ADVERTISEMENT

ನಕಲು ತಂತ್ರದ ಅಸಲಿ ಬಣ್ಣ

ಎಸ್.ರವಿಪ್ರಕಾಶ್
Published 31 ಮಾರ್ಚ್ 2019, 20:21 IST
Last Updated 31 ಮಾರ್ಚ್ 2019, 20:21 IST
ರರರ
ರರರ   

ಕರ್ನಾಟಕದ ಪ್ರೌಢ ಶಿಕ್ಷಣ ಒಂದು ಹಂತದವರೆಗೆ ವಿಶ್ವಾಸಾರ್ಹತೆ ಹೊಂದಿತ್ತು. ಆದರೆ,ಒಂದು ದಶಕದಿಂದ ಈಚೆಗೆ ಅಂತಹ ವಿಶ್ವಾಸಾರ್ಹತೆ ಉಳಿದಿಲ್ಲ. ಈ ವರ್ಷದಎಸ್‌ಎಸ್ಎಲ್‌ಸಿ ಪರೀಕ್ಷೆಯಸಂದರ್ಭದಲ್ಲಿ ನಡೆದ ಭಾರಿ ಪ್ರಮಾಣದ ಅಕ್ರಮಗಳೇ ಇದಕ್ಕೆ ಸಾಕ್ಷಿ. ಪರೀಕ್ಷಾ ಅಕ್ರಮ ನಡೆಸಿದ ಆರೋಪದ ಮೇಲೆ, ಎಸ್‌ಎಸ್ಎಲ್‌ಸಿ ಇತಿಹಾಸದಲ್ಲೇಮೊದಲ ಬಾರಿಗೆ ನಾಲ್ವರು ಶಿಕ್ಷಕರನ್ನು ಬಂಧಿಸಿದ ಘಟನೆಯೂ ನಡೆದಿದೆ.

ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸಾಮೂಹಿಕ ನಕಲು ವ್ಯವಸ್ಥಿತವಾಗಿ ನಡೆದಿದೆ. ಪರೀಕ್ಷೆಗೆ ಕುಳಿತ ಎಲ್ಲರನ್ನೂ ಪಾಸು ಮಾಡಿಸುವುದಕ್ಕಾಗಿ ಮತ್ತು ಜಿಲ್ಲೆಯ ಫಲಿತಾಂಶ ‘ಉತ್ತಮ’ ಆಗಬೇಕು ಎಂಬ ಕಾರಣಕ್ಕೆ ಕೆಲವು ಶಿಕ್ಷಕರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಮೀಲಾಗಿ ನಕಲು ಮಾಡಿಸುವ ಅನೈತಿಕ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಇಂತಹ ಅಕ್ರಮಗಳನ್ನು ಪ್ರಶ್ನಿಸುವ ಪ್ರಾಮಾಣಿಕ ಶಿಕ್ಷಕರು ಮತ್ತು ಅಧಿಕಾರಿಗಳಿಗೆ ಶಿಕ್ಷಕರೇ ಬೆದರಿಕೆ ಹಾಕಿರುವ ಪ್ರಸಂಗಗಳೂ ನಡೆದಿವೆ. ಇದಕ್ಕೆ ತಡೆ ಹಾಕುವ ಇಚ್ಛಾಶಕ್ತಿಯೇ ಸರ್ಕಾರಕ್ಕೆ ಇಲ್ಲವೇನೊ ಎಂಬ ಅನುಮಾನ ಮೂಡತೊಡಗಿದೆ.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ವಿ.ಸುಮಂಗಲಾ ಈ ಬಾರಿ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಲು ನಿರ್ಧರಿಸಿ ಬಿಗಿ ವ್ಯವಸ್ಥೆ ಮಾಡಿದ್ದರು. ಬಹುತೇಕ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಆದರೆ, ಕೆಲವು ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಕರೇ ಈ ಕ್ಯಾಮೆರಾಗಳನ್ನು ಆಫ್‌ ಮಾಡಿಸಿ ವಿದ್ಯಾರ್ಥಿಗಳಿಂದ ಸಾಮೂಹಿಕ ನಕಲು ಮಾಡಿಸಿದ್ದಾರೆ.

ADVERTISEMENT

ಕೆಲವು ಕೇಂದ್ರಗಳಲ್ಲಿ ಉತ್ತೀರ್ಣತೆಗೆ ಬೇಕಾದ 35 ಅಂಕಗಳಿಗೆ ಉತ್ತರಗಳನ್ನು ಹೇಳಿಕೊಟ್ಟರೆ, ಇನ್ನು ಕೆಲವೆಡೆ ಇನ್ನೂ ಹೆಚ್ಚು ಅಂಕಗಳಿಗೆ ಉತ್ತರಗಳನ್ನು ಹೇಳಿ ಬರೆಸಿರುವುದು ವರದಿಯಾಗಿದೆ. ಅಕ್ರಮ ನಡೆಸಿದರೆ ಕಠಿಣ ಶಿಕ್ಷೆ ನೀಡುವುದಾಗಿ ನಿರ್ದೇಶಕರು ಅನೇಕ ಬಾರಿ ಎಚ್ಚರಿಕೆ ನೀಡಿದ್ದರು. ಆದರೆ, ಎಚ್ಚರಿಕೆಯ ಮಾತುಗಳಿಗೆ ಕೆಲವು ಶಿಕ್ಷಕರು ಸೊಪ್ಪು ಹಾಕಿದಂತಿಲ್ಲ. ಸಾಮೂಹಿಕ ಪರೀಕ್ಷಾ ಅಕ್ರಮದಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಕೆಲವು ಜಿಲ್ಲೆಗಳಲ್ಲಿ ಅಚ್ಚರಿಯ ಫಲಿತಾಂಶ ಬರುತ್ತಿತ್ತು. ಈ ಮೂಲಕ ಅವು ಮೊದಲ ಐದರೊಳಗೆ ಸ್ಥಾನಗಳನ್ನು ಗಿಟ್ಟಿಸುತ್ತಿದ್ದವು.

ಶಿಕ್ಷಕರ ಇಂತಹ ಕೆಟ್ಟ ನಡವಳಿಕೆಯು ಪ್ರಾಮಾಣಿಕವಾಗಿ, ಹಗಲು– ರಾತ್ರಿ ನಿದ್ದೆಗೆಟ್ಟು ಓದುವ ಮಕ್ಕಳಿಗೆ ಎಸಗುವ ದ್ರೋಹವೇ ಸರಿ. ವಿದ್ಯಾರ್ಥಿಗಳಿಗೆ ಶಿಕ್ಷಕರು ಎಂಟನೇ ತರಗತಿಯಿಂದಲೇ ಭದ್ರ ಬುನಾದಿ ಹಾಕಿದರೆ, ಎಸ್‌ಎಸ್ಎಲ್‌ಸಿಯಲ್ಲಿ 35 ಅಂಕ ಪಡೆಯುವುದು ಕಷ್ಟವಾಗುವುದಿಲ್ಲ. 8ರಿಂದ 10ನೇ ತರಗತಿವರೆಗಿನ ಮೂರು ವರ್ಷಗಳಲ್ಲಿ, 660 ಕಾರ್ಯಾವಧಿಯ ದಿನಗಳಲ್ಲಿ ಒಬ್ಬ ವಿದ್ಯಾರ್ಥಿ 35 ಅಂಕ ಪಡೆಯಲು ಅರ್ಹತೆ ಹೊಂದುವಂತೆ ಮಾಡುವ ಶಕ್ತಿ ಶಿಕ್ಷಕರಿಗೆ ಇಲ್ಲವಾಗಿದೆಯೇ? ಹಾಗಿದ್ದ ಮೇಲೆ ಇವರ ದಕ್ಷತೆ ಬಗ್ಗೆಯೇ ಪ್ರಶ್ನೆ ಏಳುತ್ತದೆ.

ಸರ್ಕಾರ ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಕರ ಮೇಲೆ ಒತ್ತಡ ಹೇರುತ್ತಿರುವುದೂ ನಿಜ. ಅನುದಾನಿತ ಪ್ರೌಢಶಾಲೆಗಳಿಗೆ ಅನುದಾನ ಬಿಡುಗಡೆ ಮತ್ತು ಶಿಕ್ಷಕರ ನೇಮಕಕ್ಕೂ ಶಾಲೆಯ ಫಲಿತಾಂಶಕ್ಕೂ ನಂಟು ಇದೆ. ಅಲ್ಲದೆ, ಶಿಕ್ಷಣ ಇಲಾಖೆ ಅಧಿಕಾರಿಗಳಿಗೂ ಫಲಿತಾಂಶ ಉತ್ತಮಪಡಿಸಬೇಕೆಂಬ ಒತ್ತಡವಿದೆ. ವಿಚಿತ್ರವೆಂದರೆ, ಇದಕ್ಕಾಗಿ ಶ್ರಮ ಹಾಕದ ಶಿಕ್ಷಕರು, ಅಧಿಕಾರಿಗಳು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳು ಯಶಸ್ಸಿಗೆ ಅಡ್ಡದಾರಿ ಹಿಡಿದಿವೆ. ಇದು ಸಮಸ್ತ ವಿದ್ಯಾರ್ಥಿ ಸಮುದಾಯಕ್ಕೆ ಮಾಡುತ್ತಿರುವ ವಂಚನೆಯೇ ಸರಿ. ಕಷ್ಟಪಡದ, ಇಂಗ್ಲಿಷ್‌, ಗಣಿತ, ವಿಜ್ಞಾನ ಮತ್ತು ಕನ್ನಡವನ್ನು ಸರಿಯಾಗಿ ಕಲಿಯದ ಸಮುದಾಯವನ್ನು ಸೃಷ್ಟಿಸಲಾಗುತ್ತಿದೆ. ಇದು ಅಪಾಯಕಾರಿ. ಈ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ಉತ್ತೀರ್ಣವಾಗುವುದೂ ಕಷ್ಟ. ಇನ್ನು ಸ್ಪರ್ಧಾತ್ಮಕ ಪರೀಕ್ಷೆಗಳು ದೂರದ ಮಾತೇ ಸರಿ. ಇದರಿಂದ ಒಂದು ವರ್ಗ ಸಾಮಾಜಿಕವಾಗಿ ಮುಂದುವರಿಯುವ ಅವಕಾಶದಿಂದಲೇ ವಂಚಿತವಾಗುತ್ತದೆ.

ನಮ್ಮಲ್ಲಿ ಆದರ್ಶಪ್ರಾಯ ಶಿಕ್ಷಕರ ಸಂಖ್ಯೆಗೇನೂ ಕೊರತೆಯಿಲ್ಲ. ವಿದ್ಯಾರ್ಥಿಗಳ ಬೆಳವಣಿಗೆಗಾಗಿ ಶ್ರಮವನ್ನೂ ಹಾಕುತ್ತಿದ್ದಾರೆ. ಆದರೆ, ಅಕ್ರಮ ನಡೆಸುವವರಿಂದ ದಕ್ಷ ಶಿಕ್ಷಕರೂ ತಲೆ ತಗ್ಗಿಸುವಂತಾಗಿದೆ. ಸರ್ಕಾರವು ಸರ್ಕಾರಿ ಶಾಲೆಗಳ ಶಿಕ್ಷಕರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಅವರ ಮೇಲೆ ಕಾರ್ಯಭಾರದ ಒತ್ತಡ ಹೇರಿ ಹಿಂಸಿಸಲಾಗುತ್ತಿದೆ. ಒಂದು ಶಾಲೆಯಲ್ಲಿ ಮೂವರು ಅಥವಾ ನಾಲ್ವರು ಶಿಕ್ಷಕರಿದ್ದರೆ ಎಲ್ಲ ತರಗತಿಗಳಿಗೂ ಪಾಠ ಮಾಡಬೇಕು, ಅಕ್ಷರ ದಾಸೋಹದ ಉಸ್ತುವಾರಿ ನೋಡಿಕೊಳ್ಳಬೇಕು, ತರಬೇತಿಗಳಿಗೆ ಹಾಜರಾಗಬೇಕು. ಸಮಯ ಉಳಿದರಷ್ಟೇ ಪಾಠ ಮಾಡಬೇಕು ಎಂಬ ಸ್ಥಿತಿ ಇದೆ.

ಕೆಳ ಹಂತದ ಶಿಕ್ಷಣದ ಅಡಿಪಾಯ ಸುಭದ್ರವಾಗಿರಬೇಕು. ಆದರೆ, ರಾಜ್ಯದಲ್ಲಿ ತಳಹದಿಯೇ ಶಿಥಿಲವಾಗಿದೆ. ಈ ವ್ಯವಸ್ಥೆ ಸರಿಪಡಿಸಲು ಸೂಕ್ತ ಕಾರ್ಯತಂತ್ರಗಳ ಅಗತ್ಯವಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಬೇರು ಬಿಟ್ಟಿರುವ ಅದಕ್ಷ, ಅಪ್ರಾಮಾಣಿಕ ಶಿಕ್ಷಕರು ಮತ್ತುಅಧಿಕಾರಿಗಳಿಗೆ ಬಿಸಿ ತಾಕಿಸಬೇಕು. ಹೊಸ ಬಗೆಯ ಚಿಂತನೆ ನಡೆಸುವ, ವ್ಯವಸ್ಥೆ ಸುಧಾರಣೆ ಮಾಡುವ ಅಧಿಕಾರಿಗಳು ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.