಮೀನು ಮತ್ತು ಇತರ ಕಾಡು ಪ್ರಾಣಿಗಳ ಮಾಂಸ ತಿಂದವರೇ ಶಾಶ್ವತ ಅಂಗವೈಕಲ್ಯಕ್ಕೆ ಬಲಿಯಾಗಿದ್ದಾರೆ.

ಹಾರುಬೂದಿ ಪ್ರದೇಶದಲ್ಲಿ ಅದು ಎಷ್ಟೇ ನಿರಪಾಯಕರ ಎಂದು ಕಂಪೆನಿಯವರು ತಮ್ಮಟೆ ಬಾರಿಸಿದರೂ ಸಮುದ್ರದ ಮೀನು ಮತ್ತಿತರ ಮಾಂಸ ತಿಂದವರಿಗೆ ಇದೇ ಕಾರಣದಿಂದ ಹಲವು ರೀತಿಯ ದೈಹಿಕ ಬಾಧೆ ಬರಬಹುದು. ಕ್ಷಣ ಗಣನೆಯ ಸಂದರ್ಭ ಇದಲ್ಲವೇ ಅಲ್ಲ. ಅಂತರ್‌ರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಗಳೇ ಇಲ್ಲಿಗೆ ಬರಬೇಕು’ ಎನ್ನುತ್ತಾರೆ.

ಇದರೆಡೆಯಲ್ಲಿ ವಿದ್ಯುತ್ ಕಂಪೆನಿ ಹಾರುಬೂದಿಯಿಂದ ಏನೂ ಅಪಾಯವಿಲ್ಲವೆಂದು ಹೇಳುತ್ತಲೇ ಬಂದಿದೆ. ಬೂದಿಯನ್ನು ಸುಭದ್ರ ಕೊಳವೆಗಳ ಮೂಲಕ ನೀರು ತುಂಬಿದ ಹೊಂಡದಲ್ಲಿ ನೇರವಾಗಿ ಹೋಗಿ ಬೀಳಲು ವ್ಯವಸ್ಥೆ ಮಾಡಿದ್ದರೂ ಒಂದೆಡೆ ಕೊಳವೆ ಬಿರುಕು ಬಿಟ್ಟುದರಿಂದಾಗಿ ಬೂದಿ ಗಾಳಿಯಲ್ಲಿ ಹಾರಿ ಜನರ ಕಳವಳಕ್ಕೆ ಕಾರಣವಾಗಿದೆ. ಇನ್ನೆಂದಿಗೂ ಹೀಗಾಗುವುದಿಲ್ಲವೆಂದು ಹೇಳಿದ್ದಾರೆ.

‘ಪಡುಬಿದ್ರಿ ಪರಿಸರದವರು ಒಂದರ್ಥದಲ್ಲಿ ತಬ್ಬಲಿಗಳು. ನಿಮ್ಮೊಂದಿಗೆ ನಾವಿದ್ದೇವೆ. ಮೊದಲು ನಮ್ಮ ಎದೆಗೆ ಗುಂಡು ಹಾರಿಸಿ ಮತ್ತೆ ಇಲ್ಲಿ ಪರಿಸರ ವಿನಾಶದ ಯೋಜನೆ ಆರಂಭಿಸಲಿ’ ಎಂದು ಧೈರ್ಯ ತುಂಬಿದವರು ಅವರ ಬೆನ್ನ ಹಿಂದೆ ಇಲ್ಲ. ಓಟಿಗಾಗಿ ಹಲ್ಲು ಗಿಂಜುತ್ತ ಮನೆ ಬಾಗಿಲಿಗೆ ಬಂದು ನಿಮಗೆ ತೊಂದರೆಯಾಗುವ ಯಾವ ಯೋಜನೆಗೂ ಕರಾವಳಿಯಲ್ಲಿ ಜಾಗ ಇಲ್ಲ ಎಂದು ಆಶ್ವಾಸನೆ ನೀಡಿದ ರಾಜಕಾರಣಿಗಳ ದನಿಯೂ ಅಲ್ಲಿ ಕೇಳಿಸುತ್ತಿಲ್ಲ.
 
ಮೈಯಲ್ಲಿ ಚಿಕ್ಕಾಸಿನ ಬಲ ಇಲ್ಲದಿದ್ದರೂ ಚಿವುಟುವ, ತೊಟ್ಟಿಲು ತೂಗುವ ಕೆಲಸಗಳೆರಡನ್ನು ನಿಭಾಯಿಸಬಲ್ಲ ಮಠಾಧಿಪತಿಗಳು, ಅಧಿಕಾರವಿಲ್ಲದೆ ಮುಂದಿನ ಗೆಲುವಿಗೆ ಗುರಿ ಇಟ್ಟುಕೊಂಡ ರಾಜಕಾರಣಿಗಳು ಈ ಸಂತ್ರಸ್ತರನ್ನೆಲ್ಲ ಒಂದುಗೂಡಿಸಿ ತಾವೇ ಇದನ್ನೆಲ್ಲ ತಡೆದುಬಿಡುತ್ತೇವೆ ಅನ್ನುವ ಮಾತು ಹೇಳುತ್ತಿದ್ದಾರೆ. ಇಂಥವರನ್ನು ಜನರು ನಂಬುತ್ತಲೇ ಇರುತ್ತಾರೆ. ಆದರೆ ಅವರಿಂದ ಇವರಿಗೆ ಯಾವ ಲಾಭವೂ ಆಗದೆ ವೈಯಕ್ತಿಕ ಬೇಳೆ ಬೇಯಿಸಿಕೊಂಡು ನೇಪಥ್ಯ ಸೇರುತ್ತಾರೆಂಬುದಕ್ಕೆ ಕರಾವಳಿಯ ಹಲವು ಚಳವಳಿಗಳೇ ಉದಾಹರಣೆ.

ಬೇರೆ ಯಾವುದೇ ಪಕ್ಷದ ಸರ್ಕಾರ ಈಗ ರಾಜ್ಯದಲ್ಲಿ ಆಳುತ್ತಿದ್ದರೂ ಈಗಿನ ಸರ್ಕಾರ ವಿರೋಧ ಪಕ್ಷದಲ್ಲಿರುತ್ತಿದ್ದರೆ ಹಾರುಬೂದಿಯ ಪ್ರಶ್ನೆ ರಾಷ್ಟ್ರಮಟ್ಟದಲ್ಲಿ ದೂಳೆಬ್ಬಿಸುತ್ತಿತ್ತು. ಬಂದ್‌ಗಳು, ಗಲಭೆಗಳು, ವಿಧಾನಸೌಧ ಚಲೋ ಎಲ್ಲ ಆಗುತ್ತಿತ್ತು. ಆದರೆ ವಿರೋಧ ಪಕ್ಷ ಇಲ್ಲಿ ನಿಷ್ಕ್ರಿಯವಾಗಿದೆ. ಪಡುಬಿದ್ರಿಯ ಅಮಾಯಕರು ತಮ್ಮ ಕೊನೆಯ ಕ್ಷಣ ಗಣನೆ ಮಾಡುತ್ತ ತಮ್ಮ ಅಮಾಯಕತನದಿಂದ ತಾವೇ ತಮ್ಮ ಸಮಾಧಿ ತೋಡಿಕೊಳ್ಳುತ್ತಿದ್ದರೆ ಅಲ್ಲಿ ಸಿಎಂ ಯಡಿಯೂರಪ್ಪ ಇವರಿಗೊಂದು ಸಾಂತ್ವನ ಕೂಡ ಹೇಳದೆ ಭುವನೇಶ್ವರಿಯ ಪ್ರತಿಮೆ ಕೆತ್ತಿಸುತ್ತ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.