ADVERTISEMENT

ವ್ಯಭಿಚಾರ ತೀರ್ಪು: ವ್ಯಾಪ್ತಿ ಹೆಚ್ಚಬೇಕಿತ್ತು

ಮೈತ್ರೇಯಿ ಸಚ್ಚಿದಾನಂದ ಹೆಗಡೆ
Published 2 ಅಕ್ಟೋಬರ್ 2018, 20:00 IST
Last Updated 2 ಅಕ್ಟೋಬರ್ 2018, 20:00 IST
ಸುಪ್ರೀಂ ಕೋರ್ಟ್‌ (ಸಂಗ್ರಹ ಚಿತ್ರ)
ಸುಪ್ರೀಂ ಕೋರ್ಟ್‌ (ಸಂಗ್ರಹ ಚಿತ್ರ)   

ಭಾರತೀಯ ದಂಡ ಸಂಹಿತೆಯ 497ನೇ ಸೆಕ್ಷನ್‌ನಲ್ಲಿ ವ್ಯಾಖ್ಯಾನಿಸಿದ ‘ಅನೈತಿಕ ಸಂಬಂಧ’ ಕಾನೂನು ಅಸಾಂವಿ
ಧಾನಿಕ ಎಂದು ಸುಪ್ರೀಂ ಕೋರ್ಟ್‌ ಘೋಷಿಸಿದ್ದು, ದಂಡ ಸಂಹಿತೆಯ ಸುಧಾರಣೆಯತ್ತ ನ್ಯಾಯಾಲಯಗಳು ಸಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಮಾನವನ ಜೀವನದಲ್ಲಿ ಮೂಲಭೂತವಾದ ಮೌಲ್ಯ ಹಾಗೂ ಹಕ್ಕುಗಳಾದ ಸ್ವಾತಂತ್ರ್ಯ, ಸ್ವಾಯತ್ತತೆ ಹಾಗೂ ಬದುಕುವಿಕೆಗಳು ದಂಡ ಸಂಹಿತೆಯ ನಿಯಂತ್ರಣಕ್ಕೊಳಪಟ್ಟಿರುತ್ತವೆ. ದಂಡಸಂಹಿತೆಯು ಕಠಿಣ ಹಾಗೂ ಅಸಂತುಲಿತವಾದಷ್ಟೂ
ಜನರ ಹಕ್ಕುಗಳ ವ್ಯಾಪ್ತಿ ಸಂಕುಚಿತವಾಗುತ್ತದೆ. ಹಾಗಾಗಿ ದೇಶದ ದಂಡ ಸಂಹಿತೆಯಲ್ಲಿ ಸಮಾಜದ ಹಿತ ಹಾಗೂ ವೈಯಕ್ತಿಕ ಹಕ್ಕುಗಳ ಸಮತೋಲನವನ್ನು ಕಾಯ್ದುಕೊಳ್ಳುವುದು ಅಗತ್ಯ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಶ್ಲಾಘನೀಯ. ಆದರೆ, ತೀರ್ಪನ್ನು ಸಂಪೂರ್ಣವಾಗಿ ಓದಿದರೆ, ನ್ಯಾಯಾಲಯವು ಈ ಸಮಸ್ಯೆಯನ್ನು ಲಿಂಗ ಅಸಮಾನತೆಗೆ ಮೀರಿದ, ಒಟ್ಟಾರೆ ಮಾನವ ಹಕ್ಕುಗಳ ಹಾಗೂ ರಾಜ್ಯದ ಅಪರಾಧೀಕರಣ ನೀತಿಯ ದೃಷ್ಟಿಕೋನದಿಂದ ಪರೀಕ್ಷಿಸಬಹುದಾಗಿತ್ತು ಎಂಬ ಅನಿಸಿಕೆ ಮೂಡುತ್ತದೆ.

ಬ್ರಿಟಿಷರು ಜಾರಿಮಾಡಿದ 150 ವರ್ಷ ಹಳೆಯದಾದ ಈ ಕಾನೂನು, ಪತಿಯನ್ನು ಪತ್ನಿಯ ಮಾಲೀಕ ಎಂಬಂತೆ ಪರಿಗಣಿಸುತ್ತದೆ ಎನ್ನುವುದು ಸರಿಯಾದರೂ ಅದೊಂದೇ ಕಾರಣಕ್ಕೆ ಯಾವ ರೀತಿಯ ಅನೈತಿಕ ಸಂಬಂಧವೂ ಅಪರಾಧವಾಗಿ ಇರಬಾರದು ಎಂದು ಹೇಳಲು ಸಾಧ್ಯವಿಲ್ಲ. ಅದರಲ್ಲಿಯೂ ಮಳಿಮಠ್ ಸಮಿತಿಯು 2003ರಲ್ಲಿ ‘ಮಹಿಳೆಯರನ್ನೂ ಈ ಕಲಂನ ವ್ಯಾಪ್ತಿಯಲ್ಲಿ ಒಳಪಡಿಸಿ ಶಿಕ್ಷಿಸಬೇಕು’ ಎಂಬ ತಿದ್ದುಪಡಿ ಸೂಚಿಸಿದ್ದ ಮೇರೆಗೆ, ‘ಕಾನೂನಿನಲ್ಲಿ ತಿದ್ದುಪಡಿ ತರಲು ಪ್ರಯತ್ನಿಸಲಾಗುತ್ತಿದೆ’ ಎಂದು ಸರ್ಕಾರ ಅಫಿಡವಿಟ್ ಸಲ್ಲಿಸಿದ್ದಾಗ, ಸುಪ್ರೀಂ ಕೋರ್ಟ್‌ ಖಂಡಿತವಾಗಿ ಮಹಿಳಾವಾದಕ್ಕಿಂತ ಸ್ವಲ್ಪ ಮುಂದೆ ಹೋಗಬೇಕಿತ್ತು. ಆದರೆ ನ್ಯಾ. ಇಂದು ಮಲ್ಹೋತ್ರಾ ಹೊರತುಪಡಿಸಿದಂತೆ ಮಿಕ್ಕ ಎಲ್ಲ ನ್ಯಾಯಮೂರ್ತಿಗಳೂ ಈ ಸಮಸ್ಯೆಯನ್ನು ಮಹಿಳಾ ಹಕ್ಕುಗಳ ದೃಷ್ಟಿಕೋನದಿಂದ ಮಾತ್ರ ಪರೀಕ್ಷಿಸಿದಂತಿದೆ.

ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು, ‘ಈ ಕಾನೂನು 14ನೇ ವಿಧಿ ಜೊತೆಗೆ 21ನ್ನೂ ಉಲ್ಲಂಘಿಸಿದೆ’ ಎಂದು ಹೇಳಿದ್ದರೂ ಅದು ಮಹಿಳೆಯ ಘನತೆಯ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಮಾತ್ರ ಎಂಬುದು ಗಮನಿಸಬೇಕಾದ ಅಂಶ. ಹಲವಾರು ಪ್ರಮುಖ ತೀರ್ಪು
ಗಳನ್ನು ಉಲ್ಲೇಖಿಸಿದ ನಂತರ ‘ಅನೈತಿಕ ಸಂಬಂಧವು ಶಾಸನ ಪುಸ್ತಕದಲ್ಲಿ ಒಂದು ಅಪರಾಧವಾಗಿ ಉಳಿಯಬೇಕೇ’ ಎಂಬ ಪ್ರಶ್ನೆಯನ್ನಿಟ್ಟು, ಅದಕ್ಕೆ ನಕಾರಾತ್ಮಕವಾಗಿ ಉತ್ತರಿಸಿದ್ದಾರೆ. ಹಾಗೆಯೇ ರಾಜ್ಯವು ಪ್ರಜೆಗಳ ಖಾಸಗಿ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದೂ ಮಿಶ್ರಾಸ್ಪಷ್ಟಪಡಿಸಿದ್ದಾರೆ. ಆದರೆ ಅಂತಹ ಘೋಷಣೆಗೆ ಅಗತ್ಯವಾದ ಸ್ಪಷ್ಟ ಚರ್ಚೆ-ನಿಲುವುಗಳ ಕೊರತೆ ಕಾಣುತ್ತದೆ.

ADVERTISEMENT

ಅರ್ಜಿದಾರನ ಪರವಾಗಿ ಸಲ್ಲಿಸಲಾದ ವಾದಗಳು ಈ ವಿಚಾರದಲ್ಲಿ ಗಮನಾರ್ಹ. ಪ್ರಜೆಗಳಿಗೆ ಲೈಂಗಿಕ ಖಾಸಗಿತನದ ಹಕ್ಕು ಇದೆ ಎನ್ನುವುದು ಒಂದು ವಾದ. ಮತ್ತೊಂದು, ರಾಜ್ಯಕ್ಕೆ ಪ್ರಜೆಗಳ ಕ್ರಿಯೆಗಳನ್ನು ನಿಯಂತ್ರಿಸಲು ಕಾನೂನುಬದ್ಧ ಕಾರಣಗಳ ಅಗತ್ಯ ಇದೆ ಎಂಬುದು. ಸಾಮಾಜಿಕ ನೀತಿ ಎನ್ನುವುದು ಕಾನೂನುಬದ್ಧ ಕಾರಣವಾಗಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲ ತಪ್ಪುಗಳೂ ಅಪರಾಧವಾಗಲು ಸಾಧ್ಯವಿಲ್ಲ. ಅಮೆರಿಕದ ತತ್ವಜ್ಞಾನಿಯೊಬ್ಬರು ಹೇಳುತ್ತಾರೆ, ‘ಜನರು ಪ್ರೀತಿಸುತ್ತಾರೆ, ಮೋಸಮಾಡುತ್ತಾರೆ, ಸುಳ್ಳು ಹೇಳುತ್ತಾರೆ ಹಾಗೂ ಕುಡಿಯುತ್ತಾರೆ. ಇವರೆಲ್ಲರೂ ಸ್ವಾತಂತ್ರ್ಯಕ್ಕೆ ಅರ್ಹರಲ್ಲದಿದ್ದರೆ, ಜಗತ್ತಿನ ಕೆಲವರಷ್ಟೇ (ಅರ್ಹರಾಗಿ)ಉಳಿಯುತ್ತಾರೆ’.

ನ್ಯಾಯಮೂರ್ತಿ ರೊಹಿಂಗ್ಟನ್ ನಾರಿಮನ್ ಸಹ ಈ ಕಾನೂನನ್ನು ಅಸಾಂವಿಧಾನಿಕ ಎಂದು ಘೋಷಿಸಲು ‘ಅನಿಯಂತ್ರಿತತೆಯ ಸಿದ್ಧಾಂತದ’ (Doctrine of Arbitrariness) ಮೊರೆ ಹೋಗಿದ್ದಾರೆ. ಅವರು ಹೇಗೆ ಅನೈತಿಕ ಸಂಬಂಧ ಕಾನೂನು ಜಗತ್ತಿನಾದ್ಯಂತ ಬೇರೆ ಬೇರೆ ಮತಗಳಲ್ಲಿ ಶಿಕ್ಷಿಸಲ್ಪಟ್ಟಿತ್ತು ಹಾಗೂ ಹೇಗೆ ಈ ಮತಪ್ರಭಾವಿತ ಪದ್ಧತಿ ಕಾನೂನು ಪುಸ್ತಕಗಳಲ್ಲಿ ಸೇರಿಕೊಂ
ಡಿವೆ ಎಂಬುದರ ಬಗ್ಗೆಯೂ ಬೆಳಕು ಚೆಲ್ಲಿದ್ದಾರೆ.

ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ಸುಂದರ ಹಾಗೂ ಗಹನವಾದ ಸಿದ್ಧಾಂತಗಳನ್ನು ಚರ್ಚಿಸಿದ್ದರೂ ಮಹಿಳೆಯ ಖಾಸಗಿತನದ ಹಕ್ಕುಗಳಿಗೆ ಮಾತ್ರ ಒತ್ತು ಕೊಡುವ ಮೂಲಕ, ಖಾಸಗಿತನದ ಹಕ್ಕುಗಳ ವ್ಯಾಪ್ತಿಯನ್ನು ಹಿಗ್ಗಿಸಲು ಹಿಂಜರಿದಂತೆ ಕಂಡುಬರುತ್ತದೆ. ಲೈಂಗಿಕ ಖಾಸಗಿತನವನ್ನು ದೀರ್ಘವಾಗಿ ಪ್ರಬುದ್ಧ ಸಾಹಿತ್ಯ ಹಾಗೂ ತೀರ್ಪುಗಳ ಸಹಾಯದಿಂದ ಚರ್ಚಿಸಿದ್ದರೂ, ಅವೆಲ್ಲವನ್ನೂ ಮಹಿಳೆಯರ ಹಕ್ಕುಗಳ ಸಮರ್ಥನೆಗೇ ಬಳಸಿಕೊಂಡಿರುವಂತಿದೆ. ನ್ಯಾಯಾಲಯವು ಈ ಪ್ರಕರಣವನ್ನು ಮಹಿಳಾ ಹಕ್ಕುಗಳ ಹಾಗೂ ಪುರುಷ ಸಮಾಜದ ಸಂಘರ್ಷವಾಗಿ ಕಾಣದೇ, ರಾಜ್ಯ, ಪ್ರಜೆ ಹಾಗೂ ಸಮಾಜದ ನಡುವಿನ ಸಂವಾದದಂತೆ ಕಾಣಬಹುದಿತ್ತು. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ನ್ಯಾ. ಚಂದ್ರಚೂಡ್, ಈ ಕಾನೂನು ಮಹಿಳೆಯ ಲೈಂಗಿಕ ಸ್ವಾತಂತ್ರ್ಯಕ್ಕೆ ಅಡ್ಡಿ ಬರುತ್ತದೆ ಎಂದು ಗಮನಿಸುವಾಗ, ಪುರುಷನ ಲೈಂಗಿಕ ಆಯ್ಕೆಗಳೂ ಶಿಕ್ಷಿಸಲ್ಪಡುತ್ತಿದ್ದವು ಎಂಬುದನ್ನು ಪರಿಗಣಿಸಬೇಕಾಗಿತ್ತು. ಅಲ್ಲದೆ, ಅವರು ವಿವರವಾಗಿ ಚರ್ಚಿಸಿದ, ‘For Better or For Worse: Adultery, Crime & the Constitution (Martin J. Siegel, 1991’ ಲೇಖನವು ಈ ಸಮಸ್ಯೆಯನ್ನು ಒಂದು ವೈಯಕ್ತಿಕ ಹಕ್ಕು ಉಲ್ಲಂಘನೆಯ ನೆಲೆಯಲ್ಲಿಯೇ ನೋಡುತ್ತದೆ.

ನ್ಯಾಯಮೂರ್ತಿ ಇಂದು ಮಲ್ಹೋತ್ರಾ, ಬಹಳ ಸಂಕ್ಷಿಪ್ತವಾಗಿ ಆದರೆ ಸ್ಪಷ್ಟವಾಗಿ ತಮ್ಮ ತೀರ್ಪನ್ನು ವಿವರಿಸಿದ್ದಾರೆ. ‘ಒಂದು ತಪ್ಪು ಅಪರಾಧವಾಗಿ ಪರಿಗಣಿಸಲ್ಪಡಬೇಕಾದರೆ ಅದು ವ್ಯಕ್ತಿಯ ವಿರುದ್ಧವಾಗಿ ಮಾತ್ರ ಉಳಿಯದೆ, ಒಂದು ಸಮಾಜದ ವಿರುದ್ಧವಾಗಿರಬೇಕಾಗುತ್ತದೆ’ ಎಂದಿದ್ದಾರೆ. ಜೆ.ಸ್. ಮಿಲ್ ರವರ ಪ್ರಸಿದ್ಧವಾದ ‘ಹಾನಿ ಸಿದ್ಧಾಂತ’ದ ಸಹಾಯವನ್ನು ಪಡೆದು ಅವರು ರಾಜ್ಯಕ್ಕೆ ಪ್ರಜೆಗಳ ಖಾಸಗಿ ಜೀವನದಲ್ಲಿ ಪ್ರವೇಶವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ‘ಹಾನಿ ಸಿದ್ಧಾಂತ’ವನ್ನೂ ಸಮಾಜದ ಸರಿ-ತಪ್ಪುಗಳ ಹಿನ್ನೆಲೆಯಲ್ಲಲ್ಲ, ಸಂವಿಧಾನದ ಚೌಕಟ್ಟಿನಲ್ಲಿ ಅರ್ಥೈಸಬೇಕು ಎಂಬುದು ಅರ್ಜಿದಾರರ ವಾದ.

ಒಟ್ಟಿನಲ್ಲಿ ಸಂಪೂರ್ಣವಾದ ತೀರ್ಪು ಹಲವು ವಿಚಾರಗಳಲ್ಲಿ ಮೈಲುಗಲ್ಲಾಗಿದ್ದರೂ, ಪ್ರಭುತ್ವದ ಅಪರಾಧೀಕರಣ ನೀತಿಯ ಸಿದ್ಧಾಂತಗಳ ಕಡೆಗೆ ಹೆಚ್ಚಿನ ಒತ್ತನ್ನು ನೀಡಬಹುದಿತ್ತು. ಹಾಗೆಯೇ ಪ್ರಭುತ್ವದ ‘ಅಪರಾಧೀಕರಣದ ನೀತಿ’ಗಳು ಸಾಂವಿಧಾನಿಕ ಚೌಕಟ್ಟುಗಳಲ್ಲಿಯೇ ಮಿತಿಗೊಳ್ಳಬೇಕಾದ ಅಗತ್ಯತೆಯನ್ನು ನ್ಯಾಯಾಲಯ ಪರಿಗಣಿಸಬಹುದಿತ್ತು. ಏನೇ ಆದರೂ ಜಾಗತಿಕ ಮಟ್ಟದಲ್ಲಿ ಈ ತೀರ್ಪು ವೈಯಕ್ತಿಕ ಸ್ವಾತಂತ್ರ್ಯ ಪ್ರತಿಪಾದಿಸುವ ಒಂದು ಪ್ರಮುಖ ತೀರ್ಪು ಎಂಬುದರಲ್ಲಿ ಸಂಶಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.