ADVERTISEMENT

ಶನಿವಾರ, 30–12–1967

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2017, 19:30 IST
Last Updated 29 ಡಿಸೆಂಬರ್ 2017, 19:30 IST

ಕೇಂದ್ರದಿಂದ ಭಾಷಾ ಪ್ರಶ್ನೆಯ ಮರು ಪರಿಶೀಲನೆ?

ನವದೆಹಲಿ, ಡಿ. 29– ಭಾಷಾ ಮಸೂದೆಯ ಜತೆ ಸಂಸತ್ತು ಅಂಗೀಕರಿಸಿದ ಅಧಿಕೃತ ನಿರ್ಣಯದ ವಿರುದ್ಧ ದಕ್ಷಿಣ ಭಾರತ ಮತ್ತು ಇತರ ಹಿಂದೀತರ ರಾಜ್ಯಗಳಲ್ಲಿ ತೀವ್ರವಾದ ಅಸಂತೃಪ್ತಿ, ಒತ್ತಡಗಳು ಉಂಟಾಗುತ್ತಿರುವುದರಿಂದ ಇನ್ನು ಸ್ವಲ್ಪ ಕಾಲದಲ್ಲೇ ಭಾಷಾ ಪ್ರಶ್ನೆಯನ್ನು ಕೇಂದ್ರ ಪುನರ್‌ಪರಿಶೀಲಿಸಬಹುದು.

ದಕ್ಷಿಣದ ನಾಲ್ಕು ರಾಜ್ಯಗಳೂ ಅಧಿಕೃತ ನಿರ್ಣಯದ ಬಗ್ಗೆ ತೃಪ್ತರಾಗಿಲ್ಲವೆಂಬುದು ಹಾಗೂ ಯೂನಿಯನ್ ಸರ್ವೀಸ್‌ಗಳಿಗೆ ಪ್ರವೇಶಿಸುವ ಹಿಂದೀತರ ಅಭ್ಯರ್ಥಿಗಳಿಗೆ ಅದು ಭೇದಭಾವವನ್ನು ತೋರಿಸುತ್ತದೆಯೆಂಬುದಾಗಿ ಈ ರಾಜ್ಯಗಳು ಭಾವಿಸುತ್ತಿರುವುದು ಈಗ ಸ್ಪಷ್ಟವಾಗಿದೆ.

ADVERTISEMENT

**

ತುಂಡು ಲಂಗ– ತಂಡಿ ಜ್ವರ

ಲಂಡನ್, ಡಿ. 29– ಜಗತ್ತಿಗೆ ಮಿನಿ ಸ್ಕರ್ಟ್ (ತುಂಡು ಲಂಗ) ಕೊಟ್ಟ ಬ್ರಿಟನ್ನಿಗೆ ಈಗ ಮಿನಿ ಫ್ಲೂ ಹಿಡಿದಿದೆ.

ದಕ್ಷಿಣ ಇಂಗ್ಲೆಂಡಿನಾದ್ಯಂತ ಇದ್ದಕ್ಕಿದ್ದಂತೆ ಜನರಲ್ಲಿ ಕೆಮ್ಮು, ಬೆವರು ಕಾಣಿಸಿಕೊಂಡಿದೆ.

ವೈದ್ಯರಿಗೆ ಟೆಲಿಫೋನ್ ಕರೆಗಳ ಪ್ರವಾಹ, ಆಸ್ಪತ್ರೆಗಳಲ್ಲಿ ವಿಷಮಗೊಂಡವರನ್ನು ಮಾತ್ರ ಸೇರಿಸಿಕೊಳ್ಳಲಾಗುತ್ತಿದೆ. ರೈಲು ಕೆಲಸಗಾರರ ಕಾಯಿಲೆ ಪರಿಣಾಮ ರೈಲು ಸಂಚಾರ ಎಷ್ಟೋ ಕಡೆ ಸ್ತಬ್ಧ.

ಕೆಲವು ಪಟ್ಟಣಗಳ ಕಚೇರಿ ಬಂದ್, ಸಿಬ್ಬಂದಿಗಳಿಗೆ ಮಿನಿ ಫ್ಲೂ. ಗಗನಸಖಿಯರಿಗೂ ಮಿನಿ ಫ್ಲೂ. ಹಲವಾರು ಮಂದಿ ಗಗನಸಖಿಯರು ಕೆಲಸಕ್ಕೆ ಹಾಜರಾಗಿಲ್ಲವೆಂದು ವಾಯು ಸಾರಿಗೆ ತಿಳಿಸಿದೆ.

**

ಉಳಿದೆರಡೂ ಶವಗಳ ಪತ್ತೆ

ಬೆಂಗಳೂರು, ಡಿ. 29– ಇಂದು ಮಧ್ಯಾಹ್ನ 3.5ಕ್ಕೆ ದಿವಂಗತ ಮ. ರಾಮಮೂರ್ತಿಯವರ ಕೊನೆಯ ಮಗ ಆರು ವರ್ಷದ ಮಂಜುನಾಥನ ಶವವನ್ನು ಹೊರಕ್ಕೆ ತೆಗೆದಾಗ ಐದು ಶವಗಳನ್ನು ಹುಡುಕಲು ಕಳೆದ ಐದು ದಿನಗಳಿಂದ ನಡೆಯುತ್ತಿದ್ದ ಶ್ರಮಪೂರ್ಣ ಪ್ರಯತ್ನ ಮುಕ್ತಾಯವಾಯಿತು.

ಇದಕ್ಕೆ ಮೊದಲು ಮಧ್ಯಾಹ್ನ 12.15ಕ್ಕೆ ಕೂಲಿ ಸುಮಾರು 40 ವರ್ಷದ ಬೀರಣ್ಣನ ಶವ ದೊರಕಿತು.

ಎರಡೂ ಶವಗಳನ್ನು ಅವರವರ ಸಂಬಂಧಿಗಳಿಗೆ ಒಪ್ಪಿಸಲಾಯಿತು.

ಸಂಜೆ ಕೆಂಪಾಂಬುಧಿ ಕೆರೆಯ ಬಳಿ ಮಂಜುನಾಥನ ಕಳೇಬರದ ಅಂತ್ಯ ಸಂಸ್ಕಾರ ನಡೆಯಿತು.

ಸವಾಲು: ಯಾವ ಘಳಿಗೆಯಲ್ಲಾದರೂ ತಲೆಯ ಮೇಲೆ ಮಣ್ಣು ಕುಸಿಯುವ ಸಾಧ್ಯತೆಯಿದ್ದ ಸುಮಾರು ನಲವತ್ತು ಅಡಿ ಆಳದಲ್ಲಿ ಅಪಾಯಕಾರಿ ಪರಿಸ್ಥಿತಿಯಲ್ಲಿ ಹೋಂಗಾರ್ಡ್‌ಗಳು, ಅಗ್ನಿಶಾಮಕ ದಳದವರು ದುಡಿದು ಹಟದಿಂದ ಕಾರ್ಯ ಸಾಧಿಸಿದರು. ಎರಡು ಗೋಡೆಗೆ ಊರೆಯಾಗಿ ಮರದ ದಿಮ್ಮಿಗಳನ್ನು ಇಟ್ಟು ಎಚ್ಚರಿಕೆ ವಹಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.