ADVERTISEMENT

ಸಂಗತ | ಮೇಕೆದಾಟು: ಕಾಣಿ ಇನ್ನೊಂದು ಮುಖ

ಯಾವುದೇ ಒಂದು ‘ಅಭಿವೃದ್ಧಿ’ ಯೋಜನೆಯ ಪರಿಸರ ಪರಿಣಾಮದ ಅಂದಾಜು ಮಾಡುವುದು ಅಗತ್ಯ

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 19:31 IST
Last Updated 14 ಜನವರಿ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೇಕೆದಾಟು ಜಲಾಶಯ ಯೋಜನೆಯನ್ನು ಏಕೆ ಕೈಬಿಡಬೇಕು ಎನ್ನುವ ಬಗ್ಗೆ ಅನೇಕ ತಜ್ಞರು ಈಗಾಗಲೇ ಅರ್ಥಪೂರ್ಣವಾಗಿ ಹೇಳಿದ್ದಾರೆ. ನಾನು ಕೆಲ ಅಂಶಗಳನ್ನಷ್ಟೇ ಸೇರ್ಪಡೆ ಮಾಡುವ ಪ್ರಯತ್ನವನ್ನಿಲ್ಲಿ ಮಾಡಿದ್ದೇನೆ. ಮೊದಲಿಗೆ, ಈ ಭೂಗ್ರಹದ ಮೇಲಿನ ಎಲ್ಲ ನದಿಗಳಿಗೂ ತಮ್ಮದೇ ಆದ ಹಕ್ಕುಗಳಿವೆ. ಬೆಟ್ಟದಲ್ಲಿ ಹುಟ್ಟಿ ಕೆಳಗೆ ಹರಿದುಬರುವ ನದಿ ತನ್ನ ಹಾದಿಗುಂಟ ತನ್ನದೇ ಜೀವವ್ಯವಸ್ಥೆಯನ್ನು, ಅಂತರ್ಜಲವನ್ನು ಸೃಷ್ಟಿ ಮಾಡಿಕೊಳ್ಳುತ್ತಾ ನಡೆಯುತ್ತದೆ. ಮಳೆ ನೀರನ್ನು ಶುದ್ಧಿಗೊಳಿಸಿ ಭೂಗರ್ಭಕ್ಕೆ ಸೇರಿಸುತ್ತಾ ಹೋಗುತ್ತದೆ.

ಮೇಕೆದಾಟು ಅರಣ್ಯ ಪ್ರದೇಶದಲ್ಲಿ ಬಹಳ ವಿಶೇಷವಾದ ಜೀವವೈವಿಧ್ಯ ಇದೆ. ಕಾವೇರಿ ರಾಷ್ಟ್ರೀಯ ಉದ್ಯಾನದ ಆನೆಕಾಡು 50 ಲಕ್ಷ ವರ್ಷಗಳಲ್ಲಿ ನಿಸರ್ಗ ಸೃಷ್ಟಿ ಮಾಡಿರುವ ಸ್ವಾಭಾವಿಕ ಅರಣ್ಯ. ಇಲ್ಲಿರುವ ಅಮೂಲ್ಯ ಜೀವರಾಶಿಯೇ ಕಾವೇರಿಯನ್ನು ಜೀವನದಿಯನ್ನಾಗಿಸಿರುವುದು. ಅಂತಹ ಕೆಲ ಮಹಾನ್ ವೃಕ್ಷಗಳ ಬಗ್ಗೆ ಇಲ್ಲಿ ಹೇಳಲೇಬೇಕು. ಮೊದಲನೆಯದಾಗಿ, ಕಮ್ಮರ (Hardwickia binata). ಇದಕ್ಕೆ ಅಂಜರ್ ಎಂದೂ ಹೆಸರಿದೆ. ಮೇಕೆದಾಟು ಯೋಜನೆಯಿಂದ ಮುಳುಗಡೆಯಾಗುವ ಪ್ರದೇಶದಲ್ಲಿ ಅನೇಕ ಲಕ್ಷ ಕಮ್ಮರಗಳಿವೆ. ಇದರ ಬೇರು, ಬಂಡೆಗಳನ್ನು ಕೊರೆದುಕೊಂಡು 25-30 ಅಡಿ ಆಳ ಹೋಗುತ್ತದೆ. ಕಾಂಡ ಐದರಿಂದ ಹತ್ತು ಅಡಿ ದಪ್ಪ ಇದ್ದು ಟನ್‍ಗಟ್ಟಲೆ ತೊಗಟೆ ಉತ್ಪತ್ತಿ ಮಾಡುತ್ತದೆ. ಈ ತೊಗಟೆಗೆ ಪಾದರಸವನ್ನು ಹೀರಿಕೊಳ್ಳುವ ವಿಶೇಷ ಗುಣ ಇದೆ.

ಪಾದರಸ ಒಂದು ಅತ್ಯಂತ ಅಪಾಯಕಾರಿ ರಾಸಾಯನಿಕ. ನಮ್ಮ ದೇಶ ಪ್ರಪಂಚದಲ್ಲೇ ಅತೀ ಹೆಚ್ಚು ಪಾದರಸ ಬಳಸುವ ದೇಶ ಮತ್ತು ನದಿಗಳು ಈಗ ಇದರ ತ್ಯಾಜ್ಯ ವಿಲೇವಾರಿ ಕೇಂದ್ರಗಳೇ ಆಗಿಹೋಗಿವೆ. ಕಮ್ಮರದ ತೊಗಟೆ ನೀರಿಗೆ ಬಿದ್ದಾಗ ಅಲ್ಲಿರುವ ಪಾದರಸವನ್ನು ಹೀರಿಕೊಂಡು ನದಿಯನ್ನು ಶುದ್ಧಗೊಳಿಸುತ್ತದೆ. ಇಂತಹ ಶೇ 90ರಷ್ಟು ಕಮ್ಮರದ ಮರಗಳು ಈ ಯೋಜನೆಯಿಂದ ನಾಶವಾಗುತ್ತವೆ.

ADVERTISEMENT

ಎರಡನೆಯದು, ಹೊಳೆಮತ್ತಿ (Terminalia arjuna). ಕಾವೇರಿ ನದಿಗುಂಟ ಈ ಮರಗಳು ಯಥೇಚ್ಛವಾಗಿದ್ದು ಬೇಕಾದಷ್ಟು ತೊಗಟೆಯನ್ನು ನೀರಿಗೆ ಉದುರಿಸುತ್ತವೆ. ಹೃದಯದ ಆರೋಗ್ಯವನ್ನು ಕಾಪಾಡುವ ಮಹಾನ್ ಗುಣ ಹೊಳೆಮತ್ತಿಯ ತೊಗಟೆಗಿದೆ. ಆಯುರ್ವೇದದಲ್ಲಿ ಇದಕ್ಕೆ ಹೃದಯದ ಟಾನಿಕ್ ಅಥವಾ ಅರ್ಜುನರಿಷ್ಟಾ ಎನ್ನುತ್ತಾರೆ. ಕಪ್ಪೆ, ಏಡಿ, ಮೀನಿನಂತಹ ಹೃದಯ ಇರುವ ಪ್ರಾಣಿಗಳಿಗೆ ಇದೇ ಟಾನಿಕ್. ಜಲಾಶಯ ಈ ಮರಗಳನ್ನೆಲ್ಲಾ ನುಂಗಿಬಿಡುತ್ತದೆ.

ಮೂರನೆಯದು, ನೇರಳೆ (Syzygium cumini). ಈ ಪ್ರದೇಶದಲ್ಲಿ ಹತ್ತಕ್ಕೂ ಹೆಚ್ಚು ಪ್ರಭೇದಗಳ ಲೆಕ್ಕವಿಲ್ಲ ದಷ್ಟು ನೇರಳೆ ಮರಗಳಿವೆ. ನೇರಳೆಯನ್ನು ‘ನೇಚರ್ಸ್ ಬ್ಲಡ್ ಬ್ಯಾಂಕ್’ ಅನ್ನುತ್ತೇವೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಿಸಲು ಅದರ ಬೀಜವನ್ನು ಉಪಯೋಗಿಸುತ್ತಾರೆ. ಪ್ರಾಣಿ ಪಕ್ಷಿಗಳಾದಿಯಾಗಿ ಸಕಲ ಜಲಚರಗಳಿಗೂ ಅತ್ಯಂತ ಪ್ರಿಯವಾದ ಪೌಷ್ಟಿಕ ಆಹಾರ ನೇರಳೆ ಹಣ್ಣು. ಇವೆಲ್ಲಾ ಈಗ ಜಲಾಶಯಕ್ಕೆ ಬಲಿಯಾಗುತ್ತವೆ.

ನಾಲ್ಕನೆಯದು, ಚಿಗರೆ ಮರ (Albizia Amara). ಇದರ ಬೇರು 25-30 ಅಡಿ ಆಳಕ್ಕೆ ಹೋಗುತ್ತದೆ. ಕಾವೇರಿಯ ಹರಿವಿನಗುಂಟ ಭೂಮಿಗೆ ನೀರನ್ನು ಇಂಗಿಸಿ ನದಿಯನ್ನು ಬತ್ತದಂತೆ ಕಾಪಾಡುವಲ್ಲಿ ಇದರ ಪಾತ್ರ ದೊಡ್ಡದು.

ಇನ್ನು ಬೆಟ್ಟಗಳಲ್ಲಿರುವ ಮಾಕಳಿ ಬೇರು. ಬಂಡೆಗಳ ಮಧ್ಯದಲ್ಲಿ 20-30 ಅಡಿ ನೇರವಾಗಿ ಆಳಕ್ಕೆ ಹೋಗುವ ಇದು ಅಷ್ಟೇ ಅಗಲಕ್ಕೆ ಹರಡಿಕೊಂಡು ಬೆಳೆಯುತ್ತದೆ. ಎಲ್ಲಾ ಥರದ ರೋಗಕಾರಕಗಳನ್ನು ನಾಶ ಮಾಡುವ ವಿಶಿಷ್ಟ ಗುಣ ಇದಕ್ಕಿದೆ. ಕಾವೇರಿ ನದಿಗೆ ಅದರ ಹಾದಿಗುಂಟ ಹರಿದು ಸೇರುವ ರೋಗಕಾರಕಗಳನ್ನೆಲ್ಲಾ ಇದು ಒಂದು ಕಡೆಯಿಂದ ಶುದ್ಧಿ ಮಾಡುತ್ತಾ ಬರುತ್ತದೆ. ಇವಲ್ಲದೆ ಕಾಡಿನಲ್ಲಿ ಬೆಳೆಯುವ ಅಸಂಖ್ಯಾತ ಔಷಧೀಯ ವನಸ್ಪತಿಯ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಇವೆಲ್ಲಾ ಸಸ್ಯರಾಶಿ ಜೀವನದಿಗೆ ತಾನು ಸೃಷ್ಟಿಸಿದ ಜೀವವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಪೂರಕ ವಾತಾವರಣವನ್ನು ಸೃಷ್ಟಿ ಮಾಡುತ್ತವೆ. ಕಾವೇರಿ ನದಿ ಸೃಷ್ಟಿಸಿಕೊಂಡಿರುವ ಬೆಂಬಲ ವ್ಯವಸ್ಥೆ ಇದು.

ಇನ್ನೊಂದು ಕಡೆ ಈ ಮಹಾನ್ ವೃಕ್ಷಗಳ ಪೊಟರೆಗಳಲ್ಲಿ ಗೂಬೆಗಳು ಮನೆ ಮಾಡಿಕೊಂಡು ಇಲಿ, ಹೆಗ್ಗಣಗಳ ಸಂತತಿ ಮಿತಿಮೀರದಂತೆ ನಿಯಂತ್ರಿಸಿ ಸಮತೋಲನ ಕಾಪಾಡುತ್ತವೆ. ಇಲ್ಲಿ ವಾಸಿಸುವ ಹದ್ದುಗಳು ಸತ್ತ ಪ್ರಾಣಿಗಳನ್ನು ಕ್ಷಣಮಾತ್ರದಲ್ಲಿ ತಿಂದು ಸ್ವಚ್ಛ ಮಾಡಿ ರೋಗ ಹರಡದಂತೆ ನೋಡಿಕೊಳ್ಳುತ್ತವೆ. ಮೇಕೆದಾಟು ಜಲಾಶಯ ನಿರ್ಮಾಣವೆಂದರೆ ಇವೆಲ್ಲದರ ಸರ್ವನಾಶ ಎಂದೇ ತಿಳಿಯಬೇಕು.

ಯಾವುದೇ ಒಂದು ‘ಅಭಿವೃದ್ಧಿ’ ಯೋಜನೆಯ ಪರಿಸರ ಪರಿಣಾಮದ ಅಂದಾಜು ಮಾಡುವುದು ಅಗತ್ಯ. ಮೇಕೆದಾಟು ಯೋಜನೆಯಲ್ಲಿ ಇಂತಹ ಗಂಭೀರ ವಿಚಾರಗಳ ಪ್ರಸ್ತಾಪ ಆಗದಿರುವುದು ದುರಂತವೇ ಸರಿ. ಏಕೆಂದರೆ, ಕಾವೇರಿಯನ್ನು ಜೀವನದಿಯನ್ನಾಗಿಸಿರುವ ಈ ಎಲ್ಲಾ ಜೀವರಾಶಿ ನಾಶವಾದ ಮೇಲೆ ಇದರಿಂದ ಪೂರೈಸುವ ನೀರು ಕುಡಿಯುವ ನೀರು ಹೇಗಾದೀತು? ಇಲ್ಲಿ ನೀವು ಶುದ್ಧವಾದ ನೀರನ್ನು ಮಲಿನಗೊಳಿಸಿ, ವಿಷಪೂರಿತ ನೀರನ್ನು ಪೂರೈಕೆ ಮಾಡುತ್ತೀರಿ. ಈಗಾಗಲೇ ಕಾವೇರಿ ನದಿಯ 25 ಸಾವಿರ ಚದರ ಕಿ.ಮೀ. ಜಲಾನಯನ ಪ್ರದೇಶದ ಬಹುಭಾಗವನ್ನು ಗ್ರಾನೈಟ್ ಗಣಿಗಾರಿಕೆಗೆ ಬಲಿ ಕೊಟ್ಟಿರುವ ನಾವು ಇದರ ಬಗ್ಗೆ ಬಹಳ ಗಂಭೀರವಾಗಿ ಯೋಚಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.