ಕಾಶ್ಮೀರದ ಬಗ್ಗೆ ಐರ್ಲೆಂಡ್ ನಿರ್ಣಯಕ್ಕೆ ರಷ್ಯದ ವೀಟೋ
ವಿಶ್ವರಾಷ್ಟ್ರಸಂಸ್ಥೆ, ನ್ಯೂಯಾರ್ಕ್, ಜೂನ್ 23 - ವಿಶ್ವರಾಷ್ಟ್ರ ಸಂಸ್ಥೆಯ ಭದ್ರತಾ ಸಮಿತಿಯಲ್ಲಿ ನಿನ್ನೆ ಐರ್ಲೆಂಡ್ ಮಂಡಿಸಿದ ಕಾಶ್ಮೀರ ವಿವಾದದ ಇತ್ಯರ್ಥಕ್ಕೆ ಮಾತುಕತೆ ಪುನರಾರಂಭಿಸುವಂತೆ ಭಾರತ ಮತ್ತು ಪಾಕಿಸ್ತಾನಗಳಿಗೆ ತುರ್ತು ಕರೆಯೀಯುವ ನಿರ್ಣಯದ ಮೇಲೆ ಸೋವಿಯತ್ ಒಕ್ಕೂಟವು ವೀಟೋ ಚಲಾಯಿಸಿತು.
ನಿರ್ಣಯದ ಪರವಾಗಿ ಏಳು ಮತಗಳೂ, ವಿರುದ್ಧವಾಗಿ ಎರಡು ಮತಗಳೂ (ರಷ್ಯ ಮತ್ತು ರುಮೇನಿಯ) ದೊರೆತವು. ಘಾನ ಮತ್ತು ಸಂಯುಕ್ತ ಅರಬ್ ಗಣ ರಾಜ್ಯ ಮತದಾನದಲ್ಲಿ ಭಾಗವಹಿಸಲಿಲ್ಲ. ನಿರ್ಣಯದ ಪರವಾಗಿ ಮತವಿತ್ತ ರಾಷ್ಟ್ರಗಳು - ಐರ್ಲೆಂಡ್, ಅಮೆರಿಕ, ಫ್ರಾನ್ಸ್, ಬ್ರಿಟನ್, ಚಿಲಿ, ವೆನಿಜೂವೆಲ ಮತ್ತು ಕೌಮಿಂಟಾಂಗ್ ಚೀಣ.
ಮಂತ್ರಿ ಮಂಡಲದ ವಿಸ್ತರಣೆಗೆ ಶಿವಪ್ಪ ಅವರ ವಿರೋಧ
ಮೈಸೂರು, ಜೂನ್ 23 - ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡಿರುವ ಶ್ರೀ ಎಸ್. ನಿಜಲಿಂಗಪ್ಪನವರನ್ನು ಅವರ ಸರ್ವಾನುಮತದ ಆಯ್ಕೆಗಾಗಿ ಅಭಿನಂದಿಸಿದ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಪ್ರಜಾ ಸೋಷಲಿಸ್ಟ್ ಪಕ್ಷದ ಅಧ್ಯಕ್ಷ ಶ್ರೀ ಎಸ್. ಶಿವಪ್ಪನವರು ಮಂತ್ರಿಮಂಡಲದ ವಿಸ್ತರಣೆಯ ಪ್ರಯತ್ನವನ್ನು ತೀವ್ರವಾಗಿ ಖಂಡಿಸಿದ್ದಾರೆ.
ಈ ಬಗೆಗೆ ಹೇಳಿಕೆಯೊಂದನ್ನು ಇಂದು ಇಲ್ಲಿ ನೀಡಿದ ಶ್ರೀ ಶಿವಪ್ಪನವರು ಮಂತ್ರಿಮಂಡಲದ ವಿಸ್ತರಣೆ ಗುಂಪುಗಾರಿಕೆಯನ್ನು ನಿವಾರಿಸಬಲ್ಲ ತಾರಕವಲ್ಲ ಬದಲಾಗಿ ಅದು ಗುಂಪುಗಾರಿಕೆಯನ್ನು ಸ್ಥಿರಗೊಳಿಸಿದಂತಾಗುತ್ತದೆ ಎಂದರು.
ಮುಂದುವರೆದು ಶ್ರೀ ಶಿವಪ್ಪನವರು, ಯಾವುದನ್ನಾದರೂ ಸುಲಭವಾಗಿ ನಂಬುವ ಜನತೆಯನ್ನು ಈ ರೀತಿ ಮೋಸಗೊಳಿಸುವುದು ತರವಲ್ಲ. ಈ ಸಚಿವ ಸೇನೆಯ ಹೊರೆಯನ್ನು ರಾಜ್ಯ ಹೊರಲಾರದ ಸ್ಥಿತಿಯಲ್ಲಿರುವಾಗ ಹೀಗೆ ವಿಸ್ತರಿಸಿ ಹಿತಾಸಕ್ತಿಗಳನ್ನು ಬೆಳೆಸುವುದು ಸರಿಯಲ್ಲ ಎಂದು ಹೇಳಿ ಮದರಾಸ್ ರಾಜ್ಯದ ಸಚಿವ ಸಂಪುಟದ ಮಾದರಿಯನ್ನು ಅನುಸರಿಸುವಂತೆ ಮುಖ್ಯಮಂತ್ರಿಗಳಲ್ಲಿ ಶ್ರೀಯುತರು ಮನವಿ ಮಾಡಿಕೊಂಡರು.
ಬೆಲೆ ಏರಿಕೆ ತಡೆಗಟ್ಟಲು ಸರ್ಕಾರ ಕ್ರಮ ಕೈಗೊಳ್ಳಲಿ
ದಾವಣಗೆರೆ, ಜೂನ್ 23 - ಮೂರನೆ ಯೋಜನೆ ಅವಧಿಯಲ್ಲಿ ಬೆಲೆ ಏರಿಕೆಯನ್ನು ತಡೆಗಟ್ಟಲು ಸರ್ಕಾರ ಕ್ರಮಕೈಗೊಳ್ಳದೆ ಹೋಗುವ ಪಕ್ಷಕ್ಕೆ ಬೆಲೆಗಳು ವಿಪರೀತವಾಗಿ ಏರಿ ಬರುವ ವರ್ಷಗಳಲ್ಲಿ ಮೂರನೆ ಯೋಜನೆಯು ಸಾಧಿಸುವ ವಿಜಯವನ್ನು ಕುಂಠಿತಗೊಳಿಸುವುದೆಂದು ಮೈಸೂರು ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶ್ರೀ ಜಿ. ಶಿವಪ್ಪನವರು ಇಂದು ಇಲ್ಲಿ ಅಖಿಲ ಮೈಸೂರು ವರ್ತಕರ ದ್ವಿತೀಯ ಸಮ್ಮೇಳನದ ಅಧ್ಯಕ್ಷ ಪೀಠದಿಂದ ತಿಳಿಸಿದರು.
ಒತ್ತಡ, ಬೆದರಿಕೆಗಳಿಗೆ ಭಾರತ ಮಣಿಯದು
ನವದೆಹಲಿ, ಜೂನ್ 23 - ಎಂ. ಐ. ಜಿ. ವಿಮಾನಗಳ ಖರೀದಿ ವಿಷಯದಲ್ಲಿ ಭಾರತವು ಯಾವುದೇ ರೀತಿಯ ಒತ್ತಡ ಇಲ್ಲವೆ ನೆರವನ್ನು ಮೊಟಕುಗೊಳಿಸಲಾಗುವುದೆಂಬ ಬೆದರಿಕೆಗಳಿಗೆ ತನ್ನ ಸ್ವಾತಂತ್ರ್ಯವನ್ನು ಬಲಿಕೊಡದೆಂದು ಪ್ರಧಾನ ಮಂತ್ರಿ ನೆಹರೂರವರು ಇಂದು ರಾಜ್ಯ ಸಭೆಗೆ ತಿಳಿಸಿದರು.
ಎಂ. ಐ. ಜಿ. ವಿಮಾನಗಳನ್ನು ಭಾರತವು ರಷ್ಯದಿಂದ ಕೊಳ್ಳುವ ಬಗ್ಗೆ ವಿಶ್ವದ ಅನೇಕ ಭಾಗಗಳಲ್ಲಿ ಕೇಳಿಬರುತ್ತಿರುವ ಬೊಬ್ಬೆಯ ಬಗ್ಗೆ ಪ್ರಸ್ತಾಪಿಸುತ್ತಾ ತನಗಿಷ್ಟ ಬಂದ ವಿಮಾನಗಳು ಇಲ್ಲವೆ ಇನ್ನಾವುದೇ ವಸ್ತುಗಳನ್ನು ಕೊಳ್ಳುವ ವಿಚಾರವನ್ನು ಬೇರೆ ಇನ್ನಾವ ರಾಷ್ಟ್ರವೇ ಆಗಲೀ ನಿರ್ಧರಿಸಲು ಸ್ವತಂತ್ರ, ರಾಷ್ಟ್ರವಾವುದೂ ಒಪ್ಪದು. ಅದರಲ್ಲೂ ಭಾರತವಂತೂ ಅಂತಹ ಪರಿಸ್ಥಿತಿಗೆ ಎಂದೂ ಒಪ್ಪದು ಎಂದು ಪ್ರಧಾನ ಮಂತ್ರಿಗಳು ನುಡಿದರು.
ಅಮೆರಿಕವು ಪಾಕಿಸ್ತಾನಕ್ಕೆ ಸೇಬ್ರ್ ಜೆಟ್ ವಿಮಾನಗಳನ್ನು ಸರಬರಾಜು ಮಾಡಿದ್ದರಿಂದಲೇ ಭಾರತವು ರಷ್ಯಾದಿಂದ ಎಂ.ಇ.ಜಿ. ವಿಮಾನಗಳನ್ನು ಕೊಳ್ಳಬೇಕಾದ ವಿಷಯ ಉದ್ಭವಿಸಿತು. ಇಂತಹ ಮಹತ್ತರ ಪರಿಣಾಮ, ಪ್ರತಿಕ್ರಿಯೆಗಳನ್ನುಂಟು ಮಾಡಬಲ್ಲಂತಹ ಕ್ರಮ ಕೈಗೊಂಡಿದ್ದಕ್ಕಾಗಿ ಒಂದು ವಿಧದಲ್ಲಿ ಅಮೆರಿಕವೇ ಇದಕ್ಕೆಲ್ಲಾ ಜವಾಬ್ದಾರಿ ಹೊರಬೇಕಾಗಿದೆ ಎಂದೂ ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.