ADVERTISEMENT

ಭಾನುವಾರ, 29-7-1962

​ಪ್ರಜಾವಾಣಿ ವಾರ್ತೆ
Published 28 ಜುಲೈ 2012, 19:30 IST
Last Updated 28 ಜುಲೈ 2012, 19:30 IST
ಭಾನುವಾರ, 29-7-1962
ಭಾನುವಾರ, 29-7-1962   

ಭಾರತ - ಚೀಣ ಸಶಸ್ತ್ರ ಘರ್ಷಣೆ ಅಸಂಭವ ನೆಹರೂ ಸ್ಪಷ್ಟೋಕ್ತಿ
ಲಕ್ನೋ, ಜು. 28
- `ಭಾರತ ಚೀಣ ನಡುವೆ ಸಶಸ್ತ್ರ ಘರ್ಷಣೆ ನಡೆಯುವ ಸಾಧ್ಯತೆ ಇಲ್ಲ~ ಎಂದು ಪ್ರಧಾನ ಮಂತ್ರಿ ನೆಹ್ರೂ ತಿಳಿಸಿದರು.

ಉತ್ತರ ಪ್ರದೇಶದ ಕಾಂಗ್ರೆಸ್ಸಿಗರ ಸಭೆಯಲ್ಲಿ ಮಾತನಾಡಿದ ನೆಹರೂ, ಭಾರತೀಯರು ಸದಾ ಜಾಗೃತರಾಗಿದ್ದು, ಪಂಚವಾರ್ಷಿಕ ಯೋಜನೆಯನ್ನು ಅನ್ವಯಿಸಿ ಭಾರತವನ್ನು ಬಲಪಡಿಬೇಕೆಂದರು.

ಪಂಡಿತ ನೆಹರೂ ಮುಂದುವರೆದು ಮಾತನಾಡುತ್ತಾ ಈಗಿನ ಕಾಲದಲ್ಲಿ ಮಾನವರಿಂದ ಯುದ್ಧವಾಗುವುದಿಲ್ಲ ಆದರೆ ಉಪಕರಣಗಳಿಂದ ನಡೆಯುತ್ತಿದೆ. ಒಂದು ರಾಷ್ಟ್ರದ ಶಕ್ತಿಯೇ ಆ ರಾಷ್ಟ್ರದ ಉಕ್ಕು ಹಾಗೂ ವಿದ್ಯುದುತ್ಪಾದನೆಯಿಂದ ಅಳೆಯಲ್ಪಡುತ್ತದೆ ಎಂದರು.

ಮದುವೆ - ಹುಚ್ಚು
ಬೆಂಗಳೂರು, ಜು. 28
- ಮೊದಲು ಮದುವೆಯಾಗಬೇಕೋ? ಮೊದಲು ಹುಚ್ಚು ಬಿಡಬೇಕೋ? ಈ ಸಮಸ್ಯೆ ವಿಧಾನ ಸಭೆಯ ಸದಸ್ಯರನ್ನು ಇಂದು ಹೆಚ್ಚು ಕಾಲ ಕಾಡುವ ಮೊದಲೇ `ಎರಡೂ ಒಟ್ಟಿಗೆ ಆಗುವ~ ಸಂಭವವಿದೆಯೆಂಬ ಭರವಸೆ ತಕ್ಕಮಟ್ಟಿಗೆ ಸಮಾಧಾನ ತಂದಿತು.

ಪರಸ್ಪರ ಅವಲಂಬಿಗಳಾದ ಹಾಸನ - ಮಂಗಳೂರು ರೈಲ್ವೆ ರಸ್ತೆ ಮತ್ತು ಮಂಗಳೂರು ಬಂದರು ಯೋಜನೆಗಳನ್ನು ಒಟ್ಟಿಗೆ ಕಾರ್ಯಗತ ಮಾಡಬೇಕಾದ ಅಗತ್ಯವನ್ನು ಪ್ರಸ್ತಾಪಿಸಿದ ಶ್ರೀ ಮಂಜಯ್ಯ ಶೆಟ್ಟಿಯವರು ಮದುವೆಯಾದ ಹೊರತು ಹುಚ್ಚು ಬಿಡುವುದಿಲ್ಲ, ಹುಚ್ಚು ಬಿಟ್ಟ ಹೊರತು ಮದುವೆಯಾಗುವುದಿಲ್ಲ ಎನ್ನುವ ಗಾದೆಯಂತಾಗಿದೆ ಇದು ಎಂದರು.

ಸಭಾಧ್ಯಕ್ಷ ಶ್ರೀ ಬಾಳಿಗಾ - ಎರಡೂ ಒಟ್ಟಿಗೇ ಆಗಬೇಕೆಂದು ನಿಮ್ಮ ಸಲಹೆಯೆ? (ದೀರ್ಘ ನಗು)

ಶ್ರೀ ವೀರೇಂದ್ರ ಪಾಟೀಲ್:- ಬಹುಶಃ ಎರಡೂ ಒಟ್ಟಿಗೆ ಆಗುವ ಹಾಗೆ ಕಾಣುತ್ತೆ.

ವಿಧಾನ ಸಭೆ ಸದಸ್ಯರೊಬ್ಬರಿಗೆ ಸಭೆ ಬಿಟ್ಟು ಹೋಗಲು ಆಜ್ಞೆ; ಗಂಭೀರ ವಾತಾವರಣ
ಬೆಂಗಳೂರು, ಜು. 28
- ಇಂದು ವಿಧಾನ ಸಭೆಯಲ್ಲಿ ಸ್ವತಂತ್ರ ಸದಸ್ಯರೊಬ್ಬರು ಅವರು ಆಡಿದ ಕೆಲವು ಮಾತುಗಳನ್ನು ವಾಪಸ್ ತೆಗೆದುಕೊಳ್ಳುವುದಕ್ಕೆ ನಿರಾಕರಿಸಿ ಸಭೆಯಿಂದ ಹೊರಗೆ ಹೋಗುವಂತೆ ಉಪಾಧ್ಯಕ್ಷರು ಅವರಿಗೆ ಆಜ್ಞೆ ಮಾಡಿದಾಗ ಸ್ವಲ್ಪ ಕಾಲ ಗಂಭೀರ ವಾತಾವರಣ ಉಂಟಾಯಿತು.

ಅಪ್ರೋಪ್ರಿಯೇಷನ್ ಮಸೂದೆಯ ಮೇಲಿನ ಚರ್ಚೆ ನಡೆಯುತ್ತಿದ್ದಾಗ ಶ್ರೀ ಸಿ. ಜೆ. ಮುಕ್ಕಣ್ಣನವರು ಮಾತನಾಡಲು ಅವಕಾಶಕ್ಕಾಗಿ ಹಲವು ಬಾರಿ ಎದ್ದು ನಿಂತರು.

ತಾವು ಅನೇಕಸಲ ಎದ್ದು ನಿಂತರೂ ಅವಕಾಶ ಸಿಕ್ಕಲಿಲ್ಲವೆಂದು ಹೇಳಿ ಶ್ರೀ ಮುಕ್ಕಣ್ಣಪ್ಪನವರು ತಮಗೆ ಅವಕಾಶ ಕೊಡಲಾಗುವುದೋ ಇಲ್ಲವೋ ಎಂಬುದನ್ನು ಆಗ ಅಧ್ಯಕ್ಷತೆ ವಹಿಸಿದ್ದ ಶ್ರೀ ಎ. ಆರ್. ಪಂಚಗವಾಯಿಯವರಿಂದ ತಿಳಿಯ ಬಯಸಿದರು.
ಶ್ರೀ ಪಂಚಗವಾಯಿಯವರು `ನೋಡೋಣ ಕುಳಿತುಕೊಳ್ಳಿ~ ಎಂದು ಹೇಳಿ ಶ್ರೀ ಭಾಸ್ಕರ ಶೆಟ್ಟಿಯವರಿಗೆ ಮಾತನಾಡುವಂತೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.