ADVERTISEMENT

ಸಂಗತ | ಕನ್ನಡ: ಸಮಕಾಲೀನ ಅಗತ್ಯ ಮನಗಾಣೋಣ

ನಮ್ಮ ಹಲವು ಭಾಷೆಗಳು ಅಳಿವಿನ ಅಂಚಿನಲ್ಲಿರುವ ಈಗಿನ ಆತಂಕಕಾರಿ ಸನ್ನಿವೇಶದಲ್ಲಿ, ನಾವು ‘ಶುದ್ಧ ಕನ್ನಡ’ ಕಟ್ಟಲು ಹೊರಟಿರುವುದು ಎಷ್ಟು ಸರಿ?

ಡಾ.ಸರ್ಫ್ರಾಜ್ ಚಂದ್ರಗುತ್ತಿ
Published 15 ಡಿಸೆಂಬರ್ 2021, 21:39 IST
Last Updated 15 ಡಿಸೆಂಬರ್ 2021, 21:39 IST
   

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಮಹೇಶ ಜೋಶಿಯವರು ‘ಅ’ಕಾರ ‘ಹ’ಕಾರ ತಿಳಿಯದ, ಶುದ್ಧ ಕನ್ನಡ ಗೊತ್ತಿಲ್ಲದವರ ಕುರಿತು ಮಾತನಾಡಿದ್ದಾರೆ (ಪ್ರ.ವಾ., ಡಿ. 12). ಜಾಗತೀಕರಣದ ಎದುರಲ್ಲಿ ದೇಶಭಾಷೆಗಳು ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಈ ಹೊತ್ತು, ಕನ್ನಡದ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಹೇಗೆಂಬ ಪ್ರಶ್ನೆ ಹಿಂದೆಂದಿಗಿಂತಲೂ ಇಂದು ಹೆಚ್ಚುಪ್ರಸ್ತುತವಾಗಿದೆ.

ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಕೆಲವರು ‘ಶುದ್ಧ ಕನ್ನಡದಲ್ಲಿ ಮಾತನಾಡಿ- ವ್ಯವಹರಿಸಿ’ ಎಂದು ಕರೆ ನೀಡುತ್ತಿದ್ದಾರೆ. ಶುದ್ಧ ಕನ್ನಡದಲ್ಲಿಯೇ ಮಾತನಾಡುವ, ಬರೆಯುವ ಸ್ಪರ್ಧೆಗಳನ್ನೂ ಆಯೋಜಿಸಲಾಗುತ್ತಿದೆ. ನವೆಂಬರ್ ತಿಂಗಳಲ್ಲಿ ಕನ್ನಡಿಗರನ್ನು ಆವರಿಸುವ ಅತ್ಯುತ್ಸಾಹವು ಇದಕ್ಕೆ ನೀರೆರೆದು ಪೋಷಿಸುತ್ತಿದೆ. ತಮ್ಮ ಭಾಷಾ ಬಳಕೆಯಿಂದ ಇಂಗ್ಲಿಷ್ ಪದಗಳನ್ನು ಹೊರಗಿಡುವುದೇ ‘ಶುದ್ಧಗನ್ನಡ ಪ್ರಯೋಗ’ ಎಂಬ ಭಾವನೆ ಅವರದು.

ಶುದ್ಧ ಕನ್ನಡವನ್ನೇ ಪ್ರಯೋಗಿಸುವ ಈ ಆಲೋಚನೆಗೆ ತುಂಬಾ ಹಳೆಯ ಇತಿಹಾಸವಿದೆ. ಇಂದು ಇಂಗ್ಲಿಷ್ ಪದಬಳಕೆಯನ್ನು ವಿರೋಧಿಸುವ ಹಾಗೆಯೇ ಅಂದು ಸಂಸ್ಕೃತ ಪದಪ್ರಯೋಗವನ್ನು ಹಳಗನ್ನಡ ಕವಿಗಳು ವಿರೋಧಿಸಿದ್ದರು. ‘ತಕ್ಕುದೆ ಬೆರೆಸಲ್ಕೆ ಘೃತಮುಮಂ ತೈಲಮುಮಂ’ ಎಂದು ನಯಸೇನ ಪ್ರಶ್ನಿಸಿದ್ದ. ಆಂಡಯ್ಯ ಸಂಸ್ಕೃತ ಪದಗಳನ್ನು ಬಹಿಷ್ಕರಿಸಿ ‘ಕಬ್ಬಿಗರ ಕಾವ’ವನ್ನು ರಚಿಸಿದ. ಇಂತಹ ಪ್ರಯತ್ನದಲ್ಲಿಆತ ಯಶಸ್ವಿಯಾದುದಕ್ಕಿಂತ ವಿಫಲನಾದದ್ದೇ ಹೆಚ್ಚು. ಆದ್ದರಿಂದಲೇ ಆತನ ನಂತರದ ಕವಿಗಳು ಈ ಪರಂಪರೆಯನ್ನು ಮುಂದುವರಿಸಲಿಲ್ಲ. ಜನರೂ ಇಂತಹ ಪ್ರಯೋಗವನ್ನು ಸ್ವಾಗತಿಸಲಿಲ್ಲ.

ADVERTISEMENT

ಕನ್ನಡ ಭಾಷೆಯ ಸೊಗಸನ್ನು ಕಾಣಲು ‘ವಡ್ಡಾರಾಧನೆ’ ಓದಬೇಕು ಎನ್ನುತ್ತಾರೆ. ಇಲ್ಲಿಯೂ ಸಂಸ್ಕೃತ, ಪ್ರಾಕೃತ ಮೊದಲಾದ ಅನ್ಯಭಾಷಾ ಪದಗಳು ಬಳಕೆಯಾಗಿವೆ. ಕನ್ನಡ ಕಾವ್ಯ ಪರಂಪರೆಯಲ್ಲಿ ಇಂತಹ ಕನ್ನಡೇತರ ಭಾಷಾ ಪದಪ್ರಯೋಗದ ಬಳಕೆ ಸಮೃದ್ಧವಾಗಿಯೇ ಹರಿದುಬಂದಿದೆ. ಕನ್ನಡದಲ್ಲಿ ಬಳಕೆಯಾಗುತ್ತಿರುವ ಬಹುಪಾಲು ಪದಕೋಶ ಸಂಸ್ಕೃತ ಮೂಲದ್ದು. ಅನ್ಯವನ್ನು ಸ್ವೀಕರಿಸುವ, ಬೇಕಾದುದನ್ನು ಜೀರ್ಣಿಸಿಕೊಳ್ಳುವ ಮನೋಧರ್ಮ ನಮ್ಮ ಸಂಸ್ಕೃತಿಗೆ ಹೊರತಲ್ಲ, ಅಂತೆಯೇ ಭಾಷೆಗೆ ಕೂಡಾ.

ಹಾಗೆಯೇ ಅಂದಿನ ಸಂಸ್ಕೃತದ ಗತ್ತಿನಲ್ಲಿಯೇ ನಮ್ಮ ಬದುಕನ್ನು ಪ್ರವೇಶಿಸಿರುವ ಇಂಗ್ಲಿಷಿನಿಂದ ಸಹ ನಾವು ನಮ್ಮ ನೆಲದ ಜಾಯಮಾನಕ್ಕೆ ಹೊಂದಿಕೊಳ್ಳುವ ಪದಗಳನ್ನೇಕೆ ಸ್ವೀಕರಿಸಬಾರದು? ಕೆಲವು ವರ್ಷಗಳ ಹಿಂದೆ, ಕನ್ನಡದ ಬಳಕೆಯಿಂದ ಇಂಗ್ಲಿಷ್‍ನ ಪದಗಳನ್ನು ಹೊರಗಿಡುವ ಪ್ರಯತ್ನ ನಡೆಯಿತು. ಪೊಲೀಸ್, ಎಂಜಿನಿಯರ್‌ಗಳಿಗೆ ಬದಲು ಆರಕ್ಷಕ, ಅಭಿಯಂತರ ಎಂಬಿತ್ಯಾದಿ ಪದಗಳನ್ನು ಬಳಕೆಗೆ ತರಲು ಪ್ರಯತ್ನಿಸಲಾಯಿತು. ಇಂಗ್ಲಿಷಿಗೆ ಬದಲು ಸಂಸ್ಕೃತ ಪದಗಳನ್ನು ಪ್ರತಿಷ್ಠಾಪಿಸಲಾಯಿತು. ಆದರೆ ಈ ಪ್ರಯೋಗ ಯಶಸ್ವಿಯಾಗಲಿಲ್ಲ. ಮೊಬೈಲನ್ನು ಜಂಗಮವಾಣಿ ಎನ್ನಲಾಯಿತು. ಜನಸಾಮಾನ್ಯರು ಇಂತಹ ಪ್ರಯೋಗಗಳನ್ನು ಒಪ್ಪದೆ, ಆಬಾಲವೃದ್ಧರಾದಿಯಾಗಿ ಇಂದು ಎಲ್ಲರೂ ಮೊಬೈಲ್ ಎಂದೇ ಕರೆಯುತ್ತಿದ್ದಾರೆ.

ತೇಜಸ್ವಿಯವರು ಕಂಪ್ಯೂಟರನ್ನು ಗಣಕಯಂತ್ರ ಎಂದು ಕರೆಯಲು ಒಪ್ಪಿರಲಿಲ್ಲ. ಹೀಗೆ ಕರೆಯುವುದರಲ್ಲಿ ಅರ್ಥವಿಲ್ಲ ಹಾಗೂ ಇಂತಹ ಪ್ರಯೋಗದಿಂದ ಕನ್ನಡವೂ ಶ್ರೀಮಂತವಾಗುವುದಿಲ್ಲ ಎಂದಿದ್ದರು. ಇಂದು ಎಲ್ಲೆಡೆ ಪ್ರಚಲಿತವಾಗಿರುವ ಶಾನುಭೋಗ, ತಹಸೀಲ್ದಾರ್, ಜಿಲ್ಲಾಧಿಕಾರಿ, ಕಚೇರಿ, ದಸ್ತಕತ್, ಸಹಿ, ಮೇಜು, ಕುರ್ಚಿ ಮೊದಲಾದ ನೂರಾರು ಪರ್ಷಿಯನ್ ಪದಗಳು ನಮ್ಮ ವ್ಯಾವಹಾರಿಕ ಕನ್ನಡವನ್ನುಶ್ರೀಮಂತಗೊಳಿಸಿವೆ. ಕನ್ನಡಾಭಿಮಾನದ ಹೆಸರಲ್ಲಿ ಇವನ್ನೆಲ್ಲಾ ಬಹಿಷ್ಕರಿಸಬಹುದೇ? ಗ್ರೀಕ್, ರೋಮನ್, ಪೋರ್ಚುಗೀಸ್, ಹಿಂದಿ, ಮರಾಠಿ ಮೊದಲಾದ ಅನ್ಯಭಾಷೆಯ ಪದಗಳು ಕನ್ನಡವನ್ನುಸಮೃದ್ಧಗೊಳಿಸಿವೆ.

ಕೇವಲ ನಾಲ್ಕು ಶತಮಾನಗಳ ಇತ್ತೀಚಿನ ಭಾಷೆಯಾಗಿರುವ ಇಂಗ್ಲಿಷ್ ಜಾಗತಿಕ ಭಾಷೆಯಾಗಿ ಹೇಗೆ ಬೆಳೆಯಿತು? ಪ್ರತಿವರ್ಷವೂ ಜಗತ್ತಿನ ಮೂಲೆ ಮೂಲೆಗಳಿಂದ ತಮ್ಮಲ್ಲಿಲ್ಲದ ವಿಶೇಷವಾದ ಪದಗಳನ್ನು ಸ್ವೀಕರಿಸುತ್ತಾ ಆಕ್ಸ್‌ಫರ್ಡ್ ಶಬ್ದಕೋಶವನ್ನು ಪರಿಷ್ಕರಿಸುತ್ತಾ ಇಂಗ್ಲಿಷನ್ನು ಸಮಕಾಲೀನಗೊಳಿಸಲಾಗುತ್ತದೆ. ಬ್ರಿಟನ್ನಿನ ಕಾಲಿನ್ಸ್ ಪ್ರಕಾಶನವು ಇಂಗ್ಲಿಷನ್ನು ಆಧುನಿಕವಾಗಿ ಬೆಳೆಸಲು ಹೊಸ ಪದಗಳನ್ನು ಆಹ್ವಾನಿಸುತ್ತದೆ. ಹಿಂದೆಂದಿಗಿಂತಲೂ ಕನ್ನಡವು ಇಂದು ವಿಶ್ವಮುಖಿಯಾಗಿ ಬೆಳೆದು ನಿಲ್ಲಲು ಇಂಗ್ಲಿಷಿನಂತೆ ಎಲ್ಲ ದಿಕ್ಕುಗಳಿಗೂ ಕೈಚಾಚಿ ನಿಲ್ಲಬೇಕಾದ ಜರೂರು ಇದೆ. ‘ಕನ್ನಡದ ಪುನರುಜ್ಜೀವನ’ ಎಂಬ ಲೇಖನದಲ್ಲಿ ಬಿಎಂಶ್ರೀಯವರು, ‘ಪುನರುಜ್ಜೀವನ ಎನ್ನುವುದು ಜೀರ್ಣೋದ್ಧಾರವಲ್ಲ. ಹೊಸ ಹೊಸ ನಿರ್ಮಾಣ, ಮರುಹುಟ್ಟು, ಆಳವಾದ ಸಮನ್ವಯ, ಹೊಸದು ಹಳತು, ನಮ್ಮದು ಹೆರರದು ಎಲ್ಲವನ್ನೂ ಹೊಂದಿಕೆ ಮಾಡುವುದು’ ಎಂದಿದ್ದರು.

ಇನ್ನು ಕೆಲವೇ ತಲೆಮಾರುಗಳಲ್ಲಿ ಇಂಗ್ಲಿಷ್ ಮಾತ್ರ ಜಗತ್ತಿನ ಏಕಮಾತ್ರ ಭಾಷೆಯಾಗಲಿದೆ ಎಂಬ ಅಭಿಪ್ರಾಯವಿದೆ. ಈಗಾಗಲೇ ಕರ್ನಾಟಕದ ಬಡಗ, ಹಕ್ಕಿಪಿಕ್ಕಿ, ಸೋಲಿಗ, ಕುಡಿಯಾ, ಬಿಲ್ಲಾರ ಮೊದಲಾದ ಬುಡಕಟ್ಟು ಭಾಷೆಗಳು ಅಳಿವಿನ ಅಂಚಿನಲ್ಲಿವೆ. ಇಂತಹ ಆತಂಕಕಾರಿ ಸನ್ನಿವೇಶದಲ್ಲಿ ನಾವು ಅನ್ಯಭಾಷೆಯ ಪದಗಳನ್ನು ಹೆಕ್ಕಿ- ತೆಗೆದುಹಾಕಿ ‘ಶುದ್ಧ ಕನ್ನಡ’ ಕಟ್ಟಲು ಹೊರಟಿದ್ದೇವೆ. ಇಂತಹವರಿಗೆ ಲೇಖಕ ಚಂಪಾ ನೀಡಿರುವ ಉತ್ತರ- ‘ಶುದ್ಧ ಕನ್ನಡ ಶಬ್ದ, ಇದರಲ್ಲಿ ಶುದ್ಧ ಕನ್ನಡ ಒಂದೇ, ಕನ್ನಡ!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.