ADVERTISEMENT

ಭಾನುವಾರ, 15–9–1963

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 19:59 IST
Last Updated 14 ಸೆಪ್ಟೆಂಬರ್ 2013, 19:59 IST

ನೆಹ್ರೂರಿಂದ ಖುದ್ದು ಪರಿಶೀಲನೆ ಲಂಚನಿರೋಧಕ ಸಮಿತಿಗೆ
ಒಪ್ಪಿಸಲು ಪ್ರಧಾನಿ ವಿರೋಧ

ನವದೆಹಲಿ, ಸೆ. 14 – ಕೇರಳ ಮುಖ್ಯಮಂತ್ರಿ, ಶ್ರೀ ಆರ್‌. ಶಂಕರ್‌ ಮತ್ತು ಪಂಜಾಬಿನ ಶ್ರೀ ಕೈರಾನ್‌ರ ಮೇಲಿನ ಆಪಾದನೆಗಳ ಪರಿಶೀಲನೆಯನ್ನು ಕಾಂಗ್ರೆಸ್‌ ಪಾರ್ಲಿಮೆಂಟರಿ ಬೋರ್ಡಿನ ಲಂಚನಿರೋಧ ಸಮಿತಿಗೆ ಬಿಡದೆ ತಾವೇ ಖುದ್ದಾಗಿ ಪರಿಶೀಲಿಸಲು ಪ್ರಧಾನಮಂತ್ರಿ ನೆಹರೂ ಅಪೇಕ್ಷಿಸುತ್ತಾರೆಂದು ಗೊತ್ತಾಗಿದೆ.

ಕಾಂಗ್ರೆಸ್‌ ಪಾರ್ಲಿಮೆಂಟರಿ ಬೋರ್ಡಿನ ಲಂಚನಿರೋಧಕ ಸಮಿತಿಗೆ ಈ ಇಬ್ಬರು ಮುಖ್ಯಮಂತ್ರಿಗಳ ಮೇಲಿನ ಆಪಾದನೆಗಳನ್ನು ಒಪ್ಪಿಸಬೇಕೆಂದು ಸಮಿತಿಯ ಸದಸ್ಯರು ಪ್ರಧಾನ ಮಂತ್ರಿ ನೆಹರೂರಲ್ಲಿ ಮನವಿ ಮಾಡಿಕೊಂಡಿದ್ದರು. ಈಗಾಗಲೆ ಈ ಆಪಾದನೆಗಳ ವಿವರಗಳು ತಮ್ಮ ಗಮನಕ್ಕೆ ಬಂದಿರುವುದರಿಂದಲೂ, ತಾವು ಅವುಗಳ ಬಗ್ಗೆ ಪರಿಶೀಲನೆ ಆರಂಭಿಸಿರುವುದರಿಂದಲೂ, ತಾವೇ ವಿಚಾರಣೆಯನ್ನು ಪೂರ್ಣವಾಗಿ ನಡೆಸುವುದಾಗಿಯೂ ನೆಹರೂ ಜವಾಬು ಕೊಟ್ಟರೆಂದು ಗೊತ್ತಾಗಿದೆ.
 

ನಿವೃತ್ತಿ ವಯೋಮಿತಿ 58 ವರ್ಷಕ್ಕೇರಿಸಲು ಸಾಧ್ಯವಿಲ್ಲವೆಂದು ಮುಖ್ಯಮಂತ್ರಿ
ಬೆಂಗಳೂರು, ಸೆ. 14 – ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರಿ ನೌಕರರ ನಿವೃತ್ತಿ ವಯೋಮಿತಿಯನ್ನು 58 ವರ್ಷಕ್ಕೆ ಹೆಚ್ಚಿಸಲು ಸಾಧ್ಯವಿಲ್ಲವೆಂದು ಮುಖ್ಯಮಂತ್ರಿ ಶ್ರೀ ಎಸ್‌. ನಿಜಲಿಂಗಪ್ಪ ಅವರು ಇಂದು ವಿಧಾನ ಸಭೆಯಲ್ಲಿ ತಿಳಿಸಿದರು.
ಮುಖ್ಯಮಂತ್ರಿಗಳು ಶ್ರೀ ಜೆ. ಪಿ.  ಸರ್ವೇಶ್‌ ಅವರ ಪ್ರಶ್ನೆಗೆ ಉತ್ತರವಿತ್ತು ವಯೋಮಿತಿಯನ್ನು ಹೆಚ್ಚಿಸಬೇಕೆಂದು ಕೇಂದ್ರ ಸಲಹೆ ಮಾಡಿದೆಯೆಂದರು.

ನಾಟಕ ಪ್ರದರ್ಶನ ಮಸೂದೆ ಬಗ್ಗೆ
ಅ.ನ.ಕೃ. ಶ್ರೀ ವೀರಣ್ಣನವರ ಖಂಡನೆ

ಬೆಂಗಳೂರು, ಸೆ. 14 – ‘ಈ ವರ್ಷದ ವಿಧಾನ ಸಭೆಯ ಅಧಿವೇಶನದಲ್ಲಿ ಮೈಸೂರು ರಾಜ್ಯ ಸರ್ಕಾರ ತಂದಿರುವ ‘ಮೈಸೂರು ರಾಜ್ಯದಲ್ಲಿ ನಾಟಕ ಪ್ರದರ್ಶನಗಳಿಗೆ ಸಂಬಂಧಪಟ್ಟ 1963ನೇ ಇಸವಿಯ ವಿಧೇಯಕ’ ಕನ್ನಡ ನಾಟಕದ ಪ್ರಗತಿಗೆ ಕುಠಾರಪ್ರಾಯವಾಗಿದೆ’ – ಎಂಬುದಾಗಿ ಸುಪ್ರಸಿದ್ಧ ಕಾದಂಬರಿಕಾರರೂ, ನಾಟಕಕಾರರೂ ಆದ ಶ್ರೀ ಅ. ನ. ಕೃಷ್ಣರಾಯರು ನಾಟಕ ಮಸೂದೆ ಬಗೆಗೆ ಪ್ರಸ್ತಾಪ ಮಾಡುತ್ತಾ ತಿಳಿಸಿದ್ದಾರೆ.

ಶ್ರೀ ಅ. ನ. ಕೃ ಅವರು ಮುಂದುವರೆದು ‘ನಾಟಕಗಳ ಗುಣಗಾನಗಳನ್ನು ಒಬ್ಬ ಸರ್ಕಾರಿ ಅಧಿಕಾರಿ ಅಳೆದು ಅವುಗಳ ಭವಿಷ್ಯ ನಿರ್ಧರಿಸಲು ಈ ವಿಧೇಯಕ ಅನುಕೂಲ ಮಾಡಿಕೊಡುತ್ತಿದೆ. ಕಲೆ ಸಾಹಿತ್ಯಗಳ ಮೇಲೆ ಹತೋಟಿಯಿಟ್ಟುಕೊಳ್ಳುವುದು ಪ್ರಜಾರಾಜ್ಯದ ಲಕ್ಷಣವಲ್ಲ; ಸರ್ವಾಧಿಕಾರಿಶಾಹಿಯ  ಲಕ್ಷಣ ಎಂದರು.

ADVERTISEMENT

ಪೀಕಿಂಗ್‌ನಲ್ಲಿ ಇ.ಎಂ.ಎಸ್‌.?
ನವದೆಹಲಿ, ಸೆ. 14 – ವೈದ್ಯಕೀಯ ಚಿಕಿತ್ಸೆಗಾಗಿ ಮಾಸ್ಕೋಗೆ ತೆರಳಿದ್ದ ಕಮ್ಯೂನಿಸ್ಟ್ ನಾಯಕ ಶ್ರೀ ಇ.ಎಂ.ಎಸ್‌. ನಂಬೂದರಿಪಾಡ್‌ರವರು ಈಗ ಪೀಕಿಂಗ್‌ನಲ್ಲಿರುವರೆಂದು ಇಲ್ಲಿನ ರಾಯಭಾರ ವಲಯಗಳಲ್ಲಿ ವದಂತಿ ಹಬ್ಬಿದೆ.
ಆದರೆ ಈ ವದಂತಿಗೆ ಸಮರ್ಥನೆ ದೊರೆತಿಲ್ಲ.

ಅವರು ಪೀಕಿಂಗಿಗೆ ಹೋಗಲು ಮಾಸ್ಕೋದಲ್ಲಿ ವೀಸಾ ಕೊಡಲಾಯಿತೆಂದು ವದಂತಿ. ಭಾರತದ ಮೇಲೆ ಆಕ್ರಮಣಕಾರಿ ಮನೋಭಾವವನ್ನು ತ್ಯಜಿಸಬೇಕೆಂದು ಚೀಣಿಯರಿಗೆ ಬುದ್ಧಿವಾದ ಹೇಳಲೂ ಮತ್ತು ರಷ್ಯಾ–ಚೀಣಾಗಳ ನಡುವಣಬಿಗಡಾಯಿಸುತ್ತಿರುವ ಬಿಕ್ಕಟ್ಟನ್ನು ಪರಿಹರಿಸಲು ಅವರು ಚೀಣಾಕ್ಕೆ ತೆರಳಿದ್ದಾರೆಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.